ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಳಿ ಬಿಡದ ಲಿಂಗತ್ವ ಅಲ್ಪಸಂಖ್ಯಾತರು: ಶಶಿಕಲಾ ವಿ.ಟೆಂಗಳಿ ಬೇಸರ

ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ವಿ.ಟೆಂಗಳಿ ಬೇಸರ
Last Updated 19 ಜನವರಿ 2021, 11:04 IST
ಅಕ್ಷರ ಗಾತ್ರ

ಚಿತ್ರದುರ್ಗ: ಸರ್ಕಾರ ಹಲವು ರೀತಿಯ ಸೌಲಭ್ಯಗಳನ್ನು ಕಲ್ಪಿಸಿದರೂ ಲಿಂಗತ್ವ ಅಲ್ಪಸಂಖ್ಯಾತರು ಚಾಳಿ ಬಿಡುತ್ತಿಲ್ಲ. ಎಲ್ಲೆಂದರಲ್ಲಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದಾರೆ ಎಂದು ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ವಿ.ಟೆಂಗಳಿ ಬೇಸರ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಲಿಂಗತ್ವ ಅಲ್ಪಸಂಖ್ಯಾತರು ಒಂದೆಡೆ ನೆಲೆಸುವುದಿಲ್ಲ ಎಂಬುದು ಸಮೀಕ್ಷೆಯಿಂದ ಗೊತ್ತಾಗಿದೆ. ಸೌಲಭ್ಯ ಪಡೆದು ಮುಖ್ಯವಾಹಿನಿಗೆ ಮರಳದೆ ಚಾಳಿ ಮುಂದುವರಿಸುತ್ತಿದ್ದಾರೆ’ ಎಂದು ಹೇಳಿದರು.

‘ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ದಮನಿತ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ರೂಪಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಅವರ ಮನವೊಲಿಸಿ ಕೌಶಲ ತರಬೇತಿ ನೀಡಿದರೆ ಬದುಕು ಕಟ್ಟಿಕೊಳ್ಳಲು ಅನುಕೂಲವಾಗಲಿದೆ’ ಎಂದರು.

‘ಅಭಿವೃದ್ಧಿ ನಿಗಮದಲ್ಲಿ ಹಲವು ಯೋಜನೆಗಳು ಮಹಿಳೆಯರ ಏಳಿಗೆಗೆ ಸಹಕಾರಿಯಾಗಿವೆ. ಉದ್ಯೋಗಿನಿ ಯೋಜನೆಗೆ ಬೇಡಿಕೆ ಹೆಚ್ಚಾಗಿದ್ದು, ಅರ್ಜಿಗಳ ಸಂಖ್ಯೆ ವರ್ಷ ಕಳೆದಂತೆ ಏರಿಕೆಯಾಗುತ್ತಿದೆ. ಉದ್ಯಮ ನಡೆಸಲು, ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಸಾಲ ಸೌಲಭ್ಯಗಳು ದೊರೆಯಲಿವೆ’ ಎಂದು ಮಾಹಿತಿ ನೀಡಿದರು.

‘ಬಳ್ಳಾರಿಯಲ್ಲಿ ಮಹಿಳೆಯರ ತಂಡವೊಂದು ₹ 20 ಲಕ್ಷ ವೆಚ್ಚದಲ್ಲಿ ಶೇಂಗಾ ಚುಕ್ಕಿ ಘಟಕ ಸ್ಥಾಪಿಸಿ ಅಂಗನವಾಡಿಗಳಿಗೆ ಪೂರೈಕೆ ಮಾಡುತ್ತಿದೆ. ಬೆಂಗಳೂರು ಹೊರವಲಯದಲ್ಲಿಯೂ ಇಂತಹದೇ ಘಟಕ ಶುರುವಾಗಿದೆ. ಮಹಿಳೆಯರು ಉದ್ಯಮದಲ್ಲಿ ತೊಡಗಲು ನಿಗಮ ಪ್ರೋತ್ಸಾಹ ನೀಡಲಿದೆ’ ಎಂದರು.

‘ಇದೊಂದು ಕಾಟಾಚಾರದ ನಿಗಮ ಎಂಬಂತೆ ನೋಡಬಾರದು. ದಮನಿತ ಮಹಿಳೆಯರಿಗೆ ಸೌಲಭ್ಯಗಳನ್ನು ತಲುಪಿಸಲು ಅಧಿಕಾರಿಗಳು ಶ್ರಮಿಸಬೇಕು. ಶೋಷಿತರ ಪರವಾಗಿ ಕಳಕಳಿಯಿಂದ ಕೆಲಸ ಮಾಡಬೇಕು. ಲಾಭದ ನಿರೀಕ್ಷೆ ಇರುವ ಸ್ವಯಂ ಸೇವಾ ಸಂಸ್ಥೆಗಳನ್ನು ಹೊರಹಾಕಬೇಕು. ಸೇವಾ ಮನೋಭಾವ ಹೊಂದಿದವರಿಗೆ ಮಾತ್ರ ಅವಕಾಶ ಕಲ್ಪಿಸಬೇಕು’ ಎಂದು ಸೂಚನೆ ನೀಡಿದರು.

ಸಂಚಾರ ನಿಲ್ಲಿಸಿದ ‘ಸವಿರುಚಿ’

ಮಹಿಳೆಯರಲ್ಲಿ ಉದ್ಯಮಶೀಲತೆ ಬೆಳೆಸುವ ಉದ್ದೇಶದಿಂದ ಮಹಿಳಾ ಅಭಿವೃದ್ಧಿ ನಿಗಮ ಅನುಷ್ಠಾನಗೊಳಿಸಿದ್ದ ‘ಸವಿರುಚಿ’ ಸಂಚಾರಿ ಕ್ಯಾಂಟೀನ್‌ ಕೋವಿಡ್ ಕಾಣಿಸಿಕೊಂಡ ಬಳಿಕ ಸಂಚಾರ ನಿಲ್ಲಿಸಿದೆ.

‘ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಹಲವು ದಿನಗಳ ಕಾಲ ವಾಹನ ಒಂದೆಡೆ ನಿಂತಿದೆ. ಸ್ತ್ರೀಶಕ್ತಿ ಸಂಘ ಕೂಡ ಸೇವೆ ಒದಗಿಸಲು ಮುಂದೆ ಬರುತ್ತಿಲ್ಲ. ಬೇರೆಯವರಿಗೆ ಹಸ್ತಾಂತರಿಸಲು ದುರಸ್ತಿ ಮಾಡುವ ಅಗತ್ಯವಿದೆ. ಈ ಅವಧಿಯ ಸಾಲವನ್ನು ಮನ್ನಾ ಮಾಡಿದರೆ ಅನುಕೂಲವಾಗಲಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾ ನಾಯ್ಕ್‌ ಮನವಿ ಮಾಡಿದರು.

ನಿಗಮದ ಅಧ್ಯಕ್ಷೆ ಶಶಿಕಲಾ ವಿ.ಟೆಂಗಳಿ, ‘ಸ್ತ್ರೀ ಶಕ್ತಿ ಸಂಘಗಳಲ್ಲಿನ ಭಿನ್ನಾಭಿಪ್ರಾಯದ ಕಾರಣಕ್ಕೆ ಹಲವು ಜಿಲ್ಲೆಯಲ್ಲಿ ಯೋಜನೆ ಯಶಸ್ವಿಯಾಗಿಲ್ಲ. ವಾಹನಗಳನ್ನು ದುರಸ್ತಿ ಮಾಡಿಸಿ ಹಸ್ತಾಂತರಿಸಿ’ ಎಂದು ಸೂಚನೆ ನೀಡಿದರು.

₹ 300 ಕೋಟಿಗೆ ಕೋರಿಕೆ

ಮಹಿಳಾ ಅಭಿವೃದ್ಧಿ ನಿಗಮಕ್ಕೆ ಬಜೆಟ್‌ನಲ್ಲಿ ₹300 ಕೋಟಿ ನಿಗದಿ ಮಾಡುವಂತೆ ಮುಖ್ಯಮಂತ್ರಿಗೆ ಕೋರಿಕೆ ಸಲ್ಲಿಸಲಾಗಿದೆ ಎಂದು ಅಧ್ಯಕ್ಷೆ ಶಶಿಕಲಾ ವಿ.ಟೆಂಗಳಿ ತಿಳಿಸಿದರು.

‘2020–21ನೇ ಆರ್ಥಿಕ ವರ್ಷದಲ್ಲಿ ₹170 ಕೋಟಿ ಅನುದಾನ ನೀಡಲಾಗಿತ್ತು. ಉದ್ಯೋಗಿನಿ ಸೇರಿದಂತೆ ಹಲವು ಯೋಜನೆಗಳ ಬಗ್ಗೆ ಮಹಿಳೆಯರಲ್ಲಿ ಅರಿವು ಮೂಡುತ್ತಿದ್ದು, ಬೇಡಿಕೆ ಹೆಚ್ಚಾಗಿದೆ. ಅನುದಾನ ಹೆಚ್ಚಿಸಿದರೆ ಇನ್ನಷ್ಟು ಸೌಲಭ್ಯ ನೀಡಲು ಸಾಧ್ಯವಾಗಲಿದೆ’ ಎಂದರು.

‘ರಾಜ್ಯದಲ್ಲಿ 44,664 ದೇವದಾಸಿಗಳಿದ್ದಾರೆ. 20 ಸಾವಿರ ಮಹಿಳೆಯರಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಇವರಿಗೆ ನೀಡುವ ಮಾಸಾಶನವನ್ನು ₹ 1,500ರಿಂದ ₹ 2 ಸಾವಿರಕ್ಕೆ ಏರಿಕೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ’ ಎಂದರು.

ಉದ್ಯೋಗಿನಿ ಯೋಜನೆಯ ಫಲಾನುಭವಿಗಳ ಆಯ್ಕೆ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾತ್ರ ಬಾಕಿ ಇದೆ. ಶಾಸಕರೊಂದಿಗೆ ಚರ್ಚಿಸಿ ಸಮಗ್ರ ಪಸ್ತಾವ ಕಳುಹಿಸಿಕೊಡಲಾಗುವುದು.

ಕವಿತಾ ಎಸ್‌.ಮನ್ನಿಕೇರಿ

ಜಿಲ್ಲಾಧಿಕಾರಿ

ಲಿಂಗತ್ವ ಅಲ್ಪಸಂಖ್ಯಾತರನ್ನು ಸ್ವಾಲಂಬಿಯಾಗಿ ರೂಪಿಸಲು ಅಗತ್ಯವಿರುವ ತರಬೇತಿ ನೀಡಲು ಸಿದ್ಧರಿದ್ದೇವೆ. ಬಹುತೇಕರು ಬಡಗಿ ಹಾಗೂ ಪೇಂಟಿಂಗ್‌ ತರಬೇತಿಗೆ ಆಸಕ್ತಿ ತೋರಿದ್ದಾರೆ.

–ಡಾ.ಕೆ.ನಂದಿನಿದೇವಿ

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ

ಲಿಂಗತ್ವ ಅಲ್ಪಸಂಖ್ಯಾತರು ಉದ್ಯೋಗ ಮಾಡಲು ಸಿದ್ಧರಿಲ್ಲ. ಕಾನೂನು ಸುವ್ಯವಸ್ಥೆಗೆ ಅವರು ತೊಡಕಾಗಿ ಪರಿಣಮಿಸಿದ್ದಾರೆ. ಸ್ವಾವಲಂಬಿ ಜೀವನದ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ.

–ಜಿ.ರಾಧಿಕಾ

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT