ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ ಪರ ಘೋಷಣೆ | ‘ಕೈ’, ‘ಕಮಲ’ ಕಾರ್ಯಕರ್ತರ ಜಟಾಪಟಿ

Published 28 ಫೆಬ್ರುವರಿ 2024, 14:49 IST
Last Updated 28 ಫೆಬ್ರುವರಿ 2024, 14:49 IST
ಅಕ್ಷರ ಗಾತ್ರ

ಚಿತ್ರದುರ್ಗ: ರಾಜ್ಯಸಭಾ ಸದಸ್ಯ ಸೈಯದ್‌ ನಾಸಿರ್‌ ಹುಸೇನ್ ಬೆಂಬಲಿಗರು ವಿಧಾನಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಬುಧವಾರ ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕಿದರು. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್‌ ಕಾರ್ಯಕರ್ತರು, ಕಮಲಪಡೆ ವಿರುದ್ಧ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರ ಮನವೊಲಿಸಿ ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಹರಸಾಹಸಪಟ್ಟರು. ಕಾಂಗ್ರೆಸ್‌ ಕಚೇರಿಗೆ ಬ್ಯಾರಿಕೇಡ್‌ ಹಾಕಿ ಬಿಗಿ ಭದ್ರತೆ ಕಲ್ಪಿಸಿದರು. ಬ್ಯಾರಿಕೇಡ್‌ನತ್ತ ನುಗ್ಗುತ್ತಿದ್ದ ಬಿಜೆಪಿ ಮುಖಂಡರನ್ನು ತಡೆಯಲು ಪೊಲೀಸರು ಮುಂದಾದಾಗ ನೂಕಾಟ ತಳ್ಳಾಟ ಉಂಟಾಯಿತು. ಈ ವೇಳೆ ಬಿಜೆಪಿ ಯುವಮೋರ್ಚಾ ರಾಜ್ಯ ಕಾರ್ಯದರ್ಶಿ ಭಾರ್ಗವಿ ದ್ರಾವಿಡ್‌ ಅಸ್ವಸ್ಥಗೊಂಡರು.

ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ಸಂದರ್ಭದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಲಾಗಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾದರು. ಒನಕೆ ಓಬವ್ವ ವೃತ್ತದಲ್ಲಿರುವ ಕಾಂಗ್ರೆಸ್‌ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಕಾರರು, ರಾಜ್ಯಸಭಾ ಸದಸ್ಯ ಸೈಯದ್‌ ನಾಸಿರ್‌ ಹುಸೇನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣ ಜಾಗೃತರಾದ ಪೊಲೀಸರು ಪ್ರತಿಭಟನಕಾರರನ್ನು ತಡೆದರು.

ಇದರಿಂದ ಕುಪಿತಗೊಂಡ ಬಿಜೆಪಿ ಕಾರ್ಯಕರ್ತರು, ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು, ದೇಶದ್ರೋಹಿಗಳನ್ನು ಗಡಿಪಾರು ಮಾಡಬೇಕು ಎಂದು ಪಟ್ಟುಹಿಡಿದರು. ಪೊಲೀಸರ ಮನವೊಲಿಕೆ ಪ್ರಯತ್ನಕ್ಕೆ ಸಹಕರಿಸದ ಪ್ರತಿಭಟನಕಾರರು, ‘ಜೈ ಶ್ರೀರಾಮ್‌’ ಘೋಷಣೆ ಕೂಗುತ್ತ ಕಾಂಗ್ರೆಸ್‌ ಕಚೇರಿಗೆ ನುಗ್ಗಲು ಮುಂದಾದರು. ಬ್ಯಾರಿಕೇಡ್‌ನತ್ತ ಬರುತ್ತಿದ್ದವರನ್ನು ತಡೆದ ಪೊಲೀಸರು ಹಿಂದಕ್ಕೆ ನೂಕಿದರು. ಈ ವೇಳೆ ಆಯತಪ್ಪಿ ಬಿದ್ದ ಭಾರ್ಗವಿ ದ್ರಾವಿಡ್‌ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದರು.

‘ಭಾರತ್‌ ಮಾತಾಕಿ ಜೈ’ ಎಂದು ಕೂಗುತ್ತ ಕಾಂಗ್ರೆಸ್‌ ಕಾರ್ಯಕರ್ತರು ಕಚೇರಿಯಿಂದ ಹೊರಬಂದರು. ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್‌ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಕೆ.ಎಂ. ಹಾಲಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಬಿಜೆಪಿ ಕಾರ್ಯಕರ್ತರನ್ನು ಸ್ಥಳದಿಂದ ಕಳುಹಿಸಬೇಕು ಎಂದು ಪಟ್ಟುಹಿಡಿದರು. ಇದರಿಂದ ಕೆಲಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಕಚೇರಿಗೆ ಮುತ್ತಿಗೆ ಹಾಕಲು ಬಂದಿದ್ದ ಬಿಜೆಪಿ ಕಾರ್ಯಕರ್ತರ ವಿರುದ್ಧ ಕಾಂಗ್ರೆಸ್‌ ಮುಖಂಡರು ಪ್ರತಿಭಟನೆ ನಡೆಸಿದರು
ಕಚೇರಿಗೆ ಮುತ್ತಿಗೆ ಹಾಕಲು ಬಂದಿದ್ದ ಬಿಜೆಪಿ ಕಾರ್ಯಕರ್ತರ ವಿರುದ್ಧ ಕಾಂಗ್ರೆಸ್‌ ಮುಖಂಡರು ಪ್ರತಿಭಟನೆ ನಡೆಸಿದರು

Cut-off box - ‘ದೇಶದ್ರೋಹಿ ಪಕ್ಷವನ್ನು ತಿರಸ್ಕರಿಸಿ’ ‘ನಾಸಿರ್‌ ಹುಸೇನ್‌ ಬೆಂಬಲಿಗರು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದು ರಾಜ್ಯಸಭಾ ಸದಸ್ಯ ಸ್ಥಾನದಿಂದ ಅವರನ್ನು ಕೂಡಲೇ ವಜಾಗೊಳಿಸಬೇಕು. ಇಲ್ಲವಾದರೆ ಮುಂಬರುವ ಚುನಾವಣೆಯಲ್ಲಿ ದೇಶದ್ರೋಹಿ ಪಕ್ಷವನ್ನು ಜನರು ತಿರಸ್ಕರಿಸಲಿದ್ದಾರೆ’ ಎಂದು ಬಿಜೆಪಿ ಮುಖಂಡ ನರೇಂದ್ರ ಹೊನ್ನಾಳ್‌ ಎಚ್ಚರಿಕೆ ನೀಡಿದರು. ‘ನಾಸಿರ್‌ ಅವರು ಮಾಧ್ಯಮಗಳ ವಿರುದ್ಧ ಕೂಡ ಕೀಳಾಗಿ ವರ್ತಿಸಿದ್ದಾರೆ. ಸುರಕ್ಷಿತ ರಾಷ್ಟ್ರದ ಶಾಂತಿ ಕದಡುವ ಪ್ರಯತ್ನ ಮಾಡಿದ್ದಾರೆ. ಇಂಥವರ ವಿರುದ್ಧ ಪೊಲೀಸರು ರಾಜ್ಯ ಸರ್ಕಾರ ಏನು ಕ್ರಮ ಕೈಗೊಂಡಿದೆ’ ಎಂದು ಪ್ರಶ್ನಿಸಿದರು.

Cut-off box - ‘ಬಿಜೆಪಿ ಸಂವಿಧಾನ ವಿರೋಧಿ’ ‘ಸಂವಿಧಾನ ವಿರೋಧಿ ಹಾಗೂ ಭಯೋತ್ಪದನಾ ಕೃತ್ಯಕ್ಕೆ ದೇಶದಲ್ಲಿ ಪ್ರಚೋದನೆ ನೀಡುತ್ತಿರುವುದು ಬಿಜೆಪಿ. ಇಂತಹ ಮನುವಾದಿಗಳಿಂದ ಬುದ್ಧಿ ಕಲಿಯುವ ಅಗತ್ಯವಿಲ್ಲ’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಕಾರ್ಯಧ್ಯಕ್ಷ ಕೆ.ಎಂ.ಹಾಲೇಶ್‌ ತಿರುಗೇಟು ನೀಡಿದರು. ‘ಜಾತಿ ವ್ಯವಸ್ಥೆಯನ್ನು ಪೋಷಣೆ ಮಾಡುವ ಬಿಜೆಪಿ ಸಮಾಜದ ಸ್ವಾಸ್ಥ್ಯವನ್ನು ಕದಡಿದೆ. ದೇಶದಲ್ಲಿ ನಡೆದ ಭಯೋತ್ಪಾದನಾ ಕೃತ್ಯಗಳಿಗೆ ಕುಮ್ಮಕ್ಕು ನೀಡಿದೆ. ಅದಾನಿ ಅಂಬಾನಿ ಪರವಾಗಿದ್ದು ಬಡವರನ್ನು ವಂಚಿಸುತ್ತಿದೆ’ ಎಂದು ಆರೋಪಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಪಿ.ಪ್ರಕಾಶಮೂರ್ತಿ ಹಾಗೂ ಕಾಂಗ್ರೆಸ್‌ ಮುಖಂಡ ಎನ್‌.ಡಿ.ಕುಮಾರ್‌ ಧ್ವನಿಗೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT