ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಧ ಪ್ರಾಂಜಲ್‌ ಹುತಾತ್ಮ– ಎಂಆರ್‌ಪಿಎಲ್‌ನಲ್ಲಿ ಶೋಕ

Published 24 ನವೆಂಬರ್ 2023, 4:49 IST
Last Updated 24 ನವೆಂಬರ್ 2023, 4:49 IST
ಅಕ್ಷರ ಗಾತ್ರ

ಮಂಗಳೂರು: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿಯಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಬುಧವಾರ ನಡೆದ ಗುಂಡಿನ ಚಕಮಕಿಯಲ್ಲಿ 'ಮಂಗಳೂರು ರಿಫೈನರೀಸ್ ಆ್ಯಂಡ್ ಪೆಟ್ರೊ ಕೆಮಿಕಲ್ಸ್ ( ಎಂಆರ್‌ಪಿಎಲ್‌ ) ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಎಂ.ವೆಂಕಟೇಶ್ ಅವರ ಏಕೈಕ ಪುತ್ರ ಪ್ರಾಂಜಲ್ ಎಂ.ವಿ. ಹುತಾತ್ಮರಾಗಿದ್ದು, ಎಂಆರ್‌ಪಿಎಲ್‌ ಸಂಸ್ಥೆಯಲ್ಲೂ ಶೋಕದ ವಾತಾವರಣ ಕಂಡುಬಂತು. 

ಎಂಆರ್‌ಪಿಎಲ್‌ ಸಂಸ್ಥೆಯು ತನ್ನ ಸಾಮಾಜಿಕ ಮಾಧ್ಯಕ ‘ಎಕ್ಸ್‌’ ಖಾತೆಯಲ್ಲಿ ಹುತಾತ್ಮ ಪ್ರಾಂಜಲ್‌ಗೆ ಶ್ರದ್ಧಾಂಜಲಿ ಸಲ್ಲಿಸಿದೆ. ‘ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಕ್ಯಾ.ಎಂ.ವಿ.ಪ್ರಾಂಜಲ್‌  ಅವರ ಶೌರ್ಯವನ್ನು ಎಂಆರ್‌ಪಿಎಲ್‌ ಶ್ಲಾಘಿಸುತ್ತದೆ. ನಿಮ್ಮ ಅಗಲುವಿಕೆ ನಮಗೆ ನೋವು ತಂದಿದೆ. ನಮ್ಮ ಮಾಜಿ ವ್ಯವಸ್ಥಾಪಕ ನಿರ್ದೇಶಕ ಎಂ.ವೆಂಕಟೇಶ್ ಮತ್ತು ಅನುರಾಧ ದಂಪತಿಯ ಏಕೈಕ ಪುತ್ರ ಕ್ಯಾ.ಪ್ರಾಂಜಲ್‌ ನಮ್ಮವರೇ ಎಂದು ಎಂಆರ್‌ಪಿಎಲ್‌ ಭಾವಿಸುತ್ತದೆ’ ಎಂಬ ಬರಹವನ್ನು ಹಂಚಿಕೊಂಡಿದೆ. 


ಪ್ರಾಂಜಲ್‌ ಎಂ.ವಿ. ಅವರು 63 ರಾಷ್ಟ್ರೀಯ ರೈಫಲ್ಸ್ ನಲ್ಲಿ ಕ್ಯಾಪ್ಟನ್‌ ಆಗಿದ್ದರು. 'ಪ್ರಾಂಜಲ್ ಅವರು ಇಲ್ಲಿನ ಎಂಆರ್ಪಿಎಲ್ ಪ್ರಾಂಗಣದಲ್ಲಿರುವ ದೆಹಲಿ ಪಬ್ಲಿಕ್ ಸ್ಕೂಲ್ ನ ಹಳೆ ವಿದ್ಯಾರ್ಥಿ. ಅವರೂ ಎಂಆರ್‌ಪಿಎಲ್‌ ಕುಟುಂಬದ ಸದಸ್ಯರಾಗಿದ್ದರು. ನಮ್ಮ ಕಣ್ಣ ಮುಂದೆಯೇ ಆಡಿ ಬೆಳೆದ ಹುಡುಗನನ್ನು ಕಳೆದುಕೊಂಡು ಸಂಸ್ಥೆಯ ಸಿಬ್ಬಂದಿ ವರ್ಗ ಶೋಕತಪ್ತವಾಗಿದೆ’ ಎಂದು ಎಂಆರ್ಪಿಎಲ್ ಅಧಿಕಾರಿಯೊಬ್ಬರು 'ಪ್ರಜಾವಾಣಿ'ಗೆ ತಿಳಿಸಿದರು.

'ವೆಂಕಟೇಶ ಅವರ ಕುಟುಂಬ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯದು.‌ ಬಳಿಕ ಅವರು ಮೈಸೂರಿನಲ್ಲಿ ನೆಲೆಸಿದ್ದರು. ಎಂಆರ್‌ಪಿಎಲ್ ಹುದ್ದೆಯಿಂದ ನಿವೃತ್ತಿ ಆದ ಬಳಿಕ ವೆಂಕಟೇಶ ಅವರು ಕುಟುಂಬ ಸಮೇತ ಬೆಂಗಳೂರಿನ ಆನೆಕಲ್‌ ಬಳಿ ನೆಲೆಸಿದ್ದಾರೆ. ಮೊದಲಿನಿಂದಲೂ ದೇಶಭಕ್ತರ ಕುಟುಂಬ ಅವರದು. ಹಾಗಾಗಿ ತಮ್ಮ ಏಕೈಕ ಮಗನನ್ನು ವೆಂಕಟೇಶ್ ಅವರು ಸೇನೆಗೆ ಸೇರಿಸಿದ್ದರು' ಎಂದು ಅವರು ತಿಳಿಸಿದರು.

ರಾಷ್ಟ್ರೀಯ ಸೇನಾ ಅಕಾಡೆಮಿಯನ್ನು ಸೇರಿದ್ದ ಪ್ರಾಂಜಲ್‌ ಅಲ್ಲೇ ಎಂಜಿನಿಯರಿಂಗ್‌ ಶಿಕ್ಷಣ ಪಡೆದಿದ್ದರು. ಎರಡು ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರು ಅದಿತಿ ಎಂಬುವರನ್ನು ವಿವಾಹವಾಗಿದ್ದರು. 

ಬಾಜಿಮಾಲ್‌ನ ಅರಣ್ಯ ಪ್ರದೇಶದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಸೇನೆ ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಅಲ್ಲಿ ಅವಿತಿದ್ದ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಇದರಿಂದ ಪ್ರಾಂಜಲ್ ಸೇರಿದಂತೆ ಇಬ್ಬರು ಕ್ಯಾಪ್ಟನ್‌ಗಳು ಮತ್ತು ಹವಾಲ್ದಾರ್ ಹಾಗೂ ಒಬ್ಬ ಯೋಧ ಹುತಾತ್ಮರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT