ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ದುಡಿಯುವ ಮಠವನ್ನು ದುಗ್ಗಾಣಿ ಮಠವನ್ನಾಗಿ ಮಾಡಿದ ಶ್ರೀ’

ಸಾಣೇಹಳ್ಳಿ: ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಶ್ರದ್ಧಾಂಜಲಿ ಕಾರ್ಯಕ್ರಮ
Published : 26 ಸೆಪ್ಟೆಂಬರ್ 2024, 15:30 IST
Last Updated : 26 ಸೆಪ್ಟೆಂಬರ್ 2024, 15:30 IST
ಫಾಲೋ ಮಾಡಿ
Comments

ಹೊಸದುರ್ಗ: ‘ಒಂದು ಕಾಲದಲ್ಲಿ ಸಿರಿಗೆರೆ ಮಠದಲ್ಲಿ ಒಂದೊತ್ತಿನ ಊಟಕ್ಕೂ ಕಷ್ಟವಿತ್ತು. ಅಂತಹ ಸಂದರ್ಭದಲ್ಲಿ ಶಿವಕುಮಾರ ಸ್ವಾಮೀಜಿ ಮಠವನ್ನು, ಸಮಾಜವನ್ನು ಹೇಗೆ ಮುನ್ನಡೆಸಬೇಕು ಎಂದು ಚಿಂತಿಸಿದರು. ಏನೇ ಕಷ್ಟ ನಿಷ್ಠುರಗಳು ಎದುರಾದರೂ ಎದೆಗುಂದದೇ ದಿಟ್ಟತನದಿಂದ ಎದುರಿಸಿದರು’ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಸಾಣೇಹಳ್ಳಿಯ ಶಿವಕುಮಾರ ಬಯಲು ರಂಗಮಂದಿರದಲ್ಲಿ ನಡೆದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಶ್ರದ್ಧಾಂಜಲಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಶ್ರೀಗಳಿಗೆ ಪೀಠ ಮುಳ್ಳಿನ ಹಾಸಿಗೆಯಾಗಿತ್ತು. ಅದನ್ನು ತಮ್ಮ ಕಾರ್ಯಕ್ಷೇತ್ರಗಳ ಮೂಲಕ ಹೂವಿನ ಹಾಸಿಗೆಯನ್ನಾಗಿ ಮಾಡಿಕೊಂಡರು. ಯಾರನ್ನೂ ನಗಣ್ಯ ಎಂದು ತಿಳಿದುಕೊಂಡಿರಲಿಲ್ಲ. ದುಗ್ಗಾಣಿ ಮಠವನ್ನು ದುಡಿಯುವ ಮಠವನ್ನಾಗಿ ಮಾಡಿದರು. ಭಕ್ತರ ಶ್ರೇಯಸ್ಸೇ ನಮ್ಮ ಶ್ರೇಯಸ್ಸು ಎಂದು ತಿಳಿದುಕೊಂಡಿದ್ದರು. ಅಂತಹ ಅಪರೂಪದ ವ್ಯಕ್ತಿತ್ವ ಶ್ರೀಗಳದ್ದು’ ಎಂದರು.

‘ಮಧ್ಯ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ್ದು ಶಿವಕುಮಾರ ಶ್ರೀ. ಅವರ ಮಾತುಗಳು ಆತ್ಮಸಾಕ್ಷಿಯಿಂದ ಕೂಡಿದ್ದವು. ಕೆಲ ಲಿಂಗಾಯತ ಮಠಾಧೀಶರು ಒಳಗೊಳಗೇ ದ್ರೋಹ ಬಗೆಯುತ್ತಿರುವುದರಿಂದ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಹಿನ್ನಡೆಯಾಗಿದೆ. ಸಾಣೇಹಳ್ಳಿಯ ಪೂಜ್ಯರು, ಭಾಲ್ಕಿಯ ಪೂಜ್ಯರು ಹಾಗೂ ಗದಗಿನ ಪೂಜ್ಯರು ಬಿಟ್ಟರೆ, ವಚನ ದರ್ಶನ ಪುಸ್ತಕದ ಬಗ್ಗೆ ಯಾವ ಮಠಾಧಿಪತಿಯೂ ಚಕಾರೆತ್ತದೇ ಇರುವುದು ಆತ್ಮದ್ರೋಹದ ಪ್ರತೀಕ’ ಎಂದು ಹೇಳಿದರು. 

‘ಶಿವಕುಮಾರ ಶ್ರೀಗಳು ಶರಣರ ವಿಚಾರ ಪ್ರಸರಣಕ್ಕೆ ನಾಟಕವನ್ನು ಮಾಧ್ಯಮವನ್ನಾರಿ ಮಾಡಿಕೊಂಡರು. ಅವರ ರಚಿಸಿದ ನಾಟಕಗಳನ್ನು ಹಿಂದಿ ಭಾಷೆಗೆ ಅನುವಾದಿಸಿ ಭಾರತದಾದ್ಯಂತ ಪ್ರದರ್ಶಿಸಿ ಸಾಣೇಹಳ್ಳಿ ಮಠದ ಕೀರ್ತಿಯನ್ನು ಉತ್ತುಂಗ ಶಿಖರಕ್ಕೇರಿಸಿದ ಕೀರ್ತಿ ಪಂಡಿತಾರಾಧ್ಯ ಶ್ರೀಗಳಿಗೆ ಸಲ್ಲಬೇಕು.’ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷರಾದ ಸುಮತಿ ಜಯಪ್ಪ ಹೇಳಿದರು. 

ಪಂಡಿತಾರಾಧ್ಯ ಶ್ರೀಗಳ ವಚನ ಸಂದೇಶ ಭಾಗ–3 ಕೃತಿ ಲೋಕರ್ಪಣೆಗೊಳಿಸಲಾಯಿತು. ಮಾಜಿ ಶಾಸಕ ಡಿ.ಎಸ್. ಸುರೇಶ್, ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಚಂದ್ರಪ್ಪ ಎ.ಸಿ. ವಿದ್ಯಾವರ್ಧಕ ಸಂಘ ಉಪಾಧ್ಯಕ್ಷ ಗಂಗಾಧರಪ್ಪ ಸೇರಿದಂತೆ ಹಲವರಿದ್ದರು.

- ಮಠದ ನ್ಯಾಯಗಳೇ ಕೋರ್ಟ್‌ನಲ್ಲಿ ಇರಬೇಕೇ?’: 

‘ಕೆಲ ಬುದ್ಧಿವಂತ ಜಗದ್ವಿಖ್ಯಾತಿ ಅಂತ ಹೇಳಿಕೊಂಡವರಿಗೆ ಸಣ್ಣತನಗಳಿರುತ್ತವೆ. ಆದರೆ ಶಿವಕುಮಾರ ಶ್ರೀಗಳಲ್ಲಿ ಅದು ಇರಲಿಲ್ಲ. ಅವರು 60 ವರ್ಷಕ್ಕೆ ನಿವೃತ್ತಿಯಾದರು’ ಎಂದು ಚಿಂತಕ ಬಸವರಾಜ ಸಾದರ ಹೇಳಿದರು. ‘ಸಿರಿಗೆರೆ ಮಠದ ಸಾಧನೆ ಬಹುದೊಡ್ಡದು. ಸಾಧನೆ ಮಾಡಿದ್ದನ್ನು ಕಿರೀಟವಾಗಿ ಮಾಡಿಕೊಂಡು ತಲೆಮೇಲೆ ಎತ್ತಿಕೊಂಡು ಹೋಗಬೇಕು. ಸಿರಿಗೆರೆ ಮಠ ನ್ಯಾಯ ಕೇಳಿ ಬಂದವರಿಗೆ ನ್ಯಾಯ ಒದಗಿಸುತ್ತಿತ್ತು. ಆದರೆ ಈ ಮಠದ ನ್ಯಾಯಗಳೇ ಕೋರ್ಟ್‌ಗಳಲ್ಲಿ ಇರಬೇಕೇ?’ ಎಂದು ಅವರು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT