ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು: ಧಾರ್ಮಿಕ ಆಚರಣೆಗೆ ಒತ್ತು, ಗಣೇಶ ಮಂಟಪಗಳಲ್ಲಿ ಭಜನೆಯೇ ಪ್ರಧಾನ

Published : 9 ಸೆಪ್ಟೆಂಬರ್ 2024, 6:17 IST
Last Updated : 9 ಸೆಪ್ಟೆಂಬರ್ 2024, 6:17 IST
ಫಾಲೋ ಮಾಡಿ
Comments

ಮಂಗಳೂರು: ಬದುಕಿನ ದುಗುಡಗಳನ್ನೆಲ್ಲ ಕಳೆದು ನೆಮ್ಮದಿ ಹೊತ್ತು ತರುವ, ಮನೆ–ಮನಗಳಲ್ಲಿ ನವೋಲ್ಲಾಸ ಚಿಮ್ಮಿಸುವ, ಭಜಕರೊಡನೆ ಅನುಸಂಧಾನಿಸುವ ವಿಘ್ನನಿವಾರಕನು ಭಾದ್ರಪದ ಶುಕ್ಲ ಚೌತಿಯಂದು ದಯ ಮಾಡಿಸಿದ್ದಾನೆ. ಜಾತಿ, ಪಂಥಗಳನ್ನು ಮರೆಸಿ, ಸಮುದಾಯದಲ್ಲಿ ಹರುಷದ ಹೊನಲು ಸೃಷ್ಟಿಸುವ ಗಣೇಶನು ಬಹುರೂಪಿ. ಸಕಲರೂ ಪೂಜಿಪ ಗಣೇಶನು ನಾನಾ ಪಾತ್ರಧಾರಿಯಾಗಿ ಬೀದಿಯಲ್ಲಿ, ಗಲ್ಲಿಯಲ್ಲಿ, ಕಟ್ಟೆಯಲ್ಲಿ ವಿರಾಜಮಾನನಾಗಿದ್ದಾನೆ.

ಗಣೇಶ ಚತುರ್ಥಿಯ ಸಂಭ್ರಮ ಎಲ್ಲೆಲ್ಲೂ ಕಳೆಗಟ್ಟಿದೆ. ಮಿಂಚು, ಮೆರುಗು, ಚಿತ್ರ, ಚಿತ್ತಾರ, ಸಡಗರ, ಸಂಭ್ರಮದ ನಡುವೆ ಸಾರ್ವಜನಿಕ ಮಂಟಪಗಳಲ್ಲಿ ಏಕದಂತನನ್ನು ಪ್ರತಿಷ್ಠಾಪಿಸಲಾಗಿದೆ. ತುಳುನಾಡಿನಲ್ಲಿ ಚೌತಿ ಹಬ್ಬದ ಮೂಲ ಆಚರಣೆ ತುಸು ಭಿನ್ನವಾಗಿದ್ದರೂ, ಸಮುದಾಯವನ್ನು ಒಗ್ಗೂಡಿಸುವ, ಸಂಭ್ರಮವನ್ನು ಇಮ್ಮಡಿಸುವ ಕಲ್ಪನೆಯಲ್ಲಿ ಪ್ರಾರಂಭವಾಗಿರುವ ಸಾರ್ವಜನಿಕ ಗಣೇಶೋತ್ಸವಗಳಿಗೆ ದಶಕಗಳ ಇತಿಹಾಸವಿದೆ. ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲೇ 165ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಮಂಡಳಿಗಳು, ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿವೆ. 76 ವರ್ಷಗಳ ಇತಿಹಾಸ ಇರುವ ಸಂಘ ನಿಕೇತನದ ಗಣೇಶೋತ್ಸವ ಇವುಗಳಲ್ಲಿ ಒಂದು.

ಏಕಮಾದರಿಯ ಮೂರ್ತಿ: ಪ್ರತಾಪ ನಗರದ ಸಂಘ ನಿಕೇತನದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯು 1948ರಲ್ಲಿ ಪ್ರಾರಂಭಿಸಿರುವ ಗಣೇಶೋತ್ಸವವು ನಿರಂತರವಾಗಿ ನಡೆದುಕೊಂಡು ಬಂದಿದೆ.

ಬಾಲಗಂಗಾಧರ ತಿಲಕರು ಅಂದು ನೀಡಿದ ಪ್ರೇರಣೆಯಿಂದ ಪ್ರಾರಂಭವಾಗಿರುವ ಗಣೇಶೋತ್ಸವಕ್ಕೆ ಈಗ 77 ವರ್ಷ. ಗಣೇಶ ಚತುರ್ಥಿಗೆ ರಾಷ್ಟ್ರೀಯ ರೂಪ ನೀಡಿ, ಸಾಮಾಜಿಕ ಬದ್ಧತೆ ತೋರಬೇಕೆಂಬ ಉದ್ದೇಶದಿಂದ ಆಗಿನ ನಾಯಕರು ಈ ಉತ್ಸವ ಪ್ರಾರಂಭಿಸಿದರು. ಸಮಯ ಪರಿಪಾಲನೆ, ರಾಷ್ಟ್ರೀಯ ವಿಚಾರಧಾರೆ ಪ್ರೇರೇಪಿಸುವ ನಿಟ್ಟಿನಲ್ಲಿ ನಡೆಯುವ ದೇಶಭಕ್ತಿ ಗೀತೆ, ಗಾಯನ ಸ್ಪರ್ಧೆಗಳು, ಪ್ರತಿವರ್ಷ ಒಂದೇ ಭಂಗಿಯ ಗಣೇಶ ವಿಗ್ರಹ ಸ್ಥಾಪನೆ, ಮೂರ್ತಿಯನ್ನು ಹೊತ್ತುಕೊಂಡು ಮಂಟಪಕ್ಕೆ ತರುವುದು ನಮ್ಮ ಉತ್ಸವದ ವಿಶೇಷ ಎನ್ನುತ್ತಾರೆ ಸಮಿತಿಯ ಉಪಾಧ್ಯಕ್ಷ ಎಂ. ಸತೀಶ್ ಪ್ರಭು.

ಈವರೆಗೆ ಒಂದು ಗುಲಗುಂಜಿ ಬಂಗಾರದ ಆಭರಣವನ್ನೂ ಸಮಿತಿ ಮಾಡಿಸಿಲ್ಲ. ದೇಶ–ವಿದೇಶಗಳಲ್ಲಿರುವ ಭಕ್ತರು ಹರಕೆ ರೂಪದಲ್ಲಿ ನೀಡಿರುವ ಆಭರಣಗಳಲ್ಲೇ ಗಣೇಶ ಶೋಭಿಸುತ್ತಾನೆ. ಪ್ರತಿವರ್ಷ ವಿದ್ಯಾನಿಧಿಯಡಿ ವಿದ್ಯಾರ್ಥಿ ವೇತನ ನೀಡುತ್ತಿದ್ದು, ಈ ಮೊತ್ತ ₹1 ಕೋಟಿ ದಾಟಿದೆ. ಅಲಂಕಾರ ಪೂಜೆಯಿಂದ ಸಂಗ್ರಹವಾಗುವ ಆದಾಯವನ್ನು ವಿದ್ಯಾನಿಧಿಗೆ ಬಳಕೆ ಮಾಡಲಾಗುತ್ತದೆ. ಹಬ್ಬ ಮುಗಿದು ಒಂದು ವಾರದಲ್ಲಿ ಲೆಕ್ಕಪತ್ರ ಮಂಡನೆಯಾಗುತ್ತದೆ. ಕುಣಿತ ಭಜನೆ, ಭಜನೆ ತಂಡಗಳು ಶೋಭಾಯಾತ್ರೆ ಮೆರವಣಿಗೆಯಲ್ಲಿ ಭಾಗವಹಿಸಲಿವೆ ಎಂದು ಅವರು ತಿಳಿಸಿದರು. 

ತಂದೆ–ಮಗನ ಮುಖಾಮುಖಿ: ಉತ್ತರ ಕರ್ನಾಟಕ ಭಾಗದಿಂದ ಉದ್ಯೋಗಕ್ಕೆ ಬಂದಿದ್ದ ಸಿಬ್ಬಂದಿ, ನಗರದ ಕರಂಗಲ್ಪಾಡಿಯಲ್ಲಿ ಹಾಪ್‌ಕಾಮ್ಸ್‌ ಮಳಿಗೆ ಆವರಣದಲ್ಲಿ 1988ರಲ್ಲಿ ಪ್ರಾರಂಭಿಸಿದ ಉತ್ಸವವು ಇಂದು ಸಾರ್ವಜನಿಕ ಉತ್ಸವದ ರೂಪ ತಳೆದಿದೆ.

ಇಲ್ಲಿ ಗಣೇಶನ ಜೊತೆಗೆ ಗೌರಿಯನ್ನು ಪೂಜಿಸಲಾಗುತ್ತದೆ. ಇಲ್ಲಿ ಚಂದ್ರಮೌಳೇಶ ಗುಡಿ ಇದ್ದು, ಎದುರಿನಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ. 2004ರಿಂದ ಸ್ಥಳೀಯ ಸಾರ್ವಜನಿಕರು ಸೇರಿ ಉತ್ಸವ ಆಚರಿಸುತ್ತಿದ್ದಾರೆ.  ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುತ್ತಾರೆ. ದೇವರಿಗೆ ಚಿನ್ನ, ಬೆಳ್ಳಿಯ ಆಭರಣ ಮಾಡಿಸಲಾಗಿದೆ. ಹರಕೆ ಹೊತ್ತಿರುವ ಅನೇಕರ ಇಷ್ಟಾರ್ಥಗಳನ್ನು ದೇವರು ಈಡೇರಿಸಿದ್ದಾನೆ ಎನ್ನುತ್ತಾರೆ ಜಿಲ್ಲಾ ಹಾಪ್‌ಕಾಮ್ಸ್ ನೌಕರರು ಮತ್ತು ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ. 

ಐತಿಹಾಸಿಕ ಸ್ತಬ್ಧಚಿತ್ರಗಳು: ನಗರದ ನೆಹರೂ ಮೈದಾನದಲ್ಲಿ ಹಿಂದೂ ಯುವ ಸೇನೆ ನಡೆಸುವ ಗಣೇಶೋತ್ಸವಕ್ಕೆ 32 ವರ್ಷ ಸಂದಿದೆ. ‘ಪೆಂಡಾಲ್ ನಿರ್ಮಾಣದಿಂದ ಹಿಡಿದು ಎಲ್ಲವನ್ನೂ ಭಾರತೀಯ ಸಂಸ್ಕೃತಿಯ ಹಿನ್ನೆಲೆಯಲ್ಲಿ ಸಿದ್ಧಪಡಿಸುವುದು ನಮ್ಮ ಗಣೇಶೋತ್ಸವದ ವಿಶೇಷ. ಅಲ್ಲಲ್ಲಿ ನಡೆಯುವ ಶನೀಶ್ವರ ಪೂಜೆ, ಸತ್ಯನಾರಾಯಣ ಪೂಜೆ, ದೇವಾಲಯಗಳ ಜೀರ್ಣೋದ್ಧಾರ ಕಾರ್ಯಕ್ಕೆ ಸ್ವಯಂಸೇವಕರಾಗಿ ಹೋಗುತ್ತಿದ್ದ ಯುವಕರು ಸೇರಿ ನಿರ್ಧರಿಸಿದ ಗಣೇಶೋತ್ಸವವು ಇಂದು ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದೆ. ವಿಸರ್ಜನಾ ಮೆರವಣಿಗೆಯಲ್ಲಿ ರಾಮಾಯಣ, ಮಹಾಭಾರತದ ಐತಿಹಾಸಿಕ ದೃಶ್ಯಾವಳಿಗಳು ಇರುವ ಬಂಡಿಚಿತ್ರವು ನೋಡುಗರನ್ನು ಸೆಳೆಯುತ್ತದೆ’ ಎನ್ನುತ್ತಾರೆ ಉತ್ಸವ ಸಮಿತಿ ಗೌರವಾಧ್ಯಕ್ಷ ಭಾಸ್ಕರಚಂದ್ರ ಶೆಟ್ಟಿ.

ಭಜನೆಯೇ ಮೆರುಗು: ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ನೆಲೆಸಿರುವ ಬಂಟ ಸಮುದಾಯವರು ಒಂದೆಡೆ ಸೇರುವ ಮೂಲಕ ಬಂಟರ ಸಂಘಟನೆಗೆ ಬಲ ತುಂಬಬೇಕೆಂಬ ಉದ್ದೇಶದಿಂದ 2004ರಲ್ಲಿ ಗಣೇಶೋತ್ಸವ ಆರಂಭಿಸಲಾಯಿತು. ಎಲ್ಲರೂ ಒಂದೆಡೆ ಸೇರಿ ಸಂಭ್ರಮಿಸಲು ಉತ್ಸವ ಒಂದು ಕಾರಣ ಸೃಷ್ಟಿಸಿದೆ. ಯಾವುದೇ ಬಂಡಿಚಿತ್ರ, ಡಿ.ಜೆ ಇಲ್ಲದೆ, ಕೇವಲ ಭಜನಾ ತಂಡಗಳೊಂದಿಗೆ ವಿಸರ್ಜನಾ ಮೆರವಣಿಗೆ ಸಾಗುವುದೇ ಬಂಟ್ಸ್ ಹಾಸ್ಟೆಲ್ ಸರ್ಕಲ್‌ನ ಓಂಕಾರ ನಗರದ ಗಣೇಶೋತ್ಸವದ ವಿಶೇಷ ಎನ್ನುತ್ತಾರೆ ಸಿದ್ದಿವಿನಾಯಕ ಪ್ರತಿಷ್ಠಾನದ ಟ್ರಸ್ಟಿ ಆಶಾಜ್ಯೋತಿ ರೈ.

ಈ ಬಾರಿ ಈಗಾಗಲೇ 50ಕ್ಕೂ ಹೆಚ್ಚು ಭಜನಾ ತಂಡಗಳು ಹೆಸರು ನೋಂದಾಯಿಸಿವೆ. ದೇವರ ಎದುರಿನಲ್ಲೂ ಭಜನೆ ಸೇವೆ ನಡೆಯುತ್ತದೆ. ಗಣೇಶನ ಎದುರಿನ ರಂಗಪೂಜೆಗೆ ಎಲ್ಲರಿಗೂ ಮುಕ್ತ ಅವಕಾಶ. ಮೂರು ದಿನಗಳಲ್ಲಿ 150ಕ್ಕೂ ಹೆಚ್ಚು ರಂಗಪೂಜೆಗಳು ನಡೆಯುತ್ತದೆ ಎನ್ನುತ್ತಾರೆ ಅವರು.

ಬಸ್‌ ನಿಲ್ದಾಣದಲ್ಲಿ ಗಣಪ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಹೋಗುವವರಿಗೆ ಗಣೇಶ ಸುಖ ಪ್ರಯಾಣ ಕರುಣಿಸಲಿ, ಸಂಸ್ಥೆಯ ಬಸ್‌ಗಳು ಸುಸ್ಥಿತಿಯಲ್ಲಿರುವಂತೆ ಗಣೇಶ ದೃಷ್ಟಿಬೀರಲಿ ಎಂದು ಹಿರಿಯರು ಪ್ರಾರಂಭಿಸಿದ ಬಿಜೈ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಗಣೇಶೋತ್ಸವಕ್ಕೆ ಈಗ 39 ವರ್ಷ.

‘ಹಿಂದೆ ಈಗಿನಷ್ಟು ಸುಸಜ್ಜಿತ ವಾಹನಗಳು ಇರುತ್ತಿರಲಿಲ್ಲ. ನುರಿತ ತಾಂತ್ರಿಕ ಸಿಬ್ಬಂದಿಯ ಕೊರತೆಯೂ ಇತ್ತು. ಈ ನಡುವೆ ಅಭಯ ಕರುಣಿಸುವ ಗಣೇಶ ಎಲ್ಲವನ್ನೂ ಸಾಂಗವಾಗಿ ನಡೆಸಲಿ ಎಂಬ ಸದಾಶಯದಿಂದ ನಡಕೆ.ಪಿ.ಜಯರಾಂ ಮತ್ತಿತರರು ಗಣೇಶೋತ್ಸವ ಪ್ರಾರಂಭಿಸಿದರು. ಐದು ದಿನಗಳ ಗಣೇಶೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಭಜನೆ ನಡೆಯುತ್ತದೆ. ಎಲ್ಲ ಸಮುದಾಯದವರು ಒಗ್ಗಟ್ಟಿನಿಂದ ಉತ್ಸವ ಆಚರಿಸುತ್ತೇವೆ. ಅಧಿಕಾರಿಗಳ ಬೆಂಬಲವೇ ದೊಡ್ಡ ಬಲ. ಉತ್ಸವವು ನಿಲ್ದಾಣಕ್ಕೆ ಬರುವ ಪ್ರಯಾಣಿಕರಲ್ಲಿ ಸಾರಿಗೆ ಸಂಸ್ಥೆ ಬಗ್ಗೆ ಸಕಾರಾತ್ಮಕ ಭಾವ ಮೂಡಿಸಿದೆ’ ಎನ್ನುತ್ತಾರೆ ಶ್ರೀವಿದ್ಯಾ ಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಹರಿಶ್ಚಂದ್ರ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT