ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮಿ ಹಬ್ಬಕ್ಕೆ ಖರೀದಿ ಭರಾಟೆ- ಮಾರುಕಟ್ಟೆಯಲ್ಲಿ ಕಾಣದ ಕೋವಿಡ್ ಭೀತಿ

ಗಗನಕ್ಕೇರಿದ ಹೂ, ಹಣ್ಣು ದರ
Last Updated 19 ಆಗಸ್ಟ್ 2021, 13:01 IST
ಅಕ್ಷರ ಗಾತ್ರ

ಚಿತ್ರದುರ್ಗ: ಕಮಲಪ್ರಿಯೆ ವರಮಹಾಲಕ್ಷ್ಮಿ ಹಬ್ಬ ಶುಕ್ರವಾರ ನಡೆಯಲಿದ್ದು, ನಗರ ವ್ಯಾಪ್ತಿಯ ಮಾರುಕಟ್ಟೆಗಳಲ್ಲಿ ಗುರುವಾರ ಜನಜಂಗುಳಿ ನಿರ್ಮಾಣವಾಗಿತ್ತು. ಪೂಜಾ ಸಾಮಗ್ರಿ ಖರೀದಿಸಲು ನಾಗರಿಕರು ಮುಗಿಬಿದ್ದರು. ವ್ಯಾಪಾರ ಭರಾಟೆ ಜೋರಾಗಿ ನಡೆಯಿತು.

ಪ್ರತಿ ವರ್ಷವೂ ಶ್ರಾವಣ ಮಾಸದ ಎರಡನೇ ಶುಕ್ರವಾರ ಸಂಭ್ರಮದಿಂದ ನಡೆಯುವ ಈ ಹಬ್ಬದ ಮೇಲೆ ಕಳೆದ ವರ್ಷ ಕೊರೊನಾ ಕರಿನೆರಳು ಬಿದ್ದಿತ್ತು. ಆದರೆ, ಈ ಬಾರಿ ಅಂತಹ ಸ್ಥಿತಿ ಇಲ್ಲ. ಜನರು ವಸ್ತುಗಳನ್ನು ಖರೀದಿಸಲು ಉತ್ಸಾಹ ತೋರಿದ್ದಾರೆ. ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖದ ಹಾದಿಯಲ್ಲಿ ಇರುವ ಕಾರಣ ಯಾರಲ್ಲೂ ಭೀತಿ ಕಾಣಲಿಲ್ಲ.

ಹೂವು, ಹಣ್ಣು, ಕಾಯಿ, ಎಲೆ, ಬಾಳೆದಿಂಡು, ಹೊಂಬಾಳೆ ಸೇರಿ ಇತರೆ ಪೂಜಾ ಸಾಮಗ್ರಿ ಖರೀದಿಸಲು ಹಲವೆಡೆ ನಾಗರಿಕರು ಮುಂದಾದರು. ಮನೆಯ ಬಾಗಿಲು, ದೇವರ ಕೋಣೆ, ಲಕ್ಷ್ಮಿದೇವಿಯನ್ನು ಪ್ರತಿಷ್ಠಾಪಿಸುವ ಕಳಸ ಸಿಂಗರಿಸಲು ವಿವಿಧ ಬಗೆಯ ಹೂ, ಹಾರಗಳನ್ನು ಕೊಳ್ಳಲು ಆಸಕ್ತಿ ತೋರಿದರು. ಆದರೆ, ಬೆಲೆ ಹೆಚ್ಚಿದ್ದರಿಂದ ಖರೀದಿ ಪ್ರಮಾಣ ಕಡಿಮೆ ಮಾಡಿಕೊಂಡರು.

ವರಮಹಾಲಕ್ಷ್ಮಿ ವ್ರತ ಮಹಿಳೆಯರು ಸಂಭ್ರಮದಿಂದ ಆಚರಿಸುವ ಹಬ್ಬ. ಮನೆಗಳಲ್ಲಿ ಲಕ್ಷ್ಮಿ ದೇವಿಯನ್ನು ಪ್ರತಿಷ್ಠಾಪಿಸಿ, ಶುಭ್ರ ವಸ್ತ್ರ ಧರಿಸಿ, ಶ್ರದ್ಧಾಭಕ್ತಿಯಿಂದ ಪೂಜಿಸುವ ಪರಂಪರೆ ಇದೆ. ವಿಶೇಷ ಮಂಟಪ ನಿರ್ಮಿಸಿ ಅದ್ದೂರಿಯಾಗಿ ಹಬ್ಬ ಆಚರಿಸಲು ಮಹಿಳೆಯರು ಸಿದ್ಧತೆಯಲ್ಲಿ ನಿರತರಾಗಿದ್ದಾರೆ.

ನಗರದ ನವದುರ್ಗಿಯರ ದೇಗುಲಗಳಲ್ಲಿ ಹಬ್ಬಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಆದರೆ, ದುರ್ಗದ ಅಧಿದೇವತೆ ಏಕನಾಥೇಶ್ವರಿ, ನಗರದೇವತೆಗಳಾದ ಉಚ್ಚಂಗಿಯಲ್ಲಮ್ಮ, ಬರಗೇರಮ್ಮ ದೇಗುಲ ಹೊರತುಪಡಿಸಿ ಉಳಿದ ದೇಗುಲಗಳಲ್ಲಿ ವಿಶೇಷ ಅಲಂಕಾರಕ್ಕಾಗಿ ಹೆಚ್ಚಿನ ಸಿದ್ಧತೆ ಕಂಡು ಬರಲಿಲ್ಲ. ಕೋವಿಡ್ ಕಾರಣಕ್ಕೆ ಪ್ರಸಾದ ವಿತರಿಸದಿರಲು ನಿರ್ಧರಿಸಲಾಗಿದೆ.

ಗಗನಕ್ಕೇರಿದ ‍ಪುಷ್ಪ ದರ:ಸಗಟು ವ್ಯಾಪಾರ ಮಾರುಕಟ್ಟೆಯಲ್ಲಿ ಗುಣಮಟ್ಟದ ಹಳದಿ, ಕಲರ್, ಬಿಳಿ ಸೇವಂತಿ ಹೂ 6 ಮಾರು ಪುಷ್ಪಕ್ಕೆ ತಲಾ ₹ 1,000. ಇದೇ ದರಕ್ಕೆ ಕನಕಾಂಬರ 8 ಮಾರು, ಮಲ್ಲಿಗೆ 10 ಮಾರಿನಂತೆ ಹೂ ಖರೀದಿ ಆಗುತ್ತಿದ್ದವು. ವಿವಿಧ ಬಣ್ಣಗಳ ಗುಲಾಬಿ (ಬಟನ್ಸ್) ಹೂಗಳು ಕೆ.ಜಿಗೆ ₹ 300ರಂತೆ ಮಾರಾಟವಾದವು.

ಲಕ್ಷ್ಮಿದೇವಿ ಮೂರ್ತಿ, ಕಳಶಕ್ಕೆ ಹಾಕುವ ಹಾರ ₹ 100ರಿಂದ ₹ 500 ರವರೆಗೆ ಮಾರಾಟವಾದವು. ಒಂದು ಕಮಲದ ಹೂವು ₹ 60, ವೀಳ್ಯದ ಎಲೆ ಕಟ್ಟಿಗೆ ₹ 80, ಮಾವಿನ ಸೊಪ್ಪು ₹ 30, ಬಾಳೆ ದಿಂಡು ಜೋಡಿಗೆ ₹ 30, ತೆಂಗಿನಕಾಯಿ ₹ 20ರಿಂದ 30ರ ವರೆಗೂ ಮಾರಾಟವಾದವು.

ಹಣ್ಣುಗಳ ದರ 1 ಕೆ.ಜಿ ಲೆಕ್ಕದಲ್ಲಿ

ಸೇಬು - ₹ 100ರಿಂದ ₹ 150

ದಾಳಿಂಬೆ - ₹ 100

ಕರಿದ್ರಾಕ್ಷಿ - ₹ 120

ಮರಸೇಬು - ₹ 120

ಹಸಿರು ದ್ರಾಕ್ಷಿ - ₹ 120

ಮೋಸಂಬಿ - ₹ 80

ಸಪೋಟ - ₹ 60

ಬಾಳೆ ಹಣ್ಣು - ₹ 50

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT