ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು| ವಾಣಿವಿಲಾಸ ಕೋಡಿಗೆ ಬಸ್ ಮಾಲೀಕರು, ಗ್ರಾಮಸ್ಥರಿಂದ ತಾತ್ಕಾಲಿಕ ಸೇತುವೆ

ಖಾಸಗಿ ಬಸ್ ಮಾಲೀಕರ ಸಂಘದವರೊಂದಿಗೆ ಕೈಜೋಡಿಸಿದ ವಿವಿಪುರ ಗ್ರಾಮಸ್ಥರು
Last Updated 14 ಜನವರಿ 2023, 5:40 IST
ಅಕ್ಷರ ಗಾತ್ರ

ಹಿರಿಯೂರು: ತಾಲ್ಲೂಕಿನ ವಾಣಿವಿಲಾಸ ಜಲಾಶಯದ ಕೋಡಿಗೆ ತಾತ್ಕಾಲಿಕ ಸೇತುವೆ ನಿರ್ಮಾಣಕ್ಕೆ ಶುಕ್ರವಾರ ಖಾಸಗಿ ಬಸ್ ಮಾಲೀಕರೊಂದಿಗೆ ವಾಣಿವಿಲಾಸಪುರದ ಗ್ರಾಮಸ್ಥರು ಕೈಜೋಡಿಸಿದ್ದು, ಜೆಸಿಬಿ ಮತ್ತು ಟ್ರ್ಯಾಕ್ಟರ್ ಬಳಸಿ ದೊಡ್ಡ ಗಾತ್ರದ ಪೈಪ್ ಅಳವಡಿಸುವ ಕಾರ್ಯ ಆರಂಭಗೊಂಡಿದೆ.

ಸೆ. 2ರಂದು ವಾಣಿವಿಲಾಸ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದಿದ್ದು, ಇಂದಿಗೂ ಕೋಡಿಯಲ್ಲಿ ನೀರು ಹರಿಯುತ್ತಿರುವ ಕಾರಣ ಹಿರಿಯೂರು–ಹೊಸದುರ್ಗ ನಗರಗಳ ನಡುವೆ ವಾಹನಗಳ ಓಡಾಟ ಬಂದ್ ಆಗಿತ್ತು. ಇದರಿಂದ ಹೊಸದುರ್ಗಕ್ಕೆ ಹೋಗುವ ಬಸ್‌ಗಳು ವಾಣಿವಿಲಾಸಪುರಕ್ಕೆ ಬಂದು, ಮರಳಿ ಕಕ್ಕಯ್ಯನಹಟ್ಟಿ ಮೂಲಕ ಭರಮಗಿರಿ– ಬಳಗಟ್ಟ ರಸ್ತೆಗೆ ಹೋಗಿ ಅಲ್ಲಿಂದ ಲಕ್ಕಿಹಳ್ಳಿ ಕಡೆ ಸಾಗುತ್ತಿದ್ದವು. ಇದರಿಂದ ಹೊಸದುರ್ಗ– ಹಿರಿಯೂರು ನಡುವಿನ ದೂರ ಎಂಟ್ಟತ್ತು ಕಿ.ಮೀ. ಹೆಚ್ಚಾಗುತ್ತಿದ್ದು, ಅರ್ಧ ಗಂಟೆ ಹೆಚ್ಚಿನ ಸಮಯ ಬೇಕಿದೆ. ಈ ಬಗ್ಗೆ ಜ. 11ರಂದು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.

‘ಕೋಡಿಯ ಭಾಗದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಕೋಟಿ ಲೆಕ್ಕದಲ್ಲಿ ಹಣ ಬೇಕು. ಕನಿಷ್ಠ ಆರೇಳು ತಿಂಗಳು ಸಮಯ ಬೇಕಾಗುತ್ತದೆ’ ಎಂದು ಯೋಚಿಸಿದ ಹಿರಿಯೂರು ತಾಲ್ಲೂಕು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಜಬೀವುಲ್ಲಾ ಅವರು ಹೊಸದುರ್ಗ ಮಾರ್ಗದಲ್ಲಿ ಸಂಚರಿಸುವ ಎಸ್ಎಲ್ಎನ್ಎಸ್ ಬಸ್ ಮಾಲೀಕರು ಹಾಗೂ ವಾಣಿವಿಲಾಸಪುರ ಗ್ರಾಮಸ್ಥರ ಸಹಕಾರದೊಂದಿಗೆ ತಾತ್ಕಾಲಿಕ ಸೇತುವೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.

‘ವಿವಿ ಪುರಕ್ಕೆ ಸಮೀಪದಲ್ಲಿರುವ ಕಕ್ಕಯ್ಯನಹಟ್ಟಿ ಬಳಿ ನೂತನ ಸೇತುವೆ ನಿರ್ಮಾಣದ ನಂತರ ರಸ್ತೆಬದಿ ಹಾಕಿದ್ದ ಪೈಪ್‌ಗಳನ್ನು ತಂದು ಕೋಡಿಗೆ ಜೋಡಿಸಲು ತೀರ್ಮಾನಿಸಿದ್ದು, ಜೆಸಿಬಿ ಬಳಸಿ ಕೋಡಿಯ ನೀರು ಒಂದು ಭಾಗದಲ್ಲಿ ಹೋಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರಸ್ತುತ ಕೋಡಿಯಲ್ಲಿ ನೀರಿನ ಹರಿವು ಕಡಿಮೆ ಇದ್ದು, (150–200 ಕ್ಯುಸೆಕ್) ಪೈಪ್ ಜೋಡಿಸುವ ಕೆಲಸಕ್ಕೆ ಅಡ್ಡಿಯಾಗದು. ನೀರು ಹರಿದ ಪರಿಣಾಮ 50–60 ಅಡಿ ರಸ್ತೆ ಸಂಪೂರ್ಣ ಹಾಳಾಗಿದ್ದು, ಎರಡು ಲೈನ್ ಪೈಪ್ ಜೋಡಿಸಿ ಮಣ್ಣು ಭರ್ತಿ ಮಾಡಿದಲ್ಲಿ ವಾಹನಗಳ ಓಡಾಟಕ್ಕೆ ರಸ್ತೆ ಮುಕ್ತವಾಗುತ್ತದೆ’ ಎನ್ನುತ್ತಾರೆ ಜಬೀವುಲ್ಲಾ.

‘ಮೂರ್ನಾಲ್ಕು ದಿನಗಳಲ್ಲಿ ಕಾಮಗಾರಿ ಮುಗಿಸುವ ವಿಶ್ವಾಸವಿದೆ. ಈಗಿನ ರಸ್ತೆ ಹೆಚ್ಚೆಂದರೆ ಮಳೆಗಾಲದವರೆಗೆ ಉಳಿಯಬಹುದು. ಹೊಸದುರ್ಗ ಮತ್ತು ಹಿರಿಯೂರು ಕ್ಷೇತ್ರಗಳ ಶಾಸಕರು ಶಾಶ್ವತ ಸೇತುವೆ ನಿರ್ಮಾಣಕ್ಕೆ ಮುಂದಾಗಬೇಕು. ಇಲ್ಲವಾದಲ್ಲಿ ಈ ರಸ್ತೆಯನ್ನು ಶಾಶ್ವತವಾಗಿ ಕಳೆದುಕೊಳ್ಳಬೇಕಾಗುತ್ತದೆ. ಜೊತೆಗೆ ಭರಮಗಿರಿ–ಬಳಗಟ್ಟ ಮೂಲಕ ಸಾಗುವ ರಸ್ತೆಯ ಮೇಲೆ ವಾಹನಗಳ ದಟ್ಟಣೆ ಹೆಚ್ಚುತ್ತದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT