ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಢ್ಯ ತೊಲಗಿಸಲು ವಿಜ್ಞಾನದ ಅರಿವು ಅಗತ್ಯ: ಚಳ್ಳಕೆರೆ ಯರ್ರಿಸ್ವಾಮಿ

ವಿಜ್ಞಾನ ಪರಿಷತ್ತು ಮಾಜಿ ಉಪಾಧ್ಯಕ್ಷ ಚಳ್ಳಕೆರೆ ಯರ್ರಿಸ್ವಾಮಿ
Last Updated 8 ನವೆಂಬರ್ 2021, 4:56 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಸಮಾಜದಲ್ಲಿ ಮನುಷ್ಯನ ಪ್ರಗತಿಗೆ ಅಡ್ಡಿಯಾಗಿರುವ ಮೌಢ್ಯ ದೂರವಾಗಬೇಕಾದರೆ ವಿಜ್ಞಾನದ ಅರಿವು ಹೆಚ್ಚಾಗಬೇಕು ಎಂದು ವಿಜ್ಞಾನ ಪರಿಷತ್ತು ಮಾಜಿ ಉಪಾಧ್ಯಕ್ಷ ಚಳ್ಳಕೆರೆ ಯರ‍್ರಿಸ್ವಾಮಿ ಹೇಳಿದರು.

ಪಟ್ಟಣದ ವಿದ್ಯಾವಿಕಾಸ ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಸಮಿತಿ ಸಹಯೋಗದಲ್ಲಿ ಭಾನುವಾರ ಡಾ.ಎಚ್. ನರಸಿಂಹಯ್ಯ ಅವರ ಜನ್ಮ ಶತಮಾನೋತ್ಸವ ನಿಮಿತ್ತ ನಡೆದ ನೂರು ಶಾಲೆ-ನೂರು ವಿಜ್ಞಾನದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಆದಿಕಾಲದಲ್ಲಿ ಮನುಷ್ಯನು ಯಾವಾಗ ಆಲೋಚನೆ ಮಾಡುವುದನ್ನು ಕಲಿತನೋ ಅಂದೇ ವಿಜ್ಞಾನವು ಜನ್ಮ ತಳೆಯಿತು. ವಿಜ್ಞಾನವು ಸತ್ಯವನ್ನು ಪ್ರತಿಪಾದಿಸುತ್ತದೆ. ಕಾರಣ ಅದು ಭಾವನೆ, ಕಲ್ಪನೆಯ ಬದಲಾಗಿ ಶೋಧನೆಯ ಮೂಲಕ ಜನ್ಮ ತಳೆದಿದೆ. ಈ ಸಮಾಜದಲ್ಲಿ ಕೆಲವು ಬುದ್ಧಿವಂತರು ವಿಜ್ಞಾನವನ್ನೇ ಬಳಕೆ ಮಾಡಿಕೊಂಡು ಮಾಟಮಂತ್ರ, ತಂತ್ರದಂತಹ ಕೆಲಸಕ್ಕೆ ಕೈಹಾಕಿ ಮೋಸ ಮಾಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಹಾಗಾಗಿ ಯಾರೇ ಆಗಲಿ ಪ್ರಶ್ನೆ ಮಾಡದೇ ಯಾವ ಸತ್ಯವನ್ನೂ ಒಪ್ಪಿಕೊಳ್ಳಬಾರದು. ಈ ನಿಟ್ಟಿನಲ್ಲಿ ಡಾ.ಎಚ್. ನರಸಿಂಹಯ್ಯ ಪ್ರಖರ ವಿಚಾರವಾದಿಯಾಗಿ ವಿಜ್ಞಾನ ಪ್ರಜ್ಞೆಯನ್ನು ಆಳವಾಗಿ ಮೈಗೂಡಿಸಿಕೊಂಡಿದ್ದರು. ಮೌಢ್ಯವನ್ನು ಪ್ರಶ್ನೆಮಾಡಿ ಸತ್ಯವನ್ನು ಪ್ರತಿಪಾದಿಸಿದರು. ಜತೆಗೆ ಎಲ್ಲ ವಿದ್ಯಾರ್ಥಿಗಳಿಗೆ ಮೂಲ ವಿಜ್ಞಾನದ ಪರಿಕಲ್ಪನೆಯ ಯೋಚನಾ ಲಹರಿಯನ್ನು ಬಿತ್ತಿದರು’ ಎಂದು ಹೇಳಿದರು.

‘ಇಂದು ವಿಜ್ಞಾನವಿಲ್ಲದೆ ಒಂದು ಕ್ಷಣವನ್ನು ಕಳೆಯಲು ಸಾಧ್ಯವಿಲ್ಲದಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಪ್ರತಿಯೊಬ್ಬರೂ ಭಾವನಾತ್ಮಕ ಆಲೋಚನಾ ಕ್ರಮದಿಂದ ದೂರವಾಗಬೇಕಾದರೆ ವೈಜ್ಞಾನಿಕ ಮಾದರಿಯ ಆಲೋಚನಾ ಕ್ರಮಗಳನ್ನು ರೂಢಿಸಿಕೊಳ್ಳಬೇಕು. ಇದರಿಂದ ಬದುಕು ಯಶಸ್ಸಿನತ್ತ ಸಾಗುತ್ತದೆ’ ಎಂದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಸಮಿತಿ ಅಧ್ಯಕ್ಷ ಎಂ.ಡಿ. ಲತೀಫ್‌ ಸಾಬ್, ‘ವಿದ್ಯಾರ್ಥಿಗಳು ವಿಜ್ಞಾನವನ್ನು ವಿದ್ಯಾರ್ಥಿ ದೆಸೆಯಿಂದಲೇ ಕಲಿಯಬೇಕು. ಚಿಕ್ಕಂದಿನಿಂದಲೇ ಎಲ್ಲ ವಿಷಯಗಳಲ್ಲಿ ತೀವ್ರ ಕುತೂಹಲಿಗಳಾಗಿ ಹಲವು ಚಟುವಟಿಕೆ ಮಾದರಿಗಳ ರಚನೆಯ ಮೂಲಕ ಕಲಿಕೆಯಲ್ಲಿ ಸಾಗಬೇಕು. ಮಕ್ಕಳು ಯಾವುದೇ ಮಾಧ್ಯಮದಲ್ಲಿ ಅಧ್ಯಯನ ಮಾಡಿದರೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ಪೋಷಕರು ಪ್ರೋತ್ಸಾಹಿಸಬೇಕು. ಅದಕ್ಕಾಗಿ ಜಿಲ್ಲೆಯಾದ್ಯಂತ ನಿತ್ಯ ತಲಾ ಒಂದು ಶಾಲೆಯೆಂಬಂತೆ ನೂರು ಶಾಲೆಗಳಲ್ಲಿ ನೂರುದಿನಗಳವರೆಗೂ ನೂರು ವಿಜ್ಞಾನ ಶಿಕ್ಷಕರಿಂದ ವಿಜ್ಞಾನ ಕಲಿಕೆ, ಜಾಗೃತಿ, ಚಿಂತನೆಯನ್ನು ಬೆಳೆಸುವ ಆಂಧೋಲನವನ್ನು ಹಮ್ಮಿಕೊಳ್ಳಲಾಗಿದೆ’
ಎಂದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಎಸ್.ಟಿ. ಸ್ವಾಮಿ, ‘ಗ್ರಾಮೀಣ ಪ್ರದೇಶದಲ್ಲಿ ಪೋಷಕರು ಮೌಢ್ಯಕ್ಕೆ ಒಳಗಾಗಿ ತಮ್ಮ ಮಕ್ಕಳಿಗೂ ಅದೇ ದಾರಿಯಲ್ಲಿ ನಡೆಸುವ ಪರಿಪಾಠವಿದೆ. ಅದು ಬದಲಾಗಬೇಕು’ ಎಂದು ಕಿವಿಮಾತು ಹೇಳಿದರು.

ಕಸಾಪ ನಿಕಟಪೂರ್ವ ಅಧ್ಯಕ್ಷ ಆರ್. ಮಲ್ಲಿಕಾರ್ಜುನಯ್ಯ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಉಪಾಧ್ಯಕ್ಷ ಎಚ್. ಶ್ರೀನಿವಾಸ್, ಪದಾಧಿಕಾರಿಗಳಾದ ಕೆ.ಎಂ. ಶಿವಸ್ವಾಮಿ, ಜಿ.ಎನ್. ಮಹೇಶ್, ಪಿ. ನವೀನ್, ಟಿ. ಹನುಮಂತಪ್ಪ, ವಿ. ಶ್ರೀನಿವಾಸ್, ಡಾ. ರಹಮತ್‌ಉಲ್ಲಾ, ದೇವರಾಜ್ ಪ್ರಸಾದ್, ಮುಖ್ಯಶಿಕ್ಷಕರಾದ ಉಮಾ, ಟಿ.ರೂಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT