ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರಿ ಸಾಕಣೆಯಲ್ಲೇ ಸ್ವಾವಲಂಬನೆ: ಲಕ್ಷಗಟ್ಟಲೆ ಲಾಭ

ಸ್ವಯಂ ಉದ್ಯೋಗದ ಕನಸು ನನಸು ಮಾಡಿಕೊಂಡ ಪದವೀಧರೆ
Last Updated 9 ಡಿಸೆಂಬರ್ 2022, 5:27 IST
ಅಕ್ಷರ ಗಾತ್ರ

ಹೊಸದುರ್ಗ: ‘ಓದಿಗೆ ತಕ್ಕ ಕೆಲಸವಿಲ್ಲ’ ಎಂದು ಹಲವರು ಮರುಗುತ್ತಿರುವುದನ್ನು ಕಾಣುತ್ತೇವೆ. ಆದರೆ ಇಲ್ಲಿ ಉತ್ತಮ ಶಿಕ್ಷಣ ಪಡೆದಿರುವ ಮಹಿಳೆಯೊಬ್ಬರು ಕುರಿ ಸಾಕಣೆ ವೃತ್ತಿಯ ಮೊರೆ ಹೋಗಿದ್ದು, ಲಕ್ಷಗಟ್ಟಲೆ ಲಾಭ ಗಳಿಸುತ್ತಿದ್ದಾರೆ.

ಎಂ.ಎ ಬಿ.ಇಡಿ ಅಧ್ಯಯನ ಮಾಡಿರುವ ತಾಲ್ಲೂಕಿನ ಐಲಾಪುರ ಗ್ರಾಮದ ಶ್ವೇತಾ ಈಶ್ವರ್‌ ಅವರೇ ಸಾಧಕಿ. ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಇವರಿಗೆ ಇಬ್ಬರು ಮಕ್ಕಳನ್ನು ಸಾಕುತ್ತ ಕೆಲಸ ಮಾಡುವುದು ಒತ್ತಡಕಾರಿ ಎನ್ನಿಸಿತ್ತು. ಕೋವಿಡ್ ಸಮಯದಲ್ಲಿ ಕೆಲಸಕ್ಕೆ ರಾಜಿನಾಮೆ ನೀಡಿ ಸ್ವಂತ ಉದ್ಯೋಗದ ಕನಸು ಕಂಡಿದ್ದರು.

2020ರಲ್ಲಿ ಪತಿಯ ಸಲಹೆಯ ಮೇರೆಗೆ ಚಿಕ್ಕದಾಗಿ ಕುರಿ ಸಾಕಣೆ ಆರಂಭಿಸಿದ ಅವರ ಒಂದೆರಡು ಕುರಿಗಳು ಆರಂಭದಲ್ಲಿ ಕೂಲಿಕಾರ್ಮಿಕರ ನಿರ್ಲಕ್ಷ್ಯದಿಂದ ಮೃತಪಟ್ಟವು. ನಂತರ 115 ಕುರಿ ಸಾಕಿ ತಾವೇ ಅವುಗಳ ಉಸ್ತುವಾರಿಯಲ್ಲಿ ತೊಡಗಿದರು. ಆರಂಭದಲ್ಲಿ ನಿರೀಕ್ಷೆಯಂತೆ ಲಾಭ ದೊರೆಯದಿದ್ದರೂ ಧೃತಿಗೆಡದೆ ಕಾಯಕ ಮುಂದುವರಿಸಿದರು.

'₹ 13 ಲಕ್ಷ ಬಂಡವಾಳ ಹಾಕಿ, ಉತ್ತಮ ಶೆಡ್, ಕಟಾವು ಯಂತ್ರ, ಮೇವು ಸಂಗ್ರಹಣಾ ಕೋಣೆ ಹೀಗೆ ಹಲವು ಸೌಲಭ್ಯ ಕಲ್ಪಿಸಿ ಕುರಿಗಳಿಗೆ ಸುಸಜ್ಜಿತ ವಾತಾವರಣ ನಿರ್ಮಿಸಲಾಯಿತು. 6 ತಿಂಗಳ ಹಿಂದೆ 112 ಕುರಿ ಸಾಕಣೆಗಾಗಿ ಮೇವು, ಔಷಧ ಸೇರಿ ₹ 7.5 ಲಕ್ಷ ವೆಚ್ಚವಾಗಿತ್ತು. ಬೆಂಗಳೂರಿಂದ ಬಂದ ವರ್ತಕರು ತೂಕದ ಲೆಕ್ಕದಲ್ಲಿ ಅಷ್ಟೂ ಕುರಿಗಳನ್ನು ಖರೀದಿಸಿದರು. 6 ತಿಂಗಳಲ್ಲಿ ₹ 2 ಲಕ್ಷ ಲಾಭ ಬಂತು. ‘ಯಾವುದೇ ಒತ್ತಡವಿಲ್ಲದೇ ಈ ಕಾಯಕ ಮಾಡುತ್ತಿರುವುದು ಮನಸ್ಸಿಗೆ ನೆಮ್ಮದಿ ನೀಡುತ್ತಿದೆ’ ಎಂದು ಶ್ವೇತಾ ಹೆಮ್ಮೆಯಿಂದ ಹೇಳುತ್ತಾರೆ.

‘6 ತಿಂಗಳಿಗೊಮ್ಮೆ ಬಾಗಲಕೋಟೆ ಜಿಲ್ಲೆಯ ಅಮೀನಗಡ ಅಥವಾ ಕೆರೂರು ಸಂತೆಯಿಂದ ಯಳಗ ತಳಿಯ ಕುರಿಗಳನ್ನು ಖರೀದಿಸುತ್ತೇವೆ. ಈ ತಳಿಯವು ಈ ಭಾಗದ ವಾತಾವರಣಕ್ಕೆ ಹೊಂದಿಕೊಳ್ಳುತ್ತವೆ. ಒಂದು ಕುರಿಗೆ ₹ 5,000-
₹ 8,000 ನೀಡಿ ಖರೀದಿಸಲಾಗುತ್ತದೆ. ಶ್ವೇತಾ ಕೆಲಸಕ್ಕೆ ಆಸಕ್ತಿ ತೋರಿದ್ದರಿಂದ ಈ ಕಾಯಕದಲ್ಲಿ ಯಶಸ್ಸು ಸಿಕ್ಕಿದೆ. ಅದಕ್ಕೆ ಸಹಕಾರ ನೀಡುವುದಷ್ಟೇ ನಮ್ಮ ಕೆಲಸ’ ಎನ್ನುತ್ತಾರೆ ಪತಿ ಈಶ್ವರ್.

ನಿತ್ಯ ಬೆಳಿಗ್ಗೆ ಕುರಿಗಳನ್ನು ಶೆಡ್‌ನಿಂದ ಹೊರಗೆ ಬಿಟ್ಟು ಸ್ವಚ್ಛತೆಯ ನಂತರ ಪುನಃ ಒಳಗೆ ಬಿಡಲಾಗುತ್ತದೆ. ಅಲ್ಲೇ ಮೇವು ನೀರಿನ ಸೌಲಭ್ಯವಿದ್ದು, ಅವು ಅಗತ್ಯವಿದ್ದಾಗ ಸೇವಿಸುತ್ತವೆ. ಶೇಂಗಾ, ರಾಗಿ ಕಡ್ಡಿಗಳನ್ನು ಪುಡಿ ಮಾಡಿ ನೀಡಲಾಗುತ್ತದೆ. ಜೊತೆಗೆ ಕಲಬುರಗಿಯಿಂದ ಕಾಳುಮಿಶ್ರಿತ ಮೇವು ತರಿಸಿ ನಿತ್ಯ ನೀಡುತ್ತಾರೆ. ಸ್ವಂತ ಭೂಮಿಯಲ್ಲಿ ಕುರಿಗಳಿಗೆ ಸಾಕಾಗುವಷ್ಟು ಮೇವು ಬೆಳೆಯುತ್ತಿದ್ದಾರೆ.

‘ಕುರಿಗಳು ಅನಾರೋಗ್ಯಕ್ಕೆ ಒಳಗಾದರೆ ಮೇವು ತ್ಯಜಿಸುತ್ತವೆ. ಕೂಡಲೇ ಸೂಕ್ತ ಚಿಕಿತ್ಸೆ ನೀಡಿದರೆ ಚೇತರಿಸಿಕೊಳ್ಳುತ್ತವೆ. ಆರೋಗ್ಯ ಸರಿಯಿಲ್ಲದ ಕುರಿಗಳನ್ನು 15 ದಿನ ಪ್ರತ್ಯೇಕವಾಗಿ ಇಡಲಾಗುತ್ತದೆ. ವಾರಕ್ಕೊಮ್ಮೆ ಕುರಿಗಳನ್ನು ತೂಕ ಮಾಡಲಾಗುತ್ತದೆ ಅವುಗಳ ತೂಕದ ಆಧಾರದ ಮೇರೆಗೆ ಮೇವು ನೀಡಲಾಗುತ್ತದೆ. ಕಡಿಮೆ ತೂಕವಿರುವ ಕುರಿಗಳಿಗೆ ಹೆಚ್ಚಿನ ಮೇವು ಒದಗಿಸಲಾಗುತ್ತದೆ. ಈ ಬಾರಿ 65 ಕುರಿಗಳನ್ನು ಸಾಕಲಾಗಿದೆ. ಫೆಬ್ರುವರಿಗೆ ಮಾರಾಟಕ್ಕೆ ಅಣಿಗೊಳ್ಳುತ್ತವೆ. ಕುರಿಗಳು ಉತ್ಕೃಷ್ಟವಾಗಿ ಬೆಳೆದಿರುವುದರಿಂದ ₹ 4 ಲಕ್ಷ ಲಾಭ ಬರುವ ನಿರೀಕ್ಷೆಯಿದೆ. ಮುಂದೆ 200-250 ಕುರಿ ಸಾಕುವ ಯೋಜನೆ ಇದೆ’ ಎಂದು ಶ್ವೇತಾ ಭವಿಷ್ಯದ ಯೋಜನೆಯನ್ನು ಬಿಚ್ಚಿಟ್ಟರು.

ಕುರಿ ಗೊಬ್ಬರಕ್ಕೂ ಇದೆ ಬೇಡಿಕೆ

‘ಕೇವಲ ಕುರಿಗೆ ಮಾತ್ರವಲ್ಲ. ಕುರಿ ಗೊಬ್ಬರಕ್ಕೂ ಅಪಾರ ಬೇಡಿಕೆಯಿದೆ. ಅಡಿಕೆ ತೋಟಕ್ಕೆ ಕುರಿ ಗೊಬ್ಬರವೇ ಯೋಗ್ಯವಾದುದು. ಗೊಬ್ಬರ ಖರೀದಿಸಲು ಚಿಕ್ಕಮಗಳೂರು ಜಿಲ್ಲೆಯಿಂದ ರೈತರು ಬರುತ್ತಾರೆ. ಜಿಲ್ಲೆಯಾದ್ಯಂತ ಹಲವರು ಅಡಿಕೆ ಕೃಷಿಯತ್ತ ಮುಖ ಮಾಡಿರುವುದರಿಂದ ಇಲ್ಲೂ ಅಪಾರ ಬೇಡಿಕೆಯಿದೆ. ಈ ಬಾರಿ ನಮ್ಮ ಜಮೀನಿಗೇ ಗೊಬ್ಬರ ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಮಾರಾಟ ಮಾಡಲಿದ್ದೇವೆ’ ಎನ್ನುತ್ತಾರೆ ಶ್ವೇತಾ ದಂಪತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT