ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೃಂಗೇರಿ: ಕಂದಾಯ ಇಲಾಖೆಯಿಂದ 4 ಎಕರೆ 23 ಗುಂಟೆ ಜಾಗ ಕೆಎಸ್‍ಆರ್‌ಟಿಸಿಗೆ ಹಸ್ತಾಂತರ

Published 15 ಮಾರ್ಚ್ 2024, 6:39 IST
Last Updated 15 ಮಾರ್ಚ್ 2024, 6:39 IST
ಅಕ್ಷರ ಗಾತ್ರ

ಶೃಂಗೇರಿ: ತಾಲ್ಲೂಕಿನಲ್ಲಿ ಬಸ್ ಸಂಚಾರ ಪ್ರಮುಖ ಸಂಪರ್ಕ ಸಾಧನವಾಗಿದ್ದರೂ ಕೆಎಸ್‍ಆರ್‌ಟಿಸಿ ಬಸ್ ಡಿಪೊ ಇಲ್ಲದ ಕಾರಣ ಬಸ್ ಸೇವೆ ಸಮರ್ಪಕವಾಗಿರಲಿಲ್ಲ. ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತ್ಯಾವಣದ ಸರ್ವೇ ನಂಬರ್ 196ರಲ್ಲಿ ಬಸ್‌ ಡಿಪೊಗಾಗಿ ಮಂಜೂರಾದ 4 ಎಕರೆ 23 ಗುಂಟೆ ಜಾಗವನ್ನು ಕಂದಾಯ ಇಲಾಖೆ ಕೆಎಸ್‍ಆರ್‌ಟಿಸಿಗೆ ಹಸ್ತಾಂತರ ಮಾಡುವ ಮೂಲಕ ಹೊಸ ಆಸೆ ಚಿಗುರಿದೆ.

ಮಲೆನಾಡಿನಲ್ಲಿ ಬಸ್ ಸಂಪರ್ಕ ಸುಲಭವಲ್ಲ. ಗುಡ್ಡಗಾಡು ಪ್ರದೇಶ, ಒಂಟಿ ಮನೆಗಳು, ಪಟ್ಟಣದಿಂದ ದೂರವಿರುವ ಹಳ್ಳಿಗಳ ನಡುವೆ ರಸ್ತೆಯೂ ಸಮರ್ಪಕವಾಗಿಲ್ಲದಿರುವುದರಿಂದ ಬಸ್‌ಗಳು ಬರುವುದು ವಿರಳ. ಆದರೂ ಶೃಂಗೇರಿ ಶಾರದಾ ಪೀಠಕ್ಕೆ ಲಕ್ಷಾಂತರ ಭಕ್ತರು ಬರುತ್ತಾರೆ. ಇಲ್ಲಿಂದ ಧರ್ಮಸ್ಥಳ, ಸುಬ್ರಹ್ಮಣ್ಯ, ಕೊಲ್ಲೂರು, ಉಡುಪಿ, ಜೋಗ, ಹೊರನಾಡು, ಮಂಗಳೂರು ಕಡೆಗೆ ತೆರಳುತ್ತಾರೆ. ಇವರೆಲ್ಲರೂ ಖಾಸಗಿ ಬಸ್ ನಂಬಿಕೊಂಡೇ ಬೇರೆಡೆಗೆ ಹೋಗುವುದು ಅನಿವಾರ್ಯ. ಡಿಪೊಗೆ ಜಾಗ ಮಂಜೂರಾಗಿರುವುದರಿಂದ ಸಮಸ್ಯೆಗಳು ಶೀಘ್ರ ಬಗೆಹರಿಯುವ ನಿರೀಕ್ಷೆ ಇದೆ.

ಬಹುತೇಕ ಗ್ರಾಮಗಳಿಗೆ ಸಂಪರ್ಕ ಸೇತುವೆಯಾಗಿದ್ದ ಸಹಕಾರ ಸಾರಿಗೆ ಸಂಸ್ಥೆ ಬಸ್‍ಗಳ ಸಂಚಾರ ಸ್ಥಗಿತಗೊಂಡ ನಂತರ ಗ್ರಾಮೀಣ ಸಂಪರ್ಕ ಸಮಸ್ಯೆ ಮತ್ತಷ್ಟು ಬಿಗಡಾಯಿಸಿತ್ತು. ಹೆಚ್ಚಿನ ಶಿಕ್ಷಣ, ಸರ್ಕಾರಿ ಕಚೇರಿ, ಬ್ಯಾಂಕ್, ವೈದ್ಯಕೀಯ ಸೇವೆ, ದಿನಸಿ ವಸ್ತು ಖರೀದಿಗೆ ಪಟ್ಟಣವನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಇದೆ.

ಬಸ್ ಡಿಪೊಗಾಗಿ ಬಾಳೆಹೊನ್ನೂರಿನ ಶಂಕರನಾರಾಯಣ ಭಟ್ ಬಳಕೆದಾರರ ವೇದಿಕೆ ಮೂಲಕ ಹೋರಾಟ ನಡೆಸಿದ್ದರು. ಮೆಣಸೆ ಗ್ರಾಮ ಪಂಚಾಯಿತಿಯ ಶಿಡ್ಲೆಯಲ್ಲಿ 5 ಎಕರೆ ಜಾಗ ಮಂಜೂರಾಗಿತ್ತು. ಅದು ಅರಣ್ಯ ಇಲಾಖೆಗೆ ಸೇರಿದ್ದರಿಂದ ಸಮಸ್ಯೆಯಾಗಿದೆ. ಈಗ ಕಂದಾಯ ಜಾಗ ಮಂಜುರಾಗಿದೆ.

ವರ್ಷದೊಳಗೆ ಬಸ್ ಸೇವೆ

4 ಎಕರೆ 23 ಗುಂಟೆ ಕಂದಾಯ ಭೂಮಿಯನ್ನು ಮಂಜೂರು ಮಾಡಿರುವ ಸರ್ಕಾರ ಕೆಎಸ್‍ಆರ್‌ಟಿಸಿ ಇಲಾಖೆಗೆ ಹಸ್ತಾಂತರಿಸಿದೆ. ₹ 8 ಕೋಟಿ ವೆಚ್ಚದ ಅಂದಾಜು ಪಟ್ಟಿ ಅನುಮೋದನೆ ಆಗಿ ಟೆಂಡರ್ ಪ್ರಕ್ರಿಯೆ ಕರಾರು ಒಪ್ಪಂದ ಮುಗಿದಿದೆ. ಒಂದು ವರ್ಷದಲ್ಲಿ ಡಿಪೊ ನಿರ್ಮಾಣವಾಗಿ ಬಸ್ ಸೇವೆ ಆರಂಭವಾಗಲಿದೆ ಎಂದು ಚಿಕ್ಕಮಗಳೂರು ಕೆಎಸ್‍ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ತಿಳಿಸಿದರು.

ಶೃಂಗೇರಿ ಧಾರ್ಮಿಕ ಕ್ಷೇತ್ರವೂ ಆಗಿರುವುದರಿಂದ ಹೆಚ್ಚಿನ ಬಸ್‌ ಸೇವೆ ಅಗತ್ಯವಾಗಿತ್ತು. ಜಿಲ್ಲೆಯ ಅಧಿಕಾರಿಗಳು, ಶಾಸಕ ಟಿ.ಡಿ ರಾಜೇಗೌಡರ ಸಹಕಾರದಿಂದ ಜಾಗದ ಕೊರತೆ ಸಮಸ್ಯೆ ಬಗೆಹರಿದಿದೆ.
–ಯೂಸುಫ್ ಪಟೇಲ್, ಸಾಮಾಜಿಕ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT