ಭಾನುವಾರ, ಜನವರಿ 19, 2020
20 °C

ದೂರ ಶಿಕ್ಷಣ ಪದವೀಧರನಿಗೆ ಒಂದಲ್ಲಾ, ಎರಡಲ್ಲ ಎಂಟು ಸರ್ಕಾರಿ ನೌಕರಿ!

ಜಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ದೂರ ಶಿಕ್ಷಣದ ಮೂಲಕ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಪಡೆದ ವ್ಯಕ್ತಿಯೊಬ್ಬರು ಎಂಟು ಬಾರಿ ಸರ್ಕಾರಿ ನೌಕರಿಗೆ ಆಯ್ಕೆಯಾಗಿದ್ದಾರೆ. ಸತತ ಪ್ರಯತ್ನದ ಮೂಲಕ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪರೀಕ್ಷೆ ತೇಗರ್ಡೆಯಾಗಿ ನಗರಾಭಿವೃದ್ಧಿ ಇಲಾಖೆಯ ಮುಖ್ಯಾಧಿಕಾರಿ ಹುದ್ದೆಯ ಕನಸು ಕೈಗೂಡಿಸಿಕೊಂಡಿದ್ದಾರೆ.

ಹೊಸದುರ್ಗ ತಾಲ್ಲೂಕಿನ ಅರೆಹಳ್ಳಿಯ ಕೆ.ರುದ್ರೇಶ್‌ ಈ ಸಾಧನೆ ಮಾಡಿದವರು. ನಾಲ್ಕು ಬಾರಿ ಶಿಕ್ಷಕ, ಪಿಎಸ್‌ಐ, ಪ್ರಥಮ ದರ್ಜೆ ಸಹಾಯಕ ಹಾಗೂ ಪಿಡಿಒ ಹುದ್ದೆಗೆ ಇವರು ಆಯ್ಕೆಯಾಗಿದ್ದರು. ಸದ್ಯ ಚಳ್ಳಕೆರೆ ತಾಲ್ಲೂಕಿನ ಪಗಡಲಬಂಡೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ (ಪಿಡಿಒ) ಕೆಲಸ ನಿರ್ವಹಿಸುತ್ತಿದ್ದಾರೆ.


ಕೆ.ರುದ್ರೇಶ್‌

ಡಿ.ಇಡಿ ಪೂರೈಸಿ 2007ರಲ್ಲಿ ಮೊದಲ ಬಾರಿಗೆ ಶಿಕ್ಷಕರಾಗಿ ನೇಮಕಾತಿ ಹೊಂದಿದ ರುದ್ರೇಶ್‌, ಹಾಸನ ಜಿಲ್ಲೆಯ ಬೇಲೂರಿನಲ್ಲಿ ವೃತ್ತಿ ಜೀವನ ಆರಂಭಿಸಿದರು. ಶಿಕ್ಷಕರಾದರೂ ಓದುವ ಹವ್ಯಾಸ ಮಾತ್ರ ನಿಲ್ಲಲಿಲ್ಲ. ಬೆಂಗಳೂರು ವಿಶ್ವವಿದ್ಯಾಲಯದಿಂದ ದೂರ ಶಿಕ್ಷಣದ ಮೂಲಕ ಬಿಎ ಪದವಿ ಪಡೆದರು. ಬಿ.ಇಡಿ ಪದವಿಯನ್ನು ‘ಇಗ್ನೊ’ದಲ್ಲಿ ಪೂರ್ಣಗೊಳಿಸಿದರು. ಬಳಿಕ ಕುವೆಂಪು ವಿಶ್ವವಿದ್ಯಾಲಯದಿಂದ ಕನ್ನಡ ಹಾಗೂ ಇಂಗ್ಲಿಷ್‌ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದರು.

ಓದು ಮುಂದುವರಿಸುತ್ತಲೇ ಉನ್ನತ ಹುದ್ದೆಗಳನ್ನು ಅರಸುತ್ತ ಸಾಗಿದರು. ವಿಜ್ಞಾನ ಶಿಕ್ಷಕರಾಗಿ, ಬಿ.ಇಡಿ ಪೂರೈಸಿದ ಬಳಿಕ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್‌ ಶಿಕ್ಷಕರಾಗಿ ಹಿರಿಯೂರಿನ ಚಿಗಳಿಕಟ್ಟೆಗೆ ಸ್ಥಳಾಂತರಗೊಂಡರು. 2012ರಲ್ಲಿ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಪಿಎಸ್‌ಐ ನೌಕರಿ ಗಿಟ್ಟಿಸಿಕೊಂಡರು. ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಹುದ್ದೆಯ ಪರೀಕ್ಷೆ ಉತ್ತೀರ್ಣರಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ನಿಯೋಜನೆಗೊಂಡಿದ್ದರು. ಆದರೆ, ಶಿಕ್ಷಕರ ವೃತ್ತಿಯ ಮೇಲಿನ ವ್ಯಾಮೋಹದಿಂದ ನೌಕರಿ ಬದಲಿಸಿರಲಿಲ್ಲ.

2018ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆಗೆ ನೇಮಕಗೊಂಡರು. ಚಳ್ಳಕೆರೆ ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರಿಗೆ ಮಾತೃ ಇಲಾಖೆಗೆ ಮರಳುವ ಇಚ್ಛೆ ಹೊಂದಿದ್ದರು. 2017ರಲ್ಲಿ ನಡೆದ ಕೆಪಿಎಸ್‌ಸಿ ಪರೀಕ್ಷೆ ಅವರ ಕೈಹಿಡಿಯಿತು. ಎರಡು ಬಾರಿ ಪೂರ್ವಭಾವಿ ಪರೀಕ್ಷೆಯಲ್ಲಿ ವಿಫಲರಾಗಿದ್ದ ರುದ್ರೇಶ್‌ ವಿಚಲಿತರಾಗಿರಲಿಲ್ಲ.

ವೇದಾವತಿ ನದಿಯ ಹಿನ್ನೀರು ಪ್ರದೇಶದಲ್ಲಿರುವ ಅರೆಹಳ್ಳಿ ಸಣ್ಣ ಗ್ರಾಮ. ಶ್ರೀರಂಗಪುರ, ಅರೆಹಳ್ಳಿ, ಮತ್ತೋಡು ಹಾಗೂ ಹೊಸದುರ್ಗದಲ್ಲಿ ಶಿಕ್ಷಣ ಪಡೆದ ರುದ್ರೇಶ್‌ ಅವರಿಗೆ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಬಿಲ್ಲಪ್ಪ ಸ್ಫೂರ್ತಿ. ಬಿಲ್ಲಪ್ಪ ಅವರಂತೆ ಉನ್ನತ ಹುದ್ದೆಗೆ ಏರುವ ಅಪೇಕ್ಷೆ ಚಿಕ್ಕಂದಿನಲ್ಲೇ ಪಡಮೂಡಿತ್ತು. ಆದರೆ, ಆರ್ಥಿಕ ಪರಿಸ್ಥಿತಿ ಮಾತ್ರ ಶೋಚನೀಯವಾಗಿತ್ತು.

ರುದ್ರೇಶ್‌ ಅವರದು ಕೃಷಿ ಕುಟುಂಬ. ನಾಲ್ಕು ಎಕರೆ ಜಮೀನಲ್ಲಿ ಬೆಳೆದ ಬೆಳೆ ಕುಟುಂಬ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ. ವ್ಯಾಸಂಗ ಮಾಡುತ್ತ ಕೂಲಿಗೂ ಹೋಗುತ್ತಿದ್ದರು. ಡಿ.ಇಡಿ ಪೂರೈಸುವವರೆಗೂ ಇವರ ಮನೆಗೆ ವಿದ್ಯುತ್‌ ಸಂಪರ್ಕವೇ ಇರಲಿಲ್ಲ. ದೀಪದ ಬೆಳಕಲ್ಲಿ ಓದಿ ಉನ್ನತ ಹುದ್ದೆಗೆ ಏರಿರುವುದಕ್ಕೆ ರುದ್ರೇಶ್‌ ಅವರಲ್ಲಿ ಹೆಮ್ಮೆ ಇದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು