ಬುಧವಾರ, ನವೆಂಬರ್ 25, 2020
19 °C
ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿಮತ

ಸಾಣೇಹಳ್ಳಿ ನಾಟಕೋತ್ಸವ ನಾಡಹಬ್ಬ ಇದ್ದಂತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಸಾಣೇಹಳ್ಳಿಯ ನಾಟಕೋತ್ಸವ ನಾಡಹಬ್ಬ ಇದ್ದಂತೆ. ನಾಟಕೋತ್ಸವದ ಶಿಸ್ತು, ಅಚ್ಚುಕಟ್ಟುತನ, ಮಕ್ಕಳ ನೃತ್ಯರೂಪಕ, ಸುಶ್ರಾವ್ಯ ವಚನ ಸಂಗೀತ ಹಾಗೂ ನಾಟಕಗಳು ನಮ್ಮೆಲ್ಲರ ನೋವುಗಳನ್ನು ಮರೆಸುತ್ತವೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿಪ್ರಾಯಪಟ್ಟರು.

ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಅಂತರ್ಜಾಲ ನಾಟಕೋತ್ಸವದ ಸಮಾರೋಪ ಸಮಾರಂಭದ ಅಂಗವಾಗಿ ಶನಿವಾರ ಹಂಚಿಕೊಂಡ ವಿಡಿಯೊ ಸಂದೇಶದಲ್ಲಿ ಅವರು ಸಾಣೇಹಳ್ಳಿ ರಂಗಭೂಮಿ ಹಾಗೂ ಮಠದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

‘ಕೊರೊನಾ ಕಾರಣದಿಂದ ಕಾರ್ಯಕ್ರಮದ ಸ್ವರೂಪ ಬದಲಾಗಿದೆ. ಅಂತರ್ಜಾಲದ ಮೂಲಕ ನಾಟಕೋತ್ಸವ ನಡೆಸಿದ್ದು ಶ್ಲಾಘನೀಯ. ಇಂತಹ ನಾಟಕೋತ್ಸವದಲ್ಲಿ ಪ್ರತ್ಯಕ್ಷವಾಗಿ ಪಾಲ್ಗೊಳ್ಳುವಂತಹ ಸಂದರ್ಭ ಮತ್ತೆ ಸೃಷ್ಟಿಯಾಗಲಿದೆ. ಇದಕ್ಕೆ ಅಗತ್ಯ ನೆರವು ನೀಡಲು ಸರ್ಕಾರ ಸಿದ್ಧವಿದೆ’ ಎಂದು ಆಶ್ವಾಸನೆ ನೀಡಿದರು.

‘350 ಮನೆಗಳಿರುವ ಹಳ್ಳಿಯಲ್ಲಿ ನಡೆಯುವ ನಾಟಕೋತ್ಸವ ರಾಜ್ಯದ ಗಮನ ಸೆಳೆದಿದೆ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಗ್ರಾಮೀಣ ಪ್ರದೇಶದಲ್ಲಿದ್ದೇ ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣ, ಧರ್ಮ, ಸಮಾಜಸೇವೆ, ಸಾಹಿತ್ಯ.. ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ್ದಾರೆ. ನಾಡಿನ ಅಭಿವೃದ್ಧಿ ಕೇವಲ ಆರ್ಥಿಕತೆ, ಶೈಕ್ಷಣಿಕ, ಸಾಮಾಜಿಕ ಪ್ರಗತಿಯನ್ನು ಅವಲಂಬಿಸಿಲ್ಲ. ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಅವಲಂಬಿಸಿದೆ ಎನ್ನುವುದು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಸ್ಪಷ್ಟ ಅಭಿಪ್ರಾಯವಾಗಿತ್ತು’ ಎಂದು ಸ್ಮರಿಸಿಕೊಂಡರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ, ‘ಅನ್ನ, ಅಕ್ಷರ ಹಾಗೂ ಔಷಧ ವ್ಯಾಪಾರದ ಸರಕುಗಳಾಗಿವೆ. ಈ ಸರಕಿನ ಸಂಸ್ಕೃತಿಯನ್ನು ತಪ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿಯನ್ನು ರೂಪಿಸಿದೆ. ಇದರಿಂದ ಹೊಸ ಪೀಳಿಗೆಗೆ ಅನುಕೂಲವಾಗಲಿದೆ. 6ನೇ ತರಗತಿಯವರೆಗೆ ಪ್ರಾದೇಶಿಕ ಭಾಷೆಯಲ್ಲಿಯೇ ಶಿಕ್ಷಣ ಪಡೆಯುವ ಅಂಶವನ್ನು ಇದು ಒಳಗೊಂಡಿದೆ’ ಎಂದು ಹೇಳಿದರು.

‘ಪಾಶ್ಚಿಮಾತ್ಯರು ರೂ‍ಪಿಸಿದ ಶಿಕ್ಷಣ ನೀತಿ ದೇಶವನ್ನು ಪ್ರಭಾವಿಸಿದೆ. ಮೆಕಾಲೆ, ಕಾರ್ಲ್‌ಮಾರ್ಕ್ಸ್‌‌ ಶಿಕ್ಷಣ ವ್ಯವಸ್ಥೆಯ ಮೇಲೆ ಪ್ರಭಾವ ಬೀರಿದ್ದಾರೆ. ಹೀಗಾಗಿ, ಭಾರತದ ಮೇಲೆ ದಾಳಿ ನಡೆಸಿದ ಅಲೆಕ್ಸಾಂಡರ್‌ ನಾಯಕನಂತೆ ರೂಪುಗೊಂಡಿದ್ದಾನೆ. ಅಲೆಕ್ಸಾಂಡರ್‌ನನ್ನು ಎದುರಿಸಿದ ಪುರೂರವನ ಶೌರ್ಯ, ಇಮ್ಮಡಿ ಪುಲಿಕೇಶಿ, ರಾಣಾ ಪ್ರತಾಪ್ ಸಿಂಹ ಅವರ ಪರಾಕ್ರಮ ಕಾಣಲೇ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಏಳು ದಶಕಗಳ ಶಿಕ್ಷಣ ವ್ಯವಸ್ಥೆ ನಮ್ಮ ಸ್ವಂತಿಕೆಗಳ ಬಗ್ಗೆ ಕೀಳರಿಮೆ ಮೂಡಿಸಿದೆ. ಕಾಲೇಜು ಮೆಟ್ಟಿಲೇರಿದ ಯುವಕ ಕೃಷಿ ಕೆಲಸಕ್ಕೆ ಹಿಂದೇಟು ಹಾಕುವ ವ್ಯವಸ್ಥೆ ರೂಪುಗೊಂಡಿದೆ. ಮೂಲ ಕಸುಬುಗಳ ಬಗ್ಗೆ ಅಸಡ್ಡೆ ಮೂಡಿದೆ. ಪದವಿಗಳು ಉದ್ಯೋಗ ಸೃಷ್ಟಿಸುವ ಬದಲು ಪದವೀಧರರ ಬದುಕು ಅತಂತ್ರವಾಗುವಂತೆ ಮಾಡಿದೆ. ನೂತನ ಶಿಕ್ಷಣ ನೀತಿಯಿಂದ ಕಲೆ, ಸಂಸ್ಕೃತಿ, ಸಾಹಿತ್ಯ ಹಾಗೂ ಕ್ರೀಡೆ ಪಠ್ಯದ ಭಾಗವಾಗಲಿವೆ’ ಎಂದು ಹೇಳಿದರು.

ಶಾಸಕ ಗೂಳಿಹಟ್ಟಿ ಡಿ.ಶೇಖರ್ ‘ಎಳೆ ಚಿಗುರು’ ಕೃತಿ ಬಿಡುಗಡೆ ಮಾಡಿದರು. ಬಿಇಒ ಬಿ.ಎಲ್.ಜಯಪ್ಪ ಕೃತಿ ಕುರಿತು ಮಾತನಾಡಿದರು. ಕಾರ್ಯಕ್ರಮದ ನಂತರ ‘ಶರಣ ಸತಿ - ಲಿಂಗ ಪತಿ’ ನಾಟಕ ಪ್ರದರ್ಶನಗೊಂಡಿತು.

 ಕೇಂದ್ರ ಸರ್ಕಾರದ ತ್ರಿಭಾಷಾ ಸೂತ್ರ ಹೇರಿಕೆಯಲ್ಲ. ದೇಶ, ವಿದೇಶದ ಯಾವುದೇ ಭಾಷೆಯನ್ನು ಕಲಿಯಲು ಸಿಗುವ ಅವಕಾಶ. ಇದು ಆತ್ಮವಿಶ್ವಾಸ ಮೂಡಿಸುತ್ತದೆ.
ಸಿ.ಟಿ.ರವಿ, ಕನ್ನಡ ಮತ್ತು ಸಂಸ್ಕೃತಿ ಸಚಿವ

ಕೊರೊನಾ ಸೋಂಕು ಆವರಿಸಿಕೊಂಡ ಸಂದಿಗ್ಧ ಕಾಲದಲ್ಲಿ ಮಾನಸಿಕ ಸ್ಥೈರ್ಯ ತುಂಬುವ ಅಗತ್ಯವಿದೆ. ನಾಟಕೋತ್ಸವದ ಮೂಲಕ ಸ್ಥೈರ್ಯ ತುಂಬುವ ಕೆಲಸ ಮಾಡಿದ್ದು ಶ್ಲಾಘನೀಯ.
ಗೂಳಿಹಟ್ಟಿ ಡಿ.ಶೇಖರ್, ‌ಶಾಸಕ, ಹೊಸದುರ್ಗ

ಪಂಥಕ್ಕಿಂತ ಮನುಷ್ಯತ್ವ ಮುಖ್ಯ: ಸ್ವಾಮೀಜಿ

ಕೊರೊನಾ ಸೃಷ್ಟಿಸಿದ ತಲ್ಲಣಕ್ಕೆ ಕಲಾವಿದರ ಬದುಕು ದುರ್ಬರವಾಗಿದೆ. ಎರಡು ಹೊತ್ತಿನ ಊಟವೂ ಸಿಗದ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಎಡ–ಬಲ ಪಂಥಗಳಿಗಿಂತ ಮನುಷ್ಯತ್ವ ಮುಖ್ಯವಾಗುತ್ತದೆ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

‘ಕೊರೊನಾ ಸೋಂಕಿನ ಕಾರಣಕ್ಕೆ ಸಾಣೇಹಳ್ಳಿ ರಂಗಶಾಲೆ ಮತ್ತು ಶಿವಸಂಚಾರ ಕ್ರಿಯಾಶೀಲ ಬಾಹ್ಯ ಚಟುವಟಿಕೆಗೆ ಅವಕಾಶವಾಗಿಲ್ಲ. ಆಂತರಿಕವಾಗಿ ರಂಗಚಟುವಟಿಕೆ ನಡೆಯಬೇಕು ಎನ್ನುವ ಸದಾಶಯದಿಂದ ಅಂತರ್ಜಾಲ ನಾಟಕೋತ್ಸವ ನಡೆಸಲಾಗಿದೆ. ಮನುಷ್ಯ ಒಳ್ಳೆಯವನಾಗಿ ಬದುಕಲು ಬೇಕಾದ ಎಲ್ಲ ಪಾಠಗಳನ್ನೂ ರಂಗಭೂಮಿ ಕಲಿಸುತ್ತದೆ. ಇಂತಹ ಕಲಾವಿದರ ಜೀವನಕ್ಕೆ ನೆರವಾಗುವ ಜವಾಬ್ದಾರಿ ಸರ್ಕಾರ ಮತ್ತು ರೆಪರ್ಟರಿಗಳ ಮೇಲಿದೆ’ ಎಂದು ಹೇಳಿದರು.

‘ವಿಜ್ಞಾನದ ವೇಗಕ್ಕೆ ಕೊರೊನಾ ತಡೆ’

ವಿಜ್ಞಾನ– ತಂತ್ರಜ್ಞಾನದ ವೇಗಕ್ಕೆ ಕೊರೊನಾ ತಡೆವುಂಟು ಮಾಡಿದೆ. ಜಗತ್ತು ಒಂದು ಕ್ಷಣ ಆತ್ಮಾವಲೋಕನ ಮಾಡಿಕೊಳ್ಳುವವ ಸ್ಥಿತಿ ನಿರ್ಮಾಣವಾಗಿದೆ ಎಂದು ಇಸ್ರೊ ಮಾಜಿ ಅಧ್ಯಕ್ಷ ಎ.ಎಸ್‌.ಕಿರಣ್‌ ಕುಮಾರ್ ಅಭಿಪ್ರಾಯಪಟ್ಟರು.

ನಾಟಕೋತ್ಸವದ ಸಮಾರೋಪ ನುಡಿಗಳನ್ನಾಡಿದ ಅವರು, ‘ಅರಿವು ಹೆಚ್ಚಿಸಿಕೊಳ್ಳಲು, ಜೀವನ ಸುಗಮಗೊಳಿಸಿಕೊಳ್ಳಲು ವಿಜ್ಞಾನ ನೆರವಾಗುತ್ತಿದೆ. ಮುಂಬರುವ ಕೆಲವೇ ವರ್ಷಗಳಲ್ಲಿ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಪ್ರಮುಖವಾದ ಹೆಜ್ಜೆಗಳನ್ನು ಇಡಲಿದೆ. ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನ ನೆರವಿಗೆ ಬರಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು