ಬುಧವಾರ, ಆಗಸ್ಟ್ 4, 2021
20 °C

ಕಾರಿಂಜ ಕ್ಷೇತ್ರದ ವಾನನರಿಗೆ ನಿತ್ಯ‌ ನೈವೇದ್ಯ, ಕೋತಿಗಳಿಂದ ಸುರಕ್ಷಿತ ಅಂತರದ‌ ಪಾಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಮಂಗಳೂರು: ಕಾರಿಂಜ ದೇವಸ್ಥಾನದಲ್ಲಿ ವಾನರರಿಗೆ ಆಹಾರ ನೀಡುವ ಪ್ರಾಚೀನ ಪದ್ಧತಿ ಅನುಸರಿಸಲಾಗುತ್ತಿದ್ದು, ದೇವಸ್ಥಾನದ ಅರ್ಚಕರು, ಭಕ್ತರು ಪ್ರತಿದಿನ ಕೋತಿಗಳಿಗೆ ಆಹಾರವನ್ನು ನೀಡುತ್ತಾರೆ.

ಲಾಕ್‍ಡೌನ್‍ನಿಂದಾಗಿ ಬಾಗಿಲು ಮುಚ್ಚಿದ್ದ ದೇವಸ್ಥಾನಗಳೂ ಬಾಗಿಲು ತೆರೆದಿವೆ. ಅದರಂತೆ ಕಾರಿಂಜ ದೇಗುಲಕ್ಕೆ ಭಕ್ತರು ಬರುತ್ತಿದ್ದಾರೆ. ಸುರಕ್ಷಿತ ಅಂತರಕ್ಕಾಗಿ ದೇವಸ್ಥಾನದ‌ ಪ್ರಾಂಗಣದಲ್ಲಿ ಗುರುತು ಹಾಕಲಾಗಿದ್ದು, ಭಕ್ತರು‌ ಈ ಸ್ಥಳದಲ್ಲಿ ಇಟ್ಟ ಪ್ರಸಾದವನ್ನು‌ ಸೇವಿಸಲು‌ ಕೋತಿಗಳು ಕುಳಿತಿರುವ ‌ಚಿತ್ರವನ್ನು ಭಕ್ತರೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಇದು ಸಾಮಾಜಿಕ‌ ಜಾಲತಾಣದಲ್ಲಿ‌ ವೈರಲ್‌ ಆಗಿದೆ.

ಇತಿಹಾಸ ಪ್ರಸಿದ್ಧ ಭೂ ಕೈಲಾಸ ಪ್ರತೀತಿಯ ಬಂಟ್ವಾಳ ತಾಲ್ಲೂಕಿನ ಕಾವಳಮೂಡೂರು ಗ್ರಾಮದ ಕಾರಿಂಜ  ಶ್ರೀ ಕಾರಿಂಜೇಶ್ವರ ದೇವಸ್ಥಾನ ವಾನರರಿಗೆ ಪ್ರಸಿದ್ಧಿಯಾಗಿದೆ. ಇಲ್ಲಿಗೆ ಬರುವ ಭಕ್ತರಲ್ಲಿ ಈ ಕೋತಿಗಳ ಆಟ ನೋಡಿ ಸಂತಸಪಡದವರಿಲ್ಲ. ಹಣ್ಣುಕಾಯಿಯ ಬಾಳೆಹಣ್ಣು, ತೆಂಗಿಕಾಯಿಯೂ ಈ ವಾನರರಿಗೆ ಮೀಸಲು.

ವಾನರ ನೈವೇದ್ಯ: ಇಲ್ಲಿ ಗುಡ್ಡದ ಮೇಲಿರುವ ಕಾರಿಂಜೇಶ್ವರನ ನೈವೇದ್ಯ ಶ್ರೀರಾಮನ ಸೈನಿಕರಾದ ವಾನರರಿಗೆ ಅರ್ಪಿತವಾಗುತ್ತದೆ. ಈ ವಾನರರಿಗೆ ಆಹಾರದ ಹರಕೆ ಹೇಳಿದರೆ ಕೋತಿಗಳ  ಉಪದ್ರವ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ಕಾರಿಂಜೇಶ್ವರನ ದೇವಸ್ಥಾನದ ಪ್ರಾಕಾರ ಗೋಡೆಯ ಬಳಿ ದೊಡ್ಡ ಕಲ್ಲು ಚಪ್ಪಡಿ ಇದೆ. ಇದುವೇ ವಾನರರ ನೈವೇದ್ಯದ ಸ್ಥಳ. ಪ್ರತಿದಿನ ಮಧ್ಯಾಹ್ನ ದೇವರಿಗೆ ಪೂಜೆಯಾದ ಬಳಿಕ ಮೂರು ಸೇರು ಅಕ್ಕಿಯ ದೇವರ ನೈವೇದ್ಯವನ್ನು ಈ ಕಲ್ಲಿನ ಮೇಲೆ ವಾನರರಿಗೆ ಅರ್ಪಿಸಲಾಗುತ್ತದೆ. ಸಮಯಕ್ಕೆ ಸರಿಯಾಗಿ ನೂರಾರು ಕಪಿಗಳು ಹಾರಿ ಬಂದು ನೈವೇದ್ಯ ತಿನ್ನುತ್ತದೆ.

ಶ್ರೀ ರಾಮ ಭಕ್ತ, ವಾನರ ಶ್ರೇಷ್ಠ ಆಂಜನೇಯನ ಹುಟ್ಟು ಇದೇ ಕಾರಿಂಜದಲ್ಲಿ ಎಂಬ ಪ್ರತೀತಿ ಇದೆ. ರಾವಣ ವಧೆ ಬಳಿಕ ಶ್ರೀರಾಮ ಪರಿವಾರ ಸಹಿತ ಅಯೋಧ್ಯೆಯತ್ತ ತೆರಳುವಾಗ ಕಾರಿಂಜೆಗೆ ಬಂದಿದ್ದರು. ಆಗ ಹನುಮಂತನ ಹುಟ್ಟೂರಿನಲ್ಲಿ ನೆಲೆಯೂರಲು ಕಪಿ ವೀರರು ನಿರ್ಧರಿದ್ದರೆಂದೂ ಪುರಾಣದ‌ ಕತೆಗಳಲ್ಲಿ ಹೇಳಲಾಗಿದೆ. ಹೀಗಾಗಿ ಇಲ್ಲಿ ವಾನರರಿಗೆ ನೈವೇದ್ಯ ಕೊಡುವ ಸಂಪ್ರದಾಯ ಬೆಳೆದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು