ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪರಶುರಾಂಪುರ | ಬಿಸಿಲು: ಬ್ಯಾರೇಜ್‌ನಲ್ಲಿ ಈಜಾಟದ ಸಂಭ್ರಮ

Published 12 ಮೇ 2024, 5:36 IST
Last Updated 12 ಮೇ 2024, 5:36 IST
ಅಕ್ಷರ ಗಾತ್ರ

ಪರಶುರಾಂಪುರ: ಹೋಬಳಿಯಲ್ಲಿ 50 ಕಿ.ಮೀ. ಹರಿಯುವ ವೇದಾವತಿ ನದಿಯಲ್ಲಿ ಬಿರು ಬೇಸಿಗೆಯಲ್ಲೂ ನೀರು ಹರಿಯುತ್ತಿದೆ. ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಯುವಕರು ಬ್ಯಾರೇಜ್‌ನತ್ತ ಮುಖ ಮಾಡಿದ್ದಾರೆ. ಬ್ಯಾರೇಜ್‌ನಲ್ಲಿ ಯುವಕರು ಈಜಾಡಿ ಸಂಭ್ರಮಿಸುತ್ತಿದ್ದಾರೆ.

ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸುವ ಸಲುವಾಗಿ ವಾಣಿವಿಲಾಸ ಸಾಗರದಿಂದ 0.25 ಟಿಎಂಸಿ ಅಡಿ ನೀರನ್ನು ವೇದಾವತಿ ನದಿಗೆ ಬಿಡಲಾಗಿದ್ದು, ಈ ನೀರು ಚಳ್ಳಕೆರೆ ಮತ್ತು ಮೊಳಕಾಲ್ಮುರು ತಾಲ್ಲೂಕಿಗೆ ಹರಿಯುತ್ತದೆ. ಇದರಿಂದ ನದಿಯ ಅಕ್ಕಪಕ್ಕದ ಹಳ್ಳಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಈ ಭಾಗದಲ್ಲಿ ಅಂತರ್ಜಲ ಮಟ್ಟವು ಹೆಚ್ಚಾಗಿರುವುದರಿಂದ ರೈತರು ಸಹ ನೆಮ್ಮದಿಯ ನಿಟ್ಟುಸಿರುಬಿಡುವಂತಾಗಿದೆ.

ಹೋಬಳಿ ವ್ಯಾಪ್ತಿಯಲ್ಲಿ ಹರಿಯುವ ವೇದಾವತಿ ನದಿಯಲ್ಲಿ ಕಲಮರಹಳ್ಳಿ, ಗೊರ್ಲತ್ತು, ಬೊಂಬೆರಹಳ್ಳಿ, ಚೌಳೂರು, ಪರಶುರಾಂಪುರ, ಪಗಡಲಬಂಡೆ, ಹರವಿಗೊಂಡನಹಳ್ಳಿ ಮತ್ತು ಮೊದೂರುಗಳಲ್ಲಿ ಬ್ಯಾರೇಜ್‌ಗಳು ಇವೆ. ಈ ಬ್ಯಾರೇಜ್‌ಗಳು ಈಗ ಯುವಕರ ಈಜಾಟದ ನೆಚ್ಚಿನ ತಾಣಗಳಾಗಿವೆ.

ಹೋಬಳಿ ವ್ಯಾಪ್ತಿಯಲ್ಲಿ ಸದ್ಯ 39-42 ಡಿಗ್ರಿ ಉಷ್ಣಾಂಶವಿದೆ. ಬಿಸಿಲಿನ ಝಳಕ್ಕೆ ಹೈರಾಣಾಗಿರುವ ಜನರು ಕುಟುಂಬ ಸಮೇತ ನೀರಿನಲ್ಲಿ ಈಜಾಡಿ ಬಿಸಿಲಿನಿಂದ ಕೊಂಚ ಮುಕ್ತಿ ಪಡೆಯುತ್ತಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲದೇ ತುಮಕೂರು ಜಿಲ್ಲೆಯ ಪಾವಗಡ, ಆಂಧ್ರಪ್ರದೇಶದ ಜನರು ಸಹ ಇಲ್ಲಿಗೆ ಬರುತ್ತಿದ್ದಾರೆ.

ನದಿಯ ಬ್ಯಾರೇಜ್‌ನಲ್ಲಿ ಈಜಾಡುವಾಗ ಎಚ್ಚರವಹಿಸಬೇಕು. ಮಕ್ಕಳನ್ನು ಹೆಚ್ಚು ನೀರು ಇರುವ ಕಡೆ ಬಿಡಬಾರದು. ಮಕ್ಕಳನ್ನು ಒಂಟಿಯಾಗಿ ನದಿಯ ಕಡೆ ಕಳುಹಿಸಬೇಡಿ.
ರವಿಕುಮಾರ‌, ಎಇ, ಸಣ್ಣ ನೀರಾವರಿ ಇಲಾಖೆ
ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು 3-4 ಗಂಟೆಕಾಲ ನದಿಯಲ್ಲಿ ಈಜಾಡುವ ಮೂಲಕ ದೇಹವನ್ನು ತಂಪಾಗಿಸಿಕೊಳ್ಳುತ್ತೇವೆ.
ಶಿವರಾಜ ಪರಶುರಾಂಪುರ
ಪರಶುರಾಂಪುರ ಹೋಬಳಿಯ ಗೊರ್ಲತ್ತು ಬ್ಯಾರೆಜ್ ನಲ್ಲಿ ಈಜಾಡುತ್ತಿರುವ ಯುವಕರು
ಪರಶುರಾಂಪುರ ಹೋಬಳಿಯ ಗೊರ್ಲತ್ತು ಬ್ಯಾರೆಜ್ ನಲ್ಲಿ ಈಜಾಡುತ್ತಿರುವ ಯುವಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT