ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು: ಆದಾಯ ಕ್ರೋಢೀಕರಣದಲ್ಲಿ ನಗರಸಭೆ ವಿಫಲ

‘ಘನಪುರಿ ವಾಣಿಜ್ಯ ಸಂಕೀರ್ಣ’ದ 32 ಮಳಿಗೆಗಳಿಗೆ ಬೀಗ
Published 11 ಜನವರಿ 2024, 7:19 IST
Last Updated 11 ಜನವರಿ 2024, 7:19 IST
ಅಕ್ಷರ ಗಾತ್ರ

ಹಿರಿಯೂರು: ಆದಾಯ ಕ್ರೋಢೀಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ನಗರಸಭೆ ಸಂಪೂರ್ಣ ವಿಫಲವಾಗಿದೆ. ನಗರದಲ್ಲಿರುವ ವಾಣಿಜ್ಯ ಮಳಿಗೆಗಳನ್ನು ಸಮರ್ಪಕವಾಗಿ ಬಾಡಿಗೆ ನೀಡದೆ ಖಾಲಿ ಬಿಡಲಾಗಿದೆ. ಅಲ್ಲದೆ, ಕಂದಾಯ ವಸೂಲಿಯಲ್ಲೂ ನಗರಸಭೆ ಹಿಂದೆ ಬಿದ್ದಿದೆ ಎಂಬ ಆರೋಪ ಕೇಳಿಬರುತ್ತಿದೆ.

ಹರಾಜಾಗದ ಮಳಿಗೆಗಳು: ನಗರಸಭೆಯಿಂದ ನಿರ್ಮಿಸಲಾದ ತೇರುಮಲ್ಲೇಶ್ವರ ದೇವಸ್ಥಾನದ ರಸ್ತೆಯಲ್ಲಿನ ‘ಘನಪುರಿ ವಾಣಿಜ್ಯ ಸಂಕೀರ್ಣ’ದ ಮೊದಲ ಮಹಡಿಯಲ್ಲಿ 32 ಮಳಿಗೆಗಳನ್ನು ನಿರ್ಮಿಸಿ ಐದು ವರ್ಷ ಕಳೆದರೂ ಟೆಂಡರ್ ಕರೆದು ಬಾಡಿಗೆಗೆ ಕೊಟ್ಟಿಲ್ಲ. ನೆಹರೂ ಮಾರುಕಟ್ಟೆ ಸಂಕೀರ್ಣದ ಮೊದಲ ಮಹಡಿಯಲ್ಲಿನ 15 ಮಳಿಗೆಗಳು ಆರೇಳು ವರ್ಷಗಳಿಂದ ಖಾಲಿ ಉಳಿದಿವೆ.

ಒಮ್ಮೆ ಘನಪುರಿ ವಾಣಿಜ್ಯ ಸಂಕೀರ್ಣದ ಮಳಿಗೆಗಳ ಹರಾಜಿಗೆ ನಗರಸಭೆ ಮುಂದಾಗಿತ್ತು. ಆದರೆ, ಸರ್ಕಾರ ನಿಗದಿಪಡಿಸಿದ್ದ ಕನಿಷ್ಠ ದರವು  ಮಾರುಕಟ್ಟೆ ದರಕ್ಕಿಂತ ಹೆಚ್ಚಾಗಿದೆ ಎಂಬ ಕಾರಣಕ್ಕೆ ಯಾರೂ ಹರಾಜಿನಲ್ಲಿ ಪಾಲ್ಗೊಂಡಿರಲಿಲ್ಲ. ದರ ಕಡಿಮೆ ಮಾಡಿ ಮತ್ತೊಮ್ಮೆ ಹರಾಜು ಮಾಡುವ ಕೆಲಸಕ್ಕೆ ನಗರಸಭೆ ಆಡಳಿತ ಮುಂದಾಗದ ಕಾರಣ ಕೋಟ್ಯಂತರ ರೂಪಾಯಿ ಅನುದಾನದಲ್ಲಿ ನಿರ್ಮಿಸಿದ್ದ ಮಳಿಗೆಗಳು ನಿರುಪಯುಕ್ತವಾಗಿ ಉಳಿದಿವೆ.

ಕೋರ್ಟ್‌ನಲ್ಲಿ ಪ್ರಕರಣ: ಘನಪುರಿ ವಾಣಿಜ್ಯ ಸಂಕೀರ್ಣ ನಿರ್ಮಿಸುವ ಮೊದಲು ತೇರುಮಲ್ಲೇಶ್ವರ ರಸ್ತೆಯ ಒಂದು ಬದಿಯಲ್ಲಿ 30ಕ್ಕೂ ಹೆಚ್ಚು ಜನರು ಪೆಟ್ಟಿಗೆ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದರು. ‘ಪೆಟ್ಟಿಗೆ ಅಂಗಡಿಗಳು ನಗರದ ಸೌಂದರ್ಯಕ್ಕೆ ಕಳಂಕ. ಅದೇ ಜಾಗದಲ್ಲಿ ಮಳಿಗೆ ನಿರ್ಮಿಸುತ್ತೇವೆ’ ಎಂದು ಪೆಟ್ಟಿಗೆ ಅಂಗಡಿ ಮಾಲೀಕರಿಂದ ಅಲ್ಪ ಪ್ರಮಾಣದ ವಂತಿಗೆ (₹ 15,000ದಿಂದ ₹ 20,000) ಸಂಗ್ರಹಿಸಿ 35 ಮಳಿಗೆಗಳನ್ನು ನಗರಸಭೆ ನಿರ್ಮಿಸಿ ಒದಗಿಸಿತ್ತು. ಮಳಿಗೆ ನಿರ್ಮಿಸಿದ ಮೇಲೆ ವಂತಿಗೆ ನೀಡಿದವರು ಮಳಿಗೆಗಳಿಗೆ ಬಾಡಿಗೆ ನಿಗದಿಪಡಿಸಿ ತಮ್ಮ ಹೆಸರಿಗೆ ಮಾಡಿಕೊಡಬೇಕು ಎಂಬ ಬೇಡಿಕೆ ಇಟ್ಟಿದ್ದರು. ‘ನಿಯಮಾನುಸಾರ ಆ ರೀತಿ ಮಾಡಲು ಬರುವುದಿಲ್ಲ. ಹರಾಜು ಹಾಕುತ್ತೇವೆ. ಅದರಲ್ಲಿ ಭಾಗವಹಿಸಿ ಮಳಿಗೆ ಪಡೆಯಿರಿ’ ಎಂದು ನಗರಸಭೆ ಆಡಳಿತ ಹೇಳಿತ್ತು.

ನಗರಸಭೆಯ ಈ ನಿರ್ಣಯ ವಿರೋಧಿಸಿ 2018ರಲ್ಲಿ ಮಳಿಗೆಗಳಲ್ಲಿ ವಹಿವಾಟು ನಡೆಸುತ್ತಿರುವವರು ಹೈಕೋರ್ಟ್ ಮೆಟ್ಟಿಲೇರಿದರು. ಹೀಗಾಗಿ ವಾಣಿಜ್ಯ ಸಂಕೀರ್ಣದ ನೆಲ ಅಂತಸ್ತಿನ 35 ಹಾಗೂ ಮೊದಲ ಮಹಡಿಯ 32 ಮಳಿಗೆಗಳ ಬಾಡಿಗೆ ನಗರಸಭೆಗೆ ಬರದಂತಾಗಿದೆ. ತಾವು ಪಡೆದಿದ್ದ ಮಳಿಗೆಗಳನ್ನು ಎಷ್ಟೋ ವರ್ತಕರು ಬೇರೆಯವರಿಗೆ ಬಾಡಿಗೆ ಕೊಟ್ಟು ತಾವು ಲಾಭ ಮಾಡಿಕೊಳ್ಳುತ್ತಿದ್ದಾರೆ. ತಿಂಗಳಿಗೆ ಮೂರ್ನಾಲ್ಕು ಲಕ್ಷ ಆದಾಯ ತಂದುಕೊಡಬೇಕಾಗಿದ್ದ ಮಳಿಗೆಗಳ ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆಹರಿಸುವ ಗಂಭೀರ ಪ್ರಯತ್ನ ನಡೆದೇ ಇಲ್ಲ ಎಂಬುದು ಸಾರ್ವಜನಿಕರ ಆರೋಪ.

ಹತ್ತು ಕೋಟಿ ಆದಾಯದ ಸಾಧ್ಯತೆ:

‘ಮನೆ ಕಂದಾಯ, ನೀರಿನ ತೆರಿಗೆ, ಆಸ್ತಿ ತೆರಿಗೆ, ನಗರಸಭೆ ಮಳಿಗೆಗಳ ಬಾಡಿಗೆಯನ್ನು ಸರಿಯಾಗಿ ವಸೂಲಿ ಮಾಡಿದಲ್ಲಿ ವಾರ್ಷಿಕ ಹತ್ತು ಕೋಟಿ ಆದಾಯವನ್ನು ನಗರಸಭೆಗೆ ತರಬಹುದು. ಕಂದಾಯ ವಿಭಾಗದ ವೈಫಲ್ಯದಿಂದ ತೆರಿಗೆ ವಸೂಲಿ ನಿರೀಕ್ಷೆಯಂತೆ ಆಗುತ್ತಿಲ್ಲ. ಪ್ರಸ್ತುತ ತೆರಿಗೆ ಬಾಕಿ ₹ 2 ಕೋಟಿಗೂ ಹೆಚ್ಚಿದೆ’ ಎನ್ನುತ್ತಾರೆ ನಗರಸಭೆ ಸದಸ್ಯ ಅಜ್ಜಪ್ಪ.

ವಸೂಲಿಗೆ ಒತ್ತು ನೀಡಿ:

‘ನಗರಸಭೆ ಖಾತೆಯಲ್ಲಿ ಇರುವ ಹಣವನ್ನು ಖರ್ಚು ಮಾಡುವುದಕ್ಕೆ ಬಹಳ ಬುದ್ದಿವಂತಿಕೆ ಬೇಕಿಲ್ಲ. ಆದಾಯದ ಮೂಲ ಪತ್ತೆ ಹಚ್ಚಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಿದಲ್ಲಿ ನಾಗರಿಕರಿಗೆ ಹೆಚ್ಚಿನ ಸೌಲಭ್ಯ ನೀಡುವುದು ಕಷ್ಟವಲ್ಲ. ಘನಪುರಿ ವಾಣಿಜ್ಯ ಮಳಿಗೆಗಳಲ್ಲಿ ವಹಿವಾಟು ನಡೆಸುತ್ತಿರುವವರ ಜೊತೆ ಮಾತುಕತೆ ನಡೆಸಿ ಕೋರ್ಟ್‌ನಲ್ಲಿರುವ ಪ್ರಕರಣವನ್ನು ಹಿಂದೆ ಪಡೆಯುವಂತೆ ಮಾಡಬೇಕು. ಇಲ್ಲವಾದಲ್ಲಿ ನಗರಸಭೆಗೆ ಆಗುತ್ತಿರುವ ಆರ್ಥಿಕ ನಷ್ಟವನ್ನು ನ್ಯಾಯಾಲಯದ ಗಮನಕ್ಕೆ ತಂದು ಪ್ರಕರಣವನ್ನು ತುರ್ತಾಗಿ ವಿಲೇವಾರಿ ಮಾಡಲು ವಕೀಲರ ಮೂಲಕ ಪ್ರಯತ್ನಿಸಬೇಕು. ನೆಹರೂ ಮಾರುಕಟ್ಟೆಯ ಮೊದಲ ಅಂತಸ್ತಿನ 14 ಮಳಿಗೆಗಳ ಹರಾಜಿಗೆ ಅನುಮತಿ ಕೋರಿ ಜಿಲ್ಲಾಧಿಕಾರಿಗೆ ಪತ್ರ ಬರೆಯಬೇಕು. ನಗರಸಭೆ ಮಳಿಗೆಗಳಿಂದಲೇ ಕನಿಷ್ಠ ವರ್ಷವೊಂದಕ್ಕೆ ₹ 1.50 ಕೋಟಿಯಿಂದ ₹ 2 ಕೋಟಿ ಆದಾಯ ಪಡೆಯಬಹುದು. ಚುನಾಯಿತ ಸದಸ್ಯರು ಅಧಿಕಾರಿಗಳಿಗೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧ’ ಎನ್ನುತ್ತಾರೆ ಅಜ್ಜಪ್ಪ.

‘ಮಾಂಸ ಮಾರುಕಟ್ಟೆ ನೆಹರೂ ಮಾರುಕಟ್ಟೆ ನಗರಸಭೆ ಆವರಣಕ್ಕೆ ಹೊಂದಿಕೊಂಡಿರುವ ವಾಣಿಜ್ಯ ಮಳಿಗೆಗಳಿಂದ ₹ 80 ಲಕ್ಷ ಬಾಡಿಗೆ ಬಾಕಿ ಇದೆ.
-ಜಬೀವುಲ್ಲಾ ಕಂದಾಯ ಅಧಿಕಾರಿ
ಘನಪುರಿ ವಾಣಿಜ್ಯ ಮಳಿಗೆಗಳ ಬಾಡಿಗೆ ವಸೂಲಾತಿಗಾಗಿ ಬಾಡಿಗೆದಾರರ ಜೊತೆ ಮಾತುಕತೆ ನಡೆದಿದ್ದು ಬಹಳಷ್ಟು ಜನ ಬಾಡಿಗೆ ಪಾವತಿಸಲು ಒಪ್ಪಿಗೆ ಸೂಚಿಸಿದ್ದಾರೆ. ನೆಹರೂ ಮಾರುಕಟ್ಟೆ ಮಳಿಗೆಗಳನ್ನು ಈ ಬಾರಿ ಟೆಂಡರ್ ಕರೆದು ಬಾಡಿಗೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಎಚ್‌.ಮಹಾಂತೇಶ್ ಪೌರಾಯುಕ್ತ

ನಗರಸಭೆ ಇದ್ದೂ ಸತ್ತಂತಾಗಿದೆ

2023 ಮೇ 3ಕ್ಕೆ ಮೊದಲ ಅವಧಿಯ ಅಧ್ಯಕ್ಷ ಉಪಾಧ್ಯಕ್ಷರ ಆಡಳಿತ ಅಧಿಕಾರ ಮುಗಿದಿದ್ದು ಒಂಬತ್ತು ತಿಂಗಳು ಪೂರ್ಣವಾಗುತ್ತಾ ಬಂದರೂ ಸರ್ಕಾರ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಪ್ರಕಟಿಸದ ಕಾರಣ ನಗರಸಭೆಯಲ್ಲಿ ಮಾಸಿಕ ಸಭೆಗಳು ನಡೆಯುತ್ತಿಲ್ಲ. ಯಾವುದೇ ಕಾಮಗಾರಿಗಳು ನಡೆಯುತ್ತಿಲ್ಲ. ಸರ್ಕಾರದ ಅನುದಾನ ಬರುತ್ತಿಲ್ಲ. ಏನನ್ನು ಪ್ರಶ್ನೆ ಮಾಡಿದರೂ ಜಿಲ್ಲಾಧಿಕಾರಿ ಕಡೆಗೆ ಕೈ ತೋರಿಸುತ್ತಾರೆ. ಹೀಗಾಗಿ ನಗರಸಭೆ ಇದ್ದೂ ಸತ್ತಂತಾಗಿದೆ. – ಅಜ್ಜಪ್ಪ ನಗರಸಭೆ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT