ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳಲ್ಕೆರೆ: ಹಿಂದೂ ಭಕ್ತರಿಗೆ ಹಣ್ಣಿನ ರಸ ನೀಡುವ ದಾದಾಪೀರ್

ಎಡೆಯೂರು ಸಿದ್ದಲಿಂಗೇಶ್ವರ ದೀಪೋತ್ಸವಕ್ಕೆ ಪಾದಯಾತ್ರೆಯಲ್ಲಿ ತೆರಳುವ ಭಕ್ತರಿಗೆ ವಿತರಣೆ
Published 6 ಡಿಸೆಂಬರ್ 2023, 6:56 IST
Last Updated 6 ಡಿಸೆಂಬರ್ 2023, 6:56 IST
ಅಕ್ಷರ ಗಾತ್ರ

ಹೊಳಲ್ಕೆರೆ: ಪಟ್ಟಣದ ಮುಸ್ಲಿಂ ವ್ಯಾಪಾರಿಯೊಬ್ಬರು ಪ್ರತೀ ವರ್ಷ ಪಾದಯಾತ್ರೆಯಲ್ಲಿ ಬರುವ ಹಿಂದೂ ಭಕ್ತರಿಗೆ ಉಚಿತವಾಗಿ ಹಣ್ಣಿನರಸ ವಿತರಿಸುವ ಮೂಲಕ, ಸೇವೆಗೆ ಧರ್ಮದ ಹಂಗಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. 

ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿಯ ಲಕ್ಷ ದೀಪೋತ್ಸವಕ್ಕೆ ಪಾಯಾತ್ರೆಯಲ್ಲಿ ತೆರಳುವ ಉತ್ತರ ಕರ್ನಾಟಕದ ನೂರಾರು ಭಕ್ತರಿಗೆ ಇಲ್ಲಿನ ಜ್ಯೂಸ್ ಅಂಗಡಿಯ ಮಾಲೀಕ ದಾದಾಪೀರ್ ಅವರು ಕಳೆದ 21 ವರ್ಷಗಳಿಂದ ನಿರಂತರವಾಗಿ ಜ್ಯೂಸ್ ನೀಡುವ ಸೇವೆ ಮಾಡುತ್ತಾ ಬಂದಿದ್ದಾರೆ.

ರಾಜಕೀಯ ಲಾಭಕ್ಕಾಗಿ ಜಾತಿ, ಧರ್ಮಗಳನ್ನು ಎತ್ತಿಕಟ್ಟುವ ಇಂದಿನ ಪರಿಸ್ಥಿತಿಯಲ್ಲಿ ದಾದಾಪೀರ್ ಸದ್ದಿಲ್ಲದೆ ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಕಾಯಕದಲ್ಲಿ ತೊಡಗಿದ್ದಾರೆ. ಮುಸ್ಲಿಂ ವ್ಯಾಪಾರಿಯಾದರೂ, ತಮ್ಮ ಅಂಗಡಿಗೆ ‘ತರಳಬಾಳು ಜ್ಯೂಸ್ ಸೆಂಟರ್’ ಎಂದು ಹೆಸರಿಟ್ಟು, ಜಾತ್ಯತೀತ ನಡೆ ಅನುಸರಿಸುತ್ತಿದ್ದಾರೆ. 

ಪ್ರತೀವರ್ಷ ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದ ನೂರಾರು ಭಕ್ತರು ಎಡೆಯೂರು ಸಿದ್ದಲಿಂಗೇಶ್ವರ ಲಕ್ಷದೀಪೋತ್ಸವಕ್ಕೆ ಪಾದಯಾತ್ರೆ ಮೂಲಕ ಸಾಗುತ್ತಾರೆ. ಬಿಸಿಲಿನಿಂದ ದೂರದಿಂದ ನಡೆದುಬಂದು ಬಾಯಾರಿದ್ದ ಸುಮಾರು 300ಕ್ಕೂ ಭಕ್ತರು ಮಂಗಳವಾರ ಪಟ್ಟಣ ತಲುಪಿದರು. ಪಾದಯಾತ್ರೆಯಲ್ಲಿ ತೆರಳುವ ಎಲ್ಲ ಭಕ್ತರಿಗೆ ದಾದಾಪೀರ್‌ ಅವರು ಕಲ್ಲಂಗಡಿ, ಪೈನಾಪಲ್‌, ಸೇಬು, ಮೋಸಂಬಿ, ಕಿತ್ತಲೆ, ಸಪೋಟ ಹಣ್ಣಿನ ರಸ, ಕಬ್ಬಿನ ಜ್ಯೂಸ್ ನೀಡಿ ಉಪಚರಿಸಿದರು. ಭಕ್ತರು ತಣ್ಣನೆಯ ಜ್ಯೂಸ್‌ ಕುಡಿದು ಪಾದಯಾತ್ರೆ ಮುಂದುವರಿಸಿದರು. 

‘20 ವರ್ಷಗಳಿಂದ ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿಯ ಭಕ್ತರಿಗೆ ತಂಪು ಪಾನೀಯ, ಹಣ್ಣು ವಿತರಿಸುತ್ತಿದ್ದೇನೆ. ನನ್ನ ಕೊನೆಯ ಉಸಿರು ಇರುವವರೆಗೆ ಈ ಸೇವೆ ಮಾಡುತ್ತೇನೆ. ಮಾನವೀಯತೆ ಮತ್ತು ಸೇವೆ ಮಾಡಲು ಜಾತಿ, ಧರ್ಮ ಮುಖ್ಯವಲ್ಲ. ಎಲ್ಲಾ ಧರ್ಮಗಳೂ ಶಾಂತಿ, ಸ್ನೇಹ, ಬಾಂಧವ್ಯ, ಪ್ರೀತಿಯನ್ನು ಬಯಸುತ್ತವೆ. ನಮ್ಮ ಸೇವೆಯನ್ನು ನೋಡಿ ದೇವರು ಒಲಿಯುತ್ತಾನೆ’ ಎನ್ನುತ್ತಾರೆ ದಾದಾಪೀರ್.

‘ಪಾದಯಾತ್ರೆಯಲ್ಲಿ ತೆರಳುವ ಭಕ್ತರು ಪಟ್ಟಣಕ್ಕೆ ಬರುವ ದಿನಾಂಕವನ್ನು ಮೊದಲೇ ತಿಳಿಸುತ್ತಾರೆ. ಭಕ್ತರು ಬರುವ ವೇಳೆಗೆ ಸರಿಯಾಗಿ ಜ್ಯೂಸ್ ತಯಾರಿಸಿಡುತ್ತೇವೆ. ತಮ್ಮಿಷ್ಟದ ಹಣ್ಣಿನ ರಸವನ್ನು ಎಷ್ಟು ಬೇಕಾದರೂ ಸೇವಿಸಬಹುದು. ಜ್ಯೂಸ್ ಸೇವಿರಿದ ನಂತರ ಮುಂದೆ ಪ್ರಯಾಣ ಬೆಳೆಸುತ್ತಾರೆ’ ಎನ್ನುತ್ತಾರೆ ದಾದಾಪೀರ್. 

300 ಭಕ್ತರಿಗೆ ಉಚಿತ ಜ್ಯೂಸ್‌ ವಿತರಿಸಿದ ದಾದಾಪೀರ್‌ 21 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಸೇವೆ ಕಬ್ಬು, ಸೇಬು, ಕಿತ್ತಲೆ, ಕಲ್ಲಂಗಡಿ ಜ್ಯೂಸ್ ಸೇವಿಸಿದ ಭಕ್ತರು

460 ಕಿ.ಮೀ.ಪಾದಯಾತ್ರೆ

ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕಿನ ಶಲವಡಿಯ ಸಿದ್ದಲಿಂಗೇಶ್ವರ ಭಕ್ತ ಮಂಡಳಿ ಪ್ರತೀವರ್ಷ ಕಾರ್ತಿಕ ಮಾಸದಲ್ಲಿ 460 ಕಿ.ಮೀ.ದೂರದ ಎಡೆಯೂರಿಗೆ ಪಾದಯಾತ್ರೆ ಏರ್ಪಡಿಸುತ್ತದೆ. ಈಗ ನಡೆಯುತ್ತಿರುವ 48ನೇ ವರ್ಷದ ಪಾದಯಾತ್ರೆಯಲ್ಲಿ ಉತ್ತರ ಕರ್ನಾಟಕದ ದಾಟನಾಳ ನವಲಗುಂದ ಶಾನವಾಡ ಪಡೇಸೂರ ಖನ್ನೂರ ನಾಯ್ಕನೂರು ಯಾವಗಲ್ಲ ಕೋತಬಾಳ ಬೆಳವಣಕಿ ಕರಮುಡಿ ಇಂಗಳ ಹಳ್ಳಿ ಹೆಬ್ಬಾಳ ನಿರಲಗಿ ಬನ್ನಿಕೊಪ್ಪ ಇಬ್ರಾಹಿಮ್‌ಪೂರ ಅಳಗವಾಡಿ ಅಕ್ಕಿಗುಂದ ಬಟ್ಟೂರ ಗದಗ ಭಾವನೂರ ಬಾಗಲಕೋಟೆ ಅರಕೇರಿ ನೆಲವಡಿ ಕಂಗವಳ್ಳಿ ಹಾಗಲಕೇರಿ ಮೇವುಂಡಿ ಗ್ರಾಮಗಳಿಂದ ಭಕ್ತರು ಪಾದಯಾತ್ರೆ ಕೈಗೊಂಡಿದ್ದರು.  ಶಲವಡಿಯಿಂದ ಹೊರಟಿರುವ ಭಕ್ತರು ಪಾದಯಾತ್ರೆಯ ಮೂಲಕ ಕುರ್ತುಕೋಟಿ ಮುಳುಗುಂದ ಬಟ್ಟೂರ ಸುರಣಿಗಿ ಹಾಲಗಿ ಗುತ್ತಲ ಅನ್ವೇರಿ ಹರಿಹರ ದಾವಣಗೆರೆ ಸಾಸಲು ಚಿಕ್ಕಜಾಜೂರು ಹೊಳಲ್ಕೆರೆ ತಿರುಮಲಾಪುರ ಹೊಸದುರ್ಗ ಶ್ರೀರಾಂಪುರ ಹುಳಿಯಾರು ಚಿಕ್ಕನಾಯಕನ ಹಳ್ಳಿ ತುರುವೇಕೆರೆ ಜಡಿಯಾ ಮಾರ್ಗವಾಗಿ ಲಕ್ಷದೀಪೋತ್ಸವ ನಡೆಯುವ ವೇಳೆಗೆ ಎಡೆಯೂರು ತಲುಪುತ್ತಾರೆ. ಕ್ಷೇತ್ರದಲ್ಲಿ ನಡೆಯುವ ಲಕ್ಷ ದೀಪೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ರೈಲಿನಲ್ಲಿ ತಮ್ಮ ಊರುಗಳಿಗೆ ವಾಪಸ್‌ ತೆರಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT