ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೌರ್ಜನ್ಯ ನಡೆದರೂ ದೂರು ದಾಖಲಿಸಲು ಹಿಂದೇಟು

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶೆ ಕೆ.ಬಿ.ಗೀತಾ ಬೇಸರ
Published 18 ಜನವರಿ 2024, 16:08 IST
Last Updated 18 ಜನವರಿ 2024, 16:08 IST
ಅಕ್ಷರ ಗಾತ್ರ

ಚಿತ್ರದುರ್ಗ: ಮಹಿಳೆಯರು ಆರ್ಥಿಕ ಸಬಲತೆ ಸಾಧಿಸಿದರೆ ಅನೇಕ ಸಮಸ್ಯೆಗಳು ದೂರವಾಗುತ್ತವೆ. ದೌರ್ಜನ್ಯ, ಹಿಂಸೆ ನಡೆದರೆ ಕೂಡಲೇ ದೂರು ದಾಖಲಿಸಬೇಕು. ಆದರೆ ಈ ವಿಚಾರದಲ್ಲಿ ಹಿಂದೇಟು ಹಾಕುತ್ತಿದ್ದಾರೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶೆ ಕೆ.ಬಿ.ಗೀತಾ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಗುರುವಾರ ಆಯೋಜಿಸಿದ್ದ ‘ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ’ ಅನುಷ್ಠಾನದಲ್ಲಿ ಭಾಗೀದಾರ ಇಲಾಖೆಗಳ ಪಾತ್ರದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ‘ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆಯ ಬಲ ಇದ್ದರೂ ಹಿಂಸೆ ಪ್ರಕರಣಗಳು ಕಡಿಮೆಯಾಗಿಲ್ಲ’ ಎಂದರು.

‘ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಸಂರಕ್ಷಣಾಧಿಕಾರಿಗಳು ಕೌಟುಂಬಿಕ ಹಿಂಸೆಯ ಪ್ರಕರಣಗಳನ್ನು ಹತ್ತಿರದಿಂದ ನೋಡಿರುತ್ತೀರಿ. ಇಂತಹ ಸಂದರ್ಭದಲ್ಲಿ ಅತ್ಯಂತ ಸೂಕ್ಷ್ಮವಾಗಿ ಪ್ರಕರಣಗಳನ್ನು ನಿರ್ವಹಿಸಬೇಕು. ಅಂತಃಕರಣದಿಂದ ಕಾರ್ಯನಿರ್ವಹಿಸಿ ನೊಂದವರಿಗೆ ಸಹಾಯ ಮಾಡಬೇಕು. ಸಂಬಂಧಪಟ್ಟವರ ವಿರುದ್ಧ ದೂರು ದಾಖಲಿಸಬೇಕು. ಇದರ ಆಧಾರದಲ್ಲಿ ನ್ಯಾಯಾಲಯಗಳು ನೊಂದವರಿಗೆ ರಕ್ಷಣೆ ನೀಡಿ ಪರಿಹಾರ ಒದಗಿಸುತ್ತವೆ’ ಎಂದು ತಿಳಿಸಿದರು.

‘ಮಹಿಳೆಯರ ಮೇಲಿನ ದೈಹಿಕ ಹಲ್ಲೆ, ನಿಂದನೆ, ಮಾನಸಿಕ, ಭಾವನಾತ್ಮಕ ಹಾಗೂ ಲೈಂಗಿಕ ಹಿಂಸೆಗಳು ಕೌಟುಂಬಿಕ ಹಿಂಸೆಗಳ ವ್ಯಾಪ್ತಿಗೆ ಬರುತ್ತವೆ. ಮಹಿಳೆ ಹಾಗೂ ಚಿಕ್ಕ ಮಕ್ಕಳಿಗೆ ಯಾವುದೇ ರೀತಿಯ ಕಿರುಕುಳ ನೀಡಿದರೆ ಅದು ಕೌಟುಂಬಿಕ ಹಿಂಸೆ ಅನಿಸಿಕೊಳ್ಳುತ್ತದೆ. ಮಹಿಳೆಯರ ಸಂರಕ್ಷಣಾ ಕಾಯ್ದೆ ಜಾರಿಯಾಗಿ 18 ವರ್ಷ ಕಳೆದರು ಸಹ ಇದರ ಜಾಗೃತಿ ಇಲ್ಲವಾಗಿದೆ’ ಎಂದರು.

‘ಕೌಟುಂಬಿಕ ಹಿಂಸೆಯ ಕುರಿತು ಸಂರಕ್ಷಣಾಧಿಕಾರಿಗಳು ವರದಿ ಸಲ್ಲಿಸುವಾಗ ಬಹಳ ಎಚ್ಚರಿಕೆವಹಿಸಬೇಕು. ಎಲ್ಲ ಅಂಶಗಳನ್ನು ನಿಖರವಾಗಿ ದಾಖಲಿಸಬೇಕು. ಇದರಿಂದ ಪ್ರಕರಣದ ವಿಶ್ಲೇಷಣೆ ಮಾಡಲು ನ್ಯಾಯಾಲಯಕ್ಕೆ ಸುಲಭವಾಗುತ್ತದೆ. ಇದರ ಜೊತೆಗೆ ಪ್ರಕರಣದ ಕುರಿತು ನಿರ್ಧಾರ ಕೈಗೊಳ್ಳಲು ಹಾಗೂ ನೊಂದ ಮಹಿಳೆಯರಿಗೆ ಪರಿಹಾರ ಕೊಡಿಸಲು ಸಹಾಯಕವಾಗಲಿದೆ’ ಎಂದು ಬಾಲನ್ಯಾಯ ಮಂಡಳಿ ಅಧ್ಯಕ್ಷೆ ಉಜ್ವಲ ವೀರಣ್ಣ ಸಿದ್ದಣ್ಣನವರ್‌ ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್‌, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ರಂಗಸ್ವಾಮಿ, ಬಾಲನ್ಯಾಯ ಮಂಡಳಿ ಸದಸ್ಯೆ ಸುಮನ ಎಸ್‌.ಅಂಗಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್‌.ಬಣಕಾರ್‌, ಸರಸ್ವತಿ ಕಾನೂನು ಕಾಲೇಜು ಪ್ರಾಂಶುಪಾಲೆ ಸುಧಾದೇವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಎನ್‌.ಪವಿತ್ರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ಸವಿತಾ, ಜಿಲ್ಲಾ ನಿರೂಪಣಾಧಿಕಾರಿ ಎಸ್‌.ವಿಜಯಕುಮಾರ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT