ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ಜನರು ಮುಂಜಾಗ್ರತೆ ವಹಿಸಿ

ನೆರೆ ರಾಜ್ಯಗಳಲ್ಲಿ ಕೋವಿಡ್ ಏರಿಕೆ: ಡಾ.ರಾಮಚಂದ್ರ ಬಾಯರಿ
Last Updated 7 ಮಾರ್ಚ್ 2021, 3:18 IST
ಅಕ್ಷರ ಗಾತ್ರ

ಮಂಗಳೂರು: ಪಕ್ಕದ ಮಹಾರಾಷ್ಟ್ರ, ಕೇರಳದಲ್ಲಿ ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಕಳವಳಕಾರಿ. ಜಿಲ್ಲೆಯ ಜನರು ಅಗತ್ಯ ಮುಂಜಾಗ್ರತೆ ವಹಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ಹೇಳಿದರು.

ನಗರದ ಕೆಎಂಸಿ ಆಸ್ಪತ್ರೆಯಲ್ಲಿ ಶನಿವಾರ ನಡೆದ ಡಾ.ಬಿ.ಎಸ್. ಸಜ್ಜನ್‌ ದತ್ತಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಶೇ 5 ರಷ್ಟಿದೆ. ಪಕ್ಕದ ರಾಜ್ಯಗಳಿಂದ ಜನರು ಜಿಲ್ಲೆಗೆ ಬರುತ್ತಿದ್ದು, ಅಲ್ಲಿ ಕೋವಿಡ್–19 ಹೆಚ್ಚುತ್ತಿರುವುದು ಜಿಲ್ಲೆಗೆ ಕಳವಳಕಾರಿ ಎಂದರು.

ಆಸ್ಪತ್ರೆಗಳ 93 ಸಾವಿರ ವಿದ್ಯಾರ್ಥಿಗಳು, ಪ್ಯಾರಾಮೆಡಿಕಲ್‌ ವಿದ್ಯಾರ್ಥಿಗಳು, ಸಿಬ್ಬಂದಿಯ ಗಂಟಲು ದ್ರವ ತಪಾಸಣೆ ಮಾಡಲಾಗಿದ್ದು, ಕೇವಲ 67 ಪ್ರಕರಣಗಳು ದೃಢಪಟ್ಟಿವೆ ಎಂದರು.

ಕೋವಿಡ್–19 ಮೊದಲ ಅಲೆಯ ಸಂದರ್ಭದಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸುವುದು ಕಠಿಣ ಸವಾಲಾಗಿತ್ತು. ಅಧಿಕಾರಿಗಳು, ಜನಪ್ರತಿನಿಧಿಗಳ ಸಹಕಾರದಿಂದ ಸಕಾಲಕ್ಕೆ ಪರಿಣಾಮಕಾರಿಯಾಗಿ ಸ್ಪಂದಿಸಲು ಆರೋಗ್ಯ ಇಲಾಖೆಗೆ ಅನುಕೂಲವಾಯಿತು ಎಂದು ತಿಳಿಸಿದರು.

ಜೂನ್‌, ಜುಲೈನಲ್ಲಿ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಆ ಸಂದರ್ಭದಲ್ಲಿ ತುರ್ತು ನಿಗಾ ಘಟಕಗಳೆಲ್ಲ ಭರ್ತಿಯಾಗಿದ್ದವು. ಈ ಮಧ್ಯೆ ಹೋಂ ಐಸೋಲೇಷನ್‌ಗೆ ಆರೋಗ್ಯ ಅಧಿಕಾರಿಗಳು ಒಪ್ಪಿಗೆ ನೀಡಿದ ನಂತರ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಯಿತು ಎಂದು ಹೇಳಿದರು.

ಶೇ 60 ರಂದು ಲಸಿಕೆ: ಕೋವಿಡ್–19 ಲಸಿಕೆ ವಿತರಣೆಯಲ್ಲಿ ಜಿಲ್ಲೆಯಲ್ಲಿ ಶೇ 60 ರಷ್ಟು ಪ್ರಗತಿ ಸಾಧಿಸಲಾಗಿದೆ. 5,361 ಮಂದಿ ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆದಿದ್ದಾರೆ. ಹಿರಿಯ ನಾಗರಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

ಕೋವಿಡ್–19 ನಂತರ ಎಲ್ಲರೂ ಆರೋಗ್ಯದ ಬಗ್ಗೆ ಹೆಚ್ಚು ಚರ್ಚೆ ಮಾಡುವಂತಾಗಿದೆ. ಎಲ್ಲರೂ ಇದೀಗ ಆರೋಗ್ಯ ಸೇನಾನಿಗಳಾಗಿದ್ದೇವೆ. ಸಮುದಾಯ ಆರೋಗ್ಯದ ಬಗ್ಗೆ ಜಾಗತಿಕ ಚಿಂತನೆಯೇ ಬದಲಾಗಿದೆ. ಬರುವ ದಿನಗಳಲ್ಲಿ ಎಂತಹ ವೈರಸ್‌ಗಳು ಆರೋಗ್ಯದ ಮೇಲೆ ದಾಳಿ ಮಾಡಲಿವೆಯೋ ಗೊತ್ತಿಲ್ಲ. ನಿಗದಿತ ಮದ್ದು ಮಾತ್ರ ಇದಕ್ಕೆ ಪರಿಹಾರ ಎಂದು ಮಾಹೆ ಸಹ ಕುಲಪತಿ ಡಾ. ದಿಲೀಪ್‌ ಜಿ. ನಾಯ್ಕ್‌ ಅಭಿಪ್ರಾಯಪಟ್ಟರು.

ಡಾ.ಸಜ್ಜನ್ ಅವರ ಪತ್ನಿ ಶಿವಬಾಯಿ ಅವರನ್ನು ಸನ್ಮಾನಿಸಲಾಯಿತು. ಕೆಎಂಸಿ ಸಮುದಾಯ ಔಷಧ ವಿಭಾಗದ ಪ್ರಾಧ್ಯಾಪಕಿ ಡಾ.ಟಿ.ರೇಖಾ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಭಾಗದ ಹೆಚ್ಚುವರಿ ಡೀನ್‌ ಡಾ.ಬಿ. ಉನ್ನಿಕೃಷ್ಣನ್‌ ಸ್ವಾಗತಿಸಿದರು. ಸಹ ಪ್ರಾಧ್ಯಾಪಕ ಡಾ.ರಮೇಶ್ ಹೊಳ್ಳ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT