ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು | ಮಳೆ ಹೆಚ್ಚಳ: ನೆಲಕಚ್ಚಿದ ಈರುಳ್ಳಿ ಬೆಳೆ

ಹೊಲದಲ್ಲಿ ತೇವಾಂಶ ಹೆಚ್ಚಳ: ಕಮರುತ್ತಿರುವ ಬೆಳೆ
Published : 13 ಆಗಸ್ಟ್ 2024, 6:19 IST
Last Updated : 13 ಆಗಸ್ಟ್ 2024, 6:19 IST
ಫಾಲೋ ಮಾಡಿ
Comments

ಚಿಕ್ಕಮಗಳೂರು: ಮುಂಗಾರು ಉತ್ತಮವಾಗಿ ಸುರಿದು ಬಯಲು ಸೀಮೆ ರೈತರಲ್ಲಿ ಸಂತಸ ಮೂಡಿಸಿದ್ದರೂ ಈರುಳ್ಳಿ ಬೆಳೆಗೆ ಅತಿಯಾದ ಮಳೆ ಕಂಟಕವಾಗಿ ಕಾಡಿದೆ.

ಜಿಲ್ಲೆಯಲ್ಲಿ 7 ಸಾವಿರ‌ಕ್ಕೂ ಹೆಚ್ಚು ಹೆಕ್ಟೇರ್‌ನಲ್ಲಿ ಈರುಳ್ಳಿ ಬಿತ್ತನೆ ಮಾಡಲಾಗಿದೆ. ಮುಂಗಾರು ಮತ್ತು ಮುಂಗಾರು ಪೂರ್ವ ಮಳೆ ಉತ್ತಮವಾಗಿ ಆಗಿದ್ದರಿಂದ ಈರುಳ್ಳಿ ಬಿತ್ತನೆಗೆ ರೈತರು ಆಸಕ್ತಿ ತೋರಿಸಿದ್ದಾರೆ. ಕಳೆದ ವರ್ಷ ಮಳೆ ಕಡಿಮೆ ಇದ್ದಿದ್ದರಿಂದ ಬಿತ್ತನೆ ಪ್ರಮಾಣವೂ ಕಡಿಮೆಯಾಗಿತ್ತು. 6 ಸಾವಿರ ಹೆಕ್ಟೇರ್‌ನಲ್ಲಷ್ಟೇ ಈರುಳ್ಳಿ ಬಿತ್ತನೆಯಾಗಿತ್ತು.

ಈ ವರ್ಷ 10,950 ಹೆಕ್ಟೇರ್‌ನಲ್ಲಿ ಬಿತ್ತನೆಯ ಗುರಿಯನ್ನು ತೋಟಗಾರಿಕೆ ಇಲಾಖೆ ಹೊಂದಿತ್ತು. ಆದರೆ, ಮಳೆ ಹೆಚ್ಚಳದ ಕಾರಣದಿಂದ 7,722 ಹೆಕ್ಟೇರ್‌ನಲ್ಲಿ ಈರುಳ್ಳಿ ಬಿತ್ತನೆಯಾಗಿದೆ. ಅಜ್ಜಂಪುರ ತಾಲ್ಲೂಕಿನಲ್ಲಿ ಹೆಚ್ಚಾಗಿ ಈರುಳ್ಳಿ ಬೆಳೆಯಲಾಗುತ್ತಿದ್ದು, ಕಡೂರು, ಚಿಕ್ಕಮಗಳೂರು ಮತ್ತು ತರೀಕೆರೆ ತಾಲ್ಲೂಕಿನಲ್ಲಿ ಅಲ್ಲಲ್ಲಿ ರೈತರು ಈರುಳ್ಳಿ ಬೆಳೆಯುತ್ತಿದ್ದಾರೆ.

ಮೊದಲ ಮಳೆಗೆ ಉತ್ಸಾಹ ತೋರಿ ಭೂಮಿ ಹಸನು ಮಾಡಿಕೊಂಡ ರೈತರು, ಬಿತ್ತನೆ ಆರಂಭಿಸಿದರು. ಎರಡರಿಂದ ಮೂರು ತಿಂಗಳಲ್ಲಿ ಬೆಳೆ ಕೈ ಸೇರುವುದರಿಂದ ರೈತರು ಹೆಚ್ಚು ಆಸಕ್ತಿ ವಹಿಸುತ್ತಾರೆ. ಈ ವರ್ಷ ಬಿತ್ತನೆಯಾದ ಬಳಿಕ ನಿರಂತರವಾಗಿ ಮಳೆ ಸುರಿದಿದ್ದರಿಂದ ತೇವಾಂಶ ಹೆಚ್ಚಾಗಿ ಈರುಳ್ಳಿ ಬೆಳೆ ನೆಲದಲ್ಲೇ ಕಮರಿ ಹೋಗುತ್ತಿದೆ. ಹೊಲದಲ್ಲಿ ನಿಂತಿರುವ ನೀರಿನಲ್ಲಿರುವ ಬೆಳೆ, ಬಿಳಿ ಬಣ್ಣಕ್ಕೆ ತಿರುಗುತ್ತಿದ್ದು, ರೈತರಲ್ಲಿ ಆತಂಕ ತರಿಸಿದೆ. ಕೆಲವೆಡೆ ನೀರು ನುಗ್ಗಿ ಈರುಳ್ಳಿ ಬೆಳೆಯೇ ಕೊಚ್ಚಿ ಹೋಗಿದೆ.

‘ದುಬಾರಿ ಬಿತ್ತನೆ ಬೀಜ, ಬಿತ್ತನೆ ಖರ್ಚು, ಕಳೆ ತಗೆಸುವುದು, ಔಷಧಿ ಸಿಂಪಡಣೆ ಮಾಡುವುದು ಸೇರಿ ಎಕರೆಗೆ ಕನಿಷ್ಟ ₹25-30 ಸಾವಿರ ಖರ್ಚು‌ ಮಾಡಿದ್ದೇವೆ. ಬಿತ್ತಿದ ಈರುಳ್ಳಿ ಬೆಳೆಯೊಳಗೆ ನೀರು ನಿಂತು ಕೊಳೆ ರೋಗ ಕಾಣಿಸಿಕೊಮಡಿದೆ ಎಂದು ಅಜ್ಜಂಪುರ ತಾಲ್ಲೂಕಿನ ಶಿವನಿ ಗ್ರಾಮದ ರೈತರು ಅಳಲು ತೋಡಿಕೊಂಡರು.

‘ಕಳೆದ ವರ್ಷ ಮಳೆ ಇಲ್ಲದೆ ಅಡಿಕೆ ಬೆಳೆ ಉಳಿಸಿಕೊಳ್ಳಲು ಹರಸಾಹಸ ಮಾಡಿದ್ದೆವು. ಈ ವರ್ಷ ಮಳೆ ಜಾಸ್ತಿಯಾಗಿ ತೊಂದರೆ ಅನುಭವಿಸುತ್ತಿದ್ದೇವೆ. ತೇವಾಂಶ ಹೆಚ್ಚಾಗಿರುವುದರಿಂದ ಈರುಳ್ಳಿ ಬೆಳೆ ನೆಲದಿಂದ ಮೇಲೆ ಏಳುತ್ತಲೇ ಇಲ್ಲ’ ಎಂದು ರೈತ ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದರು.

ಅಜ್ಜಂಪುರ ತಾಲ್ಲೂಕಿನ ಶಿವನಿ ಬಳಿ ಹೊಲದಲ್ಲಿ ಮಳೆ ನೀರು ಹರಿದು ಈರುಳ್ಳಿ ಬೆಳೆ ಹಾಳಾಗಿರುವುದು 
ಅಜ್ಜಂಪುರ ತಾಲ್ಲೂಕಿನ ಶಿವನಿ ಬಳಿ ಹೊಲದಲ್ಲಿ ಮಳೆ ನೀರು ಹರಿದು ಈರುಳ್ಳಿ ಬೆಳೆ ಹಾಳಾಗಿರುವುದು 

ಹಾನಿ ಬಗ್ಗೆ ವಾರದ ಬಳಿಕ ನಿರ್ಧಾರ

ಮಳೆ ಜಾಸ್ತಿಯಾಗಿದ್ದರಿಂದ ಈರುಳ್ಳಿ ಹೊಲದಲ್ಲಿ ನೀರು ನಿಂತಿರುವುದು ಗಮನಕ್ಕೆ ಬಂದಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಪೂರ್ಣಿಮಾ ತಿಳಿಸಿದರು. ‘ಒಂದು ವಾರದಿಂದ ಮಳೆ ಕಡಿಮೆಯಾಗಿದ್ದು ಈರುಳ್ಳಿ ಬೆಳೆ ಚೇತರಿಸಿಕೊಳ್ಳುವ ಸಾಧ್ಯತೆ ಇದೆ. ಇನ್ನೂ ಒಂದು ವಾರ ಕಾದು ನೋಡುತ್ತೇವೆ. ಬಳಿಕ ಮತ್ತೊಮ್ಮೆ ಹೊಲಗಳಲ್ಲಿ ಪರಿಶೀಲಿಸುತ್ತೇವೆ. ತೇವಾಂಶ ಮುಂದುವರಿದಿದ್ದರೆ ಈರುಳ್ಳಿ ಬೆಳೆಹಾನಿ ಬಗ್ಗೆ ವರದಿ ಸಲ್ಲಿಸಲಾಗುವುದು’ ಎಂದು ಅವರು ‘‍ಪ್ರಜಾವಾಣಿ’ಗೆ ಮಾಹಿತಿ ನೀಡಿದರು

ಅಂಕಿ–ಅಂಶ

10,950 ಹೆಕ್ಟೇರ್‌ ಪ್ರಸಕ್ತ ಸಾಲಿನಲ್ಲಿ ಈರುಳ್ಳಿ ಬಿತ್ತನೆಯ ಗುರಿ

7,722 ಹೆಕ್ಟೇರ್‌ಪ್ರಸಕ್ತ ಸಾಲಿನಲ್ಲಿ ಈರುಳ್ಳಿ ಬಿತ್ತನೆಯಾಗಿರುವುದು

10,950 ಹೆಕ್ಟೇರ್ಕಳೆದ ಸಾಲಿನಲ್ಲಿ ಈರುಳ್ಳಿ ಬಿತ್ತನೆಯ ಗುರಿ

6,214 ಹೆಕ್ಟೇರ್‌ಕಳೆದ ಸಾಲಿನಲ್ಲಿ ಈರುಳ್ಳಿ ಬಿತ್ತನೆಯಾಗಿದ್ದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT