ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಕೈವಾಡ ಇದೆ. ಹಾಗಾಗಿ ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ವಹಿಸಬೇಕು ಎಂದು ಆಗ್ರಹಿಸಿ ಬಿಜೆಪಿಯ ಶಾಸಕರು ಹಾಗೂ ಸಂಸದರು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ಬಳಿಕ ಸುದ್ದಿಗಾರ ಜೊತೆ ಮಾತನಾಡಿದ ಶಾಸಕ ಸುನಿಲ್ ಕುಮಾರ್, ‘ಈ ಕೊಲೆಯ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ. ಜಿಲ್ಲೆಯ ಶಾಸಕರು ಹಾಗೂ ಸಂಸದರು ಪೊಲೀಸ್ ಕಮಿಷನರ್ ಅನ್ನು ಭೇಟಿಯಾಗಿ ಈ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ್ದೇವೆ. ಸಾರ್ವಜನಿಕವಾಗಿ ಹಾಗೂ ನಮ್ಮಲ್ಲಿರುವ ಅನುಮಾನಗಳನ್ನು ಹೇಳಿಕೊಂಡಿದ್ದೇವೆ. ಈ ಪ್ರಕರಣದಲ್ಲಿ ಪಿಎಫ್ಐ ಕಾರ್ಯಕರ್ತರು ದೊಡ್ಡ ಪ್ರಮಾಣದಲ್ಲಿ ಭಾಗಿಯಾಗಿದ್ದು, ಅಂತರರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಿಂದ ಹಣಕಾಸು ಪೂರೈಕೆಯಾಗಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಸ್ಥಳೀಯ ಪೊಲೀಸರು ಇದನ್ನು ತನಿಖೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಯಾವುದೇ ಒತ್ತಡಕ್ಕೆ ಒಳಗಾಗದೇ ಈ ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸಬೇಕು ಎಂದು ಕಮಿಷನರ್ ಅವರನ್ನು ಕೋರಿದ್ದೇವೆ’ ಎಂದರು.

‘ಈ ಪ್ರಕರಣದಲ್ಲಿ ಎಂಟು ಮಂದಿಯನ್ನು ಮಾತ್ರ ಬಂಧಿಸಲಾಗಿದೆ. ಕೃತ್ಯದಲ್ಲಿ ನೇರ ಕೈವಾಡವಿರುವ ಆರೋಪಿಗಳನ್ನು, ಆ ಆರೋಪಿಗಳಿಗೆ ಮನೆಯಲ್ಲಿ ಆಶ್ರಯ ನೀಡಿದವರು, ಸುಹಾಸ್ ಶೆಟ್ಟಿ ಚಲನವಲನ ಗಮನಿಸಿ ಆರೋಪಿಗಳಿಗೆ ಮಾಹಿತಿ ನೀಡಿದವರು, ವಾಹನಗಳನ್ನು ಒದಗಿಸಿದವರು, ಹಣಕಾಸು ನೆರವು ನೀಡಿದವರು ಸೇರಿ ಈ ಕೃತ್ಯಕ್ಕೆ ಪರೋಕ್ಷವಾಗಿ ಸಹಕರಿಸಿದವರೆಲ್ಲರನ್ನು ಶೀಘ್ರವೇ ಬಂಧಿಸಬೇಕು’ ಎಂದು ಒತ್ತಾಯಿಸಿದರು.

‘ಬಜಪೆ ಪೊಲೀಸ್ ಸ್ಟೇಷನ್ ಕಾನ್ಸ್ಟೆಬಲ್ ಹತ್ಯೆ ಹಿಂದೆ ಇದ್ದಾರೆ ಎಂಬ ಆರೋಪದ ಬಗ್ಗೆಯೂ ಕಮಿಷನರ್ ಗಮನ ಸೆಳೆದಿದ್ದೇವೆ. ಒಂದೆರಡು ದಿನಗಳಲ್ಲ ನಡೆದ ಕೊಲೆ ಇದಲ್ಲ. ಇದು ಪೂರ್ವನಿರ್ಧಾರಿತ ಕೃತ್ಯ. ಮೇಲ್ನೋಟಕ್ಕೆ ಎಂಟು ಜನ ಕೃತ್ಯ ನಡೆಸಿದಂತೆ ಕಂಡುಬಂದರೂ, 35ರಿಂದ 40 ಮಂದಿ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಚರ್ಚೆಯಾಗುತ್ತಿದೆ. ಪೊಲೀಸರು ಇದರ ತನಿಖೆಯನ್ನು ಚುರುಕುಗೊಳಿಸಿ ಸುಹಾಸ್ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು. ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿದವರಿಗೆ ಪೊಲೀಸರ ಬಗ್ಗೆ ಭಯ ನಿರ್ಮಾಣವಾಗುವಂತೆ ಕ್ರಮವಹಿಸಬೇಕು ಎಂದು ಆಗ್ರಹಿಸಿದ್ದೇವೆ’ ಎಂದು ತಿಳಿಸಿದರು.

ಜಿಲ್ಲೆಯ ಹಿಂದೂ ಸಮಾಜ ಸುಹಾಸ್ ಕುಟುಂಬದ ಹಿಂದೆ ಇದೆ. ತನಿಖೆಯನ್ನು ಹಗುರವಾಗಿ ಪರಿಗಣಿಸಿದರೆ ಪ್ರತಿಭಟನೆ ನಡೆಸುತ್ತೇವೆ ಎಂದು ಪೊಲೀಸ್ ಕಮಿಷನರ್ಗೆ ಎಚ್ಚರಿಕೆ ನೀಡಿದ್ದೇವೆ. ಮೂರು ನಾಲ್ಕು ದಿನ ಕಾಯ್ದು, ತನಿಖೆ ಯಾವ ರೀತಿ ಸಾಗುತ್ತಿದೆ ನೋಡಿಕೊಂಡು ಪ್ರತಿಭಟನೆ ನಡೆಸುವ ಬಗ್ಗೆ ತೀರ್ಮಾನಿಸುತ್ತೇವೆ ಎಂದು ಸುನಿಲ್ ತಿಳಿಸಿದರು.

‘ಶುಕ್ರವಾರ ಬೆಳಿಗ್ಗೆ 11ಕ್ಕೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಶಾಸಕರು, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕರ ನೇತೃತ್ವದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರನ್ನು ಭೇಟಿ ಮಾಡಿ, ಪ್ರಕರಣದ ತನಿಖೆಯನ್ನು ಎನ್ಐಎಗೆ ಒಪ್ಪಿಸಲು ಮಧ್ಯಪ್ರವೇಶ ಮಾಡುವಂತೆ ಮನವಿ ಸಲ್ಲಿಸುತ್ತೇವೆ’ ಎಂದು ತಿಳಿಸಿದರು.

ಬಿಜೆಪಿ ಅಧಿಕಾರದ ಅವಧಿಯಲ್ಲಿ ಸುಹಾಸ್ ಹೆಸರು ರೌಡಿ ಪಟ್ಟಿಗೆ ಸೇರಿಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ರೌಡಿಶೀಟ್ ತೆರೆಯುವುದು ಸಹಜ ಪ್ರಕ್ರಿಯೆ. ಹೋರಾಟಗಾರರನ್ನು ಮತ್ತು ಕೊಲೆಗಾರರನ್ನು ಒಂದೇ ತಕ್ಕಡಿಯಲ್ಲಿ ತೂಗಲಾಗದು. ಶಾಸಕನಾಗುವ ಸಂದರ್ಭದಲ್ಲಿ ನನ್ನ ಮೇಲೆ 27 ಮೊಕದ್ದಮೆಗಳಿದ್ದವು. ದೊಂಬಿ, ಕೊಲೆ ಯತ್ನದಂತಹ ಪ್ರಕರಣಗಳೂ ದಾಖಲಾಗಿದ್ದವು. ಅಂದ ಮಾತ್ರಕ್ಕೆ ನಾವು ಕ್ರಿಮಿನಲ್ಗಳಲ್ಲ. ನಿರ್ದಿಷ್ಟ ಗುರಿ ಇಟ್ಟುಕೊಂಡು ಹೋರಾಟ ಮಾಡುತ್ತಿದ್ದವರು. ಸುಹಾಸ್ ಶೆಟ್ಟಿ ಕೂಡಾ ಸಿದ್ಧಾಂತಕ್ಕಾಗಿ ಹೋರಾಟ ಮಾಡುತ್ತಿದ್ದ ವ್ಯಕ್ತಿ. ಹೋರಾಟ ಮಾಡುವಾಗ ದಾಖಲಾಗುವ ಮೊಕದ್ದಮೆಗಳನ್ನು ಎದುರಿಸಿದ್ದೇವೆ. ಮುಂದೆಯೂ ಎದುರಿಸುತ್ತೇವೆ’ ಎಂದರು.

‘ಘಟನೆ ನಡೆದ ಆರೇಳು ಗಂಟೆಗಳಲ್ಲೇ ಎನ್ಐಎಗೆ ಕೊಡಲಿಕ್ಕೆ ಆಗಲ್ಲ ಎಂದು ಗೃಹಸಚಿವರು ಹೇಳಿಕೆ ನೀಡಲು ಬರುವುದಿಲ್ಲ. ಸರ್ಕೀಟ್ ಹೌಸ್ನಲ್ಲಿ ಮುಸಲ್ಮಾನರು ಬೆದರಿಸಿದ್ದಕ್ಕೆ ಅವರು ಆ ರೀತಿ ಹೇಳಿರಬಹುದು. ಅವರು ಬೆದರುವ ಅಗತ್ಯ ಇಲ್ಲ. ಪೊಲೀಸ್ ಅಧಿಕಾರಿಗಳ ಜೊತೆ ಚರ್ಚಿಸಿ ಈ ಹೇಳಿಕೆ ನೀಡಬೇಕಿತ್ತು. ಅವರು ಹೇಳಿದ್ದಾರೆ ಎಂಬ ಮಾತ್ರಕ್ಕೆ ಜಿಲ್ಲೆಯ ಜನರಾದ ನಾವು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಒಂದು ವಾರ ನೋಡುತ್ತೇವೆ. ತನಿಖೆ ಸ್ವರೂಪವನ್ನು ಬಿಗಿಗೊಳಿಸದಿದ್ದರೆ ಸಾರ್ವಜನಿಕ ಹೋರಾಟವನ್ನು ಕೈಗೆತ್ತಿಕೊಳ್ಳುತ್ತೇವೆ ಎಂದರು.

‘ಇಂದೇ ಅಥವಾ ನಾಳೆಯೇ ಹೋರಾಟ ನಡೆಸಲು ಮುಂದಾಗಿದ್ದೆವು. ದೇಶದ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ಇರುವ ಕಾರಣ ಪೊಲೀಸ್ ಇಲಾಖೆ ಇನ್ನೊಂದು ವಿಚಾರಕ್ಕಾಗಿ ಬಂದೋಬಸ್ತ್ ಕಾರ್ಯದಲ್ಲಿ ತೊಡಗುವ ಸ್ಥಿತಿ ಬರಬಾರದು ಎಂದು ತಾತ್ಕಾಲಿಕವಾಗಿ ಮುಂದಕ್ಕೆ ಹಾಕಿದ್ದೇವೆ’ ಎಂದರು.

ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ಡಿ.ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ಭಾಗಿರತಿ ಮುರುಳ್ಯ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್, ಕಿಶೋರ್ ಕುಮಾರ್ ಪುತ್ತೂರು ನಿಯೋಗದಲ್ಲಿದ್ದರು.

ಸುಹಾಸ್ ಕುಟುಂಬಕ್ಕೆ ನಡ್ಡಾ ಸಾಂತ್ವನ 11ರಂದು

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಜಗತ್ಪ್ರಕಾಶ್ ನಡ್ಡಾ ಇದೇ 11 ಮತ್ತು 12ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಧರ್ಮಸ್ಥಳದಲ್ಲಿ ನಡೆಯುವ ಕಾರ್ಯಕ್ರಮವೊಂದರಲ್ಲಿ ಭಾಗಹಿಸಲಿದ್ದಾರೆ. ಅವರು ಇದೇ 11ರಂದು ಬೆಳಿಗ್ಗೆ ಸುಹಾಸ್ ಶೆಟ್ಟಿ ಮನೆಗೆ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿ ನಂತರ ಧರ್ಮಸ್ಥಳಕ್ಕೆ ತೆರಳಲಿದ್ದಾರೆ ಎಂದು ಸುನಿಲ್ ಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.