ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು | ವರ್ತಮಾನಕ್ಕೆ ಇತಿಹಾಸದ ವೇಷ ಬೇಡ: ಎಂ.ಜಿ.ಗಹೆಗಡೆ

ಆತ್ಮಕತೆ ‘ಚಿಮಣಿ ಬೆಳಕಿನಿಂದ’ ಬಿಡುಗಡೆ ಸಮಾರಂಭದಲ್ಲಿ ಎಂ.ಜಿ.ಗಹೆಗಡೆ
Published : 23 ಸೆಪ್ಟೆಂಬರ್ 2024, 5:27 IST
Last Updated : 23 ಸೆಪ್ಟೆಂಬರ್ 2024, 5:27 IST
ಫಾಲೋ ಮಾಡಿ
Comments

ಮಂಗಳೂರು: ವರ್ತಮಾನಕ್ಕೆ ಇತಿಹಾಸದ ವೇಷ ಕಟ್ಡಬೇಡಿ.‌ಇತಿಹಾಸದ ಎಲ್ಲವನ್ನೂ ವರ್ತಮಾನಕ್ಕೆ ತಂದು ಗದ್ದಲ ಸರಷ್ಟಿಸುವುದು ಬೇಡ.‌ ಇವತ್ತಿನ ಬಗ್ಗೆ ಮಾತನಾಡೋಣ‌‌. ಇತಿಹಾಸದ ಒಳ್ಳೆ ಆಭರಣಗಳಿದ್ದರೆ ಬಳಸೋಣ. ರಕ್ತ ಸಿಕ್ತ ಕತ್ತಿಗಳಿದ್ದರ ಮುಚ್ಚಿ ಬಿಡೋಣ’ ಎಂದು ಲೇಖಕ ಎಂ.ಜಿ.ಹೆಗಡೆ ಹೇಳಿದರು.   

ಗಾಂಧಿ ವಿಚಾರ ವೇದಿಕೆ ನೇತೃತ್ವದಲ್ಲಿ ಆರ್.ಜಿ. ಫೌಂಡೇಷನ್ ಮತ್ತು ಶಿವಮೊಗ್ಗದ ಅಹರ್ನಿಶಿ ಪ್ರಕಾಶನದ ಆಶ್ರಯದಲಿ ಇಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತಮ್ಮ ಆತ್ಮಕತೆ 'ಚಿಮಣಿ ಬೆಳಕಿನಿಂದ' ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹಿಂದುತ್ವದ ಪರವಾಗಿ ಹೋರಾಟ ಮಾಡುತ್ತಿದ್ದ ದಿನಗಳಲ್ಲಿ ನನಗೆ  ವೇದಗಳ ಹೆಸರೂ ಗೊತ್ತಿರಲಿಲ್ಲ. ಉಪನಿಷತ್ ಎಂದರೆ, ಹಿ‌ಂದೂ ಧರ್ಮವೆಂದರೆ ಏನೆಂದೇ ತಿಳಿದಿರಲಿಲ್ಲ.  ತೈತ್ತರೀಯ ಉಪನಿಷತ್‌ ಓದಿದ ಬಳಿಕ ಧರ್ಮದ ಅರಿವಾಯಿತು’ ಎಂದರು.

‘ಇವತ್ತು ಧರ್ಮ‌ವೇ ದೊಡ್ಡ‌ ಸಮಸ್ಯೆಯಾಗುತ್ತಿದೆ.‌ ಮತಾಚರಣೆ, ಜೀವನ‌ ಧರ್ಮ, ವ್ಯಕ್ತಿ‌ ಧರ್ಮ, ವೃತ್ತಿ ಧರ್ಮ ಎಲ್ಲವನ್ನೂ ಬಿಟ್ಟು ಕೊಡುತ್ತಿದ್ದೇವೆ. ಆದರೆ ನಮ್ಮೆದೆಯ ಧರ್ಮವಾವುದು ಎಂದು ಅರಿಯುತ್ತಿಲ್ಲ. ಹಿಂದೂ ಮುಸ್ಲಿಂ, ಕ್ರೈಸ್ತರೆಲ್ಲರೂ ಎದೆಯ ಧರ್ಮವನ್ನು ಅರಿತರೆ ಈ ಸಮಸ್ಯೆ ಇರದು’ ಎಂದರು.

ಕೃತಿ ಪರಿಚಯಿಸಿದ ಅರವಿಂದ‌ ಚೊಕ್ಕಾಡಿ, ‘ಈಚಿನ ದಿನಗಳಲ್ಲಿ ಬರುವ ಆತ್ಮಕತೆಗಳು ಬೈಗುಳದ ಪುಸ್ತಕದಂತಾಗಿವೆ. ಆದರೆ ಈ ಕೃತಿಯಲ್ಲಿ ಎಂ.ಜಿ.ಹೆಗಡೆಯವರು  ತಮ್ಮನ್ನು ಲೇಖಕನಾಗಿ ಹೊರಗಿನಿಂದ ನೋಡಿದ್ದಾರೆ. ತಮ್ಮ ತಪ್ಪುಗಳನ್ನೂ ಒಪ್ಪಿಕೊಳ್ಳುತ್ತಲೇ, ತಮ್ಮನ್ನು ತಾವು ಒಪ್ಪಿಸಿಕೊಂಡಿದ್ದಾರೆ. ಹಣತೆಗಿರುವ ಪಾವಿತ್ರ್ಯ ಚಿಮಣಿಗೆ ಇಲ್ಲ. ಆದರೆ ಈ ಕೃತಿಯ ರೂಪಕವಾದ ಚಿಮಣಿ ದೀಪ ಹೆಚ್ಚು ವ್ಯಾಪಕವಾಗಿ ಜನರ ಒಡನಾಡಿಯಾಗಿ ನಿಂತಿದೆ. ಅವರ ಬದುಕಿನ ಎಲ್ಲ ವಿವರಗಳನ್ನು ಚಿಮಣಿ ಸಶಕ್ತವಾಗಿ ಹಿಡಿದಿಟ್ಟಿದೆ’ ಎಂದರು.

‘ಉಡುಪಿಯ ಮುಖ್ಯಪ್ರಾಣ ಗುಡಿಯಲ್ಲಿ ತೀರ್ಥಕೊಡುತ್ತಿದ್ದ ದಿನದಲ್ಲೇ ಸಾರ್ವಜನಿಕ ಬದುಕನ್ನು ಪ್ರವೇಶಿಸಿ, ರೌಡಿ ಶೀಟರ್ ಆಗುವವರೆಗೆ ತಲುಪಿದ ವಿವರಗಳೂ ಕೃತಿಯಲ್ಲಿವೆ. ಭೂಗತ ಪಾತಕ ಲೋಕಕ್ಕೆ‌ ನುಗ್ಗಬೇಕು ಎನ್ನುವಾಗ ಅದರಿಂದ ಕಳಚಿಕೊಂಡಿದ್ದನ್ನು ವಿವರಿಸಿದ್ದಾರೆ. ಬೆಂಕಿ ಭಾಷಣಕಾರ, ಹಿಂದುತ್ವದ ನಾಯಕ ಎಂದು ಕರೆಸಿಕೊಂಡಾಗಲೆಲ್ಲ ಉಬ್ಬುತ್ತಿದ್ದ ವ್ಯಕ್ತಿ ಅಧ್ಯಾಪಕರೊಬ್ಬರ ಹಿತಬೋಧೆಯ ಬಳಿಕ ಅಮಲು ಇಳಿಸಲು ಹುಳಿಮಜ್ಜಿಗೆ ಕುಡಿದ ಹಾಗಾಗಿದ್ದನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಕಷ್ಟಗಳ ನಡುವೆಯೂ ಸಂಭ್ರಮದಿಂದ ಬದುಕಿದ ಬಗೆಯನ್ನು ಕಾಣಿಸಿದ್ದಾರೆ’ ಎಂದರು. 
‘ಯುವಕ ಯುವತಿಯರು ಕಾಲೇಜು ಜೀವನದಲ್ಲಿ ಒದಲೇಬೇಕಾದ ಕೃತಿಯಿದು.‌ ಬದುಕಿನಲ್ಲಿ ದಾರಿ ತಪ್ಪುವ ಅಪಾಯಗಳನ್ನು ಈ ಕೃತಿ ತಿಳಿಸುತ್ತದೆ’ ಎಂದರು.

ಕೃತಿಗೆ ಹೊದಿಸಿದ್ದ ಹೂವಿನ ಹಾರವನ್ನು ಎಂ.ಜಿ.ಹೆಗಡೆ ಅವರಿಗೆ ಒಪ್ಪಿಸುವ ಮೂಲಕ  ಕವಿ ಸುಬ್ರಾಯ ಚೊಕ್ಕಾಡಿಯವರು ಚಿಮಣಿ ದೀಪದ ಬೆಳಕಿನಲ್ಲೇ ಕೃತಿಯನ್ನು ಲೋಕಾರ್ಪಣೆಗೊಳಿಸಿದರು. 

ಗಾಂಧಿ ವಿಚಾರ ವೇದಿಕೆ ಅಧ್ಯಕ್ಷ ಶ್ರೀಧರ ಜಿ.ಭಿಡೆ ಅಧ್ಯಕ್ಷತೆ ವಹಿಸಿದ್ದರು. ಲೇಖಕಿ ಭುವನೇಶ್ವರಿ ಹೆಗಡೆ, ನಿವೃತ್ತ ಪ್ರಾಂಶುಪಾಲ ಉದಯ ಕುಮಾರ್ ಇರ್ವತ್ತೂರು, ನಾಗವೇಣಿ, ಸೀತಾರಾಮ ಹೆಗಡೆ ಶಾನುವಳ್ಳಿ, ನಿವೃತ್ತ ಉಪಕುಲಸಚಿವ ಪ್ರಭಾಕರ ನೀರುಮಾರ್ಗ, ಪ್ರಭಾಕರ ಹೆಗಡೆ ಶಿರಸಿ, ಸಿಐಎಎಲ್ ನಿರ್ದೇಶಕ ನಂದಗೋಪಾಲ, ಲಾತವ್ಯ ಆಚಾರ್ಯ ಉಡುಪಿ,  ಲಕ್ಷ್ಮೀ‌ ಹೆಗಡೆ, ಗಹನ್ ಹೆಗಡೆ ಭಾಗವಹಿಸಿದ್ದರು.
ಗಾಂಧಿ ವಿಚಾರ ವೇದಿಕೆ ಆಡಳಿತಾಧಿಕಾರಿ ಭಾಗ್ಯೇಶ್‌ ರೈ ಸ್ವಾಗತಿಸಿದರು. ಕಲ್ಲೂರು ನಾಗೇಶ ಅವರು ಕಾರ್ಯಕ್ರಮ ನಿರೂಪಿಸಿದರು. ಭಾನುಮತಿ ಹೆಗಡೆ, ಹುಸೇನ್ ಕಾಟಿಪಳ್ಳ ಸಹನಾ ಭಟ್ ಅವರು ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು‌.
 

ಕೃತಿ:  'ಚಿಮಣಿ ಬೆಳಕಿನಿಂದ' (ಎಂ.ಜಿ.ಹೆಗಡೆ ಆತ್ಮಕತೆ) ಪ್ರಕಟಣೆ: ಅಹರ್ನಿಶಿ ಪ್ರಕಾಶನ ಶಿವಮೊಗ್ಗ ದರ: ₹ 250 ಪುಟಗಳು: 228

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT