ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸದುರ್ಗ: ಕಾಕಡ ಬೆಳೆದು ಕಾಸು ಕಂಡುಕೊಂಡ ಪದವೀಧರ

Last Updated 25 ಮೇ 2022, 2:48 IST
ಅಕ್ಷರ ಗಾತ್ರ

ಹೊಸದುರ್ಗ: ಪದವಿವರೆಗೂ ಓದಿದ ಇವರು ಸರ್ಕಾರಿ ಕೆಲಸ ಸಿಗಲಿಲ್ಲ ಎಂದು ಕೈಕಟ್ಟಿ ಕೂರಲಿಲ್ಲ. ಬದಲಿಗೆ ಸ್ವಂತ ಪರಿಶ್ರಮದಿಂದ ಕೃಷಿಯಲ್ಲಿ ತೊಡಗಿ ಕಾಕಡ ಮಲ್ಲಿಗೆ ಹಾಕಿದರು. ತಿಂಗಳಿಗೆ ₹ 10 ಸಾವಿರಕ್ಕೂ ಅಧಿಕ ಆದಾಯ ಗಳಿಸುತ್ತ ಇತರರಿಗೆ ಮಾದರಿಯಾಗಿದ್ದಾರೆ ತಾಲ್ಲೂಕಿನ ಯಾಲಕಪ್ಪನಹಟ್ಟಿ ಮಾರುತಿ.

ಬಿ.ಪಿ.ಇಡಿ ಮುಗಿಸಿದ ಇವರಿಗೆ ಕೃಷಿಯಲ್ಲಿ ಸಾಧನೆ ಮಾಡಬೇಕೆಂಬ ಹಂಬಲವಿತ್ತು. ಇರುವ ಅರ್ಧ ಎಕರೆ ಭೂಮಿಯಲ್ಲಿ ಅಧಿಕ ಲಾಭಗಳಿಸುವ ಕುರಿತು ಹಲವು ನಿಪುಣ ರೈತರೊಂದಿಗೆ ಚರ್ಚಿಸಿದರು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲೂ ಸಲಹೆ ಪಡೆದು ಕಾಕಡ ಹಾಕಲು ಮುಂದಾದರು. ಎಲ್ಲರ ಸಲಹೆ ಮೇರೆಗೆ 100 ಕಾಕಡ ಗಿಡಹಾಕಿ ಅದಕ್ಕೆ ತಕ್ಕ ಔಷಧ, ಗೊಬ್ಬರ ನೀಡಿ ತಿಂಗಳಿಗೆ ₹ 10 ಸಾವಿರದಿಂದ ₹15 ಸಾವಿರ ಗಳಿಸಿ, ನೆಮ್ಮದಿಯಾಗಿ ಜೀವನ ಸಾಗಿಸುತ್ತಿದ್ದಾರೆ.

‘ಓದು ಮುಗಿಸಿದ ನಾನು ತಂದೆಯ ಮಾರ್ಗದರ್ಶನದಂತೆ ಕಾಕಡ ಹಾಕಲು ಮುಂದಾದೆ. ಸಸಿ ಹಾಕುವ ಮುನ್ನ ಭೂಮಿಯನ್ನು ಚೆನ್ನಾಗಿ ಹದಗೊಳಿಸಿ, ನಂತರ 8 ಅಥವಾ 6 ಅಡಿಗೊಂದು ಗುಂಡಿ ತೆಗೆಯಿಸಿದೆ. ದೇವಪುರದಿಂದ ತರಿಸಿದ ಸಸಿಗಳನ್ನು ಆಳುಗಳ ಸಹಾಯದಿಂದ ನಾಟಿ ಮಾಡಿಸಿದೆ. 6ರಿಂದ 12 ತಿಂಗಳೊಳಗೆ ಕಾಕಡ ಹೂಬಿಡಲು ಆರಂಭಿಸುತ್ತವೆ. 3 ವರ್ಷಗಳಿಂದ ಅಧಿಕ ಹೂವು ಬರುತ್ತವೆ. ರೋಗ ಬರದಂತೆ ನಿತ್ಯ ಔಷಧ, ವಾರಕ್ಕೊಮ್ಮೆ ಗೊಬ್ಬರ ಮತ್ತು ನೀರನ್ನು ಹಾಕುತ್ತಾ ಚನ್ನಾಗಿ ನೋಡಿಕೊಂಡರೆ 10–15 ವರ್ಷದವರೆಗೂ ಆದಾಯ ತೆಗೆಯಬಹುದು. ವರ್ಷಕ್ಕೆ ₹50 ಸಾವಿರ ಖರ್ಚು ಮಾಡಿದರೆ, ₹ 1.50 ಲಕ್ಷ ಆದಾಯಗಳಿಸಬಹುದು’ ಎನ್ನುತ್ತಾರೆ ಬೆಳೆಗಾರ ಮಾರುತಿ.

‘ನಾಲ್ಕು ವರ್ಷಗಳಿಂದ ಹೂ ಬಿಡುತ್ತಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಯುತ್ತಿದೆ. ಮಳೆಗಾಲದಲ್ಲಿ ನಿತ್ಯ 10–15 ಕೆಜಿ ಹೂ ಬಿಡುತ್ತವೆ. ಮನೆಯಲ್ಲೇ ಹೂ ಕಟ್ಟಿ ಹಾರಮಾಡಿ ಮಾರುವರು. ಪ್ರಸ್ತುತ ಒಂದು ಮಾರಿಗೆ ₹40ರಿಂದ ₹ 50 ಬೆಲೆಯಿದೆ. ಶ್ರಾವಣ ಮಾಸದಲ್ಲಿ ಮಾರಿಗೆ ₹ 100ರಿಂದ ₹ 150 ಇರುತ್ತದೆ. ದಸರಾ ಸಮಯದಲ್ಲಿ ₹1000ಗೆ 3 ಮಾರು ಕಾಕಡ ಹೂ ಸಿಕ್ಕರೆ ಅಧಿಕ ಆದಾಯ ಗಳಿಸಬಹುದು.

ಮಾರುತಿಯವರು ಕಾಕಡ ಗಿಡದ ಮಧ್ಯೆ ತೆಂಗು ಹಾಗೂ ಅಡಿಕೆ ಹಾಕಿದ್ದಾರೆ. ಕಾಕಡಕ್ಕೆ ನೀಡುವ ಗೊಬ್ಬರ ಹಾಗೂ ಔಷಧ ಅಡಿಕೆ ಹಾಗೂ ತೆಂಗು ಸಸಿಗೂ ನೀಡುತ್ತಿದ್ದಾರೆ. ರೋಗ ಬಂದು ಗಿಡ ಹಾಳಾದರೆ, ಜಮೀನಿನಲ್ಲೇ ಚಿಗುರೊಡೆಯುತ್ತಿರುವ ಕಾಕಡ ಗಿಡಗಳನ್ನು ನಾಟಿ ಮಾಡುತ್ತಾರೆ. ವ್ಯವಸಾಯ ಮಾಡುವಾಗ ಬೇರು ಹರಿದು, ತೋಟದ ಬದು ಮತ್ತು ಜಮೀನಿನಲ್ಲೇ ಚಿಗುರೊಡೆಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT