ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ | ಜಿಲ್ಲೆಯಲ್ಲಿ ಮತ್ತೆರಡು ಪ್ರಕರಣ ದೃಢ

30 ಮಂದಿ ಆರೋಗ್ಯ ಸ್ಥಿರ: ಮೂವರಿಗೆ ಐಸಿಯುನಲ್ಲಿ ಚಿಕಿತ್ಸೆ
Last Updated 23 ಮೇ 2020, 16:13 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಇಬ್ಬರಿಗೆ ಕೋವಿಡ್-19 ಸೋಂಕು ತಗಲಿರುವ ದೃಢವಾಗಿದೆ. 41 ವರ್ಷದ ಮಹಿಳೆ ಹಾಗೂ 30 ವರ್ಷದ ಯುವಕನಿಗೆ ಸೋಂಕು ಖಚಿತವಾಗಿದೆ.

ಬೆಳ್ತಂಗಡಿ ತಾಲ್ಲೂಕಿನ ಶಿರ್ಲಾಲು ಗ್ರಾಮದ 41 ವರ್ಷದ ಮಹಿಳೆಗೆ ತೀವ್ರ ಉಸಿರಾಟದ ಸಮಸ್ಯೆ ಇದ್ದು, ಗ್ರಾಮಸ್ಥರ ಒತ್ತಾಯದಿಂದ ಕೋವಿಡ್-19 ಪರೀಕ್ಷೆ ನಡೆಸಲಾಗಿತ್ತು ಎನ್ನಲಾಗಿದೆ. ಈಕೆಗೆ ಸೋಂಕು ದೃಢಪಟ್ಟಿದ್ದರಿಂದ ಮಹಿಳೆಯನ್ನು ಶನಿವಾರ ಬೆಳಿಗ್ಗೆ ವೆನ್ಲಾಕ್‌ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಶಿರ್ಲಾಲು ಗ್ರಾಮದಲ್ಲಿ ಸೀಲ್‌ಡೌನ್ ಮಾಡಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

ಮುಂಬೈನಿಂದ ಬಂದು, ನಗರದಲ್ಲಿದ್ದ 30 ವರ್ಷದ ಯುವಕನಿಗೆ ಸೋಂಕು ಕಾಣಿಸಿಕೊಂಡಿದೆ. ಖಾಸಗಿ ಲ್ಯಾಬ್‌ನಲ್ಲಿ ಪರೀಕ್ಷೆ ಮಾಡಿಸಿದ್ದ ಯುವಕನಿಗೆ ಕೋವಿಡ್–19 ಪಾಸಿಟಿವ್ ವರದಿ ಬಂದಿದೆ.

30 ರೋಗಿಗಳ ಆರೋಗ್ಯ ಸ್ಥಿರ: ನಗರದ ವೆನ್ಲಾಕ್‌ ಕೋವಿಡ್‌ ಆಸ್ಪತ್ರೆಯಲ್ಲಿ ಒಟ್ಟು 33 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ 30 ಮಂದಿಯ ಆರೋಗ್ಯ ತೃಪ್ತಿಕರವಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.

76 ವರ್ಷದ ವೃದ್ಧ, 68 ವರ್ಷದ ವೃದ್ಧೆ ಹಾಗೂ 40 ವರ್ಷದ ಮಹಿಳೆ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದು, ಅವರಿಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ವಿಶೇಷ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಹೇಳಿದ್ದಾರೆ.

ಕಸಬಾ ಕಂಟೈನ್‌ಮೆಂಟ್‌ ಪರಿಷ್ಕರಣೆ: ಸರ್ಕಾರದ ಹೊಸ ಆದೇಶದಂತೆ ಬಂಟ್ವಾಳ ಕಸಬಾ ಗ್ರಾಮದ ಕಂಟೈನ್‌ಮೆಂಟ್‌ ಪ್ರದೇಶವನ್ನು ಜಿಲ್ಲಾಡಳಿತ ಪರಿಷ್ಕರಣೆ ಮಾಡಿದೆ. ಬಂಟ್ವಾಳ ಪೇಟೆಯ ಮುಖ್ಯರಸ್ತೆಗಳಿಗೆ ಹಾಕಲಾಗಿದ್ದ ಬ್ಯಾರಿಕೇಡ್‌ ಹಾಗೂ ಮಣ್ಣನ್ನು ತೆರವುಗೊಳಿಸಲಾಗಿದ್ದು, ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

ಪರಿಷ್ಕೃತ ಆದೇಶದ ಪ್ರಕಾರ ಪೂರ್ವದಲ್ಲಿ ಸದಾಶಿವ ಪ್ರಭು ಮನೆ, ಪಶ್ಚಿಮದಲ್ಲಿ ಸರ್ಕಾರಿ ಘಟ್ಟ, ಉತ್ತರದಲ್ಲಿ ರವಿಚಂದ್ರ ಮನೆ, ದಕ್ಷಿಣದಲ್ಲಿ ಸುರೇಶ್‌ ದಾಮೋದರ ಬಾಳಿಗಾ ಮನೆಗಳು ಕಂಟೈನ್‌ಮೆಂಟ್‌ ವಲಯದ ವ್ಯಾಪ್ತಿಯಾಗಿ ಬರುತ್ತವೆ. ಪೂರ್ವದಲ್ಲಿ ಬಂಟ್ವಾಳ ಪೇಟೆಯ ರಥಬೀದಿ ಮುಖ್ಯರಸ್ತೆ, ಪಶ್ಚಿಮದಲ್ಲಿ ಎಸ್‌ವಿಎಸ್‌ ಶಾಲಾ ಮೈದಾನ, ಉತ್ತರದಲ್ಲಿ ಶಶಿಕಲಾ ಮನೆ, ದಕ್ಷಿಣದಲ್ಲಿ ಬಾಲಾಜಿ ಸರ್ವೀಸ್‌ ಸ್ಟೇಷನ್‌ಗಳು ಬಫರ್‌ ಝೋನ್‌ನಲ್ಲಿರುತ್ತದೆ.

ಈ ವ್ಯಾಪ್ತಿಯಲ್ಲಿ 97 ಮನೆಗಳು, 12 ಅಂಗಡಿಗಳು, 3 ಕಚೇರಿಗಳು ಒಳಗೊಳ್ಳಲಿದ್ದು, ಒಟ್ಟು 388 ಜನಸಂಖ್ಯೆ ಇದೆ. ಬಂಟ್ವಾಳ ತಹಶೀಲ್ದಾರ್‌ ಅವರು ಇನ್ಸಿಡೆಂಟ್‌ ಕಮಾಂಡರ್‌ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕಾಸರಗೋಡು: ನಾಲ್ವರಿಗೆ ಸೋಂಕು
ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 4 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಒಬ್ಬರು ಗುಣಮುಖರಾಗಿದ್ದಾರೆ. ಒಟ್ಟು 28 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋಡೋಂ ಬೇಳೂರು ನಿವಾಸಿಗಳಾದ 43, 32 ವರ್ಷದ ವ್ಯಕ್ತಿಗಳು, ಮಂಗಲ್ಪಾಡಿ ನಿವಾಸಿ 55 ವರ್ಷದ ವ್ಯಕ್ತಿ, ಪೈವಳಿಕೆ ನಿವಾಸಿ 35 ವರ್ಷದ ವ್ಯಕ್ತಿಗೆ ಸೋಂಕು ದೃಢವಾಗಿದೆ. ಇವರಲ್ಲಿ 32 ವರ್ಷದ ಕೋಡೋಂ ಬೇಳೂರು ನಿವಾಸಿ ವಿದೇಶದಿಂದ ಬಂದಿದ್ದಾರೆ. ಮಂಗಲ್ಪಾಡಿ ನಿವಾಸಿ ವಿದೇಶದಿಂದ, ಪೈವಳಿಕೆ ನಿವಾಸಿ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ.

ಮನೆಗಳಲ್ಲಿ 2,278 ಮಂದಿ, ಆಸ್ಪತ್ರೆಗಳಲ್ಲಿ 507 ಮಂದಿ ಸೇರಿದಂತೆ 2,785 ಮಂದಿ ವೈದ್ಯಕೀಯ ನಿಗಾದಲ್ಲಿದ್ದಾರೆ. ಶನಿವಾರ ಹೊಸದಾಗಿ 20 ಮಂದಿಯನ್ನು ಐಸೊಲೇಷನ್ ವಾರ್ಡ್‌ಗೆ ದಾಖಲಿಸಲಾಗಿದೆ. ಶನಿವಾರ 398 ಮಂದಿಯ ನಿಗಾ ಅವಧಿ ಪೂರ್ಣಗೊಂಡಿದೆ.

ಒಟ್ಟು 6,094 ಮಂದಿಯ ಗಂಟಲು ದ್ರವದ ಮಾದರಿ ತಪಾಸಣೆಗೆ ಕಳುಹಿಸಲಾಗಿದೆ. 5,434 ಮಂದಿಯ ಫಲಿತಾಂಶ ನೆಗೆಟಿವ್ ಬಂದಿದ್ದು, ಇನ್ನೂ 263 ಮಂದಿಯ ವರದಿ ಬರಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT