ಸೋಮವಾರ, ಆಗಸ್ಟ್ 8, 2022
22 °C
ಆರ್ಥಿಕ ಸ್ಥಿತಿಗತಿ, ಕೋವಿಡ್ ಆತಂಕ, ವಿದ್ಯಾಗಮ, ಸರ್ಕಾರಿ ಶಾಲಾ ಶಿಕ್ಷಕರ ಪ್ರಯತ್ನ

ಮಂಗಳೂರು: ಸರ್ಕಾರಿ ಶಾಲೆಗಳಲ್ಲಿ ಹೆಚ್ಚುತ್ತಿರುವ ದಾಖಲಾತಿ

ಹರ್ಷವರ್ಧನ ಪಿ.ಆರ್. Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಈ ಶೈಕ್ಷಣಿಕ ವರ್ಷದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳವಾಗುತ್ತಿದ್ದು, ಸೆಪ್ಟೆಂಬರ್‌ ಮೊದಲ ವಾರದಲ್ಲೇ 349 ಶಾಲೆಗಳಲ್ಲಿ ಕಳೆದ ವರ್ಷಕ್ಕಿಂತ 2,160 ದಾಖಲಾತಿ ಹೆಚ್ಚಿದೆ.

ವಿವಿಧ ಇಲಾಖೆ ಹಾಗೂ ಪಠ್ಯಕ್ರಮಗಳಿಗೆ ಸೇರಿದ 1,875 (1ರಿಂದ 10ನೇ ತರಗತಿ) ಶಾಲೆಗಳು ಜಿಲ್ಲೆಯಲ್ಲಿವೆ. ಇದರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಡಿಯಲ್ಲಿ 1,071 ಸರ್ಕಾರಿ ಶಾಲೆಗಳಿವೆ.

‘ಈ ಬಾರಿ ಸರ್ಕಾರಿ ಶಾಲಾ ಶಿಕ್ಷಕರಿಗೆ ಇತರ ಜವಾಬ್ದಾರಿ ವಹಿಸದ ಕಾರಣ ಪೂರ್ಣ ಪ್ರಮಾಣದಲ್ಲಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು, ‘ವಿದ್ಯಾಗಮ’ ಯಶಸ್ವಿಯಾಗಿದೆ. ಇನ್ನೊಂದೆಡೆ ಬಹುತೇಕ ಖಾಸಗಿ ಶಾಲೆಗಳಲ್ಲಿ ಕಾಯಂ ಶಿಕ್ಷಕರಿಲ್ಲ, ಬೇಸಿಗೆಯಲ್ಲಿ ಶಿಕ್ಷಕರಿಗೆ ಸಂಬಳವಿಲ್ಲ. ಇದರಿಂದ ಅವರನ್ನು ತೊಡಗಿಸಿಕೊಳ್ಳಲು ಸಾಧ್ಯವಾಗದೇ ಗೊಂದಲಕ್ಕೀಡಾಗಿವೆ’ ಎನ್ನುತ್ತಾರೆ ಶಿಕ್ಷಣ ತಜ್ಞ, ಸಾಹಿತಿ ಅರವಿಂದ ಚೊಕ್ಕಾಡಿ.

‘ಖಾಸಗಿ ಶಾಲೆಗಳು ಅನಿಶ್ಚಿತವಾಗಿದೆ. ಆದರೆ, ಸರ್ಕಾರಿ ಶಾಲೆಗಳು ವಿದ್ಯಾಗಮದ ಮೂಲಕವಾದರೂ ಕಲಿಕಾ ಕಾರ್ಯವನ್ನು ನಡೆಸುತ್ತಿವೆ. ಆದ್ದರಿಂದ ಕಲಿಕೆ ಮುಖ್ಯ ಎನ್ನುವ ಪಾಲಕರು ಸಹಜವಾಗಿ ಸರ್ಕಾರಿ ಶಾಲೆಗಳ ಕಡೆಗೆ ಒಲವು ತೋರಿದ್ದಾರೆ’ ಎಂದು ವಿಶ್ಲೇಷಿಸಿದರು.

‘ಶಾಲಾ ಸಮೀಪದ ಫ್ಲ್ಯಾಟ್‌ಗೆ ಬೋಧನೆಗೆ ಹೋಗುತ್ತಿದ್ದೆವು. ಅಲ್ಲಿನ ಇತರ ಮನೆಗಳಲ್ಲಿದ್ದ ಖಾಸಗಿ ಶಾಲಾ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿಗಳು ನಡೆಯುತ್ತಿದ್ದವು. ಅದು ಪರಿಣಾಮಕಾರಿ ಅಲ್ಲ ಎಂದು ಅರಿವಾದ ಪೋಷಕರು, ‘ನಮ್ಮ ಮಕ್ಕಳಿಗೂ ನೀವೇ ಪಾಠ ಹೇಳಿಕೊಡಿ’ ಎಂದು ವಿನಂತಿಸಿದ್ದರು. ಈ ಹಿಂದೆ ಅವರೆಲ್ಲ ಸರ್ಕಾರಿ ಶಾಲೆಗಳಿಗೆ ಸೇರಿಸಲು ಹಿಂದೇಟು ಹಾಕುತ್ತಿದ್ದರು. ಇಂತಹ ಹಲವಾರು ನಿದರ್ಶನಗಳಿವೆ’ ಎನ್ನುತ್ತಾರೆ ಪುತ್ತೂರು ಮುಕ್ವೆ ಶಾಲೆಯ ಶಿಕ್ಷಕ ಚರಣ್‌ ಕುಮಾರ್.

‘ಆನ್‌ಲೈನ್‌ ತರಗತಿ ಹಾಗೂ ನೇರ ಗುರು–ಶಿಷ್ಯ ಸಂಬಂಧದ ಕಲಿಕೆ ಅರಿವಾಗಲು ಶುರುವಾಗಿದೆ. ವ್ಯಾವಹಾರಿಕ ಹಾಗೂ ಮಾನವೀಯತೆ ನಡುವಿನ ವ್ಯತ್ಯಾಸವನ್ನು ಲಾಕ್‌ಡೌನ್ ಬಿಚ್ಚಿಟ್ಟಿದೆ’ ಎನ್ನುತ್ತಾರೆ ಅವರು.

‘ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕವಾಗಿ ಅರ್ಹ ಶಿಕ್ಷಕರು ಇರುತ್ತಾರೆ. ಆದರೆ, ಶಿಕ್ಷಣ ಮಾರುಕಟ್ಟೆ ವ್ಯವಸ್ಥೆಯಲ್ಲಿ ಜನರಿಗೆ ಇದರ ಅರಿವು ಆಗಿರಲಿಲ್ಲ. ಈಗ ಅರ್ಥವಾಗುತ್ತಿದೆ’ ಎನ್ನುತ್ತಾರೆ ಪೋಷಕರಾದ ಕಿಟ್ಟಣ್ಣ ರೈ.

‘ಲಾಕ್‌ಡೌನ್‌ ಕಾರಣ ಕೆಲಸ ಇಲ್ಲದೇ ಕಷ್ಟವಾಗಿತ್ತು. ಖಾಸಗಿ ಶಾಲೆಗಳಿಂದ ಶುಲ್ಕ ಪಾವತಿಗೆ ಆಗಾಗ್ಗೆ ಸೂಚನೆ ಬರುತ್ತಿತ್ತು. ಆದರೆ, ಇತ್ತ ಸರ್ಕಾರಿ ಶಾಲಾ ಶಿಕ್ಷಕರು ಮನೆಗೆ ಬಂದು ಪಾಠ ಹೇಳಿ ಕೊಡುತ್ತಿದ್ದರು. ಇನ್ನೊಂದೆಡೆ ಕೆಲಸ ಕಳೆದುಕೊಂಡ ಹಲವರು ಊರಿಗೆ ವಾಪಸ್ ಆಗಿದ್ದಾರೆ. ಇವೆಲ್ಲವೂ ಪ್ರಭಾವ ಬೀರಿವೆ’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಚಿಸದ ಪೋಷಕರು ಪ್ರತಿಕ್ರಿಯಿಸಿದರು.

‘ಕೊರೊನಾ ಕಾರಣ ಸಮೀಪದ ಶಾಲೆಗೆ ಕಳುಹಿಸುವುದು ಉತ್ತಮ ಎನ್ನುವ ಭಾವನೆಯೂ ಮೂಡುತ್ತಿದೆ’ ಎನ್ನುತ್ತಾರೆ ಅವರು.

ಮೂಡುಬಿದಿರೆಯ ಕಲ್ಲಮುಂಡ್ಕೂರಿನ ಪಿದ್ಮಲೆ ಶಾಲೆಯಲ್ಲಿ ಕಳೆದ ವರ್ಷ ಒಬ್ಬ ಹಾಗೂ ಬಂಟ್ವಾಳದ ಬಾಳ್ತಿಲದಲ್ಲಿ ಇಬ್ಬರು ವಿದ್ಯಾರ್ಥಿಗಳಿದ್ದರು. ಹೀಗೆ 10 ಮಕ್ಕಳಿಗಿಂತ ಕಡಿಮೆ ಇದ್ದ ಶಾಲೆಗಳಲ್ಲೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. 

ಆಂಗ್ಲ ಮಾಧ್ಯಮ, ಮೂಲ ಸೌಕರ್ಯ, ಗುಣಮಟ್ಟದ ಶಿಕ್ಷಕರು

ಬಂಟ್ವಾಳ ತಾಲ್ಲೂಕಿನ ದಡ್ಡಲಕಾಡು ಸರ್ಕಾರಿ ಪ್ರೌಢಶಾಲೆ (1ರಿಂದ 9)ಯಲ್ಲಿ ಈ ಬಾರಿ 285 ಮಕ್ಕಳು ಹೆಚ್ಚುವರಿಯಾಗಿ ದಾಖಲಾಗಿದ್ದು, ಪ್ರವೇಶಾತಿ ಪ್ರಕ್ರಿಯೆ ಮುಂದುವರಿದಿದೆ. 

‘ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ ಪರಿಚಯಿಸಿರುವುದು ಹಾಗೂ ಮೂಲ ಸೌಕರ್ಯ ಕಲ್ಪಿಸುತ್ತಿರುವುದು ದಾಖಲಾತಿ ಹೆಚ್ಚಳಕ್ಕೆ ಕಾರಣ. ಈ ಬಾರಿ ಜನರ ಆರ್ಥಿಕ ಸ್ಥಿತಿಗತಿಯೂ ಪ್ರಭಾವ ಬೀರುತ್ತಿದೆ’ ಎನ್ನುತ್ತಾರೆ ದಡ್ಡಲಕಾಡು ಶಾಲೆ ದತ್ತು ಪಡೆದಿರುವ ಶ್ರೀ ದುರ್ಗಾ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷರೂ ಆಗಿರುವ ಸರ್ಕಾರಿ ಶಾಲೆ ಉಳಿಸಿ–ಬೆಳೆಸಿ ರಾಜ್ಯ ಸಮಿತಿ ಅಧ್ಯಕ್ಷ ಪ್ರಕಾಶ್ ಅಂಚನ್.

93,143 ವಿದ್ಯಾರ್ಥಿಗಳು

ಸೆಪ್ಟೆಂಬರ್ 30ರ ತನಕ ಶಾಲಾ ದಾಖಲಾತಿ ಮುಂದುವರಿಯಲಿದ್ದು, ಆಗಸ್ಟ್ ಅಂತ್ಯಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ 1,071 ಸರ್ಕಾರಿ ಶಾಲೆಗಳಲ್ಲಿ 93,143 ವಿದ್ಯಾರ್ಥಿಗಳು ದಾಖಲಾಗಿದ್ದರು. ಇದು ಕಳೆದ ವರ್ಷಕ್ಕಿಂತ 2,148 ಕಡಿಮೆ ಇದ್ದರೂ, ಆ ಬಳಿಕ ದಾಖಲಾತಿಯು ಗಣನೀಯವಾಗಿ ಹೆಚ್ಚುತ್ತಿದೆ ಎಂದು ಇಲಾಖಾ ಮೂಲಗಳು ದೃಢಪಡಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು