ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟೆನಾಡಿಗೆ ಸೂರ್ಯಘಾತ | ತಂಗಾಳಿ ಮಾಯ: ಮೇ 4ರವರೆಗೆ ಆರೆಂಜ್‌ ಅಲರ್ಟ್‌ ಘೋಷಣೆ

Published 30 ಏಪ್ರಿಲ್ 2024, 6:06 IST
Last Updated 30 ಏಪ್ರಿಲ್ 2024, 6:06 IST
ಅಕ್ಷರ ಗಾತ್ರ

ಚಿತ್ರದುರ್ಗ: ಇಷ್ಟು ವರ್ಷ ಬೇಸಿಗೆಯಲ್ಲಿ ಕೇವಲ ಬಿಸಿಲಿನ ಅನುಭವ ಪಡೆದಿದ್ದ ಜನರು ಈ ಬಾರಿ ಸೂರ್ಯಘಾತಕ್ಕೆ ತಲ್ಲಣಿಸಿದ್ದಾರೆ. ವಾತಾವರಣದಲ್ಲಿ ಉಷ್ಣಾಂಶ ದಾಖಲೆಯನ್ನೇ ನಿರ್ಮಿಸುತ್ತಿದ್ದು, ದಿನದ 24 ಗಂಟೆ ಹಿಂದೆಂದೂ ಕಾಣದಂತಹ ಬಿಸಿಗಾಳಿ ಬೀಸುತ್ತಿದೆ.

ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ 33 ಡಿಗ್ರಿ ಸೆಲ್ಸಿಯಸ್ಸ್‌ನಿಂದ ಪ್ರಾರಂಭವಾಗಿ ಮಧ್ಯಾಹ್ನ ವೇಳೆಗೆ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ವರದಿಯಾಗಿದೆ. ಮೇ 4ರವರೆಗೆ ಚಿತ್ರದುರ್ಗ ಜಿಲ್ಲೆಗೆ ಹವಾಮಾನ ಇಲಾಖೆ ಆರೇಂಜ್‌ ಅಲರ್ಟ್‌ ನೀಡಿದೆ. ಈ ಅವಧಿಯಲ್ಲಿ ಶಾಖದ ಅಲೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ಮೇ 4ರವರೆಗೆ ಗರಿಷ್ಠ ತಾಪಮಾನ 2ರಿಂದ 3 ಡಿಗ್ರಿ ಸೆಲ್ಸಿಯಸ್‌ ಏರುವ ಲಕ್ಷಣ ಸ್ಪಷ್ಟವಾಗಿದೆ. ಬೆಳಿಗ್ಗೆ 7 ಗಂಟೆಯಿಂದಲೇ ಬಿಸಿಲು ಚುರುಕು ಮುಟ್ಟಿಸುತ್ತಿದೆ. ನಿಧಾನಗತಿಯಲ್ಲಿ ಬಿಸಿಲು ಏರುತ್ತ 10 ಗಂಟೆ ಸುಮಾರಿಗೆ 34 ಡಿಗ್ರಿ ಸೆಲ್ಸಿಯಸ್ಸ್‌ ದಾಟುತ್ತಿದೆ. ಬೀದಿಬದಿಯ ವ್ಯಾಪಾರಿಗಳು, ವೃದ್ಧರು, ಮಕ್ಕಳು ಬಿಸಿಗಾಳಿ ಹೊಡೆತಕ್ಕೆ ಸುಸ್ತಾಗಿದ್ದಾರೆ.

ಮೂರು ವರ್ಷಗಳ ಹಿಂದೆ ನಗರದ ಮುಖ್ಯರಸ್ತೆ ಸೇರಿ ಒಳಭಾಗದ ರಸ್ತೆಯಲ್ಲೂ ಮರಗಳ ಸಂಖ್ಯೆ ಅಧಿಕವಾಗಿತ್ತು. ಆದರೆ, ರಸ್ತೆ ವಿಸ್ತರಣೆ ನೆಪದಲ್ಲಿ ಮರಗಳನ್ನು ಕಡಿದ ಪರಿಣಾಮ ರಸ್ತೆಯಲ್ಲಿ ನೆರಳನ್ನು ಹುಡುಕುವಂತಾಗಿದೆ. ಕಾಂಕ್ರಿಟ್‌ ರಸ್ತೆಯ ಕಾವಿನಿಂದ ಬಿಸಿಗಾಳಿ ನಗರದಲ್ಲಿ ಮತ್ತಷ್ಟು ಹೆಚ್ಚಿದೆ. ಇದರಿಂದಾಗಿ ಬಹುತೇಕ ಮಧ್ಯಾಹ್ನದ ವೇಳೆಗೆ ರಸ್ತೆಗಳಲ್ಲಿ ವಾಹನ ಸಂಖ್ಯೆ ವಿರಳವಾಗುತ್ತಿದೆ.

ಬಿಸಿಗಾಳಿಯಿಂದ ಪಾರಾಗಲು ಜನರು ತಂಪು ಪಾನೀಯದ ಮೊರೆ ಹೋಗುತ್ತಿದ್ದಾರೆ. ಎಳನೀರು, ಮಜ್ಜಿಗೆ, ಹಣ್ಣಿನ ಜ್ಯೂಸ್‌ ಸೇವಿಸುತ್ತಿದ್ದಾರೆ.

ಕಟ್ಟಡ ಕಾರ್ಮಿಕರು ಸೇರಿ ದುಡಿಯುವ ವರ್ಗ ಬಿಸಿಲಿನ ತಾಪಕ್ಕೆ ಹೈರಾಣಾಗಿದೆ. ಮನೆಗಳಲ್ಲಿ ಫ್ಯಾನ್‌ಗಳು ನಿರಂತರ ಸೇವೆ ನೀಡುತ್ತಿದ್ದು, ಅಲ್ಲಿಂದಲೂ ಬಿಸಿ ಗಾಳಿಯೇ ಹೊರಬರುತ್ತಿದ್ದು, ತಂಗಾಳಿ ಕಾಣೆಯಾಗಿದೆ.

ಜಿಲ್ಲೆಯಲ್ಲಿ ಪ್ರಖರ ಬಿಸಿಲು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಮಧ್ಯಾಹ್ನದ 1ರಿಂದ ಸಂಜೆ 4ರವರೆಗೆ ವೃದ್ಧರು, ಮಕ್ಕಳು, ಗರ್ಭಿಣಿ ಮತ್ತು ದೀರ್ಘಕಾಲಿನ ಕಾಯಿಲೆಗಳಿಗೆ ಔಷಧ ಸೇವಿಸುವ ಪ್ರತಿಯೊಬ್ಬರೂ ಹೊರಗಡೆ ಹೋಗುವುದನ್ನು ತಪ್ಪಿಸಬೇಕು. ಈ ಮೂಲಕ ಸೂರ್ಯಾಘಾತದ ಅನಾಹುತದಿಂದ ಪಾರಾಗಬಹುದು ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.

‘ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ನಿರ್ಜಲೀಕರಣ ತಡೆಗಟ್ಟಲು ಓಆರ್‌ಎಸ್‌ ಪುಡಿಯನ್ನು ಅಗತ್ಯವುಳ್ಳವರಿಗೆ ಕೊಡುವ ವ್ಯವಸ್ಥೆ ಮಾಡಲಾಗಿದೆ. ರೋಗಿಗಳ ಆರೈಕೆಗಾಗಿ, ಐವಿ ಫ್ಲೂಯಿಡ್ಸ್‌ ಮತ್ತು ಜೀವರಕ್ಷಕ ಔಷಧಗಳ ದಾಸ್ತಾನು ಇಟ್ಟುಕೊಳ್ಳಲಾಗಿದೆ. ಓಆರ್‌ಎಸ್‌ ದ್ರಾವಣವನ್ನು 1 ಲೀಟರ್ ನೀರಿಗೆ 1 ಪೊಟ್ಟಣದ ಸಂಪೂರ್ಣ ಪುಡಿಯನ್ನು ಹಾಕಿ 24 ಗಂಟೆಯೊಳಗೆ ಕುಡಿಯಲು ಬಳಸುವ ಮೂಲಕ ಬಿಸಿಲಿನ ಪ್ರಖರತೆಯಿಂದ ಉಂಟಾಗುವ ನಿರ್ಜಲೀಕರಣವನ್ನು ತಡೆಯಬಹುದು’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಂದ್ರಶೇಖರ್ ಕಂಬಾಳಿಮಠ ತಿಳಿಸಿದ್ದಾರೆ.

ಹವಾಮಾನ ಇಲಾಖೆ ಆರೇಂಜ್‌ ಅಲರ್ಟ್‌ ಘೋಷಿಸಿರುವ ಕಾರಣ ಜನರು ಅಗತ್ಯವೆನಿಸುವ ಸಂದರ್ಭಗಳಲ್ಲಿ ಮನೆಯಿಂದ ಹೊರ ಬರುವಾಗ ಶುದ್ಧ ಕುಡಿಯುವ ನೀರು, ಛತ್ರಿ ತೆಗೆದುಕೊಂಡು ಹೋಗಬೇಕು. ಮಕ್ಕಳನ್ನು ಕರೆದುಕೊಂಡು ಹೋಗುವಾಗ ಮಕ್ಕಳಿಗೆ ಆದಷ್ಟು ತಲೆಯ ಮೇಲೆ ನೀರಿನಿಂದ ಒದ್ದೆ ಬಟ್ಟೆ ಹಾಕಬೇಕು. ಮಕ್ಕಳ ಆರೋಗ್ಯದಲ್ಲಿ ಏರುಪೇರು ಆಗದಂತೆ ಕಾಳಜಿ ವಹಿಸಬೇಕು ಎಂದು ಮನವಿ ಮಾಡಿದೆ.

ಡಾ.ಜಿ.ಪಿ.ರೇಣುಪ್ರಸಾದ್‌
ಡಾ.ಜಿ.ಪಿ.ರೇಣುಪ್ರಸಾದ್‌
ಡಾ.ಚಂದ್ರಶೇಖರ್ ಕಂಬಾಳಿಮಠ್
ಡಾ.ಚಂದ್ರಶೇಖರ್ ಕಂಬಾಳಿಮಠ್
ಜಿಲ್ಲೆಯಲ್ಲಿ ಇನ್ನೂ ನಾಲ್ಕೈದು ದಿನ ಬಿಸಿಗಾಳಿ ಬೀಸಲಿದೆ. ಜನರು ಅನಗತ್ಯವಾಗಿ ಮಧ್ಯಾಹ್ನದ ವೇಳೆ ಮನೆಯಿಂದ ಹೊರಬರಬಾರದು. ಈ ಕುರಿತ ಜನಜಾಗೃತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.
-ಡಾ.ಜಿ.ಪಿ.ರೇಣುಪ್ರಸಾದ್‌ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

ಸಾಮಾನ್ಯ ಅಪಾಯದ ಲಕ್ಷಣ

‘ವಯಸ್ಕರಲ್ಲಿ ಅರೆ ಪ್ರಜ್ಞಾವಸ್ಥೆ ಪ್ರಜ್ಞೆ ತಪ್ಪುವುದು ಸಿಡಿಮಿಡಿಗೊಳ್ಳುವುದು ಗಾಬರಿಗೊಳ್ಳುವುದು ಅತಿಯಾದ ತಲೆನೋವು ಚರ್ಮವು ಬಿಸಿ ಹಾಗೂ ಕೆಂಪಾದ ಒಣ ಚರ್ಮ ಆತಂಕ ತಲೆ ಸುತ್ತುವಿಕೆ ಮಾಂಸಖಂಡಗಳಲ್ಲಿ ಸುಸ್ತು ಅಥವಾ ಸೆಳೆತ ವಾಕರಿಕೆ ಮತ್ತು ವಾಂತಿ ಮಕ್ಕಳಲ್ಲಿ ಆಹಾರ ಸೇವಿಸಲು ನಿರಾಕರಿಸುವುದು ಕನಿಷ್ಠ ಮೂತ್ರ ವಿಸರ್ಜನೆ ಬಾಯಿ ಒಣಗುವಿಕೆ ಆಲಸ್ಯ ಮೂರ್ಛೆ ಹೋಗುವುದು ದೇಹದ ಯಾವುದೇ ಭಾಗದಲ್ಲಿ ರಕ್ತಸ್ರಾವ ಇವೆಲ್ಲವುಗಳೂ ಸಾಮಾನ್ಯ ಅಪಾಯದ ಲಕ್ಷಣಗಳಾಗಿವೆ. ಈ ಲಕ್ಷಣ ಕಂಡುಬಂದರೆ ಕೂಡಲೇ ವೈದ್ಯರ ಸಲಹೆ ಪಡೆಯಬೇಕು’ ಎಂದು ಆರೋಗ್ಯ ಇಲಾಖೆ  ತಿಳಿಸಿದೆ.

ಅಗತ್ಯ ತುರ್ತು ಚಿಕಿತ್ಸೆ
ಶಾಖಾಘಾತಕ್ಕೆ ಒಳಗಾದ ವ್ಯಕ್ತಿಗೆ ಸಕಾಲಕ್ಕೆ ತುರ್ತು ಚಿಕಿತ್ಸೆ ನೀಡಬೇಕು. ಸುಸ್ತಾದ ವ್ಯಕ್ತಿಯನ್ನು ನೆರಳಿರುವೆಡೆಗೆ ಸ್ಥಳಾಂತರಿಸಿ. ವ್ಯಕ್ತಿಯ ವಸ್ತ್ರಗಳನ್ನು ಸಡಿಲಗೊಳಿಸಬೇಕು. ಬಳಿಕ ಅಂಗಾತ ಮಲಗಿಸಿ ಕಾಲುಗಳನ್ನು ಎತ್ತರಿಸಿ ಸಾಮಾನ್ಯ ನೀರಿನಿಂದ ದೇಹವನ್ನು ಒರೆಸಿ ವೈದ್ಯರನ್ನು ಸಂಪರ್ಕಿಸಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT