ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಗಳಿಗೆ 1.35 ಕೋಟಿ ಟನ್ ಮೀನಿನ ಉತ್ಪನ್ನ ರಫ್ತು: ಸುರೇಶ ಡಿ. ಏಕಬೋಟೆ

Published 19 ಮಾರ್ಚ್ 2024, 15:06 IST
Last Updated 19 ಮಾರ್ಚ್ 2024, 15:06 IST
ಅಕ್ಷರ ಗಾತ್ರ

ಹಿರಿಯೂರು: ದೇಶದಲ್ಲಿ ಪ್ರತಿ ವರ್ಷ 1.61 ಕೋಟಿ ಟನ್ ಮೀನು ಉತ್ಪಾದನೆ ಮಾಡುತ್ತಿದ್ದು, ವಿದೇಶಗಳಿಗೆ 1.35 ಕೋಟಿ ಟನ್ ಪ್ರಮಾಣದ ಮೀನಿನ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿದೆ ಎಂದು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹಸಂಶೋಧನಾ ನಿರ್ದೇಶಕ ಸುರೇಶ ಡಿ. ಏಕಬೋಟೆ ತಿಳಿಸಿದರು.

ತಾಲ್ಲೂಕಿನ ಬಬ್ಬೂರು ಫಾರಂನ ವಲಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಹೈದರಾಬಾದ್‌ನ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮೂರು ದಿನಗಳ ‘ಮೀನು ಕೃಷಿಯಲ್ಲಿ ಉದ್ಯಮಶೀಲತೆ ಅಭಿವೃದ್ಧಿಗಾಗಿ ಗ್ರಾಮೀಣ ಯುವಕರ ಭಾಗವಹಿಸುವಿಕೆ’ ಕುರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಯುವರೈತರು ಸ್ವ–ಉದ್ಯೋಗ ಕೈಗೊಳ್ಳಲು ಮೀನು ಕೃಷಿ ಅತ್ಯಂತ ಸೂಕ್ತ. ಜಾಗತಿಕ ಆಹಾರ ಭದ್ರತೆಯಲ್ಲಿ ಮೀನುಗಾರಿಕೆ ಅತೀ ಮುಖ್ಯ ಪಾತ್ರ ವಹಿಸಿದೆ. ರಾಜ್ಯದಲ್ಲಿ ಮೀನು ಕೃಷಿಗೆ ಅಗತ್ಯ ಇರುವಷ್ಟು ಜಲಸಂಪನ್ಮೂಲವಿದೆ. ಜಲಾಶಯಗಳು, ಕೆರೆಕಟ್ಟೆಗಳು, ನದಿಗಳು ಒಳಗೊಂಡಂತೆ ಜಲಸಂಪನ್ಮೂಲಗಳನ್ನು ಬಳಸಿಕೊಂಡು ನಡೆಸುತ್ತಿರುವ ಮೀನು ಕೃಷಿಯಲ್ಲಿ ನಮ್ಮ ದೇಶ ಜಾಗತಿಕ ಮಟ್ಟದಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಕರ್ನಾಟಕವು  ದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಮೀನು ಕೃಷಿಗೆ ಹೆಚ್ಚಿನ ಉತ್ತೇಜನ ನೀಡಲು ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿಯಲ್ಲಿ ₹20,000 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಯುವಕರು ಇದರ ಪ್ರಯೋಜನ ಪಡೆಯಬೇಕು’ ಎಂದು ಅವರು ಸೂಚಿಸಿದರು.

ಒಳನಾಡು ಮೀನುಗಾರಿಕೆ ಇಲಾಖೆ ಸಹಾಯಕ ಪ್ರಾಧ್ಯಾಪಕಿ ಶೃತಿಶ್ರೀ ಮಾತನಾಡಿ, ‘ಹೆಚ್ಚುತ್ತಿರುವ ರಸಗೊಬ್ಬರದ ಬೆಲೆ, ಕೂಲಿಕಾರ್ಮಿಕರ ಸಮಸ್ಯೆ, ಮಧ್ಯವರ್ತಿಗಳ ಹಾವಳಿಯಿಂದಾಗಿ ರೈತರ ಆದಾಯ ಕಡಿಮೆ ಆಗುತ್ತಿದ್ದು, ರೈತರು ವಿಶೇಷವಾಗಿ ಯುವಕರು ಮೀನು ಕೃಷಿಯನ್ನು ಉಪಕಸುಬಾಗಿ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಕಾಶಪವಾಡೆ, ಎಚ್.ಎಸ್.ನವೀನ್ ಕುಮಾರ್, ಶಿಲ್ಪಾ ಪಿ. ಚೌಟಿ, ಶಿವಲೀಲಾ ಎಸ್. ಕುಕನೂರ್, ಆಶಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT