ಶುಕ್ರವಾರ, ಜನವರಿ 27, 2023
27 °C
ಬಂಟ್ವಾಳ ವಿಧಾನಸಭಾ ಕ್ಷೇತ್ರ: ಬಿಜೆಪಿ, ಕಾಂಗ್ರೆಸ್‌ ನಡುವೆ ಪೈಪೋಟಿ

ದಕ್ಷಿಣ ಕನ್ನಡ | ಬಂಟ್ವಾಳದಲ್ಲಿ ಹಾಲಿ–ಮಾಜಿಗಳ ‘ವಾಕ್ಸಮರ’ ತುರುಸು

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

ರಮಾನಾಥ ರೈ ಹಾಗೂ ರಾಜೇಶ್ ನಾಯ್ಕ್

ಮಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯ ಟಿಕೆಟ್ ಪಡೆಯಲು ತೀವ್ರ ತುರುಸು ಇಲ್ಲದಿದ್ದರೂ, ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಮತ್ತು ಮಾಜಿ ಶಾಸಕರ ನಡುವೆ ಸಮಾವೇಶ ಸಂಘಟನೆ, ಪರಸ್ಪರ ದೂಷಣೆ, ವಾಕ್ಸಮರದಲ್ಲಿ ಪೈಪೋಟಿ ಏರ್ಪಟ್ಟಿದೆ.

ಕಾಂಗ್ರೆಸ್‌ನಿಂದ ಮಾಜಿ ಸಚಿವ ರಮಾನಾಥ ರೈ ಸೇರಿದಂತೆ ಮೂವರು ಆಕಾಂಕ್ಷಿಗಳು ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದರೆ, ಬಿಜೆಪಿಯಲ್ಲಿ ಹಲವು ಆಕಾಂಕ್ಷಿಗಳು ಇದ್ದರೂ, ಹಾಲಿ ಶಾಸಕರಿಗೆ ಹೈಕಮಾಂಡ್ ಇನ್ನೊಮ್ಮೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚು ಎಂಬುದು ಪಕ್ಷದ ಕಾರ್ಯಕರ್ತರ ಅಭಿಪ್ರಾಯ.

ಕ್ಷೇತ್ರದ ಮಾಜಿ ಶಾಸಕ ರಮಾನಾಥ ರೈ ಅವರು ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದವರು, ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್‌ ಪಕ್ಷದ ಪ್ರಬಲ ನಾಯಕರಾಗಿ ಗುರುತಿಸಿಕೊಂಡವರು. 2018ರ ವಿಧಾನಸಭೆ ಚುನಾವಣೆಯಲ್ಲಿ ಸೋತರೂ, ಕ್ಷೇತ್ರ ಸಂಚಾರ ಮುಂದುವರಿಸಿ, ಜನರು ಹಾಗೂ ಕಾರ್ಯಕರ್ತರ ಜತೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದಾರೆ.

ಹಾಲಿ ಶಾಸಕ ರಾಜೇಶ್ ನಾಯ್ಕ್ ಅವರು ಮೂಲತಃ ಮಂಗಳೂರು ಉತ್ತರ ಕ್ಷೇತ್ರಕ್ಕೆ ಸೇರಿದವರು. ಪ್ರಗತಿಪರ ಕೃಷಿಕರಾಗಿರುವ ಅವರು 2013ರ ಚುನಾವಣೆಯಲ್ಲಿ ರಮಾನಾಥ ರೈ ವಿರುದ್ಧ ಸೋತು, ಮತ್ತೆ 2018ರ ಚುನಾವಣೆಯಲ್ಲಿ ಅವರ ವಿರುದ್ಧವೇ ಗೆಲುವು ಸಾಧಿಸಿದವರು.  ‘ಕ್ಷೇತ್ರಕ್ಕೆ ₹ 1,700 ಕೋಟಿ ಅನುದಾನ ತಂದಿದ್ದು, ಈ ಅವಧಿಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಜತೆಗೆ, ಅತಿಹೆಚ್ಚು ಅಂದರೆ 1,462 ರಸ್ತೆಗಳನ್ನು ನಿರ್ಮಿಸಿದ್ದು ದಾಖಲೆ. ಇದು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ವರವಾಗಲಿದೆ’ ಎಂದು ಅವರು ಹೋದಲ್ಲೆಲ್ಲ ಹೇಳಿಕೊಳ್ಳುತ್ತಿದ್ದಾರೆ.

‘ಬಿಜೆಪಿಯಲ್ಲಿ ಹಲವು ಆಕಾಂಕ್ಷಿಗಳು ಇದ್ದಾರೆ. ಬಂಟ್ವಾಳ ಕ್ಷೇತ್ರದಲ್ಲಿ ಸಮರ್ಥ ನಾಯಕರಿದ್ದರೂ, ಹೊರಗಿನವರಿಗೆ ಈ ಕ್ಷೇತ್ರದ ಟಿಕೆಟ್ ದೊರೆಯುತ್ತಿದೆ. ಈ ಹಿಂದೆ ಕ್ಷೇತ್ರದಿಂದ ಆಯ್ಕೆಯಾಗಿದ್ದ ನಾಗರಾಜ ಶೆಟ್ಟಿ, ಪರಾಭವಗೊಂಡಿದ್ದ ಶಕುಂತಳಾ ಶೆಟ್ಟಿ ಕೂಡ ಹೊರಗಿನವರು. ಬಂಟರ ಜತೆ, ಬಿಲ್ಲವರು, ಹಿಂದುಳಿದ ವರ್ಗದವರು ನಿರ್ಣಾಯಕ ಮತದಾರರಾಗಿದ್ದರೂ, ಟಿಕೆಟ್ ನೀಡುವಲ್ಲಿ ಬಂಟ ಸಮುದಾಯಕ್ಕೆ ಪ್ರಾತಿನಿಧ್ಯ ದೊರೆಯುತ್ತಿದೆ. ಅಲ್ಲದೆ, ಮೂಲ ಬಿಜೆಪಿಗರು ಕಡೆಗಣನೆಯಾಗಿದ್ದಾರೆ’ ಎಂದು ಬಿಜೆಪಿ ಕಾರ್ಯಕರ್ತರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಸಮಾಧಾನಿಸುವ ಪ್ರಯತ್ನ:

ಶಾಸಕರು ಇತ್ತೀಚೆಗೆ ಕ್ಷೇತ್ರದಲ್ಲಿ ಹಿರಿಯರ ಸಮ್ಮಿಲನ ಮಾಡುವ ಮೂಲಕ ಪಕ್ಷದೊಳಗಿನ ಭಿನ್ನಾಭಿಪ್ರಾಯ ಶಮನ, ಹಿರಿಯರನ್ನು ಸಮಾಧಾನ ಪಡಿಸಲು ಯತ್ನಿಸುತ್ತಿದ್ದಾರೆ. ಕಮಲೋತ್ಸವ ನಡೆಸಿ, ಜನಬಲ ಸಾಮರ್ಥ್ಯ ಪ್ರದರ್ಶನ ಮಾಡಿದ್ದಾರೆ. ದೇವಾಲಯಗಳಿಗೆ ಹೆಚ್ಚು ನೆರವು ನೀಡುವ ಮೂಲಕ ಹಿಂದುತ್ವದ ಆಧಾರದಲ್ಲಿ ಮತ ಕ್ರೋಡೀಕರಣದ ತಂತ್ರಗಾರಿಕೆ ಪ್ರಯೋಗಿಸುತ್ತಿದ್ದಾರೆ. ಈ ಅವಧಿಯಲ್ಲಿ ಕ್ಷೇತ್ರದಲ್ಲಿ ಹಿಂದಿನ ಅವಧಿಯಂತೆ ಕೋಮುಗಲಭೆ ನಡೆದಿಲ್ಲ ಎಂದು ಪ್ರತಿಪಾದಿಸುವ ಮೂಲಕ ಅಲ್ಪಸಂಖ್ಯಾತ ಮತಗಳ ಮೇಲೆಯೂ ಪರೋಕ್ಷ ಕಣ್ಣಿಟ್ಟಿದ್ದಾರೆ.

ಗುಂಪುಗಾರಿಕೆ:

ಜನರಿಗೆ ಸದಾ ಲಭ್ಯರಿರುವ ರಮಾನಾಥ ರೈ ಅವರು, ಕೋವಿಡ್ ಅವಧಿಯಲ್ಲಿ ಪಕ್ಷಭೇದವಿಲ್ಲದೆ ಎಲ್ಲರಿಗೂ ನೆರವಾಗಿ, ಜನರಿಗೆ ಇನ್ನಷ್ಟು ಹತ್ತಿರುವಾಗುವ ಪ್ರಯತ್ನ ಮಾಡಿದ್ದಾರೆ. ಬಹುವರ್ಷಗಳ ಬೇಡಿಕೆಯಾಗಿರುವ ತುಂಬೆಯಿಂದ ಸಜಿಪನಡು ನಡುವಿನ ಸೇತುವೆ, ಅಜಿಲಮೊಗರು– ಕಡೇಶ್ವಾಲ್ಯ ಸೇತುವೆಗಳ ಅಪೂರ್ಣ ಕಾಮಗಾರಿ, ಹಿಂದಿನ ಅವಧಿಯಲ್ಲಿ ಸಚಿವನಾಗಿ ಕ್ಷೇತ್ರದಲ್ಲಿ ತಾವು ಕೈಗೊಂಡಿದ್ದ ಕಾಮಗಾರಿಗಳ ಬಗ್ಗೆ ಜನರಿಗೆ ತಿಳಿಸಲು ಮನೆ–ಮನೆ ಭೇಟಿ ನೀಡುತ್ತಿದ್ದಾರೆ. ಬಿಜೆಪಿ ಸರ್ಕಾರದ ಲೋಪಗಳ ಬಗ್ಗೆ ಗಟ್ಟಿ ಧ್ವನಿ ಎತ್ತಿ, ಮತದಾರರ ಮನವೊಲಿಕೆಯಲ್ಲಿ ತೊಡಗಿದ್ದಾರೆ.

ರಮಾನಾಥ ರೈ ಜತೆಗೆ, ವಕೀಲ ಅಶ್ವನಿಕುಮಾರ್ ರೈ, ರಾಕೇಶ್ ಮಲ್ಲಿ ಕೂಡ ಟಿಕೆಟ್ ಬಯಸಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ರೋಟರಿ ಸದಸ್ಯರಾಗಿ, ಸಾಮಾಜಿಕ ಕಾರ್ಯಕರ್ತರಾಗಿ ಗುರುತಿಸಿಕೊಂಡಿರುವ ಅಶ್ವನಿಕುಮಾರ್ ಅವರು ಕಾಂಗ್ರೆಸ್ ಟಿಕೆಟ್‌ನ ಪ್ರಬಲ ಆಕಾಂಕ್ಷಿ. ಹೀಗಾಗಿ, ಕಾಂಗ್ರೆಸ್‌ನಲ್ಲಿ ಸೃಷ್ಟಿಯಾಗಿರುವ ಎರಡು ಗುಂಪುಗಳು ನಾಯಕರ ಎದುರಲ್ಲಿ ಮಾತ್ರ ತೇಪೆ ಹಚ್ಚಿದಂತೆ ಕಾಣಿಸಿಕೊಳ್ಳುತ್ತವೆ.

ಜೆಡಿಎಸ್‌ನಲ್ಲಿ ಸಕ್ರಿಯರಾಗಿದ್ದ ಇಬ್ಬರು ನಾಯಕರು ಬೇರೆ ಪಕ್ಷಕ್ಕೆ ಹೋಗಿದ್ದು, ಅಸ್ತಿತ್ವ ಉಳಿಸಿಕೊಳ್ಳಲು ಪಕ್ಷ ಹೆಣಗಾಡುತ್ತಿದೆ. ಆಮ್‌ ಆದ್ಮಿ ಪಾರ್ಟಿ ಕ್ಷೇತ್ರದಲ್ಲಿ ಕಣಕ್ಕಿಳಿಸಲು ಸಮರ್ಥ ಅಭ್ಯರ್ಥಿಯ ಹುಡುಕಾಟದಲ್ಲಿದೆ.

 ‘ತಳಮಟ್ಟದಲ್ಲಿ ಪಕ್ಷ ಸಂಘಟನೆ’

‘ಶಾಸಕರು ಜನರಿಗೆ ತೃಪ್ತಿ ತರುವಂತಹ ಕೆಲಸ ಮಾಡಿದ್ದಾರೆ. ತಳಮಟ್ಟದಲ್ಲಿ ಪಕ್ಷ ಸಂಘಟಿಸಿದ್ದು, ಇದರ ಭಾಗವಾಗಿ ಅನೇಕ ಸಮಾವೇಶಗಳನ್ನು ನಡೆಸಿದ್ದೇವೆ. ರೈತ ಸಮಾವೇಶ, ಮಹಿಳಾ ಸಮಾವೇಶ, ಒಬಿಸಿ, ಎಸ್ಸಿ, ಎಸ್ಟಿ ಸಮಾವೇಶ ಮಾಡುವ ಸಿದ್ಧತೆಯಲ್ಲಿದ್ದೇವೆ. ಹಲವರು ಆಕಾಂಕ್ಷಿಗಳು ಇದ್ದರೂ, ಹಾಲಿ ಶಾಸಕರಿಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ಪಕ್ಷದ ಹೈಕಮಾಂಡ್ ಆಯ್ಕೆ ಮಾಡಿದ ಅಭ್ಯರ್ಥಿಪರ ಕಾರ್ಯಕರ್ತರು ಕೆಲಸ ಮಾಡುತ್ತಾರೆ. ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಕಷ್ಟವಾಗಲಾರದು’ ಎನ್ನುತ್ತಾರೆ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ದೇವಪ್ಪ ಪೂಜಾರಿ.

‘ಮತವಾಗಿ ಪರಿವರ್ತಿಸುವ ಪ್ರಯತ್ನ’

‘ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ನಡೆಯುತ್ತಿದೆ. ಪಂಚಾಯಿತಿಯಲ್ಲಿ ಒಂದು ದಿನ ಕಾರ್ಯಕ್ರಮ ಹಾಕಿಕೊಂಡು ಅನಾರೋಗ್ಯಪೀಡಿತರು, ಕ್ಷೇತ್ರದ ಪ್ರಮುಖರ ಮನೆಗೆ ಭೇಟಿ, ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದ ಶಮನ ಮಾಡುವ ಕೆಲಸವಾಗುತ್ತಿದೆ. ಮತದಾರರ ಪಟ್ಟಿಯಲ್ಲಿ ಆಗಿರುವ ಗೊಂದಲದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ದ್ವೇಷರಾಜಕಾರಣ ಮಾಡುವ ಬಿಜೆಪಿಗೆ ದೌರ್ಬಲ್ಯಗಳನ್ನು ಜನರಿಗೆ ಮನದಟ್ಟು ಮಾಡಿ, ಮತವಾಗಿ ಪರಿವರ್ತಿಸುವ ಪ್ರಯತ್ನ ಮಾಡುತ್ತಿದ್ದೇವೆ. ರಾಮಾನಾಥ ರೈ ಅವರು ಇದು ಕೊನೆಯ ಚುನಾವಣೆ ಎಂದು ಹೇಳಿದ್ದು, ಅವರಿಗೆ ಟಿಕೆಟ್ ಸಿಗಲು ಪ್ರಯತ್ನಿಸಿ, ಗೆಲ್ಲಿಸುವುದು ನಮ್ಮ ಗುರಿಯಾಗಿದೆ’ ಎನ್ನುತ್ತಾರೆ ಕಾಂಗ್ರೆಸ್ ಬಂಟ್ವಾಳ ಬ್ಲಾಕ್ ಅಧ್ಯಕ್ಷ ಬೇಬಿ ಕುಂದರ್.

‘ಜೆಡಿಎಸ್‌ ಬೆಂಬಲಿಸುವ ವಿಶ್ವಾಸ’

‘ಕೆಲವರು ಪಕ್ಷಾಂತರಗೊಂಡಿದ್ದು ಪಕ್ಷಕ್ಕೆ ಸ್ವಲ್ಪ ಹಿನ್ನಡೆಯಾಗಿದೆ. ಜನರು ಕಾಂಗ್ರೆಸ್ ಅನ್ನು ತಿರಸ್ಕರಿಸಿದ್ದಾರೆ. ಕೋಮುವಾದಿ ಪಕ್ಷವಾಗಿರುವ ಬಿಜೆಪಿ ಬಗ್ಗೆ ಜನರಿಗೆ ಒಲವು ಇಲ್ಲ. ಹೀಗಾಗಿ ಜನರು ಜೆಡಿಎಸ್ ಬೆಂಬಲಿಸುವ ವಿಶ್ವಾಸ ಇದೆ’ ಎನ್ನುತ್ತಾರೆ ಜೆಡಿಎಸ್ ಅಲ್ಪಸಂಖ್ಯಾತ ಜಿಲ್ಲಾ ಘಟಕದ ಅಧ್ಯಕ್ಷ ಹಾರೂನ್ ರಶೀದ್ ಬಂಟ್ವಾಳ.

(ಪೂರಕ ಮಾಹಿತಿ: ಮೋಹನ್ ಶ್ರೀಯಾನ್)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.