ಸೋಮವಾರ, ಆಗಸ್ಟ್ 8, 2022
21 °C
ತ್ರಿವಳಿ ಕೊಲೆ ಪ್ರಕರಣ ಭೇದಿಸಿದ ಪೊಲೀಸರು

ಹಂದಿ ವ್ಯವಹಾರದ ವೈಷಮ್ಯಕ್ಕೆ ತ್ರಿವಳಿ ಕೊಲೆ, ಆರು ಜನರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ನಾಯಕನಹಟ್ಟಿಯಲ್ಲಿ ನಡೆದಿದ್ದ ಮೂವರು ಹಂದಿ ಸಾಕಾಣಿಕೆದಾರರ ಕೊಲೆ ಪ್ರಕರಣ ಭೇದಿಸಿದ ಪೊಲೀಸರು ಆರು ಆರೋಪಿಗಳನ್ನು ಬಂಧಿಸಿದ್ದಾರೆ. ಹಳೆ ವೈಷಮ್ಯ ಹಾಗೂ ಹಂದಿ ವ್ಯವಹಾರಕ್ಕೆ ಉಂಟಾದ ತೊಡಕಿನಿಂದ ಹತ್ಯೆ ನಡೆದಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಕೊಲೆ ಆರೋಪಿಗಳೂ ಹಂದಿ ಸಾಕಾಣಿಕೆದಾರರೇ ಆಗಿದ್ದು, ದೂರದ ಸಂಬಂಧಿಗಳು ಹೌದು. ಕಳವಾಗಿದ್ದ 25 ಹಂದಿಗಳಲ್ಲಿ ನಾಲ್ಕನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಸೆ.11ರವರೆಗೆ ಪೊಲೀಸ್‌ ವಶಕ್ಕೆ ಪಡೆಯಲಾಗಿದೆ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಕೊರಚರ ಬೀದಿಯ ಸಿದ್ಧಪ್ಪ (35), ಮಾರುತಿ (20), ಮಂಜಪ್ಪ (28), ಸುರೇಶ (22), ಚೌಡಪ್ಪ (35) ಹಾಗೂ ಕೃಷ್ಣ (26) ಬಂಧಿತರು. ಇನ್ನೂ ಇಬ್ಬರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ನಾಯಕನಹಟ್ಟಿಯ ಸಮುದಾಯ ಆರೋಗ್ಯ ಕೇಂದ್ರದ ಬಳಿ ಸೀನಪ್ಪ (53), ಪುತ್ರ ಯಲ್ಲೇಶ್‌ (22) ಹಾಗೂ ಸಹೋದರನ ಪುತ್ರ ಮಾರೇಶ (23) ಎಂಬುವರನ್ನು ಆ.17ರಂದು ನಸುಕಿನಲ್ಲಿ ಆರೋಪಿಗಳು ಹತ್ಯೆ ಮಾಡಿದ್ದರು.

ಹಂದಿ ಸಾಕಾಣಿಕೆ ಹಗೆತನ: ‘ಸಿದ್ಧಪ್ಪ, ಸುರೇಶ ಹಾಗೂ ಮಂಜಪ್ಪ ಸಹೋದರರು. ಇವರ ಇಬ್ಬರು ಅಕ್ಕಂದಿರನ್ನು ನಾಯಕನಹಟ್ಟಿಗೆ ಮದುವೆ ಮಾಡಿ ಕೊಡಲಾಗಿದೆ. ನಾಯಕನಹಟ್ಟಿ ಸುತ್ತ ಹಂದಿಗಳು ಚೆನ್ನಾಗಿ ಬೆಳೆಯುತ್ತವೆ ಎಂಬ ಕಾರಣಕ್ಕೆ ಹಂದಿ ಸಾಕಾಣಿಕೆಗೆ ಸಿದ್ಧಪ್ಪ ಒಲವು ತೋರಿದ್ದರು. ಈ ವಿಚಾರವಾಗಿ ಸೀನಪ್ಪ ಹಾಗೂ ಸಿದ್ಧಪ್ಪನ ಕುಟುಂಬದ ನಡುವೆ ಹಗೆತನ ಬೆಳೆದಿತ್ತು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ನಾಯಕನಹಟ್ಟಿ, ಮೊಳಕಾಲ್ಮುರು ಹಾಗೂ ತಳಕು ಗ್ರಾಮದ ಸಂಬಂಧಿಕರ ಬಳಿ ಸಿದ್ಧಪ್ಪ ಕೆಲ ಹಂದಿಗಳನ್ನು ಬಿಟ್ಟಿದ್ದರು. ಮೂರು ಸ್ಥಳದಲ್ಲಿದ್ದ ಹಂದಿಗಳು ಏಕಕಾಲಕ್ಕೆ ಕಳವಾಗಿದ್ದವು. ಸೀನಪ್ಪನ ಪುತ್ರ ತಿಪ್ಪೇಸ್ವಾಮಿ ಆಂಧ್ರಪ್ರದೇಶದ ತಂಡವೊಂದನ್ನು ಕರೆಸಿ ಕಳವು ಮಾಡಿಸಿದ್ದನು. ಇದು ಸಿದ್ಧಪ್ಪನಿಗೆ ಗೊತ್ತಾಗಿ ಸೀನಪ್ಪನ ಹಂದಿ ಕಳವು ಮಾಡಲು ಸಂಚು ರೂಪಿಸಿದ್ದರು. ಇದಕ್ಕೆ ಅಡ್ಡಿಪಡಿಸುವವರನ್ನು ಹತ್ಯೆ ಮಾಡಲು ತೀರ್ಮಾನಿಸಿದ್ದರು’ ಎಂದು ವಿವರಿಸಿದರು.

ಬಾಡಿಗೆ ಲಾರಿಯಲ್ಲಿ ಬಂದಿದ್ದರು: ‘ಅ.16ರಂದು ರಾತ್ರಿ ಲಾರಿಯನ್ನು ಬಾಡಿಗೆ ಪಡೆದ ಆರೋಪಿಗಳು ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೂಲಕ ಭರಮಸಾಗರಕ್ಕೆ ಬಂದಿದ್ದಾರೆ. ಮಾರ್ಗ ಮಧ್ಯೆದಲ್ಲಿ ಮದ್ಯ ಸೇವಿಸಿ, ಡಾಬಾವೊಂದರಲ್ಲಿ ಊಟ ಮಾಡಿದ್ದಾರೆ. ಹಂದಿ ಹಿಡಿಯುವ ಬಲೆ, ಬಡಿಗೆಯೊಂದಿಗೆ ನಾಯಕನಹಟ್ಟಿಯ ಪಾದಗಟ್ಟೆಯ ಬಳಿಗೆ ಕಾದುಕುಳಿತಿದ್ದಾರೆ. ದೂರದಲ್ಲಿ ಲಾರಿ ನಿಲುಗಡೆ ಮಾಡಿಸಿ ಆರೋಪಿಗಳು ಹಂದಿ ಸಾಕಣೆ ಸ್ಥಳಕ್ಕೆ ಕಾಲ್ನಡಿಗೆಯಲ್ಲಿ ಸಾಗಿದ್ದರು’ ಎಂದು ಹೇಳಿದರು.

‘ಗಾಢ ನಿದ್ದೆಯಲ್ಲಿದ್ದ ಮೂವರ ಮೇಲೆ ದೊಣ್ಣೆಯಿಂದ ಹಲ್ಲೆಗೆ ಮುಂದಾಗಿದ್ದಾರೆ. ಯಲ್ಲೇಶ ಹಾಗೂ ಮಾರೇಶ ಎದ್ದು ಓಡಲು ಪ್ರಯತ್ನಿಸಿದಾಗ ಮುಖಕ್ಕೆ ಖಾರದ ಪುಡಿ ಎರಚಿದ್ದಾರೆ. ಕೊಲೆಯ ಬಳಿಕ ಲಾರಿಯನ್ನು ತಂದು ಹಂದಿಗಳನ್ನು ಕಳವು ಮಾಡಿದ್ದರು’ ಎಂದು ವಿವರಿಸಿದರು.

ತರೀಕೆರೆ ಬಳಿ ಹಂದಿ ಬಿಟ್ಟರು: ಹಂದಿಗಳನ್ನು ವಾಹನದಲ್ಲಿ ಹಾಕಿಕೊಂಡು ರಾಣೆಬೆನ್ನೂರಿಗೆ ತೆರಳಿದ್ದಾರೆ. ಚೌಡಪ್ಪ ಎಂಬಾತ ನಾಲ್ಕು ಹಂದಿಗಳನ್ನು ಇಟ್ಟುಕೊಂಡಿದ್ದಾನೆ. ಉಳಿದ ಹಂದಿಗಳನ್ನು ಬೇರೊಬ್ಬರಿಗೆ ಮಾರಾಟ ಮಾಡಿದ್ದಾರೆ. ನಾಯಕನಹಟ್ಟಿಯಲ್ಲಿ ಹಂದಿ ಕಳವು ಹಾಗೂ ಕೊಲೆ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದನ್ನು ಗಮನಿಸಿದ ಖರೀದಿದಾರ ಅವುಗಳನ್ನು ಮರಳಿಸಿದ್ದಾನೆ. ವಿಚಲಿತರಾದ ಆರೋಪಿಗಳು ಮತ್ತೊಂದು ಸರಕು ಸಾಗಣೆ ವಾಹನದಲ್ಲಿ ತರೀಕೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಬಿಟ್ಟು ಬಂದಿದ್ದರು.

‘ಪೊಲೀಸರು ತನಿಖೆ ಆರಂಭಿಸಿದ ಮಾಹಿತಿ ಅರಿತ ದುಷ್ಕರ್ಮಿಗಳು ತಲೆಮರೆಸಿಕೊಂಡಿದ್ದರು. ನಾಲ್ಕು ದಿನಗಳ ಬಳಿಕ ಮನೆಗೆ ಮರಳಿ ಎಂದಿನಂತೆ ಕೆಲಸ ಮಾಡಿಕೊಂಡಿದ್ದರು. ಕೃತ್ಯ ನಡೆದ ಸ್ಥಳದಲ್ಲಿ ಲಭ್ಯವಾದ ತಾಂತ್ರಿಕ ಸಾಕ್ಷ್ಯದ ಆಧಾರದ ಮೇರೆಗೆ ಸೆ.7ರಂದು ರಾಣೆಬೆನ್ನೂರಿನಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ರಾಧಿಕಾ ತಿಳಿಸಿದರು.

ಏನಿದು ಹಳೆ ವೈಷಮ್ಯ?: ಕೊಲೆಯಾದ ಸೀನಪ್ಪ ಹಾಗೂ ಕೊಲೆ ಆರೋಪಿ ಸಿದ್ಧಪ್ಪನ ಕುಟುಂಬದ ನಡುವೆ ಹಲವು ವರ್ಷಗಳ ವೈಷಮ್ಯಕ್ಕೆ ಅನುಚಿತ ವರ್ತನೆಯೊಂದು ಕಾರಣವಾಗಿತ್ತು. ಸೀನಪ್ಪನ ತಂದೆ ಸಿದ್ಧಪ್ಪನ ತಾಯಿಯ ಕೈಹಿಡಿದು ಎಳೆದು ಅನುಚಿತವಾಗಿ ವರ್ತಿಸಿದ್ದನು. ಇದರಿಂದ ಮನನೊಂದ ಮಂಜಪ್ಪನ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದನು. ಮಾನಸಿಕ ಅಘಾತಕ್ಕೆ ಒಳಗಾದ ಸಿದ್ಧಪ್ಪನ ತಾಯಿ ಕೂಡ ಮೃತಪಟ್ಟಿದ್ದರು.

‘ಇದು ಎರಡು ಕುಟುಂಬಗಳ ಹಗೆತನಕ್ಕೆ ಕಾರಣವಾಗಿತ್ತು. ಸೀನಪ್ಪನ ಕುಟುಂಬದ ಮೇಲೆ ಹಗೆ ತೀರಿಸಿಕೊಳ್ಳಲು ಸಿದ್ಧಪ್ಪ ಹಾಗೂ ಸಹೋದರರು ಕಾಯುತ್ತಿದ್ದರು. ಸಂಬಂಧಿಕರ ಮನೆಯಲ್ಲಿ ನಡೆದ ಹಂದಿ ಕಳವು ಪ್ರಕರಣ ಕೊಲೆಗೆ ಪ್ರೇರೇಪಣೆ ನೀಡಿತು’ ಎಂದು ಎಸ್‌ಪಿ ರಾಧಿಕಾ ತಿಳಿಸಿದರು.

150 ಪೊಲೀಸರ ತನಿಖೆ: ತ್ರಿವಳಿ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು 150 ಪೊಲೀಸರನ್ನು ತನಿಖೆಗೆ ಬಳಸಿಕೊಂಡರು. ಹತ್ತು ತಂಡಗಳು ಹಲವು ಆಯಾಮದಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು.

‘ಕೃತ್ಯ ನಡೆದ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು, ವಿಧಿವಿಜ್ಞಾನ ತಜ್ಞರು ಹಾಗೂ ವೈದ್ಯಕೀಯ ಪರಿಣತರ ತಂಡ ಭೇಟಿ ನೀಡಿತ್ತು. ಆರಂಭಿಕ ಹಂತದಲ್ಲಿ ಸ್ಥಳದಲ್ಲಿ ಯಾವುದೇ ಸಾಕ್ಷ್ಯಗಳು ಲಭ್ಯವಾಗಲಿಲ್ಲ. ಸಿಸಿಟಿವಿ ದೃಶ್ಯ ಸೇರಿ ಕೆಲ ತಾಂತ್ರಿಕ ಸಾಕ್ಷ್ಯಗಳನ್ನು ಕಲೆಹಾಕಿದ ಬಳಿಕ ಸುಳಿವು ಲಭ್ಯವಾಯಿತು. ತನಿಖಾ ತಂಡಗಳು ಆಂಧ್ರಪ್ರದೇಶ ಹಾಗೂ ಕರ್ನಾಟಕದ ಹಲವು ಜಿಲ್ಲೆಗೆ ಭೇಟಿ ಆರೋಪಿಗಳನ್ನು ಪತ್ತೆ ಮಾಡಿದರು’ ಎಂದು ರಾಧಿಕಾ ವಿವರಿಸಿದರು.

ತನಿಖಾ ತಂಡದ ನೇತೃತ್ವ ವಹಿಸಿದ್ದ ಡಿವೈಎಸ್‌ಪಿ ಕೆ.ವಿ.ಶ್ರೀಧರ್‌ ಸೇರಿ ಅನೇಕರಿಗೆ ಕೊರೊನ ಸೋಂಕು ಅಂಟಿತು. ಕ್ವಾರಂಟೈನ್‌ ಕೇಂದ್ರದಲ್ಲಿ ಇದ್ದುಕೊಂಡೇ ತನಿಖೆಯನ್ನು ಮುಂದುವರಿಸಿದ್ದರು.

ಜಿಲ್ಲಾ ಹೆಚ್ಚುವರಿ ‍ಪೊಲೀಸ್‌ ವರಿಷ್ಠಾಧಿಕಾರಿ ಎಂ.ಬಿ.ನಂದಗಾವಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು