ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಮೀಸಲಾತಿ ಜಾರಿಗೊಳಿಸಿದರೆ ಹೋರಾಟ: ಸರ್ಕಾರಕ್ಕೆ ಭೋವಿ ಸಮುದಾಯ ಎಚ್ಚರಿಕೆ

Last Updated 17 ಸೆಪ್ಟೆಂಬರ್ 2020, 10:09 IST
ಅಕ್ಷರ ಗಾತ್ರ

ಚಿತ್ರದುರ್ಗ: ಒಳಮೀಸಲಾತಿ ಅಥವಾ ಮೀಸಲಾತಿ ವರ್ಗೀಕರಣಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಸದಾಶಿವ ಆಯೋಗದ ಶಿಫಾರಸು ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಮುಂದಾದರೆ ದೊಡ್ಡ ಮಟ್ಟದ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ ಎಂದು ಅಖಿಲ ಕರ್ನಾಟಕ ಭೋವಿ ಯುವ ವೇದಿಕೆ ಎಚ್ಚರಿಕೆ ನೀಡಿದೆ.

‘ಒಳಮೀಸಲಾತಿ ಪರಿಕಲ್ಪನೆ ಸಾಂವಿಧಾನಿಕ ಆಶಯಗಳಿಗೆ ವಿರುದ್ಧವಾಗಿದೆ. ಮೀಸಲಾತಿ ವಿಚಾರಕ್ಕೆ ಸರ್ಕಾರ ಅನಗತ್ಯವಾಗಿ ಕೈಹಾಕಬಾರದು. ಈಗಿರುವ ಸ್ಥಿತಿಯನ್ನೇ ಮುಂದುವರಿಸಿಕೊಂಡು ಹೋಗಬೇಕು. ಬಾಹ್ಯ ಒತ್ತಡಗಳಿಗೆ ಸರ್ಕಾರ ಮಣಿಯಬಾರದು’ ಎಂದು ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ವೈ.ಕೊಟ್ರೇಶ್‌ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

‘ಪಂಜಾಬ್‌ ಸರ್ಕಾರ ಹಾಗೂ ದರವಿಂದ್‌ ಸಿಂಗ್‌ ಪ್ರಕರಣದ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್‌ ಪಂಚಪೀಠ ನೀಡದ ಅಭಿಪ್ರಾಯವನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹಾಗೂ ಸಂಸದ ಎ.ನಾರಾಯಣಸ್ವಾಮಿ ಅವರು ಪರಿಸ್ಥಿತಿಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದು ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಸಮದಾಯಗಳ ದಿಕ್ಕು ತಪ್ಪಿಸುವ ಹುನ್ನಾರ’ ಎಂದು ಟೀಕಿಸಿದರು.

‘ಒಳಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ನೀಡಿದ ವರದಿಯ ಬಗ್ಗೆ ಹಲವು ಆಕ್ಷೇಪಗಳಿವೆ. ಅವೈಜ್ಞಾನಿಕ ಹಾಗೂ ಕಾನೂನು ಬಾಹಿರ ಅಂಶಗಳು ವರದಿಯಲ್ಲಿವೆ. ಸಮಾಜ ಕಲ್ಯಾಣ ಸಚಿವರಾಗಿದ್ದ ಎ.ನಾರಾಯಣಸ್ವಾಮಿ ಹಾಗೂ ಎಡಗೈ ಸಮುದಾಯದ ರಾಜಕೀಯ ಮುಖಂಡರು ವರದಿಯನ್ನು ಹೇಳಿ ಬರೆಸಿದಂತೆ ಕಾಣುತ್ತಿದೆ. ಇಂತಹ ವರದಿ ಅನುಷ್ಠಾನಗೊಂಡರೆ ಭೋವಿ, ಕೊರಚ, ಕೊರಮ ಹಾಗೂ ಲಂಬಾಣಿ ಸಮುದಾಯಕ್ಕೆ ಮರಣ ಶಾಸನವಾಗಿ ಪರಿಣಮಿಸಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಮೀಸಲಾತಿ ಅನುಭವಿಸಲು ಸಾಧ್ಯವಾಗಿಲ್ಲವೆಂಬ ಎಡಗೈ ಸಮುದಾಯದ ಆರೋಪದಲ್ಲಿ ಹುರುಳಿಲ್ಲ. ರಾಜಕೀಯ, ಆರ್ಥಿಕ, ಶೈಕ್ಷಣಿಕ ವಲಯದಲ್ಲಿ ಮೀಸಲಾತಿ ಸೌಲಭ್ಯವನ್ನು ಯಾವ ಸಮುದಾಯ ಸಮರ್ಥವಾಗಿ ಬಳಸಿಕೊಂಡಿದೆ ಎಂಬುದರ ಬಗ್ಗೆ ಸಮಗ್ರ ಅಧ್ಯಯನ ನಡೆಯಬೇಕಿದೆ. ರಾಜಕೀಯ ಅಧಿಕಾರ ಹಾಗೂ ಆರ್ಥಿಕ ಅವಕಾಶಗಳನ್ನು ಎಡಗೈ ಸಮುದಾಯ ಸಮರ್ಥವಾಗಿ ಬಳಸಿಕೊಂಡಿದೆ’ ಎಂದರು.

‘ಭೋವಿ ಸಮುದಾಯ ಕೂಡ ಹಿಂದುಳಿದಿದೆ. ನಗರ ಪ್ರದೇಶದಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಸಂವಿಧಾನಾತ್ಮಕವಲ್ಲದ ಸ್ಪೃಶ್ಯ ಹಾಗೂ ಅಸ್ಪೃಶ್ಯ ಪದಗಳನ್ನು ಬಳಸಿ ದಲಿತ ಸಮುದಾಯದ ಒಗ್ಗಟ್ಟು ಮುರಿಯಲಾಗುತ್ತಿದೆ. ವೋಟ್‌ ಬ್ಯಾಂಕ್‌ ರಾಜಕಾರಣಕ್ಕೆ ಇಂತಹ ಪ್ರಯತ್ನಗಳು ನಡೆಯುತ್ತಿವೆ’ ಎಂದು ಆರೋಪಿಸಿದರು.

ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮಣ್ಣ, ರಾಜ್ಯ ಮಹಿಳಾ ಸಂಘಟನಾ ಕಾರ್ಯದರ್ಶಿ ಆರ್‌.ಲಲಿತಮ್ಮ, ಜಿಲ್ಲಾ ಘಟಕದ ಅಧ್ಯಕ್ಷೆ ಸುಮಾ, ಮುಖಂಡರಾದ ರಮೇಶ್‌, ದೇವರಾಜ್‌, ಧನಂಜಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT