ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಒತ್ತಾಯ

Last Updated 5 ಮೇ 2020, 12:16 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯಲ್ಲಿ ತ್ವರಿತವಾಗಿ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಬೇಕು ಎಂದು ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ಒತ್ತಾಯಿಸಿ ಜಿಲ್ಲಾಡಳಿತಕ್ಕೆಮಂಗಳವಾರ ಮನವಿ ಸಲ್ಲಿಸಿದರು.

ರೈತರು ಮೆಕ್ಕೆಜೋಳ ಮಾರಾಟ ಮಾಡದೇ ಕಣದಲ್ಲಿ ಸಂಗ್ರಹ ಮಾಡಿದ್ದಾರೆ. ಪೂರ್ವ ಮುಂಗಾರು ಆರಂಭವಾಗಿದ್ದು, ಉಳುಮೆ ಕೈಗೊಳ್ಳಲು ರೈತರ ಬಳಿ ಹಣವಿಲ್ಲ. ಕೂಡಲೇ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಒತ್ತಾಯಿಸಿದರು.

‘ರಾಜ್ಯ ಹಾಲು ಒಕ್ಕೂಟ ಮಹಾಮಂಡಳಿ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮೆಕ್ಕೆಜೋಳ ಖರೀದಿಗೆ ಮುಂದಾಗಿದ್ದಾರೆ. ಪ್ರತಿ ಕ್ವಿಂಟಲ್‌ಗೆ ₹ 1,760ರಂತೆ ಖರೀದಿಸುವುದಾಗಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಬೆಂಬಲ ಬೆಲೆ ₹ 1,780 ಇದೆ. ಹೀಗಿರುವಾಗ ಅದರಲ್ಲೇ ₹ 20 ಕಡಿಮೆ ಮಾಡಿ ಜಿಪುಣತನ ತೋರಿಸುವುದು ಸರಿಯೇ’ ಎಂದು ಪ್ರಶ್ನಿಸಿದರು.

‘ಜಿಲ್ಲೆಯಲ್ಲಿ ರೈತರು ಹಿಂಗಾರು ಹಂಗಾಮಿಯಲ್ಲಿ ಬೆಳೆದ ಈರುಳ್ಳಿ ಮಾರಾಟವಾಗದೇ ರೈತರ ಜಮೀನಿನಲ್ಲಿಯೇ ನಾಶವಾಗುತ್ತಿದೆ. ಕೊರೊನಾ ಕಾರಣದಿಂದ ಉಂಟಾದ ಸಮಸ್ಯೆಯಿಂದಾಗಿ ಈರುಳ್ಳಿ ಬೆಲೆ ಕನಿಷ್ಠ ₹ 200ಕ್ಕೆ ಕುಸಿದಿದೆ. ಇದರಿಂದ ರೈತರಿಗೆ ತುಂಬಾ ನಷ್ಟ ಉಂಟಾಗಿದೆ’ ಎಂದು ಅಳಲು ತೋಡಿಕೊಂಡರು.

‘ಸರ್ಕಾರ ಈಗಾಗಲೇ ರೈತರ ನೆರವಿಗೆ ಧಾವಿಸುವುದಾಗಿ ಭರವಸೆ ನೀಡಿದೆ. ಆದರೆ, ಈವರೆಗೂ ರೈತರ ರಕ್ಷಣೆಗೆ ಮುಂದಾಗಿಲ್ಲ. ಆದ್ದರಿಂದ ಈರುಳ್ಳಿಗೆ ಬೆಂಬಲ ಬೆಲೆ ಘೋಷಣೆ ಮಾಡಿ ಖರೀದಿ ಕೇಂದ್ರ ತೆರೆದು ರೈತರಿಗೆ ಅನುಕೂಲ ಮಾಡಿಕೊಡಬೇಕು. ಜತೆಗೆ ಹೂ ಬೆಳೆಗಾರರಿಗೂ ಪರಿಹಾರ ನೀಡಬೇಕು’ ಎಂದು ಕೋರಿದ್ದಾರೆ.

ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸ್ತಿಹಳ್ಳಿ ಜಿ. ಸುರೇಶ್‌ಬಾಬು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT