ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ | ಶೇ 80ರಷ್ಟು ರೋಗಿಗಳಲ್ಲಿ ಕ್ಯಾನ್ಸರ್ ಉಲ್ಬಣ

ಲಾಕ್‌ಡೌನ್‌ ತೆರವು ನಂತರ ಪರೀಕ್ಷಿಸಿದಾಗ ಪತ್ತೆ : ಮಂಗಳೂರಿನ ಇನ್‌ಸ್ಟಿಟ್ಯೂಟ್ ಆಪ್‌ ಅಂಕಾಲಜಿಯ ನಿರ್ದೇಶಕ ಡಾ.ಸುರೇಶ್ ರಾವ್
Last Updated 2 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಮಂಗಳೂರು: ‘ಇವರನ್ನೆಲ್ಲ ಶೇಕಡ 100ರಷ್ಟು ಗುಣಪಡಿಸಲು ಸಾಧ್ಯವಿತ್ತು; ಆದರೆ, ಇವರಲ್ಲಿ ಕೆಲವು ಜನರು ಈಗ ಏನೂ ಮಾಡಲು ಆಗದ ಸ್ಥಿತಿ ತಲುಪಿದ್ದಾರೆ. ಹಲವರು ಮೂರು ಅಥವಾ ನಾಲ್ಕನೇ ಸ್ಟೇಜ್‌ಗೆ ಬಂದಿದ್ದಾರೆ’

–ಹೀಗೆ ಬೇಸರದಿಂದ ನುಡಿದರು ಮಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್‌ ಅಂಕಾಲಜಿಯ ನಿರ್ದೇಶಕ ಹಾಗೂ ಕ್ಯಾನ್ಸರ್ ತಜ್ಞ ಡಾ.ಸುರೇಶ್ ರಾವ್. ತಮ್ಮ ಆಸ್ಪತ್ರೆಗೆ ಚಿಕಿತ್ಸೆಗೆ ಬಂದ ರೋಗಿಗಳ ಕುರಿತಂತೆ ಅವರು ಮಾತನಾಡುತ್ತಾ ಹೋದರು.

‘ಕ್ಯಾನ್ಸರ್‌ಗೆ ನೀವು ಎಷ್ಟು ಬೇಗ ವೈದ್ಯರ ಹತ್ತಿರ ಹೋಗಿ ಚಿಕಿತ್ಸೆ ಪಡೆದುಕೊಳ್ಳುತ್ತೀರಿ ಅಷ್ಟು ಒಳ್ಳೆಯದು. ಕೋವಿಡ್‌ನ ಭಯದಿಂದ ಹಲವರು ಕ್ಯಾನ್ಸರ್ ಲಕ್ಷಣಗಳು ಇದ್ದರೂ ವೈದ್ಯರ ಬಳಿ ಹೋಗಿಲ್ಲ; ಅರ್ಧ ಚಿಕಿತ್ಸೆ ಪಡೆದವರೂ ಪೂರ್ಣ ಚಿಕಿತ್ಸೆಗೆ ಬರಲೇ ಇಲ್ಲ. ಹಾಗಾಗಿ ಈಗ ಆಸ್ಪತ್ರೆಗೆ ಬರುತ್ತಿರುವ ಶೇ 80 ರಷ್ಟು ರೋಗಿಗಳಲ್ಲಿ ಕ್ಯಾನ್ಸರ್ ಉಲ್ಬಣಿಸಿದೆ’ ಎಂದು ಮಾಹಿತಿ ಬಹಿರಂಗಪಡಿಸಿದರು.

‘ಒಬ್ಬ ಮಹಿಳೆಗೆ ನಾಲ್ಕು ತಿಂಗಳ ಹಿಂದೆ ಗರ್ಭಕೋಶದಲ್ಲಿ ಬ್ಲಿಡಿಂಗ್ ಆಗಿತ್ತು. ಕೋವಿಡ್‌ಗೆ ಹೆದರಿ ಆಸ್ಪತ್ರೆಗೆ ಬಂದಿರಲಿಲ್ಲ. ಮೊನ್ನೆ ಲಾಕ್‌ಡೌನ್‌ ಮುಗಿದ ಬಳಿಕ ಆಸ್ಪತ್ರೆಗೆ ಬಂದಿದ್ದರು. ತಪಾಸಣೆ ಮಾಡಿದಾಗ ಅವರಿಗೆ ಕ್ಯಾನ್ಸರ್‌ ನಾಲ್ಕನೇ ಸ್ಟೇಜ್ ದಾಟಿತ್ತು. ಹೀಗೆ ಆಗುವುದಕ್ಕೆ ಯಾರು ಜವಾಬ್ದಾರರು? ಲಾಕ್‌ಡೌನ್‌ ವೇಳೆ ನಮ್ಮ ಆಡಳಿತ ವ್ಯವಸ್ಥೆ ತುರ್ತು ಚಿಕಿತ್ಸೆಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಿತ್ತು. ಜನರೂ ಭಯಬಿಟ್ಟು ಆಸ್ಪತ್ರೆಗೆ ಬರಬೇಕಿತ್ತು. ನಾವಂತೂ ಎಲ್ಲಾ ಕಾಲದಲ್ಲೂ ಜನರ ಸೇವೆಗೆ ಸಿದ್ಧರಾಗಿದ್ದೆವು’ ಎಂದು ವೈದ್ಯರು ಹೇಳಿದರು.

‘ಚಿಕ್ಕಮಗಳೂರು, ಉತ್ತರ ಕನ್ನಡ ಹಾಗೂ ಹಾವೇರಿ ಹೀಗೆ ರಾಜ್ಯದ ನಾನಾ ಜಿಲ್ಲೆಗಳಿಂದ ಈಗ ಜನ ದುಬಾರಿ ಬಾಡಿಗೆ ತೆತ್ತು ವಾಹನ ಮಾಡಿಕೊಂಡು ಆಸ್ಪತ್ರೆಗೆ ಬರುತ್ತಿದ್ದಾರೆ. ಅವರಲ್ಲಿ ಶೇ 80ರಷ್ಟು ಜನರಿಗೆ ಕ್ಯಾನ್ಸರ್‌ ಗುಣಪಡಿಸಲಾಗದ ಸ್ಥಿತಿ ತಲುಪಿದೆ. ಕ್ಯಾನ್ಸರ್‌ ರೋಗಿಗಳಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ ನಿಜ. ಕೊರೊನಾ ಸಮಯದಲ್ಲಿ ಬೇರೆಯವರಿಗಿಂತ ಹೆಚ್ಚು ಜಾಗ್ರತೆ ವಹಿಸಬೇಕು ಅದೂ ನಿಜ. ಆದರೆ, ಗುಣಪಡಿಸಿಕೊಳ್ಳಲು ಕಷ್ಟಪಡುವ ಕಾಯಿಲೆಗಿಂತ ಗುಣಪಡಿಸಿಕೊಳ್ಳಲು ಸಾಧ್ಯವಾಗುವ ಕಾಯಿಲೆಗೆ ಹೆದರುವುದನ್ನು ಜನ ಬಿಡಬೇಕು. ಕ್ಯಾನ್ಸರ್‌ ರೋಗಿಗಳು ಆಸ್ಪತ್ರೆಗೆ ತಡವಾಗಿ ಬಂದರೆ ಜೀವಕ್ಕೆ ಅಪಾಯ. ಚಿಕಿತ್ಸೆ ನೀಡಿದರೂ ಅಡ್ಡ ಪರಿಣಾಮ ಹೆಚ್ಚು, ಗುಣವಾಗುವುದು ಕಡಿಮೆ; ಆರ್ಥಿಕ ನಷ್ಟ ಮತ್ತಷ್ಟು’ ಎನ್ನುತ್ತಾರೆಡಾ.ಸುರೇಶ್ ರಾವ್.

ರೋಗಿಗಳಿಗೆ ಚಿಕಿತ್ಸೆ ನೀಡುವ ಹಂತಗಳ ಬಗ್ಗೆ ವಿವರಣೆ ನೀಡಿದ ಅವರು, ‘ಮುಖ್ಯವಾಗಿ ಮೊದಲು ಶಸ್ತ್ರಚಿಕಿತ್ಸೆ, ಕಿಮೋಥೆರಪಿ ಹಾಗೂ ರೇಡಿಯೇಷನ್. ಹೀಗೆ ಮೂರು ಹಂತಗಳಲ್ಲಿ ಚಿಕಿತ್ಸೆ ನಡೆಯುತ್ತದೆ. ನಾಲ್ಕನೇ ಹಂತ ಟಾರ್ಗೆಟೆಡ್‌ ಥೆರಪಿ; ಅದನ್ನು ಈಗ ಎರಡು ವರ್ಷಗಳಿಂದ ಆರಂಭಿಸಿದ್ದೇವೆ. ಮೊದಲ ಮೂರು ಚಿಕಿತ್ಸೆಗಳಲ್ಲಿ ರೋಗ ವಾಸಿಯಾಗದಿದ್ದಾಗ ಈ ಹೊಸ ವಿಧಾನ ಅನುಸರಿಸಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT