ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗಳಲ್ಲಿಯೇ ರಂಜಾನ್ ಪ್ರಾರ್ಥನೆ: ಕರಾವಳಿಯಾದ್ಯಂತ ಸರಳ ‘ಈದ್ ಉಲ್ ಫಿತ್ರ್’ ಆಚರಣೆ

Last Updated 13 ಮೇ 2021, 5:02 IST
ಅಕ್ಷರ ಗಾತ್ರ

ಮಂಗಳೂರು: ಲಾಕ್‌ಡೌನ್ ಮತ್ತು ಸರ್ಕಾರದ ಆದೇಶದಂತೆ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳು ಸೇರಿದಂತೆ ಕರಾವಳಿ ತೀರದ ಮುಸ್ಲಿಮರು ಗುರುವಾರ ಸರಳವಾಗಿ ಈದ್‌ ಉಲ್ ಫಿತ್ರ್ ಆಚರಿಸಿದರು.

ಪ್ರತಿ ವರ್ಷ ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ, ಸಿಹಿತಿಂಡಿ ತಿಂದು ತಕ್ಬೀರ್‌ನ ಧ್ವನಿ ಮೊಳಗಿಸುತ್ತಾ ಸಾಲಾಗಿ ಮಸೀದಿ ಅಥವಾ ಈದ್ಗಾಗಳಿಗೆ ತೆರಳಿ ‘ಈದ್ ನಮಾಝ್’ ಮಾಡುವುದು ಸಾಮಾನ್ಯ. ಈದ್ ಖುತ್ಬಾ ಆಲಿಸುವುದು, ಪರಸ್ಪರ ಆಲಿಂಗಿಸಿ, ಯೋಗಕ್ಷೇಮ ವಿಚಾರಿಸುವುದು, ಮಾತು ಬಿಟ್ಟವರನ್ನು ಹುಡುಕಿಕೊಂಡು ಹೋಗಿ ಮಾತನಾಡಿಸುವುದು, ಖಬರಸ್ಥಾನಗೆ ಭೇಟಿ ನೀಡುವುದು, ಸಾಮೂಹಿಕ ಝಿಯಾರತ್ ಮಾಡುವುದು, ನೆರೆಮನೆ ಮತ್ತು ಸಂಬಂಧಿಕರ ಮನೆಗೆ ಸೌಹಾರ್ದ ಭೇಟಿ ನೀಡುವುದು, ಸಿಹಿತಿಂಡಿ ಹಂಚುವುದು, ಈದ್ ಹಣ ವಿತರಿಸುವುದು, ಸ್ವದಕಾ ನೀಡುವುದು, ವಿಶೇಷ ಅಡುಗೆ ತಯಾರಿಸಿ ರುಚಿ ಸವಿಯುವುದು ಇತ್ಯಾದಿ ಈ ಹಬ್ಬದ ವಿಶೇಷತೆ.

ಆದರೆ ಕಳೆದ ಬಾರಿಯಂತೆ ಈ ವರ್ಷವೂ ಲಾಕ್‌ಡೌನ್‌ನಿಂದಾಗಿ ಯಾರೂ ಮಸೀದಿ, ಈದ್ಗಾದತ್ತ ತೆರಳಲಿಲ್ಲ, ಖಬರಸ್ಥಾನ ಭೇಟಿ ನೀಡಲಿಲ್ಲ. ಸಾರ್ವಜನಿಕವಾಗಿ ತಕ್ಬೀರ್ ಮೊಳಗಿಸಲಿಲ್ಲ. ಕೆಲವರು ಲಾಕ್‌ಡೌನ್ ಮುಂಚೆಯೇ ಖರೀದಿಸಿದ್ದ ಹೊಸ ಬಟ್ಟೆಯನ್ನು ಧರಿಸಿದ್ದರೆ, ಇನ್ನೂ ಕೆಲವರು ಸಾದಾ ಬಟ್ಟೆ ಧರಿಸಿ ಸರಳತೆ ಮೆರೆದರು.

ಈದ್ ಬಟ್ಟೆಬರೆಗಾಗಿ ಮೀಸಲಿಟ್ಟ ಹಣವನ್ನು ಸಾರ್ವಜನಿಕರಿಗೆ ಉಪಯುಕ್ತವಾಗುವ ವಸ್ತುಗಳ ಖರೀದಿಗೆ ಹಸ್ತಾಂತರಿಸಿದರು. ಅರ್ಹರಿಗೆ ಫಿತ್ರ್ ಝಕಾತ್ ತಲುಪಿಸಿದರು. ಉಭಯ ಜಿಲ್ಲೆಯ ಖಾಝಿಗಳ ಕರೆಯಂತೆ ಎಲ್ಲರೂ ಮನೆಯಲ್ಲೇ ಇದ್ದುಕೊಂಡು ಈದ್ ನಮಾಝ್ ಮಾಡಿ ಸರಳವಾಗಿ ಹಬ್ಬ ಆಚರಿಸಿದರು.

ಕಳೆದ ವರ್ಷವೂ ಕೊರೋನ ಸೋಂಕು ತಡೆಗಾಗಿ ಲಾಕ್‌ಡೌನ್ ವಿಧಿಸಿದ್ದರಿಂದ ಸರಳವಾಗಿ ಈದ್ ಆಚರಿಸಿದ್ದ ಮುಸ್ಲಿಮರು, ಈ ಬಾರಿಯೂ ಸರಳತೆ ಮೆರೆದು ಗಮನ ಸೆಳೆದರು.

ಮನೆಯಲ್ಲೇ ಆಚರಣೆ:ರಂಜಾನ್ ಹಬ್ಬದ ವೇಳೆ ನಾವು ಶುಭ್ರವಾಗಿ ಹೊಸ ಬಟ್ಟೆ ಧರಿಸಿ, ಸ್ನೇಹಿತರು ಕುಟುಂಬಸ್ಥರೊಂದಿಗೆ ತೆರಳಿ ಮಸೀದಿಗೆ ನಮಾಜ್ ನಿರ್ವಹಿಸಿ, ಸಂಬಂಧಿಕರ ಮನೆಗಳಿಗೆ ತೆರಳಿ ಎಲ್ಲರೂ ಒಟ್ಟಾಗಿ ಹಬ್ಬ ಆಚರಿಸುತ್ತಿದ್ದೆವು. ಈ ಬಾರಿ ಲಾಕ್‌ಡೌನ್‌ನಿಂದ ಮನೆಯಲ್ಲಿ ಸರಳವಾಗಿ ರಂಜಾನ್ ಆಚರಣೆ ಮಾಡುತ್ತಿದ್ದೇವೆ. ಕಳೆದ ಬಾರಿಯು ರಂಜಾನ್ ವೇಳೆ ಲಾಕ್‌ಡೌನ್‌ನಿಂದ ಹೊಸ ಬಟ್ಟೆಗಳ ಖರೀದಿಗೆ ಸಾಧ್ಯವಾಗಿಲ್ಲ. ಈ ಬಾರಿಯೂ ಇಲ್ಲ/ ಮನೆಯ ಹಿರಿಯರ ಸೂಚನೆಯಂತೆ ತುಂಬಾ ಸರಳವಾಗಿ ಮನೆಯಲ್ಲೇ ಇದ್ದು ರಂಜಾನ್ ಹಬ್ಬ ಆಚರಿಸಬೇಕಿದೆ ಎಂದು ವಿದ್ಯಾರ್ಥಿ ಮಹಮ್ಮದ್ ಶಮೀಮ್ ಹೇಳಿದರು.

ರೋಗಮುಕ್ತಿಗೆ ಪ್ರಾರ್ಥನೆ:ರಂಜಾನ್ ತಿಂಗಳು ಮುಸ್ಲಿಂ ಕುಟುಂಬಗಳಿಗೆ ಪವಿತ್ರ ಮಾತ್ರವಲ್ಲದೆ, ಹಬ್ಬದ ತಿಂಗಳೆಂದೇ ಹೇಳಬಹುದು. ಈ ತಿಂಗಳು ಮುಂಜಾನೆ ಬೇಗ ಎದ್ದು ರಂಜಾನ್ ಉಪವಾಸ ವ್ರತ ಆಚರಣೆ ಮಾಡಲಾಗುತ್ತಿದೆ. 30 ದಿನದ ಬಳಿಕ ಕುಟುಂಬದ ಸದಸ್ಯರು ಸೇರಿ ರಂಜಾನ್ ಹಬ್ಬ ಆಚರಿಸಲಾಗುತ್ತಿತ್ತು. ಆದರೆ, ಕಳೆದ ವರ್ಷ ಮತ್ತು ಈ ಬಾರಿ ಕೋವಿಡ್ ವ್ಯಾಪಕವಾಗಿ ಹರಡುತ್ತಿದ್ದು. ರಾಜ್ಯದಲ್ಲಿ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ನಿಯಮಾವಳಿಯಂತೆ ಮತ್ತು ಖಾಝಿಗಳು ನೀಡಿದ ಸೂಚನೆಯನ್ನು ಪಾಲಿಸಿ, ಈ ಬಾರಿ ಮನೆಯಲ್ಲಿ ತುಂಬಾ ಸರಳವಾಗಿ ರಂಜಾನ್ ಆಚರಿಸಲಾಗುತ್ತಿದೆ. ದೇಶದ ಜನರಿಗಾಗಿ ಮತ್ತು ಕೋವಿಡ್ ರೋಗದಿಂದ ಮುಕ್ತಿಗಾಗಿ ಪ್ರಾರ್ಥಿಸುವ ಮೂಲಕ ಆಚರಿಸಲಾಗಿದೆ ಎಂದು ಅಬ್ದುಲ್ ಜಲೀಲ್ ಎದುರುಪದವು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT