ಮಂಗಳೂರು: ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಮತ್ತು ‘ಫ್ರೀಡಂ ಕುಕ್ಕಿಂಗ್ ಆಯಿಲ್’ ಸಹಯೋಗದಲ್ಲಿ ಗುರುವಾರ ಇಲ್ಲಿ ನಡೆದ ‘ಕರುನಾಡಸವಿಯೂಟ’ ಅಡುಗೆ ಸ್ಪರ್ಧೆಯಲ್ಲಿ ಉಡುಪಿಯ ಪ್ರಿಯಾ ನಾಯಕ್ ಪ್ರಥಮ ಸ್ಥಾನದೊಂದಿಗೆ ₹10 ಸಾವಿರ ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡರು.
ಮಂಗಳೂರಿನ ಪ್ರವೀಣಾ ಹರೀಶ್ ದ್ವಿತೀಯ ಬಹುಮಾನ ₹7,000 ಹಾಗೂ ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಹಾಸ್ಪಿಟಾಲಿಟಿ ಸರ್ವಿಸಸ್‌ನ ವಿದ್ಯಾರ್ಥಿ ವಿನ್ಯಾಸ್ ತೃತೀಯ ಬಹುಮಾನ ₹5,000 ಗೆದ್ದುಕೊಂಡರು.
ಕಾವೂರು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯಾ ಶೆಟ್ಟಿ, ಧನಲಕ್ಷ್ಮಿ ಜ್ಞಾನಶೇಖರ್, ವಿಮಲಾ ರಾಜು ಹಾಗೂ ಅತ್ಯಂತ ಹಿರಿಯ ಸ್ಪರ್ಧಿ, 87 ವರ್ಷದ ರಾಧಾ ಪ್ರಭು ಸಮಾಧಾನಕರ ಬಹುಮಾನಕ್ಕೆ ಪಾತ್ರರಾದರು.
ಮೀನು ಖಾದ್ಯಗಳು, ಕೆಸುವಿನ ಎಲೆಯ ಪತ್ರೊಡೆ ಸೇರಿದಂತೆ ಕರಾವಳಿಯ ಸೊಗಡಿನ ಅಡುಗೆಗಳು ಎಲ್ಲರ ಮೆಚ್ಚುಗೆ ಪಡೆದವು.
ಸ್ಪರ್ಧಿಗಳು ಸಸ್ಯಾಹಾರಿ ಮತ್ತು ಮಾಂಸಾಹಾರಿ ಅಡುಗೆಗಳನ್ನು ಮನೆಯಲ್ಲೇ ತಯಾರಿಸಿ ತಂದಿದ್ದರು. ‘ಒಗ್ಗರಣೆ ಡಬ್ಬಿ’ ಖ್ಯಾತಿಯ ಮುರಳಿ ಮತ್ತು ಸುಚಿತ್ರಾ ಅವರು ಎಲ್ಲ ಸ್ಪರ್ಧಿಗಳು ತಂದಿದ್ದ ತಿನಿಸಿನ ರುಚಿ ಸವಿದು, ಬಹುಮಾನ ಪ್ರಕಟಿಸಿದರು.
ಸ್ಪರ್ಧೆಗೆ ಶ್ರೀಕೃಷ್ಣ ಶುದ್ಧ ಹಳ್ಳಿತುಪ್ಪ, ಇಂಡೇನ್ ಗ್ಯಾಸ್, ಎಕ್ಸೊ ಸಂಸ್ಥೆ, ಕರ್ನಾಟಕ ರಾಜ್ಯ ಕೃಷಿ ಇಲಾಖೆ, ಫಿಲಿಪ್ಸ್ ಅಪ್ಲೈಯನ್ಸಸ್, ಪ್ರೀತಿ ಕಿಚನ್ ಅಪ್ಲೈಯನ್ಸಸ್, ಎಸ್‌ಎಸ್‌ಪಿ ಹಿಂಗ್, ವೆಂಕೋಬ್ ಚಿಕನ್, ಇಂಡಿಯಾ ಗೇಟ್ ಬಾಸುಮತಿ ರೈಸ್ , ಸುಜಯ್ ಇರಿಗೇಷನ್ ಪ್ರೈವೇಟ್ ಲಿಮಿಟೆಡ್ ಸಹಯೋಗ ನೀಡಿದ್ದವು.