ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ ಕೇಂದ್ರದಲ್ಲೇ ಇ–ಸ್ವತ್ತು ನೀಡಿ

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು
Last Updated 21 ನವೆಂಬರ್ 2020, 13:55 IST
ಅಕ್ಷರ ಗಾತ್ರ

ಹಿರಿಯೂರು: ‘ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿಯೇ ಇ–ಸ್ವತ್ತು ಮಾಡಿಕೊಡಲು ಎಲ್ಲ ವ್ಯವಸ್ಥೆ ಇದ್ದರೂ ಪಿಡಿಒಗಳು, ಜನರನ್ನು ನಗರ ಪ್ರದೇಶದಲ್ಲಿ ತಮ್ಮ ಜತೆ ಹೊಂದಾಣಿಕೆ ಇರುವ ಕಂಪ್ಯೂಟರ್ ಕೇಂದ್ರಗಳಿಗೆ ಕಳಿಸುತ್ತಿರುವುದೇಕೆ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು ಪ್ರಶ್ನಿಸಿದರು.

ನಗರದ ಸಾಮರ್ಥ್ಯ ಸೌಧದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪಿಡಿಒ ಹಾಗೂ ಕುಡಿಯುವ ನೀರು ಸರಬರಾಜು ಇಲಾಖೆ ಎಂಜಿನಿಯರ್‌ಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎಲ್ಲ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಕಂಪ್ಯೂಟರ್ ಆಪರೇಟರ್‌ಗಳಿದ್ದಾರೆ. ಹೀಗಿದ್ದರೂ ಇ–ಸ್ವತ್ತಿಗೆ ಅರ್ಜಿ ಸಲ್ಲಿಸಲು ನಗರ ಪ್ರದೇಶಗಳಿಗೆ ಕಳಿಸುತ್ತಿರುವ ಹಿಂದಿನ ಮರ್ಮವೇನು? ಯಾರಿಗಾದರೂ ತರಬೇತಿ ಅಗತ್ಯವಿದ್ದಲ್ಲಿ ಕೊಡಿಸಿ. ಇ–ಸ್ವತ್ತಿಗೆ ಅಲೆದಾಡಿಸಬೇಡಿ ಎಂದು ಅಧ್ಯಕ್ಷರು ಪಿಡಿಒಗಳಿಗೆ ತಾಕೀತು ಮಾಡಿದರು.

ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ರಸ್ತೆ, ಚರಂಡಿ ಸೇರಿ ಯಾವುದೇ ಅಭಿವೃದ್ಧಿ ಮಾಡದಿದ್ದರೂ, ನಿವೇಶನಗಳಿಗೆ ಇ–ಸ್ವತ್ತು ಮಾಡಿಕೊಟ್ಟಿದ್ದು, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸದಸ್ಯ ಆರ್. ನಾಗೇಂದ್ರನಾಯ್ಕ್ ಒತ್ತಾಯಿಸಿದರು.

‘ಐಮಂಗಲ ಹೋಬಳಿಯ ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಜುಲೈ ತಿಂಗಳಲ್ಲಿಯೇ ನೀರು ಕೊಡುತ್ತೇವೆ ಎಂದವರು, ನವೆಂಬರ್ ಮುಗಿದರೂ ಏಕೆ ಕೊಟ್ಟಿಲ್ಲ’ ಎಂದು ಶಶಿಕಲಾ ನೀರು ಸರಬರಾಜು ಎಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡರು.

ಇಲಾಖೆ ಎಇಇ ರಾಮಚಂದ್ರಪ್ಪ, ‘ಕುಡಿಯುವ ನೀರು ಯೋಜನೆಯ ಪ್ರಾಯೋಗಿಕ ಹಂತ ಮುಗಿದಿದೆ. ಕೋವೇರಹಟ್ಟಿ ಕ್ರಾಸ್ ಹತ್ತಿರ ಭದ್ರಾ ಯೋಜನೆ ಕಾಮಗಾರಿ ನಡೆಸುವವರು ಪೈಪ್‌ಲೈನ್ ಒಡೆದಿದ್ದು, ದುರಸ್ತಿ ಬಳಿಕ ನೀರು ಬಿಡುತ್ತೇವೆ’ ಎಂದರು.

‘ಗ್ರಾಮ ಪಂಚಾಯಿತಿಗಳಲ್ಲಿ 15 ನೇ ಹಣಕಾಸು ಯೋಜನೆ ಅನುಮೋದನೆ ಆಗಿದ್ದರೂ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಸ್ವಚ್ಛತೆ ನಿರ್ವಹಣೆ ಆಗುತ್ತಿಲ್ಲ’ ಎಂದು ಅಧ್ಯಕ್ಷರು ಆಕ್ಷೇಪಿಸಿದಾಗ, ‘ಕೆಲವೊಂದು ತಾಂತ್ರಿಕ ಸಮಸ್ಯೆಗಳಿದ್ದು, ಸರಿಪಡಿಸಲಾಗಿದೆ. ಮೂರ್ನಾಲ್ಕು ದಿನದಲ್ಲಿ ಕಾಮಗಾರಿಗಳು ಆರಂಭವಾಗಲಿವೆ’ ಎಂದು ಇಒ ಹನುಮಂತಪ್ಪ ಹೇಳಿದರು.

‘ಪಿಡಿಒಗಳಿಗೆ ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ. ಹಲವೆಡೆ ಪಿಡಿಒಗಳ ವರ್ಗಾವಣೆಯಿಂದ ಜನರಲ್ಲಿ ಗೊಂದಲ ಸೃಷ್ಟಿಯಾಗಿದೆ’ ಎಂದು ಸದಸ್ಯೆ ರಾಜೇಶ್ವರಿ ಆರೋಪಿಸಿದರು.

‘ಗ್ರಾಮ ಪಂಚಾಯಿತಿಗಳಲ್ಲಿ ಗ್ರೇಡ್–2 ಕಾರ್ಯದರ್ಶಿಗಳಿಗೆ ಪಿಡಿಒ ಹುದ್ದೆ ನೀಡಲು ಅವಕಾಶ ಇಲ್ಲದಿದ್ದರೂ ನಮ್ಮ ತಾಲ್ಲೂಕಿನಲ್ಲಿ ನೀಡಲಾಗಿದೆ’ ಎಂದು ನಾಗೇಂದ್ರನಾಯ್ಕ್ ಆರೋಪಿಸಿದರು.

‘ತಾಲ್ಲೂಕಿನಲ್ಲಿ ಎರಡು ಪಂಚಾಯಿತಿಗಳಲ್ಲಿ ಮಾತ್ರ ಪ್ರಭಾರ ಪಿಡಿಒಗಳಿದ್ದಾರೆ’ ಎಂದು ಇಒ ಸ್ಪಷ್ಟನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ತ್ರಿವೇಣಿ ಶಿವಪ್ರಸಾದಗೌಡ, ಗೀತಾನಾಗಕುಮಾರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀದೇವಿ, ಉಪಾಧ್ಯಕ್ಷೆ ಪುಷ್ಪಾರಂಗನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಓಂಕಾರಪ್ಪ, ಇಒ ಹನುಮಂತಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT