ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಸೋಲಿಗೆ ಕಾಂಗ್ರೆಸ್‌ ಸತ್ಯಶೋಧನೆ

ಅಹವಾಲು ಆಲಿಸಿದ ಬಸವರಾಜ ರಾಯರೆಡ್ಡಿ ನೇತೃತ್ವದ ಸಮಿತಿ
Last Updated 3 ಜುಲೈ 2019, 12:04 IST
ಅಕ್ಷರ ಗಾತ್ರ

ಚಿತ್ರದುರ್ಗ: ಲೋಕಸಭೆ ಹಾಗೂ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅನುಭವಿಸಿದ ಸೋಲಿಗೆ ಕಾರಣ ಪತ್ತೆ ಹಚ್ಚಲು ಕೆಪಿಸಿಸಿ ನೇಮಿಸಿದ ಸತ್ಯಶೋಧನಾ ಸಮಿತಿ, ಚಿತ್ರದುರ್ಗದಲ್ಲಿ ಬುಧವಾರ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಂದ ಮಾಹಿತಿ ಕಲೆಹಾಕಿತು.

ಮಾಜಿ ಸಚಿವ ಬಸರಾಜ ರಾಯರಡ್ಡಿ ನೇತೃತ್ವದಲ್ಲಿ ರಚನೆಯಾಗಿರುವ ಆರು ಸದಸ್ಯರ ಸಮಿತಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಭೇಟಿ ನೀಡಲಿದೆ. ಕಲಬುರ್ಗಿ, ರಾಯಚೂರು ಸೇರಿ ಹಲವು ಲೋಕಸಭಾ ಕ್ಷೇತ್ರಗಳಲ್ಲಿ ಅಹವಾಲು ಆಲಿಸಿದ ಸಮಿತಿ ಗುರುವಾರ ದಾವಣಗೆರೆ ಭೇಟಿ ನೀಡಲಿದೆ.

ಕೆಪಿಸಿಸಿ ಉಪಾಧ್ಯಕ್ಷರಾದ ವಿ.ಆರ್‌.ಸುದರ್ಶನ್‌, ವೀರಣ್ಣ ಮತ್ತಿಕಟ್ಟಿ, ಮಾಜಿ ಸಂಸದ ಆರ್‌.ಧ್ರುವನಾರಾಯಣ ಹಾಗೂ ಮಾಜಿ ಸಚಿವ ನಸೀರ್‌ ಅಹಮ್ಮದ್‌ ಸಮಿತಿಯಲ್ಲಿ ಇದ್ದಾರೆ. ಇಡೀ ದಿನ ಪಕ್ಷದ ಕಚೇರಿಯಲ್ಲಿದ್ದ ಸಮಿತಿ, ಮಾಜಿ ಶಾಸಕರು, ಪಕ್ಷಕ್ಕೆ ದುಡಿಯುತ್ತಿರುವ ಮುಖಂಡರು, ಯುವ ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳಿಂದ ಮಾಹಿತಿ ಕಲೆಹಾಕಿತು. ವಿಧಾನಸಭಾ ಕ್ಷೇತ್ರವಾರು ಅಭಿಪ್ರಾಯ, ಸಲಹೆಗಳನ್ನು ಸಂಗ್ರಹಿಸುತು. ಸತ್ಯಶೋಧನೆಗೆ ಮೂರು ತಿಂಗಳ ಕಾಲಾವಕಾಶ ನೀಡಿದ್ದು, ಸೆಪ್ಟೆಂಬರ್‌ ಅಂತ್ಯಕ್ಕೆ ವರದಿ ಸಲ್ಲಿಕೆ ಮಾಡಲಿದೆ.

2018 ಹಾಗೂ 2019ರಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷದ ಮತಗಳಿಕೆಯ ಪ್ರಮಾಣ ಗಣನೀಯವಾಗಿ ಕುಸಿದಿದೆ. ಒಂದೇ ವರ್ಷದಲ್ಲಿ ಮತಗಳಿಕೆ ಇಳಿಮುಖವಾಗಿದ್ದು ಏಕೆ ಎಂಬುದನ್ನು ಪತ್ತೆ ಮಾಡುವುದು ಸಮಿತಿಯ ಮೂಲ ಉದ್ದೇಶವಾಗಿದೆ. ಸಮಿತಿ ಎದುರು ಹಾಜರಾಗುವ ಪ್ರತಿಯೊಬ್ಬರ ಎದುರು ಈ ಪ್ರಶ್ನೆಯನ್ನು ಮುಂದಿಡಲಾಯಿತು. ಪಕ್ಷದ ಮುಖಂಡರ ದೂರು, ಅಸಮಾಧಾನ, ಆಕ್ರೋಶಗಳನ್ನು ಸಮಿತಿ ಸದಸ್ಯರು ದಾಖಲಿಸಿಕೊಂಡರು.

ಸೋಲಿನ ಪರಾಮರ್ಶೆಗೆ ಅನುಕೂಲವಾಗುವ ಮಾಹಿತಿಯನ್ನು ಸಮಿತಿ ಪಡೆದಿದೆ. ಪ್ರಶ್ನಾವಳಿಯನ್ನು ಸಿದ್ಧಪಡಿಸಿಕೊಂಡಿದ್ದು, ಸಮಿತಿ ಎದುರು ಹಾಜರಾಗುವುದಕ್ಕೂ ಮೊದಲೇ ಮುಖಂಡರಿಗೆ ಕಳುಹಿಸಲಾಗಿದೆ. ಪ್ರಶ್ನಾವಳಿಯ ಆಧಾರದ ಮೇರೆಗೆ ವಿವರಗಳನ್ನು ಕಲೆಹಾಕಲಾಗಿದೆ. ಅಹವಾಲು ಸಲ್ಲಿಸಲು ಜಿಲ್ಲೆಯ ವಿವಿಧೆಡೆಗಳಿಂದ 50ಕ್ಕೂ ಹೆಚ್ಚು ಕಾಂಗ್ರೆಸ್‌ ಮುಖಂಡರು ಕಚೇರಿಗೆ ಬಂದಿದ್ದರು.

ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಮನೆ–ಮನೆಗೆ ಕಾಂಗ್ರೆಸ್‌, ಜನಪರ ಯೋಜನೆಗಳ ಪ್ರಚಾರ, ಬೂತ್‌ ಸಮಿತಿ ರಚನೆ, ತರಬೇತಿ ಶಿಬಿರ, ಶಕ್ತಿ ಪ್ರಾಜೆಕ್ಟ್‌, ವಿಭಾಗೀಯ ನಾಯಕರ ಪ್ರವಾಸ, ಪ್ರಚಾರ ಸಾಮಗ್ರಿಗಳ ಬಳಕೆ, ಜಾಹೀರಾತು ಹಾಗೂ ಸಾಮಾಜಿಕ ಜಾಲತಾಣದ ನಿರ್ವಹಣೆ ಪ್ರಮುಖವಾಗಿದ್ದವು. ಇವು ಚುನಾವಣೆಯಲ್ಲಿ ಎಷ್ಟು ಸಹಕಾರಿ ಆಗಿವೆ ಎಂಬುದರ ಬಗ್ಗೆಯೂ ಸಮಿತಿ ಅಭಿಪ್ರಾಯ ಪಡೆಯಿತು.

ಕ್ಷೇತ್ರ ವ್ಯಾಪ್ತಿಯ ನಾಯಕರು ಹಾಗೂ ಜನಪ್ರತಿನಿಧಿಗಳು ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರೆ ಎಂಬ ಪ್ರಶ್ನೆಯನ್ನು ಸಮಿತಿಯು ಎಲ್ಲರ ಎದುರು ಇಟ್ಟಿತು. ಎಲ್ಲ ಜಾತಿಯ ಜನರು, ಯುವ ಹಾಗೂ ಮಹಿಳಾ ಮತದಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಆಗಿರುವ ಲೋಪಗಳನ್ನು ಪಟ್ಟಿ ಮಾಡಿತು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಫಾತ್ಯರಾಜನ್‌, ಮೊಳಕಾಲ್ಮುರು ಕ್ಷೇತ್ರದ ಮಾಜಿ ಶಾಸಕ ತಿಪ್ಪೇಸ್ವಾಮಿ, ಮಾಜಿ ಶಾಸಕ ಉಮಾಪತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT