ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಲಾಕ್‌ಡೌನ್‌ನಲ್ಲಿ ಮದ್ಯ ಮಾರಾಟ, ಎಸಿಬಿ ತನಿಖೆಗೆಗೆ ತೀರ್ಮಾನ

ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಅಬಕಾರಿ ಇಲಾಖೆ ವಿರುದ್ಧ ಅಸಮಾಧಾನ
Last Updated 15 ಜುಲೈ 2020, 15:27 IST
ಅಕ್ಷರ ಗಾತ್ರ

ಚಿತ್ರದುರ್ಗ: ಲಾಕ್‌ಡೌನ್‌ ಸಂದರ್ಭದಲ್ಲಿ ನಡೆದ ಮದ್ಯ ಅಕ್ರಮ ಮಾರಾಟದ ತನಿಖೆಯ ಹೊಣೆಯನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ವಹಿಸಲು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆ ತೀರ್ಮಾನಿಸಿತು.

ಅಕ್ರಮ ಎಸಗಿದ ಮದ್ಯದಂಗಡಿ ಮಾಲೀಕರ ವಿರುದ್ದ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಶ್ರೀರಾಮುಲು ತಾಕೀತು ಮಾಡಿದರು. ಪ್ರಕರಣ ದಾಖಲಾದರೂ ಸನ್ನದು ರದ್ದುಪಡಿಸದ ಅಬಕಾರಿ ಇಲಾಖೆ ಆಯುಕ್ತರನ್ನು ತರಾಟೆ ತೆಗೆದುಕೊಂಡರು. ಅಕ್ರಮದಲ್ಲಿ ತೊಡಗಿದ ಮದ್ಯದಂಗಡಿ ಬಾಗಿಲು ಮುಚ್ಚಿಸುವಂತೆ ಸೂಚಿಸಿದರು.

ಲಾಕ್‌ಡೌನ್‌ಗೂ ಮುನ್ನ ಹಾಗೂ ಲಾಕ್‌ಡೌನ್‌ ತೆರವಾದ ಬಳಿಕ ಮದ್ಯ ದಾಸ್ತಾನಿನಲ್ಲಿ ಉಂಟಾಗಿರುವ ಭಾರಿ ವ್ಯತ್ಯಾಸವನ್ನು ಸಚಿವರು ಹಾಗೂ ಶಾಸಕರು ಪ್ರಶ್ನಿಸಿದರು. ರಾಜಾರೋಷವಾಗಿ ನಡೆದ ಮದ್ಯ ಅಕ್ರಮ ವಹಿವಾಟು ಹಾಗೂ ಪತ್ತೆಯಾದ ಪ್ರಕರಣಗಳ ತನಿಖೆ ಎಲ್ಲರನ್ನು ಕೆಣಕಿತು.

‘ಹೊಳಲ್ಕೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಮದ್ಯ ಅಕ್ರಮ ಮಾರಾಟವನ್ನು ಪೊಲೀಸರು ಬಯಲಿಗೆ ಎಳೆದಿದ್ದಾರೆ. ಅಂಗಡಿ ಮಾಲೀಕರು ಇದರಲ್ಲಿ ಶಾಮೀಲಾಗಿರುವುದು ಬೆಳಕಿಗೆ ಬಂದಿದೆ. ಆದರೆ, ಮದ್ಯದಂಗಡಿ ಮಾಲೀಕರ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ. ಲಾಕ್‌ಡೌನ್‌ ಸಂದರ್ಭದಲ್ಲಿ ಮಾಲೀಕರೇ ಮದ್ಯದಂಗಡಿ ಕಳವು ಮಾಡಿಸಿದ್ದಾರೆ. ಎಫ್‌ಐಆರ್‌ನಲ್ಲಿ ಅವರನ್ನು ಏಕೆ ಆರೋಪಿಯನ್ನಾಗಿ ಮಾಡಿಲ್ಲ’ ಎಂದು ಶಾಸಕ ಎಂ.ಚಂದ್ರಪ್ಪ ಅಬಕಾರಿ ಆಯುಕ್ತರನ್ನು ಪ್ರಶ್ನಿಸಿದರು.

ಅಬಕಾರಿ ಆಯುಕ್ತರ ಅಸಮರ್ಪಕ ಉತ್ತರಕ್ಕೆ ಸಂಸದ ಎ.ನಾರಾಯಣಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಹಾಗೂ ಚಿತ್ರದುರ್ಗ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಧ್ವನಿಗೂಡಿಸಿದರು. ₹ 50 ಮೌಲ್ಯದ ಮದ್ಯವನ್ನು ₹ 500ಕ್ಕೆ ಮಾರಾಟ ಮಾಡಲಾಗಿದ್ದು, ಬಡವರನ್ನು ಕೊಳ್ಳೆ ಹೊಡೆಯಲಾಗಿದೆ ಎಂದು ಆಕ್ರೋಶ ಹೊರಹಾಕಿದರು.

ಜನಸಂದಣಿಯಲ್ಲಿ ಮದ್ಯ ಮಾಯ

‘ಮಾರ್ಚ್‌ 23ರಂದು ಲಾಕ್‌ಡೌನ್‌ ಘೋಷಣೆ ಆಗುತ್ತಿದ್ದಂತೆ ಜನರು ಏಕಾಏಕಿ ಮದ್ಯದಂಗಡಿಗೆ ನುಗ್ಗಿದರು. ಭಾರಿ ಮೌಲ್ಯದ ಮದ್ಯ ಮಾರಾಟವಾಯಿತು. ಮರುದಿನ ಲಾಕ್‌ಡೌನ್‌ ಜಾರಿಯಾಗಿದ್ದರಿಂದ ಲೆಕ್ಕೆ ಬರೆಯಲು ಸಾಧ್ಯವಾಗಿಲ್ಲ...’

ಇದು ಮದ್ಯದಂಗಡಿಯ ಮಾಲೀಕರು ಮದ್ಯ ದಾಸ್ತಾನುವಿನಲ್ಲಿ ಉಂಟಾಗಿರುವ ವ್ಯತ್ಯಾಸಕ್ಕೆ ನೀಡಿರುವ ಸ್ಪಷ್ಟನೆ. ಅಬಕಾರಿ ಆಯುಕ್ತರು ಸಭೆಯಲ್ಲಿ ಈ ಉತ್ತರವನ್ನು ಓದಿದಾಗ ಸಚಿವ ಶ್ರೀರಾಮುಲು ‘ಕಳ್ಳಲೆಕ್ಕ’ ತೋರಿಸಬೇಡಿ ಎಂದು ಕಿಡಿಕಾರಿದರು.

ಮಾರ್ಚ್‌ ಕೊನೆ ವಾರದಿಂದ ಮೇ ವರೆಗೆ ಅಕ್ರಮ ಮದ್ಯ ಮಾರಾಟ ಮಾಡಿದ ಆರೋಪದಡಿ 11 ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿವೆ. 25 ಸನ್ನದುಗಳನ್ನು ರದ್ದುಪಡಿಸಲಾಗಿದೆ. ಮದ್ಯ ಅಕ್ರಮ ಮಾರಾಟಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಇಲಾಖೆ ತನಿಖೆ ನಡೆಸುತ್ತಿದೆ. ಆದರೂ, ವಹಿವಾಟು ನಡೆಸಲು ಅವಕಾಶ ಕಲ್ಪಿಸಿದ ಅಬಕಾರಿ ಇಲಾಖೆ ನಡೆ ಶಾಸಕರ ಅಸಮಾಧಾನವನ್ನು ಹೆಚ್ಚಿಸಿತು. ಲೋಕಾಯುಕ್ತ ಅಥವಾ ಸಿಐಡಿ ತನಿಖೆಗೆ ಶಿಫಾರಸು ಮಾಡುವಂತೆ ಪಟ್ಟುಹಿಡಿದರು.

ಶೌಚಾಲಯ ಅವ್ಯವಹಾರ ತನಿಖೆ

ಸ್ವಚ್ಛ ಭಾರತ ಯೋಜನೆಯಡಿ ನಿರ್ಮಿಸಿದ ಶೌಚಾಲಯಗಳಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ತಾಲ್ಲೂಕು ವಾರು ಸಮಿತಿ ರಚಿಸಲು ಸಭೆ ತೀರ್ಮಾನಿಸಿತು. ಹೆಚ್ಚುವರಿ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ವರದಿಯನ್ನು ಕ್ರೋಢೀಕರಿಸಿ ಸತ್ಯಾಸತ್ಯತೆ ಬಯಲಿಗೆ ಎಳೆಯುವಂತೆ ಸಲಹೆ ನೀಡಿತು.

ಚಿತ್ರದುರ್ಗ ತಾಲ್ಲೂಕಿನ ಐನಹಳ್ಳಿ ಮತ್ತು ಬೆಳಗಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ₹ 48.33 ಲಕ್ಷ ಅವ್ಯವಹಾರ ನಡೆದಿರುವುದು ಎಡಿಸಿ ನೇತೃತ್ವದ ತನಿಖಾ ವರದಿಯಲ್ಲಿ ಬೆಳಕಿಗೆ ಬಂದಿದೆ. ಎರಡು ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಅವ್ಯವಹಾರ ಸಚಿವರ ಹುಬ್ಬೇರಿಸಿತು.

‘ಎರಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಷ್ಟು ಮೊತ್ತದ ಅವ್ಯವಹಾರ ನಡೆದರೆ, ಜಿಲ್ಲೆಯಲ್ಲಿ ನಡೆದಿರುವ ಅವ್ಯವಹಾರ ಎಷ್ಟು? ಇದರಿಂದ ಜನಪ್ರತಿನಿಧಿಗಳಿಗೆ ಕೆಟ್ಟ ಹೆಸರು ಬರುತ್ತದೆ. ಈ ಅವ್ಯವಹಾರದಲ್ಲಿ ಭಾಗಿಯಾಗಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹಾಗೂ ಅಧ್ಯಕ್ಷರ ವಿರುದ್ಧ ಎಫ್‍ಐಆರ್ ದಾಖಲಿಸಬೇಕು’ ಎಂದು ಸಚಿವ ಶ್ರೀರಾಮುಲು ಸೂಚನೆ ನೀಡಿದರು.

ಎಂಜಿನಿಯರ್‌ ಅಮಾನತು

ಪಂಚಾಯತ್‌ ರಾಜ್‌ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ಸುಭಾನ್‌ ಸಾಬ್‌ ಅವರನ್ನು ಅಮಾನತು ಮಾಡುವಂತೆ ಸಚಿವ ಶ್ರೀರಾಮುಲು ತಾಕೀತು ಮಾಡಿದರು.

ಮಾರ್ಚ್‌ ಅಂತ್ಯಕ್ಕೆ ₹ 50 ಕೋಟಿ ಅನುದಾನ ಸರ್ಕಾರಕ್ಕೆ ಹಿಂದಿರುಗಿದೆ. ಸಕಾಲಕ್ಕೆ ಸೂಚನೆ ನೀಡಿದರು ಖಜಾನೆಗೆ ಬಿಲ್‌ ಸಲ್ಲಿಕೆ ಮಾಡಲಿಲ್ಲ. ದೊಡ್ಡ ಮೊತ್ತದ ಅಪವ್ಯಯ ಆಗಿರುವುದು ಗಂಭೀರ ಲೋಪ. ಕೂಡಲೇ ಅವರನ್ನು ಅಮಾನತು ಮಾಡಿ ಎಂದು ಸಚಿವರು ಹೇಳಿದರು.

ನರೇಗಾ ಯೋಜನೆಯಡಿ ಬಾಕಿ ಉಳಿದಿರುವ ₹ 105 ಕೋಟಿ ಸಾಮಗ್ರಿಯ ಬಾಕಿ ಬಿಲ್‌ ಪಾವತಿಗೆ ಸಚಿವರು ತಿಂಗಳ ಗಡುವು ನೀಡಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳೇ ಅನುಮೋದನೆ ನೀಡಿದ ಕಾಮಗಾರಿಗೆ ಬಿಲ್‌ ಬಾಕಿ ಉಳಿಸಿಕೊಳ್ಳುವುದು ತಪ್ಪು. ಇಂತಹ ಸ್ಥಿತಿ ಬೇರೆ ಯಾವ ಜಿಲ್ಲೆಯಲ್ಲೂ ಇಲ್ಲ ಎಂದು ಅಸಮಾಧಾನಾ ವ್ಯಕ್ತಪಡಿಸಿದರು.

ರಶ್ಮಿ ಕಂಪ್ಯೂರ್‌: ಬಂಧನಕ್ಕೆ ಸೂಚನೆ

ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಪಿಎಫ್‌ ಹಾಗೂ ಇಎಸ್‌ಐ ಪಾವತಿಸದೇ ವಂಚಿಸಿದ ಆರೋಪಕ್ಕೆ ಗುರಿಯಾಗಿರುವ ರಶ್ಮಿ ಕಂಪ್ಯೂಟರ್ ಮಾಲೀಕರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಸೂಚನೆ ನೀಡಿದರು.

‘ಸರ್ಕಾರಕ್ಕೆ ವಂಚಿಸಿದ ವ್ಯಕ್ತಿಯ ವಿರುದ್ಧ ದಾಖಲಾದ ಎಫ್‌ಐಆರ್‌ಗೆ ದಾಖಲೆ ಕೇಳುವುದು ಸಮಂಜಸವಲ್ಲ. ಅಗತ್ಯ ದಾಖಲೆಯನ್ನು ಜಿಲ್ಲಾ ಪಂಚಾಯಿತಿ 15 ದಿನಗಳಲ್ಲಿ ಹಸ್ತಾಂತರ ಮಾಡಲಿದೆ. ಆರೋಪಿಯನ್ನು ಇನ್ನೂ ಏಕೆ ಬಂಧಿಸಿಲ್ಲ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಅವರನ್ನು ಪ್ರಶ್ನಿಸಿದರು.

‘ಆರೋಪಿ ಜಾಮೀನು ಪಡೆದುಕೊಂಡಿದ್ದಾರೆ. ಅಗತ್ಯ ದಾಖಲೆ ನೀಡುವಂತೆ ಜಿಲ್ಲಾ ಪಂಚಾಯಿತಿಯನ್ನು ಕೋರಲಾಗಿದೆ. ತನಿಖೆಯನ್ನು ಶೀಘ್ರವೇ ಪೂರ್ಣಗೊಳಿಸಲಾಗುವುದು’ ಎಂದು ರಾಧಿಕಾ ಸಭೆಗೆ ಮಾಹಿತಿ ನೀಡಿದರು.

ಮುಚ್ಚಿವೆ 274 ಕೃಷಿ ಹೊಂಡ

ಜಿಲ್ಲೆಯಲ್ಲಿ ನಿರ್ಮಾಣಗೊಂಡ 6,815 ಕೃಷಿ ಹೊಂಡಗಳಲ್ಲಿ 274 ಕೃಷಿ ಹೊಂಡಗಳನ್ನು ಫಲಾನುಭವಿಗಳೇ ಮುಚ್ಚಿದ್ದಾರೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಸದಾಶಿವ ಮಾಹಿತಿ ನೀಡಿದರು.

‘ಹೊಳಲ್ಕೆರೆಯಲ್ಲಿ 44, ಹಿರಿಯೂರಿನಲ್ಲಿ 23 ಸೇರಿ ಜಿಲ್ಲೆಯಲ್ಲಿ ಹಲವು ಕೃಷಿ ಹೊಂಡ ಅಸ್ತಿತ್ವದಲ್ಲಿಲ್ಲ. ಈ ಬಗ್ಗೆ ಫಲಾನುಭವಿಗಳೇ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಬರಗಾಲ ಹಾಗೂ ಸಂಕುಚಿತಗೊಂಡ ಹಿಡುವಳಿಯ ಪರಿಣಾಮ ಕೃಷಿ ಹೊಂಡಗಳನ್ನು ಮುಚ್ಚಲಾಗುತ್ತಿದೆ’ ಎಂದು ವಿವರಿಸಿದರು.

ಇದಕ್ಕೆ ಶಾಸಕ ಎಂ.ಚಂದ್ರಪ್ಪ ಹಾಗೂ ಶಾಸಕಿ ಕೆ.ಪೂರ್ಣಿಮಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ‘ಭೂಮಿಯಲ್ಲಿ ನೀರು ಇಂಗಿಸಿ ಅಂತರ್ಜಲ ಹೆಚ್ಚಿಸುವ ಉದ್ದೇಶದಿಂದ ಹೊಂಡ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಸರ್ಕಾರಿ ಅನುದಾನ ಪಡೆದು ಕೃಷಿ ಹೊಂಡ ಮುಚ್ಚುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶಬಾಬು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ಯೋಗೇಶ್‌, ಜಿಲ್ಲಾಧಿಕಾರಿ ಆರ್.ವಿನೋತ್‌ ಪ್ರಿಯಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT