ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls | ಹೆಚ್ಚುತ್ತಿದೆ ಬಿಸಿಲು: ಕಾವು ತಣಿಸುವ ಸವಾಲು

ಮತಗಟ್ಟೆ ಬಳಿ ಶಾಮಿಯಾನ * ತುರ್ತು ಚಿಕಿತ್ಸೆ ಆರೋಗ್ಯ ಸಿಬ್ಬಂದಿ
Published 25 ಏಪ್ರಿಲ್ 2024, 5:05 IST
Last Updated 25 ಏಪ್ರಿಲ್ 2024, 5:05 IST
ಅಕ್ಷರ ಗಾತ್ರ

ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ಇದೇ 26ರವರೆಗೂ ತೀವ್ರ ಬಿಸಿಲು ಹಾಗೂ ತೇವಾಂಶಭರಿತ ವಾತಾವರಣ ಇರಲಿದೆ. ದಿನದ ಗರಿಷ್ಠ ಉಷ್ಣಾಂಶ 2 ಡಿಗ್ರಿಯಿಂದ 3 ಡಿಗ್ರಿ ಸೆಂಟಿಗ್ರೇಡ್‌ವೆರೆಗೂ ಹೆಚ್ಚಳವಾಗಲಿದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆ ನೀಡಿದೆ. ತಾಪಮಾನ ಏರಿಕೆಯ ಬಿಸಿ ಲೋಕಸಭಾ ಚುನಾವಣೆ ಪ್ರಕ್ರಿಯೆಗೆ ತಟ್ಟದಂತೆ ನೋಡಿಕೊಳ್ಳುವುದು ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ.

ಗುರುವಾರ ನಡೆಯಲಿರುವ ಮಸ್ಟರಿಂಗ್‌ ಪ್ರಕ್ರಿಯೆ ವೇಳೆ ಚುನಾವಣಾ ಸಿಬ್ಬಂದಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದರಿಂದ ಹಿಡಿದು ಮತದಾನ ಮುಗಿಯುವವರೆಗೆ ಪ್ರತಿ ಮತಗಟ್ಟೆಯಲ್ಲಿ ಬಿಸಿಲ ಝಳದಿಂದ ಎದುರಾಗಬಹುದಾದ ಸಮಸ್ಯೆ ನಿಭಾಯಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

‘ಜಿಲ್ಲೆಯಲ್ಲಿ ಈ ಸಲ ಬಿಸಿಲಿನ ಪ್ರತಾಪ ಜೋರಾಗಿದೆ. ಅಗತ್ಯವಿರುವಲ್ಲಿ ಶಾಮಿಯಾನ ವ್ಯವಸ್ಥೆ ಕಲ್ಪಿಸಿದ್ದೇವೆ. ಕುಡಿಯುವ ನೀರು ವ್ಯವಸ್ಥೆ ಒದಗಿಸಲಾಗುತ್ತದೆ. ಇದಕ್ಕೆ ಬೇಕಾಗುವ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ತಿಳಿಸಿದ್ದಾರೆ.

‘ಬಿಸಿಲಿನ ಆಘಾತಕ್ಕೊಳಗಾದರೆ ಪ್ರಥಮ ಚಿಕಿತ್ಸೆ ಒದಗಿಸಲು ಪ್ರತಿ ಮತಗಟ್ಟೆಗೆ ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸಿದ್ದೇವೆ. ತುರ್ತು ಸೇವೆಗೆ 28 ಆಂಬುಲೆನ್ಸ್‌ಗಳು ಸಜ್ಜಾಗಿರಲಿವೆ’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಅವರು ಮಾಹಿತಿ ನೀಡಿದ್ದಾರೆ.

‘ಆಶಾ ಕಾರ್ಯಕರ್ತರು, ಆರೋಗ್ಯ ನಿರೀಕ್ಷಕರು, ಸಮುದಾಯ ಆರೋಗ್ಯ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳು ಮತದಾನದ ಸಂದರ್ಭ ತುರ್ತು ಆರೋಗ್ಯ ಸೇವೆ ಒದಗಿಸಲು ಸಜ್ಜಾಗಿದ್ದಾರೆ. ಪ್ರತಿ ಮತಗಟ್ಟೆಗೂ ಪ್ರಥಮ ಚಿಕಿತ್ಸೆಯ ಕಿಟ್‌ಗಳನ್ನು ಪೂರೈಸಲಿದ್ದೇವೆ. ಅದರಲ್ಲಿ ಒಆರ್‌ಎಸ್‌ ಪೊಟ್ಟಣಗಳೂ ಇರಲಿವೆ. ಮತದಾನಕ್ಕಾಗಿ ಸರತಿ ಸಾಲಿನಲ್ಲಿ ನಿಂತವರು ಬಿಸಿಲಿನ ಝಳದಿಂದ ಸಮಸ್ಯೆ ಎದುರಿಸಿದರೆ ಆರೋಗ್ಯ ಸಿಬ್ಬಂದಿ ಚಿಕಿತ್ಸೆ ನೀಡಲಿದ್ದಾರೆ. ಅಗತ್ಯ ಬಿದ್ದರೆ ಸಮೀಪದ ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ಆಮಬುಲೆನ್ಸ್‌ ಕಳುಹಿಸಿ ಹೆಚ್ಚಿನ ಚಿಕಿತ್ಸೆಗೆ ವ್ಯವಸ್ಥೆ ಮಾಡಲಿದ್ದೇವೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ತಿಮ್ಮಯ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮಸ್ಟರಿಂಗ್‌ ಇಂದು:

‘ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಲೋಕಸಭಾ ಚುನಾವಣೆಯ ಮಸ್ಟರಿಂಗ್‌ ಗುರುವಾರ ನಡೆಯಲಿದೆ. ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಒಂದು ಮಸ್ಟರಿಂಗ್ ಕೇಂದ್ರವನ್ನು ಸ್ಥಾಪಿಸಲಾಗಿದೆ. ಚುನಾವಣಾ ಸಿಬ್ಬಂದಿ ಮತಯಂತ್ರಗಳನ್ನು ಮತಗಟ್ಟೆಗೆ ಒಯ್ಯಲಿದ್ದಾರೆ. ಕ್ಷೇತ್ರದಲ್ಲಿ ಮತದಾನಕ್ಕೆ ಒಟ್ಟು 2,334 ಬ್ಯಾಲೆಟ್‌ ಯುನಿಟ್‌ಗಳ ಅಗತ್ಯವಿದ್ದು, 458 (ಶೇ 124ರಷ್ಟು) ಹೆಚ್ಚುವರಿ ಘಟಕಗಳು ಮೀಸಲಿವೆ. 2,359 ಕಂಟ್ರೋಲ್ ಯುನಿಟ್ ಗಳ ಅಗತ್ಯವಿದ್ದು, 483  ಯೂನಿಟ್‌ಗಳು ಹೆಚ್ಚುವರಿಯಾಗಿ ಮೀಸಲಿವೆ. 2,484 ವಿವಿಪ್ಯಾಟ್‌ಗಳು ಅಗತ್ಯವಿದ್ದು 608 ಹೆಚ್ಚುವರಿಯಾಗಿ ಮೀಸಲಿವೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT