ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Womens Day: ಸಿರಿಧಾನ್ಯ ಉತ್ಪನ್ನ ಉದ್ಯಮದಲ್ಲಿ ಅರಳಿದ ‘ಸ್ತ್ರೀಶಕ್ತಿ’

Published 8 ಮಾರ್ಚ್ 2024, 6:43 IST
Last Updated 8 ಮಾರ್ಚ್ 2024, 6:43 IST
ಅಕ್ಷರ ಗಾತ್ರ

ಹೊಸದುರ್ಗ: ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಮೂಲಕ ಉದ್ಯಮಗಳನ್ನು ಸ್ಥಾಪಿಸಿ, ಎಷ್ಟೋ ಮಹಿಳೆಯರು ಆರ್ಥಿಕ ಪ್ರಗತಿ ಸಾಧಿಸುತ್ತಿದ್ದಾರೆ. 20 ಸ್ತ್ರೀಯರನ್ನೊಳಗೊಂಡ ತಾಲ್ಲೂಕಿನ ಆದ್ರಿಕಟ್ಟೆ ಗ್ರಾಮದ ‘ಒನಕೆ ಓಬವ್ವ ರೈತ ಮಹಿಳೆಯರ ಸ್ವಸಹಾಯ ಸಂಘ’ದ ಯಶೋಗಾಥೆಯಿದು. ಸಿರಿಧಾನ್ಯ ಉತ್ಪನ್ನಗಳನ್ನು ತಯಾರಿಸಿ, ’ಆರೋಗ್ಯ ಸಿರಿ’ ಎಂಬ ಹೆಸರಿನಲ್ಲಿ ಮಾರುಕಟ್ಟೆ ಕಂಡುಕೊಂಡಿದ್ದಾರೆ. ಇತರೆ ಸ್ತ್ರೀಶಕ್ತಿ ಸಂಘಗಳ ನವ ಉದ್ಯಮ ಸಾಹಸಗಳಿಗೆ ಈ ಸಂಘ ಮಾರ್ಗದರ್ಶನ ನೀಡುತ್ತಿದೆ. 

ಕೋವಿಡ್‌ ಸಂದರ್ಭದಲ್ಲಿ ರಾಗಿ, ಸಜ್ಜೆ, ಸಾವೆಗೆ ಸೂಕ್ತ ಬೆಲೆ ಸಿಗಲಿಲ್ಲ. ಮನೆಯಲ್ಲಿ ಸಮಯ ವ್ಯರ್ಥ ಮಾಡದೇ, ಸಂಘದವರೆಲ್ಲ ಸೇರಿಕೊಂಡು ‘ಕುಸುಲಕ್ಕಿ’ (ಸಾವೆ ಬೇಯಿಸಿ, ಒಣಗಿಸಿ ಹದ ಮಾಡುವುದು) ಮಾಡಲು ಆರಂಭಿಸಿದರು. ಸಣ್ಣದಾಗಿ ಆರಂಭಿಸಿದ ಈ ಉದ್ಯಮ, ಅಲ್ಪಾವಧಿಯಲ್ಲಿ ರಾಯಚೂರು, ಕಲಬುರಗಿ, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ಚಿಕ್ಕಮಗಳೂರು, ತುಮಕೂರಿನವರೆಗೂ ವಿಸ್ತರಿಸಿತು.

‘ಇನ್ನೂ ಹಲವು ಕಡೆಗಳಲ್ಲಿ ನಮ್ಮ ‘ಸಿರಿಧಾನ್ಯ’ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದೆ. ಕೃಷಿ ಇಲಾಖೆ ಮಳಿಗೆಗಳಲ್ಲಿ ಹಾಗೂ ಸರಸ್‌ ಮೇಳಗಳಲ್ಲಿ ಭಾಗವಹಿಸಿ ಆದಾಯ ಗಳಿಸುತ್ತಿದ್ದೇವೆ’ ಎನ್ನುತ್ತಾರೆ ಸಂಘದ ಸದಸ್ಯೆ ರೇಖಾ ಪರಮೇಶ್ವರ್‌. 

ಸಿರಿಧಾನ್ಯ ಉತ್ಪನ್ನಗಳು:

ತಾಲ್ಲೂಕಿನ ರೈತರು ಬೆಳೆಯುವ ಸಜ್ಜೆ, ನವಣೆ, ರಾಗಿ, ಬರುಗು, ಆರ್ಕಾ, ಕೊಬ್ಬರಿ, ಶೇಂಗಾ ಖರೀದಿಸಿ, ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ಶೇಂಗಾ ಚಟ್ನಿ, ಗುರೆಳ್ಳು ಚಟ್ನಿ, ರಾಗಿ ಹಿಟ್ಟು, ಮಾಲ್ಟ್‌, ಕಾಳು ಹಪ್ಪಳ, ಸಜ್ಜೆ ಅವಲಕ್ಕಿ, ಆರ್ಕಾ ಅವಲಕ್ಕಿ, ನವಣೆ ಅವಲಕ್ಕಿ, ಜೋಳದ ಅವಲಕ್ಕಿ, ಕೆಂಪು ಅಕ್ಕಿ, ಹಪ್ಪಳ, ನವಣೆ ಬಿಸ್ಕೆಟ್‌, ರಾಗಿ ಬಿಸ್ಕೆಟ್‌, ಕೊಬ್ಬರಿ ಎಣ್ಣೆ, ಶೇಂಗಾ ಎಣ್ಣೆಗಳನ್ನು ಸಂಘದ ಸದಸ್ಯರು ತಯಾರಿಸುತ್ತಾರೆ. ಇವರು ತಯಾರಿಸುವ ಎಲ್ಲ ಪದಾರ್ಥಗಳಿಗೂ ಕೊಬ್ಬರಿ ಎಣ್ಣೆ ಉಪಯೋಗಿಸುತ್ತಾರೆ. 

‘ಮಾರುಕಟ್ಟೆ ವಿಸ್ತರಿಸಲು ದೊಡ್ಡ ಪ್ರಮಾಣದ ಯಂತ್ರೋಪಕರಣ ಖರೀದಿಸಲು ಹಣದ ಅವಶ್ಯಕತೆಯಿತ್ತು. ಸಾಲ ಸೌಲಭ್ಯ ದೊರೆಯಲಿಲ್ಲ. ಆದರೂ ಜಗ್ಗದೇ, ಸಂಘದಿಂದ ಹಾಗೂ ವೈಯಕ್ತಿಕವಾಗಿ ಹಣ ಕ್ರೂಡೀಕರಿಸಿದೆವು. ಕುಸುಲಕ್ಕಿಗೆ ಮಾತ್ರ ಸೀಮಿತವಾಗಿದ್ದ ಉದ್ಯಮವನ್ನು ವಿವಿಧ ಉತ್ಪನ್ನಗಳ ತಯಾರಿಕೆಗೆ ವಿಸ್ತರಿಸಲಾಯಿತು. ತಿಂಗಳಿಗೆ ₹50,000 ದಿಂದ ₹60,000 ಆದಾಯ ಗಳಿಸುತ್ತೇವೆ. ಒಮ್ಮೊಮ್ಮೆ ಒಬ್ಬ ಸದಸ್ಯರು ತಿಂಗಳಿಗೆ ₹10,000ರಿಂದ ₹15,000ವರೆಗೂ ಆದಾಯ ಗಳಿಸಿದ ನಿದರ್ಶನಗಳಿವೆ’ ಎನ್ನುತ್ತಾರೆ ಸಂಘದ ಸದಸ್ಯೆ ಶ್ವೇತಾ ಲೋಹಿತ್‌ ಕುಮಾರ್. 

‘ಸಿರಿಧಾನ್ಯಗಳ ಮಹತ್ವ ಹಾಗೂ ಆರೋಗ್ಯದ ಮಾಹಿತಿ ನೀಡುವ ಒಬ್ಬ ವೈದ್ಯರೊಟ್ಟಿಗೆ, ಬೆಂಗಳೂರಿನ ಬಹುಮಹಡಿ ಕಟ್ಟಡಗಳು ಹಾಗೂ ಮನೆಮನೆಗೆ ತೆರಳಿ ಉತ್ಪನ್ನಗಳ ಪರಿಚಯ ಮಾಡುವ ಆಲೋಚನೆ ಇದೆ. ಈ ಮೂಲಕ ಭವಿಷ್ಯದಲ್ಲಿ ಬೆಂಗಳೂರಿನಲ್ಲೂ ಉತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಟಿಸಲು  ಯತ್ನಿಸುತ್ತಿದ್ದೇವೆ ಎಂದು ಸಂಘದ ಮಹಿಳೆ ಸುಮ ಪಿ.ಎಂ ತಿಳಿಸಿದರು.

‘ತಾಲ್ಲೂಕಿನ ಹಾಗೂ ಹೊರ ತಾಲ್ಲೂಕುಗಳ ಮಹಿಳೆಯರಿಗೆ ತರಬೇತಿಯನ್ನೂ ನೀಡುತ್ತಿದ್ದೇವೆ. ಒಂದೊಂದು ಸಂಘಕ್ಕೆ ಒಂದೊಂದು ಉತ್ಪನ್ನ ತಯಾರಿಕೆಯನ್ನು ವಹಿಸಲಾಗುವುದು. ಅವರು ತಯಾರಿಸಿಕೊಟ್ಟರೆ ಸಾಕು, ನಾವು ಮಾರಾಟ ಮಾಡಿ ಅವರಿಗೆ ಆದಾಯ ತಂದುಕೊಡುತ್ತೇವೆ. ಮುದೊಂದು ದಿನ ಅವರೂ ಮಾರುಕಟ್ಟೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವಂತಾಗಬೇಕು ಎಂಬುದು ನಮ್ಮ ಉದ್ದೇಶ’ ಎಂದರು.  

‘ರೈತರು ತಮ್ಮ ಬೆಳೆಗಳನ್ನು ಮಾರಾಟ ಮಾಡುವ ಬದಲು, ಅವುಗಳ ಮೌಲ್ಯವರ್ಧನೆ ಮಾಡಿ, ಮಾರಾಟ ಮಾಡಿದರೆ ಅಧಿಕ ಆದಾಯ ಗಳಿಸಬಹುದು. ಮಹಿಳೆಯರು ಸ್ವಾವಲಂಬನೆಯತ್ತ ಸಾಗಬೇಕು. ವಿದ್ಯೆಯಿಲ್ಲ, ವ್ಯಾಪಾರ ಗೊತ್ತಿಲ್ಲ, ಮಾರುಕಟ್ಟೆಯಿಲ್ಲ ಎಂಬ ಕೀಳರಿಮೆ ಬಿಟ್ಟು ಉದ್ಯಮ ಆರಂಭಿಸಿದರೆ ಎಲ್ಲವೂ ಸಾಧ್ಯವಾಗುತ್ತದೆ. ತಾಲ್ಲೂಕಿನ ಎಲ್ಲ ಮಹಿಳೆಯರು ಸ್ವಾವಲಂಬಿಯಾಗಬೇಕು ಎಂಬುದೇ ನಮ್ಮ ಆಶಯ’ ಎನ್ನುತ್ತಾರೆ ಸಂಘದ ಸದಸ್ಯೆ ಆದ್ರಿಕಟ್ಟೆ ಶೋಭಾ. 

ಜನರು ಕಲಬೆರಕೆ ರಹಿತ ಸಿರಿಧಾನ್ಯದ ಆಹಾರಗಳನ್ನು ಸೇವಿಸಿ, ಆರೋಗ್ಯ ವೃದ್ಧಿಸಿಕೊಳ್ಳಬಹುದು ಎಂದು ಜನರಿಗೆ ಮನವರಿಕೆ ಮಾಡಿಕೊಡುತ್ತಾ, ಸಂಘದ ಮಹಿಳೆಯರು ಸ್ವಾವಲಂಬನೆ ಸಾಧಿಸುತ್ತಾ,  ಇತರರಿಗೆ ಮಾದರಿಯಾಗಿದ್ದಾರೆ.

ಓನಕೆ ಓಬವ್ವ ಮಹಿಳಾ ಸಂಘದವರು ತಯಾರಿಸಿದ ಉತ್ಪನ್ನಗಳನ್ನು ಪ್ರದರ್ಶಿಸುತ್ತಿರುವುದು
ಓನಕೆ ಓಬವ್ವ ಮಹಿಳಾ ಸಂಘದವರು ತಯಾರಿಸಿದ ಉತ್ಪನ್ನಗಳನ್ನು ಪ್ರದರ್ಶಿಸುತ್ತಿರುವುದು
ಶೋಭಾ ಆದ್ರಿಕಟ್ಟೆ
ಶೋಭಾ ಆದ್ರಿಕಟ್ಟೆ
ಹೊಸದುರ್ಗದ ಯಾಲಕಪ್ಪನಹಟ್ಟಿ ಗ್ರಾಮದ ಮಹಿಳೆಯರಿಗೆ ಸಿರಿಧಾನ್ಯ ಉತ್ಪನ್ನಗಳ ತಯಾರಿಕೆ ಬಗ್ಗೆ ತರಬೇತಿ ನೀಡುತ್ತಿರುವ ಸುಮಾ ಪಿ.ಎಂ.
ಹೊಸದುರ್ಗದ ಯಾಲಕಪ್ಪನಹಟ್ಟಿ ಗ್ರಾಮದ ಮಹಿಳೆಯರಿಗೆ ಸಿರಿಧಾನ್ಯ ಉತ್ಪನ್ನಗಳ ತಯಾರಿಕೆ ಬಗ್ಗೆ ತರಬೇತಿ ನೀಡುತ್ತಿರುವ ಸುಮಾ ಪಿ.ಎಂ.
ಪಟ್ಟಣದಲ್ಲಿ ಒಂದು ಮಾಹಿತಿ ಕೇಂದ್ರ ಆರಂಭಿಸಿ ಯಾವುದೇ ಉತ್ಪನ್ನವಾದರೂ ಅದನ್ನು ನೇರವಾಗಿ ರೈತರಿಂದಲೇ ಖರೀದಿ ಮಾಡಿ ದಲ್ಲಾಳಿಗಳ ಹಾವಳಿ ತಪ್ಪಿಸುವ ಯೋಜನೆಯಿದೆ
ಶೋಭಾ ಆದ್ರಿಕಟ್ಟೆ ಸಂಘದ ಸದಸ್ಯೆ
ಮಹಿಳೆಯರು ಸ್ವಾವಲಂಬಿಗಳಾಗಬೇಕು. ಉದ್ಯಮ ಮಾಡುವ ಮನಸ್ಸಿದ್ದರೆ ನೂರು ದಾರಿಗಳನ್ನು ಹುಡುಕಬಹುದು. ನಾನು ಮಹಿಳೆ ನನ್ನಿಂದಾಗದು ಎಂಬ ಕೀಳರಿಮೆಯಿಂದ ಹೊರಬನ್ನಿ. ಶ್ರಮಪಟ್ಟರೇ ಎಲ್ಲವೂ ಸಾಧ್ಯ
- ಸುಮ ಪಿ.ಎಂ. ಸಂಘದ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT