ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ವಿಮಾನ ದುರಂತಕ್ಕೆ ದಶಕ: ಉಳಿದವರ ಸುಳಿವಿಲ್ಲ

Last Updated 24 ಮೇ 2020, 16:36 IST
ಅಕ್ಷರ ಗಾತ್ರ

ಮಂಗಳೂರು: ಬೆಳಿಗ್ಗೆ 5.30 ರ ಸಮಯ ಇರಬಹುದು. ವಿಮಾನದ ಪೈಲಟ್‌ ಇನ್ನು ಅರ್ಧ ಗಂಟೆಯಲ್ಲಿ ವಿಮಾನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ ಎಂದು ಘೋಷಣೆ ಮಾಡಿದರು. ಇನ್ನೇನು ತವರು ನೆಲ ಬಂದೇ ಬಿಟ್ಟಿತು ಎನ್ನುವ ಸಂತಸದಲ್ಲಿದ್ದ ವಿಮಾನ ಪ್ರಯಾಣಿಕರ ಜೀವನದಲ್ಲಿ ಬಹುದೊಡ್ಡ ದುರಂತ ನಡೆದೇ ಹೋಯಿತು.

ಇಲ್ಲಿನ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2010ರ ಮೇ 22ರ ಬೆಳಿಗ್ಗೆ 6.15ಕ್ಕೆ ನಡೆದ ವಿಮಾನ ಅಪಘಾತಕ್ಕೆ ಈಗ 10 ವರ್ಷ. ದೇಶದ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಇದೊಂದು ಮರೆಯಲಾಗದ ದುರಂತ.

ದುರಂತದಲ್ಲಿ ಪೈಲಟ್‌, ಸಿಬ್ಬಂದಿ ಸೇರಿ 158 ಮಂದಿ ಮೃತಪಟ್ಟಿದ್ದರು. ಆ ವಿಮಾನದಲ್ಲಿ ಒಟ್ಟು 135 ಮಂದಿ ವಯಸ್ಕರು, 19 ಮಕ್ಕಳು ಹಾಗೂ 4 ಶಿಶುಗಳು, 6 ಮಂದಿ ವಿಮಾನ ಸಿಬ್ಬಂದಿ ಸೇರಿ ಒಟ್ಟು 166 ಮಂದಿ ಪ್ರಯಾಣಿಸುತ್ತಿದ್ದರು. 8 ಮಂದಿ ಬದುಕುಳಿದಿದ್ದರು. ಮೃತಪಟ್ಟವರಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೇರಳದವರಿದ್ದರು.

ನಡೆದಿದ್ದೇನು?: ದುಬೈನಿಂದ ಅಲ್ಲಿನ ಸಮಯ ರಾತ್ರಿ 1.20ಕ್ಕೆ ಏರ್‌ ಇಂಡಿಯಾ ವಿಮಾನ ಹೊರಟಿತ್ತು. ಬೆಳಿಗ್ಗೆ ಮಂಗಳೂರಿನಲ್ಲಿ ಸುರಕ್ಷಿತವಾಗಿ ಇಳಿಯಬೇಕಿದ್ದ ವಿಮಾನ ದುರಂತಕ್ಕೀಡಾಯಿತು. ಆ ಸಂದರ್ಭದಲ್ಲಿ ಬದುಕುಳಿದಿದ್ದ 8 ಮಂದಿ ಈಗ ಯಾರ ಸಂಪರ್ಕದಲ್ಲೂ ಇಲ್ಲ. ಆ ಸಂದರ್ಭದಲ್ಲಿ ವಿಮಾನದ ದುರ್ಘಟನೆಗಳ ಕುರಿತು ಹಲವು ಮಂದಿ ವಿವರ ನೀಡಿದ್ದರು.

‘ನೋಡುತ್ತಿದ್ದಂತೆಯೇ ವಿಮಾನ ಎರಡು ತುಂಡಾಯಿತು. ವಿಮಾನದಿಂದ ಹೊರಗೆ ಜಿಗಿದು ಬಂದೆ. ದೂರ ಓಡುತ್ತಲೇ ಹಿಂದುರುಗಿ ನೋಡುವಷ್ಟರಲ್ಲಿ, ವಿಮಾನ ತುಂಡು ತುಂಡಾಗಿ ಹೊತ್ತಿ ಉರಿಯುತ್ತಿತ್ತು. ದೇವರೇ ನನ್ನನ್ನು ರಕ್ಷಿಸಿದ್ದ. ಸಮೀಪದ ಊರಿಗೆ ಹೋಗಿ, ನನ್ನ ಸ್ನೇಹಿತರಿಗೆ ಕರೆ ಮಾಡಿ ವಿಷಯ ತಿಳಿಸಿದೆ. ಅವರು ಬಂದು ನನ್ನನ್ನು ಆಸ್ಪತ್ರೆಗೆ ಸೇರಿಸಿದ್ದರು' ಎಂದು ದುಬೈನಲ್ಲಿ ಅಂಗಡಿಯೊಂದರಲ್ಲಿ ಮ್ಯಾನೇಜರ್‌ ಆಗಿದ್ದ ಅಬ್ದುಲ್ಲ ಪುತ್ತೂರು ಇಸ್ಮಾಯಿಲ್‌ ಅಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದರು.

ಟೇಬಲ್‌ಟಾಪ್‌ ಡೆಂಜರಸ್‌
ಅಂದಿನ ವಿಮಾನ ನಿಲ್ದಾಣ ಇಕ್ಕೆಲಗಳಲ್ಲೂ ಆಳ ಕಣಿವೆಯಿರುವ ಬೆಟ್ಟದ ತುತ್ತತುದಿಯಲ್ಲಿತ್ತು. ಪೈಲಟ್‌ಗಳು ಇದನ್ನು ಟೇಬಲ್ ಟಾಪ್ ರನ್‌ವೇ ಎಂದು ಕರೆಯುತ್ತಿದ್ದರು.

ಸ್ವತಃ ಪೈಲಟ್‌ ಆಗಿದ್ದ ಮಾಜಿ ಪ್ರಧಾನಿ ದಿ. ರಾಜೀವ್‌ ಗಾಂಧಿ ಕೂಡ ಇದು ಅಪಾಯಕಾರಿ ವಿಮಾನ ನಿಲ್ದಾಣ ಎಂದಿದ್ದರು. ‘ಬ್ಯೂಟಿಫುಲ್ ಏರ್‌ಪೋರ್ಟ್, ಬಟ್ ಡೇಂಜರಸ್’ ಮಂಗಳೂರು ವಿಮಾನ ನಿಲ್ದಾಣದ ಬಗ್ಗೆ ರಾಜೀವ್‌ ಗಾಂಧಿ ಹೀಗೆ ವ್ಯಾಖ್ಯಾನಿಸಿದ್ದರು. ದುರಂತ ಸಂಭವಿಸುವ 25 ವರ್ಷಗಳ ಹಿಂದೆಯೇ ಇಂತಹ ಎಚ್ಚರಿಕೆಯ ನೀಡಿದ್ದರು. ನಿಜಕ್ಕೂ ಇದೊಂದು ದೇಶದ ಸುಂದರ ಏರ್‌ಪೋರ್ಟ್. ಆದರೆ ಪೈಲಟ್ ಮೈಮರೆತನೆಂದರೆ ಪ್ರಪಾತವೇ ಗತಿ. ವೆರಿ ಡೇಂಜರಸ್ ಎಂದು ಅವರು ಹೇಳಿದ್ದರು.

ಬದುಕಿ ಉಳಿದವರ ಸಂಪರ್ಕವಿಲ್ಲ
ತಣ್ಣೀರುಬಾವಿಯ ಪ್ರದೀಪ್‌ (ಅಂದಿನ ಪ್ರಾಯ 28), ಹಂಪನಕಟ್ಟೆಯ ಮಹಮ್ಮದ್‌ ಉಸ್ಮಾನ್‌ (49), ವಾಮಂಜೂರಿನ ಜ್ಯೂಯೆಲ್‌ ಡಿಸೋಜ (24), ಕೇರಳ ಕಣ್ಣೂರು ಕಂಬಿಲ್‌ನ ಮಾಹಿನ್‌ ಕುಟ್ಟಿ (49), ಕಾಸರಗೋಡು ಉದುಮ ಕುಲಿಕುನ್ನು ನಿವಾಸಿ ಕೃಷ್ಣನ್‌ (37), ಉಳ್ಳಾಲದ ಉಮ್ಮರ್‌ ಫಾರೂಕ್‌ (26), ಪುತ್ತೂರು ಸಾಮೆತ್ತಡ್ಕದ ಅಬ್ದುಲ್ಲಾ (37), ಮಂಗಳೂರು ಕೆಎಂಸಿ ವಿದ್ಯಾರ್ಥಿನಿ ಬಾಂಗ್ಲಾದ ಸಬ್ರಿನಾ (23) ಬದುಕುಳಿದ ಅದೃಷ್ಟವಂತರು. ಇವರಲ್ಲಿ ಸಬ್ರಿನಾ ಮಾತ್ರ ಗಂಭೀರ ಗಾಯಗೊಂಡಿದ್ದರು.

2010ರಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಬದುಕಿ ಉಳಿದವರ ಬಗ್ಗೆ ಸದ್ಯ ದಕ್ಷಿಣ ಕನ್ನಡ ಜಿಲ್ಲಾಡಳಿತ, ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಏರ್‌ ಇಂಡಿಯಾದಲ್ಲಿ ಯಾವುದೇ ಮಾಹಿತಿಯಿಲ್ಲ. ಅವರೆಲ್ಲರೂ ಸಣ್ಣಪುಟ್ಟ ಗಾಯಗಳೊಂದಿಗೆ ಕೆಲವೇ ದಿನಗಳಲ್ಲಿ ಚೇತರಿಸಿಕೊಂಡಿದ್ದರು. ಅವರಿಗೆ ನೀಡಬೇಕಾದ ಪರಿಹಾರ ಪ್ರಕ್ರಿಯೆಯೂ ಒಂದೆರಡು ವರ್ಷದೊಳಗೆ ಮುಗಿದಿತ್ತು.

‘ಬದುಕಿ ಉಳಿದವರಿಗೆ ಪರಿಹಾರ ಪ್ರಕ್ರಿಯೆ ಒಂದೆರಡು ವರ್ಷಗಳಲ್ಲಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅವರು ನಮ್ಮ ಸಂಘದ ಜತೆಗೆ ಸಂಪರ್ಕದಲ್ಲಿಲ್ಲ’ ಎಂದು ಮಂಗಳೂರು ವಿಮಾನ ದುರಂತ ಸಂತ್ರಸ್ತರ ಸಂಘದ ಅಧ್ಯಕ್ಷ ಮಹಮ್ಮದ್‌ ಉಸ್ಮಾನ್‌ ಹೇಳುತ್ತಾರೆ.

ಸಂಸ್ಮರಣೆ
ವಿಮಾನ ದುರಂತದಲ್ಲಿ ಮಡಿದವರ ಸಂಸ್ಮರಣೆ ಕಾರ್ಯಕ್ರಮ ಮೇ 22ರಂದುಶುಕ್ರವಾರಕೂಳೂರು–ತಣ್ಣೀರುಬಾವಿ ರಸ್ತೆಯಲ್ಲಿರುವ ಸ್ಮಾರಕದಲ್ಲಿ ನಡೆಯಿತು. ದುರಂತದಲ್ಲಿ ಮಡಿದವರ ಕುಟುಂಬ ವರ್ಗದವರು ಕಾರ್ಯಕ್ರಮದಲ್ಲಿಶ್ರದ್ಧಾಂಜಲಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT