ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸದುರ್ಗ: ಮಕ್ಕಳನ್ನು ಕುರಿಗಳಂತೆ ತುಂಬುವ ವಾಹನಗಳು, ತಪ್ಪದ ಸಾರಿಗೆ ಸಮಸ್ಯೆ

Last Updated 15 ಸೆಪ್ಟೆಂಬರ್ 2021, 4:12 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪಟ್ಟಣದ ಶಾಲಾ–ಕಾಲೇಜಿಗೆ ಬರಲು ಸಾರಿಗೆ ಸಮಸ್ಯೆ ಇನ್ನೂ ನಿವಾರಣೆಯಾಗಿಲ್ಲ. ಕೆಲವು ಬಾಡಿಗೆ ಟಾಟಾ ಏಸ್‌, ಆಟೊದವರು ವಿದ್ಯಾರ್ಥಿಗಳನ್ನು ಕುರಿಗಳಂತೆ ತುಂಬಿಕೊಂಡು ಬರುತ್ತಿದ್ದಾರೆ.

ಕೊರೊನಾ ಸೋಂಕು ಹಬ್ಬಿದಾಗಿನಿಂದ ಸುಮಾರು ಒಂದೂವರೆ ವರ್ಷ ಶಾಲಾ–ಕಾಲೇಜಿನಲ್ಲಿ ಪಾಠ ಪ್ರವಚನ ಸರಿಯಾಗಿ ನಡೆದಿರಲಿಲ್ಲ. ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ಸಾಕಷ್ಟು ಹಿನ್ನಡೆಯಾಗಿತ್ತು. ಹಲವು ವಿದ್ಯಾರ್ಥಿಗಳು ಆನ್‌ಲೈನ್‌ ಪಾಠವನ್ನೂ ಸರಿಯಾಗಿ ಕೇಳಿಸಿಕೊಳ್ಳುತ್ತಿರಲಿಲ್ಲ. ಮನೆಯಲ್ಲಿಯೂ ಕುಳಿತು ಓದಿಕೊಳ್ಳುತ್ತಿರಲಿಲ್ಲ. ಮಕ್ಕಳ ಈ ವರ್ತನೆ ಹಲವು ಪೋಷಕರಿಗೆ ತಲೆನೋವಾಗಿ ಪರಿಣಮಿಸಿತ್ತು.

ಇದರಿಂದಾಗಿ ಎಷ್ಟೊತ್ತಿಗೆ ಕೊರೊನಾ ಸೋಂಕು ನಿವಾರಣೆಯಾಗಿ ಶಾಲೆ–ಕಾಲೇಜು ಆರಂಭವಾಗುತ್ತವೆಯೋ ಎಂದು ಪೋಷಕರು ಹಾಗೂ ವಿದ್ಯಾರ್ಥಿಗಳು ಸಹ ಚಾತಕ ಪಕ್ಷಿಯಂತೆ ಕಾಯುತ್ತಿದ್ದರು. ‘ಕೋವಿಡ್‌ 2ನೇ ಅಲೆ ಸೋಂಕು ಹಬ್ಬುವಿಕೆ ಪ್ರಮಾಣ ಕ್ಷೀಣಿಸುತ್ತಿದ್ದಂತೆ ವಿದ್ಯಾರ್ಥಿಗಳ ಕಲಿಕೆಗೆ ಸಹಕಾರಿ ಆಗಲೆಂದು ಶಾಲಾ–ಕಾಲೇಜು ಆರಂಭಿಸಿದ್ದು ಸಂತಸವನ್ನುಂಟು ಮಾಡಿತ್ತು. ಆದರೆ, ನಾವು ಸಕಾಲಕ್ಕೆ ಶಾಲೆ–ಕಾಲೇಜಿಗೆ ಬಂದು ಹೋಗಲಿಕ್ಕೆ ಗ್ರಾಮೀಣ ಸಾರಿಗೆ ಸೌಲಭ್ಯವನ್ನು ಇನ್ನೂ ಕಲ್ಪಿಸದಿರುವುದು ತೀವ್ರ ಬೇಸರವನ್ನುಂಟು ಮಾಡಿದೆ. ಒಂದು ದೇಶ ಒಂದು ಶಿಕ್ಷಣ ನೀತಿ ನಿಯಮದ ಸಮರ್ಪಕ ಅನುಷ್ಠಾನಕ್ಕೆ ಹಳ್ಳಿಗಳಿಗೆ ಬಸ್ ಸೌಲಭ್ಯ ಒದಗಿಸಬೇಕು’ ಎನ್ನುತ್ತಾರೆ ದೊಡ್ಡಕಿಟ್ಟದಹಳ್ಳಿ ವಿದ್ಯಾರ್ಥಿ ನಾಗರಾಜು.

ಪಟ್ಟಣದಲ್ಲಿ ಸರ್ಕಾರಿ ಬಸ್‌ ಡಿಪೊ ಆಗಿ 6 ವರ್ಷಗಳಾದರೂ ತಾಲ್ಲೂಕಿನ ಹಲವೆಡೆ ಇನ್ನೂ ಗ್ರಾಮೀಣ ಸಾರಿಗೆ ವ್ಯವಸ್ಥೆ ಕಲ್ಪಿಸಿಲ್ಲ. ಇದರಿಂದಾಗಿ ತಾಲ್ಲೂಕಿನ ಕೊರಟಿಕೆರೆ, ಬುರುಡೇಕಟ್ಟೆ, ಗುಡ್ಡದನೇರಲಕೆರೆ, ಯಲ್ಲಾಭೋವಿಹಟ್ಟಿ, ಮೆಂಗಸಂದ್ರ, ದೊಡ್ಡಕಿಟ್ಟದಹಳ್ಳಿ, ಮತ್ತೋಡು ಸೇರಿ ಇನ್ನಿತರ ಗ್ರಾಮಗಳಿಂದ ವಿದ್ಯಾರ್ಥಿಗಳು ಪಟ್ಟಣಕ್ಕೆ ಬರಲು ಬಸ್ಸಿಗಾಗಿ ಪರದಾಡುತ್ತಿದ್ದಾರೆ. ಹಲವೆಡೆ ಖಾಸಗಿ ಬಸ್ಸುಗಳು ಸಂಚರಿಸುತ್ತಿಲ್ಲ. ಇದರಿಂದಾಗಿ ಗಂಟೆಗಟ್ಟಲೇ ವಿದ್ಯಾರ್ಥಿಗಳು ರಸ್ತೆ ಬದಿಯಲ್ಲಿ ಕಾಯುವಂತಾಗಿದೆ. ಇದರಿಂದ ಸಾಕಷ್ಟು ಸುಸ್ತು ಆಗುತ್ತಿರುವುದರಿಂದ ಶಾಲಾ–ಕಾಲೇಜಿಗೆ ಬರಬೇಕೆಂಬ ಹುಮ್ಮಸ್ಸು, ಉತ್ಸಾಹ ಹಾಗೂ ಆಸಕ್ತಿಯೂ ಕ್ಷೀಣಿಸುತ್ತಿದೆ. ಕಾಲೇಜು ಮುಗಿಸಿಕೊಂಡು ಪುನಃ ಊರಿಗೆ ಹೋಗಲು ಹಿರಿಯೂರು ರಸ್ತೆ ಬದಿಯಲ್ಲಿ ಗಂಟೆಗಟ್ಟಲೇ ಬಸ್ಸಿಗೆ ಕಾಯಬೇಕು ಎನ್ನುತ್ತಾರೆ ವಿದ್ಯಾರ್ಥಿನಿ ಪ್ರಿಯಾಂಕಾ.

ಕಾಲೇಜಿಗೆ ಹೋಗಬೇಕೆಂದು ಮನೆಯಿಂದ ಹೊರಟ ಮೇಲೆ ಹಳ್ಳಿಗಳಿಂದ ಸಿಕ್ಕ ಸಿಕ್ಕ ಬೈಕ್‌, ಟಾಟಾ ಏಸ್‌, ಲಗೇಜ್‌ ಆಟೊ, ಟೆಂಪೊಗಳಲ್ಲಿ ಬರುವಂತಾಗಿದೆ. ಕುರಿಗಳಂತೆ ವಿದ್ಯಾರ್ಥಿಗಳನ್ನು ತುಂಬಿಕೊಂಡು ಬರುವ ಬಾಡಿಗೆ ವಾಹನ ದುರದೃಷ್ಟವಷಾತ್‌ ಏನಾದರೂ ಅಪಘಾತಕ್ಕೀಡಾದರೆ ದೊಡ್ಡ ದುರಂತ ಸಂಭವಿಸಬಹುದು. ಹಾಗಾಗಿ, ವಿದ್ಯಾರ್ಥಿಗಳ ಹಿತ ಕಾಪಾಡುವ ಉದ್ದೇಶದಿಂದ ಇನ್ನಾದರೂ ಗ್ರಾಮೀಣ ಸಾರಿಗೆ ಸೌಕರ್ಯ ಸಮರ್ಪಕವಾಗಿ ಒದಗಿಸಲು ಸರ್ಕಾರ ಮುಂದಾಗಬೇಕು ಎಂಬುದು ತಾಲ್ಲೂಕಿನ ಸಾರ್ವಜನಿಕರ ಒತ್ತಾಯ.

*
ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಹಳ್ಳಿಗಳಿಗೆ ಬಸ್‌ ಸೌಲಭ್ಯ ಕಲ್ಪಿಸದಿರುವುದು ದುರಂತದ ಸಂಗತಿ. ಸಮರ್ಪಕ ಸಾರಿಗೆ ಸೌಲಭ್ಯದಿಂದ ಗ್ರಾಮಗಳ ಅಭಿವೃದ್ಧಿ ಸಾಧ್ಯ.
-ಶಶಿಕುಮಾರ್‌, ವಿದ್ಯಾರ್ಥಿ, ಬೆಲಗೂರು

*
ನಮ್ಮ ಡಿಪೊಗೆ ಇನ್ನೂ 30 ಬಸ್ಸುಗಳ ಅವಶ್ಯಕತೆ ಇದೆ. ಬಸ್ಸುಗಳು ಬಂದಂತೆ ಸಾರಿಗೆ ಕೊರತೆ ಇರುವ ತಾಲ್ಲೂಕಿನ ಗ್ರಾಮೀಣ ಭಾಗಕ್ಕೆ ಬಸ್‌ ವ್ಯವಸ್ಥೆ ಕಲ್ಪಿಸಲಾಗುವುದು.
-ಮೂರ್ತಿ, ಡಿಪೊ ವ್ಯವಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT