ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ: ಅನಿರೀಕ್ಷಿತ ಅಭ್ಯರ್ಥಿಗೆ ವಿಜಯ ಮಾಲೆ

ಕಾಂಗ್ರೆಸ್‌ ‘ಕೈ’ ಹಿಡಿಯದ ಮತದಾರ, ಮೋಡಿ ಮಾಡದ ‘ಗ್ಯಾರಂಟಿ’
Published 5 ಜೂನ್ 2024, 8:05 IST
Last Updated 5 ಜೂನ್ 2024, 8:05 IST
ಅಕ್ಷರ ಗಾತ್ರ

ಚಿತ್ರದುರ್ಗ: ಆಕಸ್ಮಿಕವಾಗಿ ಅಭ್ಯರ್ಥಿಯಾಗಿ ಕೊನೆಯ ಗಳಿಗೆಯಲ್ಲಿ ಲೋಕಸಭಾ ಚುನಾವಣಾ ಕಣಕ್ಕೆ ಧುಮುಕಿದ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ಚಿತ್ರದುರ್ಗ ಮೀಸಲು ಕ್ಷೇತ್ರದ ಮತದಾರರು ಕೈಹಿಡಿದಿದ್ದಾರೆ. ‘ಹೊರಗಿನವರು’ ಎಂಬ ಭೇದ ತೋರದೇ ರಾಜಕೀಯ ಮರುಹುಟ್ಟು ನೀಡಿ ಸಂಸತ್ ಭವನಕ್ಕೆ ಕಳುಹಿಸಿಕೊಟ್ಟಿದ್ದಾರೆ.

ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿದ ‘ಗ್ಯಾರಂಟಿ’ ಯೋಜನೆಗಳ ಮೇಲೆ ಬಲವಾದ ನಂಬಿಕೆ ಇಟ್ಟುಕೊಂಡಿದ್ದ ಕಾಂಗ್ರೆಸ್‌ಗೆ ಫಲಿತಾಂಶ ಆಘಾತವುಂಟು ಮಾಡಿದೆ. ಗೆಲುವಿನ ವಿಶ್ವಾಸದಲ್ಲಿ ಮೂರನೇ ಬಾರಿಗೆ ಸ್ಪರ್ಧಿಸಿದ್ದ ಬಿ.ಎನ್‌.ಚಂದ್ರಪ್ಪ ಸತತ ಎರಡನೇ ಬಾರಿಗೆ ಪರಾಭವಗೊಂಡಿದ್ದಾರೆ. ಬಾಗಲಕೋಟೆಯಿಂದ ಬಂದಿರುವ ಕಾರಜೋಳ ಅವರಿಗೆ ‘ಗೋ ಬ್ಯಾಕ್‌’ ಹೇಳುವಂತೆ ಪ್ರೇರೇಪಿಸಿದ್ದ ಕಾಂಗ್ರೆಸ್‌ಗೇ ಮತದಾರರು ‘ಗೋ ಬ್ಯಾಕ್‌’ ಎಂದಿದ್ದಾರೆ.

ಅಭ್ಯರ್ಥಿ ಬದಲಾವಣೆ ತಂತ್ರ

ಚಿತ್ರದುರ್ಗ ಲೋಕಸಭಾ ಕ್ಷೇತ್ರವನ್ನು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಪ್ರತಿನಿಧಿಸುತ್ತಿದ್ದರು. ಪಕ್ಷ ಹಾಗೂ ಕಾರ್ಯಕರ್ತರ ಹಂತದಲ್ಲಿ ಇವರಿಗಿದ್ದ ಪ್ರತಿರೋಧವನ್ನು ಅರಿತ ಬಿಜೆಪಿ, ಅಭ್ಯರ್ಥಿ ಬದಲಾವಣೆಯ ದಾಳ ಉರುಳಿಸಿತು. ನಾರಾಯಣಸ್ವಾಮಿ ಬದಲಾಗಿ ಗೋವಿಂದ ಕಾರಜೋಳ ಅವರನ್ನು ಹುರಿಯಾಳಾಗಿ ಕಣಕ್ಕೆ ಇಳಿಸಿತು. ಕೇಸರಿ ಪಡೆಯ ಈ ಕಾರ್ಯತಂತ್ರ ಫಲಿಸಿದೆ.

ಅಭ್ಯರ್ಥಿ ಬದಲಾವಣೆಯ ಸಂದರ್ಭದಲ್ಲಿ ಬಿಜೆಪಿ ಜಾಣ್ಮೆ ಮರೆಯಿತು. ಕ್ಷೇತ್ರ ವ್ಯಾಪ್ತಿಯಲ್ಲಿ ‍ಪ್ರಬಲವಾಗಿದ್ದ ‘ಎಡಗೈ’ ಸಮುದಾಯಯಕ್ಕೆ ಟಿಕೆಟ್‌ ಮೀಸಲಿಟ್ಟಿತು. ಹೆಚ್ಚು ಜನರಿಗೆ ಪರಿಚಿತ ಇರುವ ಮುಖವಾಗಿ ಕಾರಜೋಳ ಅವರನ್ನು ಮುನ್ನೆಲೆಗೆ ತಂದಿತು. ಪಕ್ಷ ಅಳೆದು–ತೂಗಿ ಟಿಕೆಟ್‌ ನೀಡಿದಾಗ ಕೊಂಚ ಅಳುಕಿನಿಂದಲೇ ಕಾರಜೋಳ ಕ್ಷೇತ್ರ ಪ್ರವೇಶಿಸಿದ್ದರು.

ಮುಳುವಾಗದ ಬಂಡಾಯ

ಆಕಾಂಕ್ಷಿಗಳ ಪ್ರಬಲ ಪೈಪೋಟಿಯಿಂದಾಗಿ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಿಸುವುದು ಭಾರಿ ವಿಳಂಬವಾಗಿತ್ತು. ನಾಮಪತ್ರ ಸಲ್ಲಿಕೆಯ ಅವಧಿ ಮುಗಿಯುವ ದಿನ ಸಮೀಪಿಸಿದರೂ ಪಕ್ಷದ ಉಮೇದುವಾರರು ಅಂತಿಮ ಆಗದಿರುವ ಬಗ್ಗೆ ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ ಉಂಟಾಗಿತ್ತು. ಕ್ಷೇತ್ರಕ್ಕೆ ಹೊರಗಿನವರನ್ನು ಕರೆತಂದ ಪರಿಗೆ ಭಾರಿ ವಿರೋಧ ವ್ಯಕ್ತವಾಗಿತ್ತು.

ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಚಂದ್ರಪ್ಪ ಅವರ ಪುತ್ರ ಎಂ.ಸಿ.ರಘುಚಂದನ್‌ ಬಿಜೆಪಿ ಟಿಕೆಟ್‌ ಪ್ರಬಲ ಆಕಾಂಕ್ಷಿಯಾಗಿದ್ದರು. ಅವಕಾಶ ಕೈತಪ್ಪಿದ್ದರಿಂದ ಅಸಮಾಧಾನಗೊಂಡ ಅವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಸಿದ್ಧತೆ ಮಾಡಿಕೊಂಡಿದ್ದರು. ಬಿಜೆಪಿ ಹಿರಿಯ ನಾಯಕ ಬಿ.ಎಸ್‌.ಯಡಿಯೂರಪ್ಪ ಮಧ್ಯಪ್ರವೇಶಿಸಿ ಬಂಡಾಯ ಶಮನಗೊಳಿಸಿದ್ದರು. ಪ್ರಚಾರದ ಬದಲು ನಾಯಕರನ್ನು ವಿಶ್ವಾಸಕ್ಕೆ ಪಡೆಯಲು ಬಿಜೆಪಿ ಸಾಕಷ್ಟು ಹೆಣಗಾಡಿತ್ತು.

ಮರುಹುಟ್ಟು ನೀಡಿದ ಕ್ಷೇತ್ರ

ಬಾಗಲಕೋಟೆ ಜಿಲ್ಲೆಯ ಮುಧೋಳ ವಿಧಾನಸಭಾ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿದ್ದ ಗೋವಿಂದ ಕಾರಜೋಳ 2023ರ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ಉಪಮುಖ್ಯಮಂತ್ರಿ ಹುದ್ದೆ ನಿಭಾಯಿಸಿದ್ದರೂ ಮತದಾರರು ಒಲವು ತೋರಿರಲಿಲ್ಲ. ರಾಜಕೀಯ ಸಂಧ್ಯಾಕಾಲದಲ್ಲಿದ್ದ ಕಾರಜೋಳ ಅವರಿಗೆ ಚಿತ್ರದುರ್ಗ ಕ್ಷೇತ್ರದ ಮತದಾರರು ಲೋಕಸಭೆಗೆ ಆಯ್ಕೆ ಮಾಡುವ ಮೂಲಕ ಮರುಹುಟ್ಟು ನೀಡಿದ್ದಾರೆ.

ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ ಸತತ ಎರಡು ಬಾರಿ ಸೋಲು ಕಂಡಿದ್ದ ಎ.ನಾರಾಯಣಸ್ವಾಮಿ ಅವರನ್ನು 2019ರಲ್ಲಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿ ಬಿಜೆಪಿ ಯಶಸ್ಸು ಗಳಿಸಿತ್ತು. ಇಲ್ಲಿನ ಮತದಾರರು ನಾರಾಯಣಸ್ವಾಮಿ ಅವರಿಗೆ ಮರುಹುಟ್ಟು ನೀಡಿದ್ದರು. ಇದೇ ಅವಕಾಶವನ್ನು ಕಾರಜೋಳ ಅವರಿಗೂ ಕಲ್ಪಿಸಿದ್ದಾರೆ.

ಹೊಸ ಮುಖಕ್ಕೆ ಮಣೆ

ಚಿತ್ರದುರ್ಗ ಲೋಕಸಭಾ ಕ್ಷೇತ್ರ ಹೊಸ ಮುಖಗಳಿಗೆ ಒಲಿಯುತ್ತದೆ ಎಂಬ ಮಾತು ಮತ್ತೊಮ್ಮೆ ಸಾಬೀತಾಗಿದೆ. 1996ರ ಲೋಕಸಭಾ ಚುನಾವಣೆಯಿಂದ ಈವರೆಗೆ ಕೊನೆಯ ಗಳಿಗೆಯಲ್ಲಿ ಆಕಸ್ಮಿಕವಾಗಿ ಕ್ಷೇತ್ರ ಪ್ರವೇಶಿಸಿದ ಹೊಸಬರನ್ನು ಮತದಾರರು ಕೈಹಿಡಿದಿದ್ದಾರೆ. ಪ್ರಸಕ್ತ ಚುನಾವಣೆಯಲ್ಲಿಯೂ ಇದೇ ಸಂಪ್ರದಾಯವನ್ನು ಮತದಾರರು ಮುಂದುವರಿಸಿದ್ದಾರೆ.

ನಿವೃತ್ತ ಪೊಲೀಸ್‌ ಅಧಿಕಾರಿ ಕೋದಂಡರಾಮಯ್ಯ 1996ರಲ್ಲಿ, ಚಿತ್ರ ನಟ ಶಶಿಕುಮಾರ್‌ 1999ರಲ್ಲಿ, ನಿವೃತ್ತ ನ್ಯಾಯಮೂರ್ತಿ ಎನ್‌.ವೈ.ಹನುಮಂತಪ್ಪ 2004ರಲ್ಲಿ, ಸಾಫ್ಟವೇರ್‌ ಎಂಜಿನಿಯರ್‌ ಜನಾರ್ದನಸ್ವಾಮಿ 2009ರಲ್ಲಿ, ಬಿ.ಎನ್‌.ಚಂದ್ರಪ್ಪ 2014ರಲ್ಲಿ, ಎ.ನಾರಾಯಣಸ್ವಾಮಿ 2019ರಲ್ಲಿ ಅನಿರೀಕ್ಷಿತವಾಗಿ ಕ್ಷೇತ್ರ ಪ್ರವೇಶಿಸಿ ವಿಜೇತರಾಗಿದ್ದರು. ಚುನಾವಣೆಗೂ ಮುನ್ನ ಕ್ಷೇತ್ರದ ಮತದಾರರಿಗೆ ಇವರು ಅಪರಿಚಿತರಾಗಿದ್ದರು.

ಸಂಸತ್‌ ಪ್ರವೇಶಿಸಿದ ಕಾರಜೋಳ

ಮೂಲತಃ ವಿಜಯಪುರ ಜಿಲ್ಲೆಯ ಗೋವಿಂದ ಎಂ.ಕಾರಜೋಳ ಅವರು ಬಾಗಲಕೋಟೆ ಜಿಲ್ಲೆಯ ಮುಧೋಳ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ನೆಲೆ ಕಂಡುಕೊಂಡಿದ್ದರು. ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು ಇದೇ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದ್ದಾರೆ. 1994ರಲ್ಲಿ ವಿಧಾನಸಭಾ ಚುನಾವಣೆಗೆ ಪದಾರ್ಪಣೆ ಮಾಡುವ ಮೂಲಕ ರಾಜಕೀಯ ಪ್ರವೇಶಿಸಿದ ಇವರು 2023ರಲ್ಲಿ ನಡೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ಉಪಮುಖ್ಯಮಂತ್ರಿ ಲೋಕೋಪಯೋಗಿ ಸಮಾಜ ಕಲ್ಯಾಣ ನೀರಾವರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.

ಮೂರನೇ ಬಾರಿಗೆ ಬಿಜೆಪಿ ಗೆಲುವು

ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಈವರೆಗೆ 18 ಚುನಾವಣೆಗಳು ನಡೆದಿವೆ. ಇದರಲ್ಲಿ ಕಾಂಗ್ರೆಸ್‌ 11 ಬಾರಿ ಗೆದ್ದು ಭದ್ರಕೋಟೆಯಾಗಿ ಮಾಡಿಕೊಂಡಿತ್ತು. ಒಂದೂವರೆ ದಶಕದಿಂದ ಈಚೆಗೆ ಕಾಂಗ್ರೆಸ್‌ ಕೋಟೆಯ ಬುನಾದಿ ಅಲುಗಾಡಿದೆ. ಬಿಜೆಪಿ ಮೂರನೇ ಬಾರಿಗೆ ರೋಚಕ ಗೆಲುವು ಸಾಧಿಸಿದೆ. 2009ರ ಲೋಕಸಭಾ ಚುನಾವಣೆಯಲ್ಲಿ ಜನಾರ್ದನಸ್ವಾಮಿ 2019ರಲ್ಲಿ ಎ.ನಾರಾಯಣಸ್ವಾಮಿ ಅವರು ಕ್ಷೇತ್ರದಲ್ಲಿ ಕಮಲ ಅರಳಿಸಿದ್ದರು. 2024ರ ಚುನಾವಣೆಯಲ್ಲಿ ಮತ್ತೊಮ್ಮೆ ಕಮಲ ಅರಳಿಸುವ ಸವಾಲು ಬಿಜೆಪಿ ಎದುರು ಇತ್ತು. ಕಾರ್ಯತಂತ್ರ ಬದಲಿಸಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸುವಲ್ಲಿ ಬಿಜೆಪಿ ಸಫಲವಾಗಿದೆ. ಪಿಎಸ್‌ಪಿ ಸ್ವತಂತ್ರ ಪಕ್ಷ ಜನತಾ ದಳ ಮತ್ತು ಜೆಡಿಯು ತಲಾ ಒಂದು ಬಾರಿ ಕ್ಷೇತ್ರ ಪ್ರತಿನಿಧಿಸಿವೆ.

ಸಚಿವರು ಶಾಸಕರಿಗೆ ಮುಖಭಂಗ

ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ 7 ಕ್ಷೇತ್ರಗಳನ್ನು ಕಾಂಗ್ರೆಸ್‌ ಶಾಸಕರು ಪ್ರತಿನಿಧಿಸುತ್ತಿದ್ದಾರೆ. ಎನ್‌.ವೈ.ಗೋಪಾಲಕೃಷ್ಣ ಪ್ರತಿನಿಧಿಸುವ ಮೊಳಕಾಲ್ಮುರು ಹಾಗೂ ಟಿ.ರಘುಮೂರ್ತಿ ಪ್ರತಿನಿಧಿಸುವ ಚಳ್ಳಕೆರೆ ಹೊರತುಪಡಿಸಿ ಉಳಿದ ಎಲ್ಲೆಡೆ ಕಾಂಗ್ರೆಸ್‌ಗಿಂತ ಬಿಜೆಪಿಗೆ ಹೆಚ್ಚು ಮತಗಳು ಸಿಕ್ಕಿವೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಪ್ರತಿನಿಧಿಸುವ ಹಿರಿಯೂರು ಶಾಸಕ ಬಿ.ಜಿ.ಗೋವಿಂದಪ್ಪ ಅವರ ಹೊಸದುರ್ಗ ವಿಧಾನಸಭಾ ಚುನಾವಣೆಯಲ್ಲಿ ಕೆ.ಸಿ.ವೀರೇಂದ್ರ ಅವರಿಗೆ ಭಾರಿ ಅಂತರದ ಗೆಲುವು ತಂದುಕೊಟ್ಟಿದ್ದ ಚಿತ್ರದುರ್ಗ ಪ್ರಭಾವಿ ನಾಯಕರೂ ಆಗಿರುವ ಟಿ.ಬಿ.ಜಯಚಂದ್ರ ಅವರ ಶಿರಾ ಹಾಗೂ ಶಾಸಕ ಎಚ್‌.ವಿ.ವೆಂಕಟೇಶ್‌ ಅವರ ಪಾವಗಡ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಗೋವಿಂದ ಕಾರಜೋಳ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್‌ ಶಾಸಕರು ಮತ್ತು ಸಚಿವರು ಭಾರಿ ಮುಖಭಂಗ ಅನುಭವಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT