ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಸಚಿವ ನಾರಾಯಣಸ್ವಾಮಿಗೆ ಭವ್ಯ ಸ್ವಾಗತ

Last Updated 18 ಆಗಸ್ಟ್ 2021, 15:10 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೇಂದ್ರ ಸಚಿವರಾಗಿ ಇದೇ ಮೊದಲ ಬಾರಿಗೆ ಸ್ವಕ್ಷೇತ್ರಕ್ಕೆ ಆಗಮಿಸಿದ ಎ.ನಾರಾಯಣಸ್ವಾಮಿ ಅವರನ್ನು ಅಭಿಮಾನಿಗಳು ಬುಧವಾರ ಭವ್ಯವಾಗಿ ಸ್ವಾಗತಿಸಿದರು. ಸಚಿವ ಸ್ಥಾನ ಕಲ್ಪಿಸಿದ ಬಿಜೆಪಿ ವರಿಷ್ಠರಿಗೆ ಕೃತಜ್ಞತೆ ಸಲ್ಲಿಸಿದರು.

ನಾರಾಯಣಸ್ವಾಮಿ ನೇತೃತ್ವದಲ್ಲಿ ಬೆಂಗಳೂರಿನಿಂದ ಹೊರಟ ‘ಜನಾಶೀರ್ವಾದ ಯಾತ್ರೆ’ ತುಮಕೂರು ಜಿಲ್ಲೆ ಮೂಲಕ ಮಂಗಳವಾರ ತಡರಾತ್ರಿ ಚಿತ್ರದುರ್ಗ ಪ್ರವೇಶಿಸಿತು. ಹಿರಿಯೂರು ತಾಲ್ಲೂಕಿನ ಹಲವೆಡೆ ಸಂಚರಿಸಿ ಬುಧವಾರ ಮಧ್ಯಾಹ್ನ ನಗರಕ್ಕೆ ಬಂದಿತು.

ಯಾತ್ರೆಯ ಅಂಗವಾಗಿ ಇಡೀ ನಗರವನ್ನು ಕೇಸರಿಮಯ ಮಾಡಲಾಗಿತ್ತು. ಬಿಜೆಪಿ ಬಾವುಟಗಳು ಎಲ್ಲೆಂದರಲ್ಲಿ ರಾರಾಜಿಸುತ್ತಿದ್ದವು. ಯಾತ್ರೆ ಸಾಗುವ ಮಾರ್ಗದಲ್ಲಿ ಸಚಿವರ ಕಟೌಟ್‌, ಬ್ಯಾನರ್‌ಗಳನ್ನು ಹಾಕಲಾಗಿತ್ತು. ರಸ್ತೆಗಳಿಗೆ ತಳಿರು ತೋರಣ ಕಟ್ಟಿ ಸಿಂಗರಿಸಲಾಗಿತ್ತು.

ಚಳ್ಳಕೆರೆ ಗೇಟ್‌ ಸಮೀಪ ತೆರೆದ ವಾಹನ ಏರಿದ ಸಚಿವರಿಗೆ ಬಿಜೆಪಿ ನಾಯಕರು ಜೊತೆಯಾದರು. ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಬಿಜೆಪಿ ಕಾರ್ಯಕರ್ತರು ಹಾಗೂ ಸಚಿವರ ಅಭಿಮಾನಿಗಳು ಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಸಚಿವರಿಗೆ ಹೂಹಾರ ಹಾಕಿ, ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ ಸಂಭ್ರಮಿಸಿದರು. ಸಾಂಸ್ಕೃತಿಕ ಕಲಾ ತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು. ಮಹಿಳೆಯರ ಡೊಳ್ಳು ಕುಣಿತ ಗಮನ ಸೆಳೆಯಿತು.

ಅಂಬೇಡ್ಕರ್‌, ಒನಕೆ ಓಬವ್ವ, ಕನಕ ಹಾಗೂ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಸಚಿವರು ಮಾಲಾರ್ಪಣೆ ಮಾಡಿದರು. ನೀಲಂಠೇಶ್ವರ ದೇಗುಲ, ಮಾದಾರ ಚನ್ನಯ್ಯ ಗುರುಪೀಠಕ್ಕೆ ಸಚಿವರು ಭೇಟಿ ನೀಡಿದ್ದರು. ಮೊದಲೇ ನಿಗದಿಯಾಗಿದ್ದ ಭೋವಿ ಗುರುಪೀಠಕ್ಕೆ ಸಚಿವರು ಭೇಟಿ ನೀಡಲಿಲ್ಲ.

ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆ

ಬಿಜೆಪಿ ಹಮ್ಮಿಕೊಂಡಿದ್ದ ‘ಜನಾಶೀರ್ವಾದ ಯಾತ್ರೆ’ಯಲ್ಲಿ ಕೋವಿಡ್ ಮಾರ್ಗಸೂಚಿಗಳು ಪಾಲನೆ ಆಗಲಿಲ್ಲ. ನಿರೀಕ್ಷೆ ಮೀರಿ ಜನರು ಸೇರಿದ್ದರಿಂದ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ.

ಚಳ್ಳಕೆರೆ ಗೇಟ್‌ನಿಂದ ಹಳೆ ಮಾಧ್ಯಮಿಕ ಶಾಲಾ ಮೈದಾನದವರೆಗೆ ನಡೆದ ಸುಮಾರು ಎರಡು ಕಿ.ಮೀ ಮೆರವಣಿಗೆಯಲ್ಲಿ ಸಾವಿರಾರು ಜನರು ಸೇರಿದ್ದರು. ಸಚಿವರು ಸಾಗುತ್ತಿದ್ದ ತೆರೆದ ವಾಹನದ ಮುಂಭಾಗದಲ್ಲಿ ಕಿಕ್ಕಿರಿದು ಜಮಾಯಿಸಿದ್ದರು. ಮೆರವಣಿಗೆಯ ಬಳಿಕ ಅಗ್ನಿಶಾಮಕ ಸಿಬ್ಬಂದಿ ಸೋಂಕು ನಿವಾರಕ ಸಿಂಪಡಿಸಿ ಮಾರ್ಗವನ್ನು ಶುಚಿಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT