ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಯೋಗ ದಿನ: ಆನ್‌ಲೈನ್‌ ಯೋಗಕ್ಕೆ ಸಾವಿರಾರು ಜನ ಸಾಕ್ಷಿ

ಐತಿಹಾಸಿಕ ಕೋಟೆ ಆವರಣದಲ್ಲಿ ಗಮನ ಸೆಳೆದ ಯೋಗಾಭ್ಯಾಸ
Last Updated 22 ಜೂನ್ 2021, 6:23 IST
ಅಕ್ಷರ ಗಾತ್ರ

ಚಿತ್ರದುರ್ಗ: ಏಳನೇ ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಜಿಲ್ಲೆಯ ಹಲವೆಡೆ ಸೋಮವಾರ ಯೋಗಾಭ್ಯಾಸ ಮಾಡಲಾಯಿತು. ಪ್ರತಿ ವರ್ಷದ ಸಂಭ್ರಮ ಇಲ್ಲದಿದ್ದರೂ ಆನ್‌ಲೈನ್‌ ಮೂಲಕ ನಡೆದ ಯೋಗದಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು.

ಕೋವಿಡ್‌ ಕಾರಣಕ್ಕೆ ಬಹಿರಂಗವಾಗಿ ಯೋಗ ಮಾಡುವುದಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಸತತ ಎರಡನೇ ವರ್ಷವೂ ಯೋಗ ಸಂಭ್ರಮವಿಲ್ಲದೇ ಮುಗಿಯಿತು. ಮನೆಯಿಂದಲೇ ಯೋಗ ಮಾಡಲು ಆನ್‌ಲೈನ್‌ ವ್ಯವಸ್ಥೆಯೊಂದನ್ನು ಆಯುಷ್ ಇಲಾಖೆ ರೂಪಿಸಿತ್ತು. ಇದಕ್ಕೆ ಇತರ ಸಂಘ– ಸಂಸ್ಥೆಗಳು ಕೈಜೋಡಿಸಿದ್ದವು. ಅಂದಾಜು ಐದು ಸಾವಿರ ಜನರು ಏಕಕಾಲಕ್ಕೆ ಯೋಗಾಭ್ಯಾಸ ಮಾಡಿದರು.

ಬೆಳಿಗ್ಗೆ 6.30ರಿಂದ 8ರವರೆಗೆ ಯೋಗ ನಡೆಯಿತು. ಯೋಗದಲ್ಲಿ ಪಾಲ್ಗೊಳ್ಳುವಂತೆ ಸಾರ್ವಜನಿಕರನ್ನು ಪ್ರೇರೇಪಿಸಿದ್ದು ಫಲ ನೀಡಿತು. ಆಯುಷ್‌ ಇಲಾಖೆ ನೀಡಿದ್ದ ಲಿಂಕ್‌ ಬಳಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಿರೀಕ್ಷೆ ಮೀರಿ ಸಿಕ್ಕ ಸ್ಪಂದನೆ ಇನ್ನಷ್ಟು ಹುಮ್ಮಸ್ಸು ಮೂಡಿಸಿತು. ವಿವಿಧ ಆಸನ, ಅದರ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.

ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ, ಪತಂಜಲಿ ಯೋಗ ಶಿಕ್ಷಣ ಸಂಸ್ಥೆ, ಪತಂಜಲಿ ಯೋಗ ಸಮಿತಿ, ಮಹರ್ಷಿ ಯೋಗ ಸಮಿತಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ನೆಹರೂ ಯುವ ಕೇಂದ್ರ, ಆರ್ಟ್ ಆಫ್ ಲೀವಿಂಗ್, ಚಿತ್ರದುರ್ಗ ಯೋಗಸಂಸ್ಥೆ, ರೋಟರಿ ಕ್ಲಬ್, ಸಿದ್ಧಿ ಸಮಾಧಿಯೋಗ, ಸ್ಕೌಟ್ಸ್ ಮತ್ತು ಗೈಡ್ಸ್, ರೆಡ್‍ಕ್ರಾಸ್, ಸರ್ಕಾರಿ ನೌಕರರ ಸಂಘ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿಖ್ಯಾತಿ ಗಳಿಸಿದ ಯೋಗ: ‘ಯೋಗವನ್ನು ವಿಶ್ವವಿಖ್ಯಾತಿಗೊಳಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಬೇಕು’ ಎಂದು ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಅಭಿಪ್ರಾಯಪಟ್ಟರು.

ಇಲ್ಲಿನಐತಿಹಾಸಿಕಕೋಟೆಆವರಣದಲ್ಲಿಭಾರತೀಯಪುರಾತತ್ವಮತ್ತುಸರ್ವೇಕ್ಷಣಾಇಲಾಖೆ,ಪ್ರವಾಸೋದ್ಯಮಇಲಾಖೆಯಿಂದಹಮ್ಮಿಕೊಂಡಿದ್ದಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯನ್ನು ಪರಿಗಣಿಸಿದ ವಿಶ್ವ ಆರೋಗ್ಯ ಸಂಸ್ಥೆ ಜೂನ್‌ 21ರಂದು ಯೋಗ ದಿನವನ್ನಾಗಿ ಘೋಷಣೆ ಮಾಡಿತು. ವಿಶ್ವಗುರು ಸ್ಥಾನಕ್ಕೆ ಭಾರತವನ್ನು ಏರಿಸಿತು. ವಿಶ್ವದ ನೂರಾರು ದೇಶಗಳಲ್ಲಿ ಯೋಗವನ್ನು ಆಚರಿಸುವಂತಾಯಿತು’ ಎಂದರು.

ಭಾರತೀಯ ಪುರಾತತ್ವ ಇಲಾಖೆಯ ಬೆಂಗಳೂರು ವಲಯದ ಅಧೀಕ್ಷಕ ಡಾ. ಶಿವಕಾಂತ ಬಾಜಪೇಯಿ, ಸಹಾಯಕ ನಿರ್ದೇಶಕ ಕುಮಾರನ್, ಚಿತ್ರದುರ್ಗ ಉಪವಲಯದ ಕಿಶೋರ್‌ ಕುಮಾರರ್ ರೆಡ್ಡಿ ಇದ್ದರು. ಮಂಗಳೂರಿನ ಸೀತಾರ ಕಲಾವಿದ ರಫೀಕ್ ಖಾನ್ ಹಾಗೂ ತಬಲ ಕಲಾವಿದ ನಿಸಾರ್ ಅಹ್ಮದ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಬಿಜೆಪಿಯಿಂದ ಯೋಗಾಭ್ಯಾಸ: ಇಲ್ಲಿನ ಅಕ್ಕಮಹಾದೇವಿ ಸಮಾಜದಲ್ಲಿ ಬಿಜೆಪಿ ನಗರ ಮಂಡಲದ ವತಿಯಿಂದ ಯೋಗ ದಿನವನ್ನು ಆಚರಿಸಲಾಯಿತು. ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್‌. ನವೀನ್‌, ‘ವಿಶ್ವದ 158 ದೇಶಗಳು ಯೋಗ ಆಚರಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಪರಿಶ್ರಮದಿಂದ ಭಾರತದ ಯೋಗಕ್ಕೆ ವಿಶ್ವಮಾನ್ಯತೆ ಸಿಕ್ಕಿದೆ’ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ. ಮುರುಳಿ, ಉಪಾಧ್ಯಕ್ಷ ಸಂಪತ್‍ಕುಮಾರ್, ವಿಭಾಗೀಯ ಪ್ರಭಾರ ಜಿ.ಎಂ.ಸುರೇಶ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ. ಬದ್ರಿನಾಥ್ ಇದ್ದರು.

ಎಸ್‍ಜೆಎಂ ಮಹಿಳಾ ಮಹಾವಿದ್ಯಾಲಯ, ಜ್ಞಾನ ಭಾರತಿ ವಿದ್ಯಾಮಂದಿರ ಸೇರಿ ಹಲವೆಡೆ ಯೋಗ ದಿನವನ್ನು ಆಚರಿಸಲಾಯಿತು.

‘ಬದುಕು ಶುದ್ಧೀಕರಿಸುವ ಶಿವಯೋಗ’

ಶಿವಯೋಗವು ಬದುಕಿನ ಶುದ್ಧೀಕರಣ ಮಾಡುತ್ತದೆ ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.

ಯೋಗದಿನ-ಶಿವಯೋಗ ದರ್ಶನ ಫೇಸ್‍ಬುಕ್ ಮತ್ತು ಯುಟ್ಯೂಬ್ ನೇರ ಪ್ರಸಾರದಲ್ಲಿ ಮಾತನಾಡಿದ ಅವರು, ‘ಜಗತ್ತಿಗೆ ಶಿವಯೋಗದ ಪರಿಕಲ್ಪನೆಯನ್ನು 900 ವರ್ಷಗಳ ಹಿಂದೆ ಬಸವಣ್ಣ ಮತ್ತು ಅಲ್ಲಮಪ್ರಭು ನೀಡಿದರು. ಬಸವಧರ್ಮದಲ್ಲಿರುವ ಧ್ಯಾನ ಮತ್ತು ಶಿವಯೋಗದಲ್ಲಿ ಬದುಕಿಗೆ ಬೇಕಾದ ಸಮತೋಲನವಿದೆ. ಇಂತಹ ಶಿವಯೋಗದ ದರ್ಶನ ಆಗಬೇಕಾಗಿದೆ’ ಎಂದು ಹೇಳಿದರು.

‘ಶಾರೀರಿಕ ತಾಲೀಮಿಗೆ ಯೋಗವನ್ನು ಸೀಮಿಗೊಳಿಸಲಾಗಿದೆ. ಶರೀರ, ಇಂದ್ರೀಯ ಹಾಗೂ ಬುದ್ದಿಯ ನಡುವೆ ಸಾಮರಸ್ಯ ಮೂಡಿಸುವುದು ಶಿವಯೋಗ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT