ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿವಾಳ ಜಾಗೃತಿ ಯಾತ್ರೆಗೆ ಶಿವಮೂರ್ತಿ ಮುರುಘಾ ಶರಣರು ಚಾಲನೆ

Last Updated 28 ಸೆಪ್ಟೆಂಬರ್ 2018, 10:36 IST
ಅಕ್ಷರ ಗಾತ್ರ

ಚಿತ್ರದುರ್ಗ: ಮಡಿವಾಳ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ ಅವರ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಮಡಿವಾಳ ಜಾಗೃತಿ ಸಂಚಲನಾ ಯಾತ್ರೆಗೆ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಶುಕ್ರವಾರ ಚಾಲನೆ ನೀಡಿದರು.

ಚಿತ್ರದುರ್ಗದಿಂದ ಹೊರಟ ಯಾತ್ರೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಲಿದೆ. ಮಡಿವಾಳ ಸಮುದಾಯದ ಸಮಸ್ಯೆ ಹಾಗೂ ಬೇಡಿಕೆಗಳ ಕುರಿತು ಬೆಳಕು ಚೆಲ್ಲಲಿದೆ. ಬಸವ ಮಾಚಿದೇವ ಸ್ವಾಮೀಜಿ ಅವರ ಜಂಗಮ ದೀಕ್ಷೆಯ 20ನೇ ವಸಂತೋತ್ಸವ ಹಾಗೂ 35ನೇ ಜಯಂತ್ಯುತ್ಸವದ ಅಂಗವಾಗಿ ಜ.5 ಮತ್ತು 6ರಂದು ಆಯೋಜಿಸಿದ ಮಹಾಸಮ್ಮೇಳನಕ್ಕೆ ಯಾತ್ರೆಯ ಮೂಲಕ ಜನರನ್ನು ಆಹ್ವಾನಿಸಲಾಗುತ್ತಿದೆ.

ಯಾತ್ರೆಗೆ ಚಾಲನೆ ಸಿಗುವುದಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಸವ ಮಾಚಿದೇವ ಸ್ವಾಮೀಜಿ, ‘ಸಾಮಾಜಿಕ ವ್ಯವಸ್ಥೆಯಲ್ಲಿ ಮಡಿವಾಳ ಸಮುದಾಯ ತೀರಾ ಹಿಂದುಳಿದಿದೆ. ಸಮುದಾಯದಲ್ಲಿ ಜಾಗೃತಿ ಮೂಡಿಸಲು ಹಾಗೂ ಸಂಘಟನೆ ಮಾಡುವ ಉದ್ದೇಶದಿಂದ ಮಹಾಸಮ್ಮೇಳನ ಆಯೋಜಿಸಲಾಗಿದೆ. ದುಸ್ತರವಾದ ಬದುಕಿನಿಂದ ಸಮುದಾಯದ ಜನರನ್ನು ಹೊರತರಲು ಗಟ್ಟಿಯಾದ ಹೋರಾಟ ರೂಪಿಸಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘ಮಡಿವಾಳ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಿದ್ದು ವಿರಳ. ಮಠ ಸ್ಥಾಪನೆಯಾಗಿ 10 ವರ್ಷ ಕಳೆದರೂ ಸರ್ಕಾರ ಉದಾರ ನೆರವು ನೀಡಿಲ್ಲ. ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ₹ 50 ಲಕ್ಷ ಹಾಗೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ₹ 50 ಲಕ್ಷ ಅನುದಾನ ಸಿಕ್ಕಿದೆ. ಭಕ್ತರ ನೆರವಿನಿಂದ ಗುರುಪೀಠ ನಡೆಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಸಮುದಾಯದ ಬಹುತೇಕರು ಬಟ್ಟೆ ತೊಳೆಯುವ ಹಾಗೂ ಇಸ್ತ್ರಿ ಮಾಡುವ ಕೆಲಸ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಬಟ್ಟೆ ತೊಳೆಯಲು ಆಧುನಿಕ ಯಂತ್ರೋಪಕರಣಗಳನ್ನು ಒದಗಿಸಿ ಉಚಿತ ವಿದ್ಯುತ್‌ ಸೌಲಭ್ಯ ಕಲ್ಪಿಸಬೇಕು. ಮಡಿವಾಳ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು’ ಎಂದು ಆಗ್ರಹಿಸಿದರು.

‘ಮಡಿವಾಳ ಮಾಚಿದೇವರ ಮೂಲ ಸ್ಥಾನವಾದ ದೇವರಹಿಪ್ಪರಗಿಯ ಮಾಚಿದೇವರ ದೇವಸ್ಥಾನ, ಕಾರಿಮನೆಯಲ್ಲಿರುವ ಮಾಚಿದೇವರ ಸ್ಮಾರಕವನ್ನು ಸರ್ಕಾರ ಸಂರಕ್ಷಣೆ ಮಾಡಬೇಕು. ವಿಶ್ವವಿದ್ಯಾಲಯ, ಪ್ರಮುಖ ಬಸ್‌ ನಿಲ್ದಾಣಕ್ಕೆ ಶರಣ ಮಾಚಿದೇವರ ಹೆಸರಿಡಬೇಕು. ವಿಧಾನಪರಿಷತ್ತಿನಲ್ಲಿ ಸಮುದಾಯಕ್ಕೆ ಒಂದು ಸ್ಥಾನವನ್ನು ಶಾಶ್ವತವಾಗಿ ನೀಡಬೇಕು’ ಎಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಮಡಿವಾಳ ಯುವ ಘಟಕದ ಅಧ್ಯಕ್ಷ ಧ್ರುವಕುಮಾರ್‌, ಸಿದ್ದಲಿಂಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT