ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕಿ ಹಿಂದಿರುಗಿಸಿ, ಗುಣಮಟ್ಟದನ್ನೇ ನೀಡಿ: ಆಹಾರ ಇಲಾಖೆ ಸಚಿವ ಕೆ. ಗೋಪಾಲಯ್ಯ

ಗೋದಾಮಿಗೆ ಭೇಟಿ
Last Updated 6 ಜೂನ್ 2020, 14:48 IST
ಅಕ್ಷರ ಗಾತ್ರ

ಚಿತ್ರದುರ್ಗ: ಅಕ್ಕಿಯಲ್ಲಿ ಹುಳು ಇರುವುದನ್ನು ಗಮನಿಸಿದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಗೋಪಾಲಯ್ಯ, ಅಧಿಕಾರಿಗಳು ಪರಿಶೀಲನೆ ನಡೆಸದೇ ವಿತರಿಸುತ್ತಿದ್ದೀರಾ. ಕಡ್ಡಾಯವಾಗಿ ಪರಿಶೀಲಿಸಿ ಗುಣಮಟ್ಟದನ್ನೇ ವಿತರಿಸಬೇಕು ಎಂದು ಸೂಚನೆ ನೀಡಿದರು.

ಇಲ್ಲಿನ ಎಪಿಎಂಸಿ ಆವರಣದ ನಗರ ಹಾಗೂ ಗ್ರಾಮಾಂತರ ಟಿಎಪಿಸಿಎಂಎಸ್ ಪಡಿತರ ಸಗಟು ಆಹಾರ ಧಾನ್ಯ ಗೋದಾಮಿಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಅವರು ಮಾತನಾಡಿದರು.

‘15 ದಿನಗಳ ಹಿಂದೆ ಬಂದಿರುವ ಅಕ್ಕಿಯಲ್ಲಿ ಹುಳುಗಳಿವೆ. ಅದಕ್ಕೂ ಮುನ್ನ ತರಿಸಲಾದ ಅಕ್ಕಿ ಗುಣಮಟ್ಟದಿಂದ ಕೂಡಿದೆ. ಹುಳು ಇರುವುದೆಲ್ಲವನ್ನು ಹಿಂದಿರುಗಿಸಿ, ಗುಣಮಟ್ಟದ ಅಕ್ಕಿ ತರಿಸಿಕೊಳ್ಳಿ’ ಎಂದು ತಾಕೀತು ಮಾಡಿದರು.

‘ಜೂನ್ 11ರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಪಾಲಿನ ಒಂದು ಯೂನಿಟ್‌ಗೆ 10 ಕೆ.ಜಿ ಅಕ್ಕಿ, ಕುಟುಂಬಕ್ಕೆ ತಲಾ 2 ಕೆ.ಜಿ ಬೇಳೆ ಹಾಗೂ ಗೋಧಿ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಆದ್ದರಿಂದ ಕೊರೊನಾ ಸಾಂಕ್ರಾಮಿಕ ರೋಗದ ಸಂಕಷ್ಟದ ಸಮಯದಲ್ಲಿ ಅರ್ಹ ಬಡವರಿಗೆ, ಹೊರರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಬಂದಿರುವ ವಲಸೆ ಕಾರ್ಮಿಕರಿಗೆ, ಕಾರ್ಡ್ ಇಲ್ಲದ ಕುಟುಂಬಕ್ಕೂ ಕೇವಲ ಆಧಾರ್ ಕಾರ್ಡ್ ತೋರಿಸಿದರೂ ಆಹಾರ ಧಾನ್ಯ ವಿತರಣೆಯಾಗಬೇಕು. ಸರಿಯಾಗಿ ಹಂಚಿಕೆ ಆಗಬೇಕು’ ಎಂದು ಹೇಳಿದರು.

‘ಹೊರರಾಜ್ಯ ಮತ್ತು ಹೊರಜಿಲ್ಲೆಗಳಿಂದ ಬಂದಿರುವ 3.8 ಲಕ್ಷ ಜನರಿಗೆ ಎರಡು ತಿಂಗಳ ಆಹಾರ ಪದಾರ್ಥಗಳನ್ನು ವಿತರಣೆ ಮಾಡಲಾಗಿದೆ. ಜೂನ್ ಅಂತ್ಯದವರೆಗೆ ವಿತರಣೆಗೆ ಕ್ರಮಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

‘ನೆಲಮಂಗಲ, ತುಮಕೂರು, ಹಿರಿಯೂರು ಹಾಗೂ ಚಿತ್ರದುರ್ಗ ಆಹಾರ ದಾಸ್ತಾನು ಗೋದಾಮಿನಲ್ಲಿ ಅಕ್ಕಿ, ಗೋಧಿ, ಬೇಳೆ, ಕಡಲೆ ಕಾಳು ಸೇರಿ ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲನೆ ನಡೆಸಿದ್ದೇನೆ. ಒಂದೆಡೆ ತೂಕದಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ಆ ನ್ಯಾಯಬೆಲೆ ಅಂಗಡಿಯ ಪರವಾನಗಿ ರದ್ದುಗೊಳಿಸಲು ಸೂಚಿಸಿದ್ದೇನೆ’ ಎಂದರು.

ಅಕ್ರಮ ಪಡಿತರ ಚೀಟಿ ಹಿಂದಿರುಗಿಸಿ:‘ಅನುಕೂಲಸ್ಥರು, ಕಾನೂನು ಬಾಹಿರವಾಗಿ ಯಾರಾದರೂ ಪಡಿತರ ಚೀಟಿ ಪಡೆದಿದ್ದರೆ ಕಡ್ಡಾಯವಾಗಿ ಜೂನ್ 30ರೊಳಗೆ ಹಿಂದಿರುಗಿಸಬೇಕು. ಅಲ್ಲಿಯವರೆಗೂ ಗಡುವು ನೀಡಲಾಗಿದೆ. ನಂತರ ಅಧಿಕಾರಿಗಳು ತಪಾಸಣೆ ನಡೆಸಲಿದ್ದಾರೆ. ಯಾವ ರೀತಿ ಕ್ರಮ ಜರುಗಿಸಬೇಕು ಎಂಬುದನ್ನು ಆನಂತರ ನಿರ್ಧರಿಸಲಿದ್ದೇವೆ’ ಎಂದು ಗೋಪಾಲಯ್ಯ ಹೇಳಿದರು.

ಇಲಾಖೆ ಉಪನಿರ್ದೇಶಕ ಮಧುಸೂದನ್, ತಹಶೀಲ್ದಾರ್ ಜೆ.ಸಿ. ವೆಂಕಟೇಶಯ್ಯ, ಟಿಎಪಿಸಿಎಂಎಸ್ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಉಮಾಶಂಕರ್, ಗೋದಾಮು ಸಿಬ್ಬಂದಿಅಶೋಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT