ಮಂಗಳವಾರ, ಮೇ 24, 2022
28 °C
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ. ಎಂ. ಪ್ರಭಾಕರ ಜೋಶಿ

ಆತ್ಮನಿರ್ಭರತೆಗೆ ಸಾಹಿತ್ಯ ಸ್ಫೂರ್ತಿ ತುಂಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು (ಪೇಜಾವರ ವಿಶ್ವೇಶತೀರ್ಥ ವೇದಿಕೆ): ‘ನಮ್ಮ ಸಾಹಿತ್ಯ, ಕಲಾ ಚಿಂತನೆಗಳು ಆತ್ಮನಿರ್ಭರತೆಗೆ ಸ್ಫೂರ್ತಿ, ಉಲ್ಲಾಸ ಮತ್ತು ವಿಷಯ ಜ್ಞಾನ ಪೂರೈಸಬೇಕು. ಸಾಹಿತಿಗಳು ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಮತ–ಧರ್ಮ, ತತ್ವಶಾಸ್ತ್ರ ಮತ್ತು ಸಾಮಾನ್ಯ ವಿಜ್ಞಾನಗಳ ಸ್ಥೂಲ ಪ್ರಾಥಮಿಕ ಪರಿಚಯವನ್ನು ಹೊಂದುವುದು ಸಾಹಿತ್ಯದ, ಸಮಾಜದ ಆರೋಗ್ಯ ಮತ್ತು ಪ್ರಗತಿಗೆ ಅತಿ ಮುಖ್ಯವಾಗಿದೆ’ ಎಂದು ಯಕ್ಷಗಾನ ಅರ್ಥಧಾರಿ ಡಾ. ಎಂ.ಪ್ರಭಾಕರ ಜೋಶಿ ಅಭಿಪ್ರಾಯಪಟ್ಟರು.

‘ಆತ್ಮನಿರ್ಭರ ಭಾರತ: ಪರಂಪರೆ ಮತ್ತು ಆಧುನಿಕತೆ–ಅನುಸಂಧಾನ’ ಆಶಯದೊಂದಿಗೆ, ಶುಕ್ರವಾರ ಆರಂಭವಾಗಿರುವ ಮೂರು ದಿನಗಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ ಅವರು ಮಾತನಾಡಿದರು. ‘ಸ್ವಾವಲಂಬಿ ದೇಶ, ಆತ್ಮ ನಿರ್ಭರತೆ ಎಂಬ ವಿಚಾರ ಈಗ ಮುನ್ನಡೆಗೆ ಬಂದಿದೆ. ರಕ್ಷಣೆಯಲ್ಲಿ ಆತ್ಮನಿರ್ಭರತೆ, ಉತ್ಪಾದನೆಯ ಹೆಚ್ಚಳ, ಸಂಪನ್ಮೂಲ ಸದುಪಯೋಗ, ಆಮದು ಕಡಿಮೆ, ರಫ್ತು ಹೆಚ್ಚಳ ಮೊದಲಾದ ಸಂಕೀರ್ಣ ಮುಖಗಳು ಅದಕ್ಕೆ ಇವೆ. ನಮ್ಮ ಪರಂಪರೆ, ಸಾಮಾಜಿಕ ವೈವಿಧ್ಯ, ಸಾಂಸ್ಕೃತಿಕ ಶ್ರೀಮಂತಿಕೆ ಇವಕ್ಕೆ ಪೂರಕವಾಗಿವೆ. ನಮ್ಮಲ್ಲಿನ ಜ್ಞಾನ, ಸಂಪನ್ಮೂಲ ಮಟ್ಟ ಉತ್ತಮವಾಗಿದೆ. ಸಂಸ್ಕೃತಿ, ಸೇವೆ, ವಿತರಣೆಗಳಲ್ಲಿ ಉತ್ಕೃಷ್ಟ ಸಾಧ್ಯತೆಗಳಿವೆ. ಈ ಸಾಧ್ಯತೆಯನ್ನು ಬಳಸಿ, ಬೆಳೆಸಿ, ಉನ್ನತಿ ಸಾಧಿಸಬೇಕಾಗಿದೆ’ ಎಂದರು.

‘ಕಳೆದ ಒಂದು ವರ್ಷ ಜಗತ್ತು ಎದುರಿಸಿದ ವಿದ್ಯಮಾನವು, ಸೃಷ್ಟಿಯ ಪ್ರಭುತ್ವ ತನ್ನದೆಂದು ಭಾವಿಸುವ ಮನುಷ್ಯ ಎಷ್ಟು ದುರ್ಬಲ ಎಂಬುದನ್ನು ತೋರಿಸಿದೆ. ಈ ಸಂದರ್ಭವು ಚಿಂತನೆ, ಆತ್ಮಾವಲೋಕನ, ಮಿತವ್ಯಯ, ದುಂದುವೆಚ್ಚದ ನಿಯಂತ್ರಕ್ಕೂ ಅವಕಾಶಗಳನ್ನು ಸೃಷ್ಟಿಸಿತು. ಈ ಪಾಠವನ್ನು ನಾವು ಸ್ವೀಕರಿಸುವ ಜತೆಗೆ, ಮುಂದುವರಿಸಬೇಕು. ಈ ಸಂದರ್ಭದಲ್ಲಿ ನೆರವು, ಸೇವೆ, ರಕ್ಷಣೆ ನೀಡಿದ ಸಮಗ್ರ ಆರೋಗ್ಯ ಸೈನ್ಯಕ್ಕೆ ವಂದನೆ ಸಲ್ಲಿಸಬೇಕು’ ಎಂದು ಅವರು ಉಲ್ಲೇಖಿಸಿದರು.

‘ಶಿಕ್ಷಿತ–ಅಪ್ರಯೋಜಕ’ ವರ್ಗ ನಿರ್ಮಾಣ: ‘ಸಾಹಿತ್ಯವು ರಂಜನೆಯೊಂದಿಗೆ ಅರಿವು, ವಿವೇಚನೆ ಬೆಳೆಸಬೇಕು, ಕೌಶಲ ಸಾಮರ್ಥ್ಯ ವೃದ್ಧಿಸಬೇಕು. ವಿದ್ಯೆ ಕೌಶಲ, ಅನ್ನ, ಬದುಕಿಗೆ ಆಧಾರ ನೀಡದಿದ್ದರೆ ಅದು ವಿದ್ಯೆಯಲ್ಲ. ಹಿಂದೆ, ಕೌಶಲಕ್ಕೆ ಸರಿಯಾದ ಪ್ರಾಶಸ್ತ್ಯ ಕೊಡದೆ ಇರವು ಕಾರಣ, ‘ಶಿಕ್ಷಿತ–ಅಪ್ರಯೋಜಕ’ ಎನ್ನಬಹುದಾದ ದೊಡ್ಡ ಸಂಖ್ಯೆ ಈಗ ನಿರ್ಮಾಣವಾಗಿದೆ. ಸಾಹಿತ್ಯವು ಸಂಸ್ಕೃತಿಯ ತಿರುಳು, ಇತಿಹಾಸ, ರೂಪಕ ಮಾತ್ರವಲ್ಲ, ಸಮಾಜವು ಸಾಹಿತ್ಯದ ಪರಿಣಾಮ ಪ್ರತಿಬಿಂಬವೂ ಹೌದು. ಸಾಹಿತ್ಯವು ದೊಡ್ಡ ಸಂಖ್ಯೆಯ ಜನರನ್ನು ತಲುಪಿ, ಪ್ರಬಲ ಪರಿಣಾಮ ಬೀರುವಲ್ಲಿ ಸಮರ್ಥವಾದ ಪತ್ರಿಕಾ ಸಾಹಿತ್ಯ, ಚಲನಚಿತ್ರಗಳು ಹೆಚ್ಚು ಜವಾಬ್ದಾರಿಯಿಂದ ಇರಬೇಕಾಗಿದೆ’ ಎಂದು ಮಾರ್ಮಿಕವಾಗಿ ನುಡಿದರು.

‘ಖಾಸಗಿ ಪ್ರಾಥಮಿಕ ಶಾಲೆಗಳು ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿವೆ. ಆದರೆ, ಖಾಸಗಿ ಅನುದಾನಿತ ಶಾಲೆಗಳಿಗೆ ಅಧ್ಯಾಪಕರ ಹುದ್ದೆ ಭರ್ತಿಯಾಗದೇ, ದಶಕಗಳು ಸಂದಿವೆ. ಒಂದು ಕಡೆ ಕನ್ನಡ ಪರ ಘೋಷಣೆಗಳು, ಇನ್ನೊಂದೆಡೆ ಕನ್ನಡಕ್ಕೆ ಅಡಿಪಾಯವಾಗುವ ಪ್ರಾಥಮಿಕ ಶಾಲೆಗಳಿಗೆ ಅನುದಾನಕ್ಕೆ ತಡೆಯಾಗಿದೆ. ಈ ಶಾಲೆಗಳ ಸಮಸ್ಯೆ ಪರಿಹರಿಸಲು ಸರ್ಕಾರ, ಖಾಸಗಿ ಪ್ರಾಥಮಿಕ ಶಾಲೆಗಳ ಸಮಗ್ರ ಸ್ಥಿತಿಗತಿ ಸರ್ವೇಕ್ಷಣೆ, ತಾಂತ್ರಿಕ ಅಡ್ಡಿ ನಿವಾರಣೆ, ಸರ್ಕಾರ, ದಾನಿಗಳ ನೆರವಿನಿಂದ ಅನುದಾನಿತ ಶಾಲಾ ಪುನರುಜ್ಜೀವನ ಬಂಡವಾಳ ಕೋಶ ರೂಪಿಸಬಹುದಾಗಿದೆ’ ಎಂದು ಸಲಹೆ ನೀಡಿದರು.

ತುರ್ತು ಅಗತ್ಯ: ‘ಯಕ್ಷಗಾನದ ಯಕ್ಷಗಾನೀಯಕರಣ’ ಇಂದಿನ ತುರ್ತು ಅಗತ್ಯವಾಗಿದೆ. ಇದರ ಸಮನ್ವಯದ ಕೆಲಸವನ್ನು ಯಕ್ಷಗಾನ ಅಕಾಡೆಮಿ, ಸರ್ಕಾರಿ ವ್ಯವಸ್ಥೆಗಳು, ಧರ್ಮಾದಾಯ ಇಲಾಖೆ ವಹಿಸಿಕೊಳ್ಳಬೇಕು ಎಂದು ಹೇಳಿದರು.

**

ಕನ್ನಡ ಪ್ರಾಥಮಿಕ ಶಾಲೆಗಳು ಉಳಿಯದಿದ್ದರೆ ಸಾಹಿತ್ಯ, ಯಕ್ಷಗಾನ, ಜನಪದ, ಸಂಸ್ಕೃತಿ ಅಧ್ಯಯನ ಯಾವುದೂ ಉಳಿಯುವುದಿಲ್ಲ.
– ಡಾ. ಎಂ.ಪ್ರಭಾಕರ ಜೋಶಿ, ಸಮ್ಮೇಳನದ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು