ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭವನೀಯ ತೊಂದರೆ ಎದುರಿಸಲು ಸಿದ್ಧತೆ

ಕಡೂರು ಪಟ್ಟಣಕ್ಕೆ ಭದ್ರಾ ನದಿಯಿಂದ ಮೂರು ದಿನಕ್ಕೊಮ್ಮೆ ನೀರು ಪೂರೈಕೆ
ಬಾಲುಮಚ್ಚೇರಿ
Published 22 ಮಾರ್ಚ್ 2024, 6:55 IST
Last Updated 22 ಮಾರ್ಚ್ 2024, 6:55 IST
ಅಕ್ಷರ ಗಾತ್ರ

ಕಡೂರು:  ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಪ್ರಮುಖ ಜಲಮೂಲ ಭದ್ರಾ ನದಿ. ಸದ್ಯ  ಮೂರು ದಿನಕ್ಕೊಮ್ಮೆ ಪಟ್ಟಣಕ್ಕೆ ಭದ್ರಾ ನೀರು ಪೂರೈಕೆಯಾಗುತ್ತಿದೆ. ಪರ್ಯಾಯ ವ್ಯವಸ್ಥೆಯಲ್ಲಿ ಕೊಳವೆ ಬಾವಿ ನೀರು ಒದಗಿಸಲಾಗುತ್ತಿದೆ.

23 ವಾರ್ಡ್‌ಗಳಿರುವ ಕಡೂರು ಪಟ್ಟಣದಲ್ಲಿ 16, 17 ಮತ್ತು 18ನೇ ವಾರ್ಡ್‌ನಲ್ಲಿರುವ ಕೊಳವೆ ಬಾವಿಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾಗಿದೆ. ಕೋಟೆ ಪ್ರದೇಶದಲ್ಲಿ ನೀರಿನ ವೇಗ ಕಡಿಮೆ ಇರುವುದರಿಂದ ಎತ್ತರದಲ್ಲಿರುವ ಮನೆಗಳಿಗೆ ನೀರು ಬರುವುದು ಕಷ್ಟವಾಗಿದೆ. ನೀರಿನ ಪೈಪಿಗೆ ಮೋಟರ್ ಅಳವಡಿಸಿ ಅನೇಕರು ತಮ್ಮ ಮನೆಯ ನೆಲದಡಿಯ ನೀರಿನ ತೊಟ್ಟಿ (ಸಂಪು) ತುಂಬಿಸಿಕೊಳ್ಳುತ್ತಿರುವುದರಿಂದ ಕೆಲವು ಭಾಗಗಳಿಗೆ ನೀರು ತಲುಪುವುದು ಕಷ್ಟವಾಗಿದೆ.

ಪಟ್ಟಣಕ್ಕೆ ಮೊದಲು ವೇದಾ ನದಿಯಿಂದ ನೀರು ಪೂರೈಸಲಾಗುತ್ತಿತ್ತು. ಆದರೆ, ಈ ನೀರು ಮಳೆಗಾಲದಲ್ಲಿ ಮಾತ್ರ ಲಭಿಸುತ್ತದೆ. ಸದ್ಯ ನದಿಯಲ್ಲಿ ನೀರು ಇಲ್ಲದಿರುವುದರಿಂದ ಪಟ್ಟಣಕ್ಕೆ ವೇದಾ ನೀರು ದೊರೆಯುತ್ತಿಲ್ಲ. ಆದರೆ, ಇಲ್ಲಿನ 20 ಕೊಳವೆ ಬಾವಿಗಳಿಂದ 65 ಎಚ್.ಪಿ.ಮೋಟರ್ ಮೂಲಕ ನಿರಂತರವಾಗಿ ನೀರನ್ನು ಡಂಪಿಂಗ್ ಟ್ಯಾಂಕ್‌ಗಳಿಗೆ ತುಂಬಿಸಿ ಅದನ್ನು ಪಟ್ಟಣಕ್ಕೆ ಸರಬರಾಜು ಮಾಡಲಾಗುತ್ತಿದೆ.

ಸದ್ಯಕ್ಕೆ ಕುಡಿಯುವ ಮತ್ತು ಇತರೆ ಬಳಕೆಗೆ ನೀರಿನ ತೊಂದರೆಯಾಗಿಲ್ಲವಾದರೂ ಸಂಭವನೀಯ ತೊಂದರೆ ಎದುರಿಸಲು ಪುರಸಭೆ ಸಿದ್ಧತೆ ಮಾಡಿಕೊಂಡಿದೆ. ಕೊಳವೆ ಬಾವಿಗಳನ್ನು ಪರೀಕ್ಷಿಸಿ ನೀರಿನ ಲಭ್ಯತೆ ಕಡಿಮೆಯಿದ್ದರೆ ಅದನ್ನು ಮತ್ತಷ್ಟು ಆಳಕ್ಕೆ ಇಳಿಸುವ, ಪೈಪ್‌ಲೈನ್ ಸುಸ್ಥಿತಿಯಲ್ಲಿಡುವ, ಅಗತ್ಯ ಬಿದ್ದರೆ ಟ್ಯಾಂಕರ್ ಮೂಲಕ ನೀರು ಕೊಡುವ ಕಾರ್ಯಗಳಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕಡೂರು ಪಟ್ಟಣದಲ್ಲಿ 3161 ಗೃಹಬಳಕೆ ನಲ್ಲಿ ಸಂಪರ್ಕವಿದೆ. ಗೃಹೇತರ 20, ವಾಣಿಜ್ಯ ಬಳಕೆ 58 ಮತ್ತು 2920 ಸಾರ್ವಜನಿಕ ನಲ್ಲಿ ಸಂಪರ್ಕವಿದೆ. ಅನಧಿಕೃತವಾಗಿರುವುದು ಎಷ್ಟು ಎನ್ನವು ಲೆಕ್ಕ ಇಲ್ಲ. ಪುರಸಭೆ ಸುಪರ್ದಿಯಲ್ಲಿ 120 ಕೊಳವೆ ಬಾವಿಗಳಿದ್ದು, 20ಕೊಳವೆ ಬಾವಿಗಳು ಸ್ಥಗಿತಗೊಂಡಿವೆ. ಭದ್ರಾ ನೀರು ಸರಬರಾಜು ಮಾಡಲು ಅನುಕೂಲವಾಗುವಂತೆ  9 ಓವರ್ ಹೆಡ್ ಟ್ಯಾಂಕ್‌ಗಳಿದ್ದು, ಆ ಪೈಕಿ ಒಂದು ದುರಸ್ತಿಯಲ್ಲಿದೆ. 4 ನೆಲಮಟ್ಟದ ಡಂಪಿಂಗ್ ಟ್ಯಾಂಕ್‌ಗಳಿವೆ.

ಪೂರೈಕೆಯಾಗುವುದು ಶೇ 50ರಷ್ಟು ಮಾತ್ರ

ಭದ್ರಾ ಕುಡಿಯುವ ನೀರಿನ ಯೋಜನೆಯಲ್ಲಿ ಕಡೂರುಬೀರೂರು ಪಟ್ಟಣ ಹಾಗೂ ಆ ಮಾರ್ಗದ 32 ಹಳ್ಳಿಗಳಿಗೆ ಕುಡಿಯವ ನೀರು ಒದಗಿಸಲಾಗುತ್ತದೆ. ಕಡೂರು ಪಟ್ಟಣಕ್ಕೆ 4.8 ಎಂ.ಎಲ್.ಡಿ ನೀರು ನಿಗದಿಯಾಗಿದ್ದರೂ ಇಲ್ಲಿಗೆ ಬರುತ್ತಿರುವ ನೀರು ಇದರಲ್ಲಿ ಶೇ 50ರಷ್ಟು ಮಾತ್ರ. ಬೀರೂರು ಪಟ್ಟಣ ಹಾಗೂ ಗ್ರಾಮಗಳಿಗೆ ನೀರು ಪೂರೈಕೆಯಾಗಿ ಅದು ಕಡೂರು ತಲುಪುವ ಹೊತ್ತಿಗೆ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ವಿದ್ಯುತ್ ಸಮಸ್ಯೆಯಿಂದಲೂ ನೀರಿನ ಪಂಪ್ ಕೆಲ ಸಮಯ ಸ್ಥಗಿತಗೊಳ್ಳುವುದರಿಂದಲೂ ನೀರು ಸರಬರಾಜು ಪ್ರಮಾಣ ಕಡಿಮೆಯಾಗುತ್ತದೆ. ಈ ಕಾರಣದಿಂದ ಪಟ್ಟಣಕ್ಕೆ ಭಧ್ರಾ ನೀರನ್ನು ದಿನ ಬಿಟ್ಟು ದಿನ ನೀಡಲಾಗುತ್ತಿದೆ. ಹೋಟೆಲ್ ಮಾಲೀಕರು ಟ್ಯಾಂಕರ್ ನೀರು ಹಾಕಿಸಿಕೊಳ್ಳುತ್ತಾರೆ. ಬಹಳಷ್ಟು ಕುಟುಂಬಗಳು ಕುಡಿಯುವ ನೀರನ್ನು ಶುದ್ಧ ಕುಡಿಯುವ ನೀರಿನ ಘಟಕಗಳಿಂದ ತರುತ್ತಾರೆ.

ಸೋರಿಕೆ ಸರಿಪಡಿಸಿ

ಪಟ್ಟಣದ ಕೆಲವೆಡೆ ನೀರಿನ ಪೈಪ್ ಒಡೆದಿರುವುದನ್ನು ಸರಿಪಡಿಸುವ ಕಾರ್ಯ ಆಗಿಲ್ಲ. ಬಸವೇಶ್ವರ ವೃತ್ತದ ಬಳಿ ಎರಡು ಕಡೆ ಮುಖ್ಯ ರಸ್ತೆಯಲ್ಲಿ ಪೈಪುಗಳು ಒಡೆದಿವೆ. ರಸ್ತೆಯಲ್ಲಿ ನೀರು ಸಣ್ಣ ಪ್ರಮಾಣದಲ್ಲಿ ಹರಿಯುತ್ತಿರುತ್ತದೆ. ಎಪಿಎಂಸಿಯಲ್ಲಿರುವ ಓವರ್ ಹೆಡ್ ಟ್ಯಾಂಕ್ ಸದಾ ಸೋರುತ್ತಿದ್ದು ಗಣನೀಯ ಪ್ರಮಾಣದ ನೀರು ವ್ಯರ್ಥವಾಗಿ ಹರಿಯುತ್ತಿರುತ್ತದೆ. ಹಲವೆಡೆ  ಚರಂಡಿಗೆ ಅಂಟಿಕೊಂಡಂತೆ ನಲ್ಲಿ ಇಡಲಾಗಿದೆ. ಈ ನಲ್ಲಿಗಳಿಗೆ ಪೈಪ್ ಹಾಕಿಕೊಂಡು ನೀರು ತುಂಬಿಸಿಕೊಳ್ಳುವ ಕಾರ್ಯವೂ ನಡೆಯುತ್ತಿದೆ. ಆದರೆ ಇದರತ್ತ ಪುರಸಭೆ ಗಮನ ಹರಿಸಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT