ಸೋಮವಾರ, ಫೆಬ್ರವರಿ 24, 2020
19 °C
ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಉಪಾಧ್ಯಕ್ಷ ಜಾರ್ಜ್ ಕುರಿಯನ್

ಜನವಿಕಾಸ ಯೋಜನೆಗೆ ಕೋಟೆನಗರಿ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿರುವ ಹಾಗೂ ಅಲ್ಪಸಂಖ್ಯಾತರು ಹೆಚ್ಚಾಗಿರುವ ಪ್ರದೇಶದಲ್ಲಿ ಮೂಲಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೊಳಿಸಿದ ‘ಪ್ರಧಾನಮಂತ್ರಿ ಜನವಿಕಾಸ ಯೋಜನೆ’ಗೆ ಚಿತ್ರದುರ್ಗ ನಗರ ಆಯ್ಕೆಯಾಗಿದೆ ಎಂದು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಉಪಾಧ್ಯಕ್ಷ ಜಾರ್ಜ್ ಕುರಿಯನ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ‘ಪ್ರಧಾನಮಂತ್ರಿ 15 ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆ’ಯಲ್ಲಿ ಅವರು ಮಾತನಾಡಿದರು.

‘ದೇಶದ 308 ಜಿಲ್ಲೆಯಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಹಾವೇರಿ, ಚಿತ್ರದುರ್ಗ, ಬಳ್ಳಾರಿ, ಕೊಪ್ಪಳ, ಬಾಗಲಕೋಟೆ, ರಾಯಚೂರು, ರಾಮನಗರ, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ, ಬೀದರ್, ತುಮಕೂರು, ಹಾಸನ, ಕೋಲಾರ ಸೇರಿ 22 ಜಿಲ್ಲೆಗಳ 28 ನಗರ ಆಯ್ಕೆಯಾಗಿವೆ. ಶೇ 25ಕ್ಕಿಂತ ಹೆಚ್ಚು ಮುಸ್ಲಿಮರು ವಾಸಿಸುವ ಪ್ರದೇಶಕ್ಕೆ ಒತ್ತು ನೀಡಲಾಗುತ್ತಿದೆ’ ಎಂದು ಸಭೆಗೆ ಮಾಹಿತಿ ಒದಗಿಸಿದರು.

‘ವಸತಿ ಶಾಲೆ, ಹಾಸ್ಟೆಲ್‌, ಐಟಿಐ, ಪಾಲಿಟೆಕ್ನಿಕ್‌, ಆಸ್ಪತ್ರೆ, ಕಾಲೇಜು, ತರಬೇತಿ ಕೇಂದ್ರ, ಕೌಶಲಾಭಿವೃದ್ಧಿ ಕೇಂದ್ರ, ನವೋದಯ ವಿದ್ಯಾಲಯ, ಕೇಂದ್ರೀಯ ವಿದ್ಯಾಲಯ, ಸಮುದಾಯ ಭವನ ಹಾಗೂ ಮಾರುಕಟ್ಟೆ ನಿರ್ಮಿಸಲು ಯೋಜನೆಯಲ್ಲಿ ಅವಕಾಶವಿದೆ. ಶೇ 60ರಷ್ಟು ಅನುದಾನವನ್ನು ಕೇಂದ್ರ ಹಾಗೂ ಶೇ 40ರಷ್ಟು ಅನುದಾನವನ್ನು ರಾಜ್ಯ ಭರಿಸಬೇಕಿದೆ. ಖಾಸಗಿ ಸಹಭಾಗಿತ್ವಕ್ಕೂ ಅವಕಾಶವಿದೆ’ ಎಂದರು.

ಅಲ್ಪಂಖ್ಯಾತರಿಗೆ 39 ಮನೆ

‘ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ಹಂಚಿಕೆ ಮಾಡಲಾದ 3,099 ಮನೆಗಳಲ್ಲಿ 39 ಮನೆಗಳನ್ನು ಅಲ್ಪಸಂಖ್ಯಾತ ಸಮುದಾಯಕ್ಕೆ ಒದಗಿಸಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಸತ್ಯಭಾಮ ಸಭೆಗೆ ಮಾಹಿತಿ ಒದಗಿಸಿದರು.

ಇದಕ್ಕೆ ಆಯೋಗದ ಉಪಾಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದರು. ‘ಶೇ 15ರಷ್ಟು ಅನುದಾನವನ್ನು ಅಲ್ಪಸಂಖ್ಯಾತ ಸಮುದಾಯಕ್ಕೆ ಮೀಸಲಿಡಬೇಕಲ್ಲವೇ’ ಎಂದು ಪ್ರಶ್ನಿಸಿದರು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರೇಖಾ ಪ್ರತಿಕ್ರಿಯಿಸಿ ‘ಈ ಬಗ್ಗೆ ಇನ್ನಷ್ಟು ಸ್ಪಷ್ಟತೆ ಬೇಕಿದೆ’ ಎಂದು ಮನವಿ ಮಾಡಿದರು.

‘ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿಗೆ ಪ್ರಧಾನಮಂತ್ರಿ 15 ಅಂಶಗಳ ಕಾರ್ಯಕ್ರಮಗಳಡಿ ₹5,029 ಕೋಟಿ ಅನುದಾನ ಒದಗಿಸಲಾಗಿದೆ. ಫಲಾನುಭವಿ ಆಧಾರಿತ ಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ ನಿಗದಿತ ಪ್ರಮಾಣದ ಮೀಸಲಾತಿ ಹಾಗೂ ಸೌಲಭ್ಯ ನೀಡಬೇಕು’ ಎಂದು ಕುರಿಯನ್ ಸೂಚನೆ ನೀಡಿದರು.

ಸಾಲ ಸೌಲಭ್ಯ ನಿರಾಕರಣೆ

‘ಸಾಲ ಸೌಲಭ್ಯಗಳು ಅಲ್ಪಸಂಖ್ಯಾತ ಸಮುದಾಯಕ್ಕೆ ದೊರೆಯುತ್ತಿಲ್ಲ’ ಎಂಬ ಜಿಲ್ಲಾ ಸಮಿತಿ ಸದಸ್ಯ ಮೊಹಮ್ಮದ್‌ ಆಕ್ಷೇಪಕ್ಕೆ ಸಂಬಂಧಿಸಿ ಸಭೆಯಲ್ಲಿ ಚರ್ಚೆ ನಡೆಯಿತು. ಸಾಲ ಸೌಲಭ್ಯ ನಿರಾಕರಣೆ ಮಾಡುತ್ತಿರುವುದಕ್ಕೆ ಆಯೋಗದ ಉಪಾಧ್ಯಕ್ಷರು ಬೇಸರ ವ್ಯಕ್ತಪಡಿಸಿದರು.

‘ಕರ್ನಾಟಕವಷ್ಟೇ ಅಲ್ಲ, ದೇಶದ ಎಲ್ಲೆಡೆ ಬ್ಯಾಂಕುಗಳು ಸಾಲ ಮಂಜೂರಾತಿಗೆ ಜನರನ್ನು ಅಲೆದಾಡಿಸುತ್ತಿವೆ. ಲೀಡ್‌ ಬ್ಯಾಂಕ್‌ ಇದನ್ನು ಗಮನಿಸಬೇಕು. ಶಿಕ್ಷಣ ಸಾಲ ಪಡೆಯಲು ಭದ್ರತೆ ಒದಗಿಸಬೇಕು ಎಂದು ಅಪೇಕ್ಷೆಪಡುವುದು ತಪ್ಪು’ ಎಂದು ಹೇಳಿದರು.

ಆಜಾದ್‌ ನಗರದ ಅಂಜುಮಾನ್‌ ಉರ್ದು ಪ್ರಾಥಮಿಕ ಶಾಲೆಯಲ್ಲಿ ಮೂಲ ಸೌಲಭ್ಯ ಕೊರತೆ, ಮದರಸಾ ಶಿಕ್ಷಣ ಸಂಸ್ಥೆಗಳು, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಕೊಳಚೆ ನಿರ್ಮೂಲನಾ ಮಂಡಳಿ ಪ್ರಗತಿಯ ಬಗ್ಗೆ ಚರ್ಚೆ ನಡೆಯಿತು.

‘ಆಯೋಗಕ್ಕೆ ಬಂದಿಲ್ಲ ದೂರು’

ಪೌರತ್ವ ನೋಂದಣಿ ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಪಿಆರ್‌) ಬಗ್ಗೆ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗಕ್ಕೆ ಯಾವುದೇ ದೂರು ಬಂದಿಲ್ಲ ಎಂದು ಆಯೋಗದ ಉಪಾಧ್ಯಕ್ಷ ಜಾರ್ಜ್ ಕುರಿಯನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಪೌರತ್ವ ತಿದ್ದುಪಡಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಹಾಗೂ ಅಸ್ಸಾಂ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ನ್ಯಾಯಾಲಯ ತೀರ್ಮಾನ ಕೈಗೊಳ್ಳಲಿದೆ. ಅರೆ ನ್ಯಾಯಿಕ ಸಂಸ್ಥೆಯಾಗಿರುವ ಆಯೋಗದ ಪ್ರತಿನಿಧಿಯಾಗಿ ಅಭಿಪ್ರಾಯ ವ್ಯಕ್ತಪಡಿಸಲು ಸಾಧ್ಯವಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಡಿಡಿಪಿಐ ಕೆ.ರವಿಶಂಕರ್‌ ರೆಡ್ಡಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು