ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನದ್ದು ಒಡೆದು ಆಳುವ ನೀತಿ: ಗೋವಿಂದ ಕಾರಜೋಳ

Published 7 ಏಪ್ರಿಲ್ 2024, 16:17 IST
Last Updated 7 ಏಪ್ರಿಲ್ 2024, 16:17 IST
ಅಕ್ಷರ ಗಾತ್ರ

ಹಿರಿಯೂರು: ‘ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ದೇಶವನ್ನು ಅಭಿವೃದ್ಧಿ ಮಾಡಲಿಲ್ಲ. ದೀನ–ದಲಿತರ ಉದ್ಧಾರ ಆಗಲಿಲ್ಲ. ಆದರೆ ಜಾತಿ ಜಾತಿಗಳ ಮಧ್ಯೆ ವಿಷಬೀಜ ಬಿತ್ತಿ, ದೇಶದಲ್ಲಿ ಒಡೆದು ಆಳುವ ನೀತಿಗೆ ಕಾಂಗ್ರೆಸ್ ಕುಖ್ಯಾತಿ ಪಡೆದಿದೆ’ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಆರೋಪಿಸಿದರು.

ನಗರದಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಸಮನ್ವಯ ಸಮಿತಿ ಸಭೆ ಹಾಗೂ ಚುನಾವಣಾ ಪೂರ್ವ ಸಿದ್ಧತಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಕಾಂಗ್ರೆಸ್ ಆಡಳಿತದಲ್ಲಿ ಭಯೋತ್ಪಾದಕರು ಹೆಚ್ಚಾದರು. ಅಂದು ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಉಗ್ರರಿಗೆ ಬಲಿಯಾದರು. ಕುಟುಂಬದ ಉದ್ಧಾರಕ್ಕಾಗಿ ಕಾಂಗ್ರೆಸ್ ನಿರಂತರವಾಗಿ ರಾಜಕಾರಣ ಮಾಡಿಕೊಂಡು ಬರುತ್ತಿದೆ.  ಅಂಬೇಡ್ಕರ್ ಅವರಿಗೆ ‘ಭಾರತ ರತ್ನ’ ನೀಡಲು ಕಾಂಗ್ರೆಸ್‌ನಿಂದ ಸಾಧ್ಯವಾಗಲಿಲ್ಲ. ಈ ಕ್ಷೇತ್ರದ ರಾಜಕೀಯ ಮುತ್ಸದ್ದಿ ಕೆ.ಎಚ್. ರಂಗನಾಥ ಅವರನ್ನು ಹೀನಾಯವಾಗಿ ನಡೆಸಿಕೊಂಡರು. ಕಾಂಗ್ರೆಸ್ ವರ್ತನೆಯಿಂದ ಬೇಸರಗೊಂಡಿದ್ದ ಡಿ. ಮಂಜುನಾಥರು ಜನತಾಪಕ್ಷ ಸೇರಿದರು’ ಎಂದು ದೂರಿದರು.

‘ಅಕ್ಕಿ‌, ಬೇಳೆ, ರಾಗಿ, ಮೊಟ್ಟೆ ಕೊಡುತ್ತಿದ್ದೇವೆ ಎಂದು ಹೇಳುವ ಸಿದ್ದರಾಮಯ್ಯ ಅವರಿಗೆ, 21‌ನೇ ಶತಮಾನದ ಜನರಿಗೆ ಬೇಕಾಗಿರುವುದು ಶಿಕ್ಷಣ, ಕುಡಿಯುವ ನೀರು, ನೀರಾವರಿ, ಮೂಲಸೌಕರ್ಯ ಹಾಗೂ ಅಭಿವೃದ್ಧಿ ಎಂಬುದು ಮರೆತು ಹೋದಂತಿದೆ. ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಿಯಾಗಿ ಕಳಂಕ ರಹಿತ ಆಡಳಿತ ನಡೆಸಿದ್ದಾರೆ. ಹೀಗಾಗಿ ಈ ಬಾರಿ 400ಕ್ಕೂ ಹೆಚ್ಚು ಸ್ಥಾನ ಗೆಲ್ಲುವುದು ಖಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ದೇಶದ ಹಿತದೃಷ್ಟಿಯಿಂದ ಈ ಚುನಾವಣೆ ಮಹತ್ವದ್ದಾಗಿದೆ. 2019ರ ಚುನಾವಣೆಯಲ್ಲಿ ರಾಜ್ಯದಲ್ಲಿ 25 ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿತ್ತು. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಕಾರಣ ಎಲ್ಲಾ 28 ಕ್ಷೇತ್ರಗಳನ್ನುಗೆಲ್ಲಬೇಕು. ಅಲ್ಪ ಅವಧಿಗೆ ಪ್ರಧಾನಿಯಾಗಿದ್ದ ದೇವೇಗೌಡರು, 45 ವರ್ಷದ ತಮ್ಮ ರಾಜಕೀಯ ಬದುಕಿನಲ್ಲಿ ರೈತರ ಪರ ಹೋರಾಟ ನಡೆಸುತ್ತಾ ಬಂದಿರುವ ಯಡಿಯೂರಪ್ಪ ನಮ್ಮ ಶಕ್ತಿ. ರೈತರ ಖಾತೆಗೆ ಕೇಂದ್ರ ₹ 6,000, ರಾಜ್ಯ ಸರ್ಕಾರ ₹ 4,000 ಹಾಕುತ್ತಿತ್ತು. ಸಿದ್ದರಾಮಯ್ಯನವರು ಅದಕ್ಕೆ ಕತ್ತರಿ ಹಾಕಿದ್ದಾರೆ’ ಎಂದು ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಆರೋಪಿಸಿದರು.

‘ದೇಶದಲ್ಲಿ ಬಿಜೆಪಿ ಆಡಳಿತಕ್ಕೆ ಬರುವ ಮುನ್ನ ಜಮ್ಮು–ಕಾಶ್ಮೀರದಲ್ಲಿ ದಿನನಿತ್ಯ ಕಾಳಗ ನಡೆಯುತ್ತಿತ್ತು. ಈಚೆಗೆ ಬೆಂಗಳೂರಿನಲ್ಲಿ ಬಾಂಬ್ ಸ್ಫೋಟವಾಗಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವ ಕಡೆಗಳಲ್ಲಿ ಘರ್ಷಣೆಗಳು ಸಹಜ ಎನ್ನುವಂತಾಗಿದೆ. ಅಂಬೇಡ್ಕರ್ ನಿಧನರಾದಾಗ ಶವಸಂಸ್ಕಾರಕ್ಕೆ ಜಾಗ ಕೊಡದ ಕಾಂಗ್ರೆಸ್ ಇದೀಗ ಅಂಬೇಡ್ಕರ್ ನಮ್ಮವರು ಎಂದು ಹೇಳಿಕೊಳ್ಳುತ್ತಿರುವುದು ನಾಚಿಕೆಯ ಸಂಗತಿ’ ಎಂದು ಟೀಕಿಸಿದರು.  

‘ಮುಖ್ಯಮಂತ್ರಿ ಸಿದ್ದರಾಮಯ್ಯ ದುರಹಂಕಾರದ ಸಿಎಂ ಆಗಿದ್ದಾರೆ. ಮೋದಿಯವರು ಕೊಡುವ ಅಕ್ಕಿಗೆ ಕೇವಲ ಚೀಲ ಕೊಟ್ಟು ಅಕ್ಕಿ ಕೊಟ್ಟಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಧರ್ಮಪುರ ಕೆರೆ ಸೇರಿದಂತೆ ನೀರಾವರಿ ಯೋಜನೆಗಳಿಗೆ ಅನುದಾನ ನೀಡಿದ ಯಶಸ್ಸು ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ಗೋವಿಂದ ಕಾರಜೋಳ ಅವರಿಗೆ ಸೇರುತ್ತದೆ’ ಎಂದು ವಿಧಾನಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಹೇಳಿದರು.

ಮುಖಂಡರಾದ ಎಂ. ರವೀಂದ್ರಪ್ಪ, ಡಿ. ಯಶೋಧರ, ಎಸ್. ಲಿಂಗಮೂರ್ತಿ, ಮಾಜಿ ಶಾಸಕ ಪಾವಗಡ ತಿಮ್ಮರಾಯಪ್ಪ, ಎನ್. ಆರ್. ಲಕ್ಷ್ಮೀಕಾಂತ್, ಎಂ ಜಯಣ್ಣ, ಹನುಮಂತರಾಯಪ್ಪ, ಎ. ಮುರಳಿ, ವಿ. ವಿಶ್ವನಾಥ್, ಸಿದ್ದಾರ್ಥ್ ತಿಪ್ಪಾರೆಡ್ಡಿ, ಮೀಸೆ ಮಹಾಲಿಂಗಪ್ಪ, ಜೆಜೆ ಹಳ್ಳಿ ಮಂಜುನಾಥ್, ವಕೀಲ ಶಿವಶಂಕರ್, ಶ್ರವಣಗೆರೆ ಶಿವಪ್ರಸಾದ್ ಗೌಡ, ರಾಜೇಶ್ವರಿ,ಎಚ್.ಆರ್ ತಿಮ್ಮಯ್ಯ, ಬಬ್ಬೂರು ಸುರೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT