ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂದರ್ಶನ | ಔದ್ಯೋಗಿಕ ಕೇಂದ್ರವಾಗಿ ಕರಾವಳಿ ನನ್ನ ಕನಸು: ಕ್ಯಾ.ಬ್ರಿಜೇಶ್‌ ಚೌಟ

Published 7 ಜೂನ್ 2024, 5:10 IST
Last Updated 7 ಜೂನ್ 2024, 5:10 IST
ಅಕ್ಷರ ಗಾತ್ರ
ಮಂಗಳೂರು: ದಕ್ಷಿಣ ಕನ್ನಡದ ನೂತನ ಸಂಸದರಾಗಿ ಆಯ್ಕೆಯಾಗಿರುವ ಕ್ಯಾ.ಬ್ರಿಜೇಶ್ ಚೌಟ ಅವರು ರಾಜಕೀಯ ಜೀವನದಲ್ಲಿ ‘ಜನಪ್ರತಿನಿಧಿ’ಯಾಗಿ ಹೊಸ ಅಧ್ಯಾಯ ಆರಂಭಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಕುರಿತು ‘ಪ್ರಜಾವಾಣಿ’ ಜೊತೆ ಅವರು ಹಂಚಿಕೊಂಡ ಅನಿಸಿಕೆಗಳು ಇಲ್ಲಿವೆ.
ಪ್ರ

ಜಿಲ್ಲೆಯಲ್ಲಿರುವ ಕೇಂದ್ರ ಸರ್ಕಾರದ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಮರೀಚಿಕೆಯಾಗಿದೆಯಲ್ಲ?

ಕೇಂದ್ರ ಸರ್ಕಾರದ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ  ಅವಕಾಶ ಮಾಡಿಕೊಡುವ ಸಾಧ್ಯತೆಗಳ ಬಗ್ಗೆ ಅಧ್ಯಯನ ಮಾಡಿ ಮುಂದಡಿ ಇಡುತ್ತೇನೆ. ಇವುಗಳಲ್ಲಿನ ಉದ್ಯೋಗಾವಕಾಶಗಳನ್ನು ದಕ್ಕಿಸಿಕೊಳ್ಳುವ ಕುರಿತು ಸ್ಥಳೀಯರಿಗೆ ಮಾಹಿತಿ ಹಾಗೂ ಕೌಶಲ ತರಬೇತಿ ನೀಡುವ ಅಗತ್ಯವೂ ಇದೆ. ಈ ಸಂಸ್ಥೆಗಳಿಗೂ ಸಾಮಾಜಿಕ ಹೊಣೆಗಾರಿಕೆಯನ್ನು ಅರ್ಥ ಮಾಡಿಸಿ, ಅವರ ಮೂಲಕವೇ ತರಬೇತಿ ಕೊಡಿಸಲು ಶ್ರಮಿಸುವೆ.

ಪ್ರ

ಸಾಗರ ಉತ್ಪನ್ನಗಳನ್ನು ಆಧರಿಸಿದ ‘ನೀಲ ಆರ್ಥಿಕತೆ’ (ಬ್ಲೂ ಎಕಾನಮಿ) ಸಾಧಿಸುವ ಪ್ರಧಾನಿ ನರೇಂದ್ರ ಮೋದಿಯವರ ಕನಸನ್ನು ಜಿಲ್ಲೆಯಲ್ಲಿ ಸಾಕಾರಗೊಳಿಸಲು ಸಾಧ್ಯವಾಗಿಲ್ಲವಲ್ಲ?

ದಕ್ಷಿಣ ಕನ್ನಡ ಸಾಧ್ಯತೆಗಳ ಸಾಗರ. ‘ನವಯುಗ– ನವ ಪಥ ಕಾರ್ಯಸೂಚಿ’ ಹಾಕಿಕೊಂಡು ಈ ಸಾಧ್ಯತೆಗಳ ಸಾಕಾರಕ್ಕೆ ಪ್ರಯತ್ನಿಸುವೆ. ಸಾರಿಗೆ ಸಂಪರ್ಕ ಮತ್ತು ಮೂಲಸೌಕರ್ಯ ಅಭಿವೃದ್ಧಿ, ಕೈಗಾರಿಕೆ ಮತ್ತು ಬಂಡವಾಳ ಆಕರ್ಷಣೆ, ನವೋದ್ಯಮ ಮತ್ತು ಉದ್ಯಮಶೀಲತೆ ಅಭಿವೃದ್ಧಿ, ಯುವಜನತೆ ಮತ್ತು ಸಂವಹನ, ಕೃಷಿ ಪಶುಸಂಗೋಪನೆ ಮತ್ತು ಮೀನುಗಾರಿಕೆ, ನಾರಿಶಕ್ತಿ, ಪ್ರವಾಸೋದ್ಯಮ, ಕರಾವಳಿಯ ಅಭಿವೃದ್ಧಿ ಮತ್ತು ಭದ್ರತೆ ಇವುಗಳಲ್ಲಿ ಸೇರಿವೆ. ‘ನೀಲ ಆರ್ಥಿಕತೆ’ ಅನುಷ್ಠಾನಕ್ಕೆ ಇದರಲ್ಲಿ ಅವಕಾಶಗಳಿವೆ. ನಮ್ಮ ಕರಾವಳಿಯನ್ನು ಇತರ ನಗರಗಳೊಂದಿಗೆ ಬೆಸೆಯುವ ಪ್ರಮುಖ ಜಲಮಾರ್ಗವನ್ನಾಗಿ ಬಳಸಿದರೆ, ‘ನವಯುಗ– ನವ ಪಥ’ ಕಾರ್ಯಸೂಚಿ ಜೊತೆ ‘ನೀಲ ಆರ್ಥಿಕತೆ’ ಪರಿಕಲ್ಪನೆಯನ್ನೂ ಜೋಡಿಸಿದರೆ ಸಾಗರೋತ್ತರ ವಹಿವಾಟಿನ ಪ್ರಮುಖ ಕೇಂದ್ರವನ್ನಾಗಿ ಮಂಗಳೂರನ್ನು ಬೆಳೆಸಬಹುದು.

ಪ್ರ

ಬೆಂಗಳೂರಿನಂತೆ, ಮಂಗಳೂರನ್ನು ಔದ್ಯೋಗಿಕ ಕೇಂದ್ರವನ್ನಾಗಿ ಬೆಳೆಸಲು ನಿಮ್ಮ ಯೋಜನೆಗಳೇನು?

ಇದು ನನ್ನ ಪ್ರಮುಖ ಕಾರ್ಯಸೂಚಿ. ಇಲ್ಲಿ ನವೋದ್ಯಮಗಳ ಬೆಳವಣಿಗೆಗೆ ಪೂರಕ ವಾತಾವರಣ ರೂಪಿಸುವುದು, ಕೋ ವರ್ಕಿಂಗ್‌ ಸ್ಪೇಸ್‌, ನವೋದ್ಯಮಗಳ ಕಾವು ಕೇಂದ್ರ (ಸ್ಟಾರ್ಟಪ್‌ ಇನ್ಕುಬೇಟರ್‌) ಸ್ಥಾಪಿಸುವುದು, ಮಾಹಿತಿ ತಂತ್ರಜ್ಞಾನ, ಆನಿಮೇಷನ್‌ನಂತಹ ಇ–ಉದ್ಯಮ ಸ್ಥಾಪಿಸುವವರಿಗೆ ಉತ್ತೇಜನ ನೀಡುವ ಅಗತ್ಯವಿದೆ. ಅದಕ್ಕಾಗಿ ‘ನಾನು ಬ್ಯಾಕ್‌ ಟು ಊರು’  ಪರಿಕಲ್ಪನೆಯನ್ನು ರೂಪಿಸಿದ್ದೇನೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದೊಡ್ಡ ಸಂಸ್ಥೆಗಳನ್ನು ಕಟ್ಟಿದವರಲ್ಲಿ ಅನೇಕರು ಇಲ್ಲಿನವರು. ಇಂತಹ  ದೊಡ್ಡ ಸಂಸ್ಥೆಗಳಲ್ಲಿ ಇಲ್ಲಿನವರು ಆಯಕಟ್ಟಿನ ಹುದ್ದೆಗಳಲ್ಲಿದ್ದಾರೆ. ಅಂತಹವರನ್ನು ಒಳಗೊಂಡ ನೆಟ್‌ವರ್ಕ್‌ ಕಟ್ಟಿ, ಅವರ ಪರಿಣತಿ ಹಾಗೂ ಹೂಡಿಕೆ ಬಳಸಿ ಜಿಲ್ಲೆಯನ್ನು ಅಭಿವೃದ್ಧಿಪಡಿಸುವ ಇರಾದೆಯಿದೆ.

‘ನಿಮ್ಮ ಮಾಲೀಕ ನೀವೇ ಆಗಿರಿ’ (ಬಿ ಯುವರ್‌ ಓನ್ ಬಾಸ್) ಎಂಬುದು ಇನ್ನೊಂದು ಪ್ರಮುಖ ಪರಿಕಲ್ಪನೆ. ಜಿಲ್ಲೆಯಲ್ಲಿ ಉದ್ಯಮ ಸ್ಥಾಪಿಸುವವವರಿಗೆ ಮಾರ್ಗದರ್ಶನ, ಸರ್ಕಾರಿ ಹಾಗೂ ಖಾಸಗಿ ವ್ಯವಸ್ಥೆಗಳ ಜೊತೆ ಜೋಡಣೆ, ಖಾಸಗಿ ಸಹಭಾಗಿತ್ವ ಒದಗಿಸುವುದು ಹಾಗೂ ಬಂಡವಾಳ ಹೊಂದಿಸಲು ನೆರವಾಗಬೇಕಿದೆ.

ಪ್ರ

ಆಭರಣ ತಯಾರಿಯೂ ಸೇರಿದಂತೆ ಜಿಲ್ಲೆಯ ಕೌಶಲ ಆಧರಿತ ಕಸುಬುಗಳ ಪುನಶ್ಚೇತನ ಸಾಧ್ಯವೇ?

ದೊಡ್ಡ ಉದ್ದಿಮೆಗಳು ಮಂಗಳೂರಿನಲ್ಲಿ ಸ್ಥಾಪನೆಯಾದರೆ, ಪುತ್ತೂರು, ಸುಳ್ಯದಂತಹ ಕಡೆ ಅಡಿಕೆ, ರಬ್ಬರ್‌ ಆಧರಿತ ಉದ್ದಿಮೆ, ಆಭರಣ ತಯಾರಿ, ಕಾಷ್ಟಶಿಲ್ಪ ಕುಂಬಾರಿಕೆ ಆಧರಿತ ಸಣ್ಣ ಉದ್ಯಮ ವಲಯಗಳು ತಲೆ ಎತ್ತಬೇಕು.   ಕೈಗಡಿಯಾರ ಬಿಡಿಭಾಗ ತಯಾರಿ,  ಹಾಳೆಯಿಂದ ಪರಿಕರಗಳ ತಯಾರಿಸುವ ಕೈಗಾರಿಕೆಗಳು ಜಿಲ್ಲೆಯಲ್ಲಿವೆ. ಮಹಿಳೆಯರಿಗೂ ಉದ್ಯೋಗ ಒದಗಿಸುವ ಇಂತಹ  ಅರೆಕೌಶಲ ಆಧರಿತ ಸಣ್ಣ ಉತ್ಪಾದನಾ ವಲಯಗಳಿಂದ ಸಾಕಷ್ಟು ಬದಲಾವಣೆ ಸಾಧ್ಯ. 

ಪ್ರ

ಹಿಂದುತ್ವ ಪ್ರತಿಪಾದಿಸುವ ನಿಮ್ಮ ಹೇಳಿಕೆಗಳು ಜಿಲ್ಲೆಯಲ್ಲಿ ‘ಸಾಮರಸ್ಯ’ ಬಯಸುವ ಮನಸುಗಳಲ್ಲಿ ಕಳವಳ ಸೃಷ್ಟಿಸುತ್ತವೆ ಎಂದನಿಸುವುದಿಲ್ಲವೇ?

ನಿರ್ದಿಷ್ಟ ಕಾರ್ಯಸೂಚಿ ಹೊಂದಿರುವ ಅನೇಕ ಜನರಿಗೆ ಹಿಂದುತ್ವ ಪದದ ಬಗ್ಗೆ ಸಮಸ್ಯೆ ಇದೆ. ಅವರ ರಾಜಕೀಯವು ಹಿಂದೂ ವಿಚಾರ ಮತ್ತು ಹಿಂದೂ ಸಂಸ್ಕೃತಿಗೆ ವಿರುದ್ಧವಾಗಿರುವುದೇ ಇದಕ್ಕೆ ಕಾರಣ. ಅವರ ಕಾರ್ಯಸೂಚಿಗೆ ಅನುಗುಣವಾಗಿ ನಾವಿಲ್ಲ ಎಂಬ ಕಾರಣಕ್ಕೆ ಅವರು ವಿರೋಧಿಸುತ್ತಾರೆ. ಅದು ಅವರ ಸಮಸ್ಯೆ ಅಷ್ಟೇ. ವಾಸ್ತವ ಹಾಗಲ್ಲ. ಹಿಂದುತ್ವ ಎಂದರೇನೇ ಸಾಮರಸ್ಯ. ಎಲ್ಲರನ್ನು ಒಳಗೊಳ್ಳುವುದು.

ಪ್ರ

ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಆಮೆಗತಿಯಿಂದ ಸ್ಥಳೀಯರು ಎದುರಿಸುವ ಸಮಸ್ಯೆಗಳಿಗೆ  ಪರಿಹಾರೋಪಾಯಗಳಿವೆಯೇ?

ಇಂದಿನ ಯುಗದಲ್ಲಿ ಮಾನವಸಂಪನ್ಮೂಲ ಹಾಗೂ ಪರಿಕರಗಳ ತ್ವರಿತ ಚಲನೆಗೆ ಒಳ್ಳೆಯ ಹೆದ್ದಾರಿ ಮತ್ತು ರೈಲು ಮಾರ್ಗಗಳು ಬೇಕು. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಅಭೂತಪೂರ್ವ ಕೆಲಸ ಮಾಡಿದೆ. ಇಂತಹ ಕಾಮಗಾರಿಗಳ ಅನುಷ್ಠಾನದಲ್ಲಿ ರಾಜ್ಯ ಸರ್ಕಾರವೂ ಸೇರಿದಂತೆ ಅನೇಕ ಏಜನ್ಸಿಗಳ ಪಾತ್ರವಿದೆ. ಮಳೆ, ಭೌಗೋಳಿಕತೆ ಆಧಾರದಲ್ಲಿ ಜಿಲ್ಲೆಯಲ್ಲಿ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ. ರಸ್ತೆ ಮತ್ತು ರೈಲು ಮಾರ್ಗ ಅಭಿವೃದ್ಧಿ ನನ್ನ ಆದ್ಯತೆ.  ಏಕೈಕ ಬಂದರು ನಗರಿಗೆ ಸುಗಮ ಸಂಪರ್ಕ ಸಾಧಿಸಲು ಇಷ್ಟು ದಿನ ಸಾಧ್ಯವಾಗವಾಗಿರುವುದು ಯಾರೋ ಒಬ್ಬನ ವೈಫಲ್ಯ ಅಲ್ಲ; ಇದು ಸಮಷ್ಟಿಯ ವೈಫಲ್ಯ. ಕರಾವಳಿಯ ಕಡೆಗಣನೆ ರಾಜ್ಯದ ಕಡೆಗಣನೆ. ಬಂದರು ನಗರಿ ಅಭಿವೃದ್ಧಿಯಾದರೆ ಇಡೀ ರಾಜ್ಯಕ್ಕೆ ಅದರ ಪಾಲು ದಕ್ಕುತ್ತದೆ. ಬೆಂಗಳೂರು– ಮಂಗಳೂರಿನ ನಡುವೆ ಸಂಪರ್ಕ ಅಭಿವೃದ್ಧಿಗೆ ಶಿರಾಡಿ ಘಾಟಿ ದೊಡ್ಡ ಸವಾಲು. ಇಲ್ಲಿ ಹೆದ್ದಾರಿ ಮತ್ತು ರೈಲು  ಮಾರ್ಗದ ಅಭಿವೃದ್ಧಿ ಪಡಿಸುವುದನ್ನು ರಾಷ್ಟ್ರೀಯ ಯೋಜನೆಯಾಗಿ ಕಾರ್ಯಗತಗೊಳಿಸಬೇಕು. ಬಂದರು ನಗರಿಯ ಸಾಮರ್ಥ್ಯದ ಗರಿಷ್ಠ ಬಳಕೆ ಇಂದಿನ ಅಗತ್ಯ ಮತ್ತು ಅನಿವಾರ್ಯ. ರಾಜ್ಯ ಸರ್ಕಾರಕ್ಕೂ ಈ ಬಗ್ಗೆ ಮನವಿ ಮಾಡುತ್ತೇನೆ. ಈ ನಿಟ್ಟಿನಲ್ಲಿ ನಾಯಕತ್ವ ವಹಿಸುವುದಕ್ಕೂ ನಾನು ಸಿದ್ಧ.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT